” ಏಪ್ರಿಲ್ 1, 2024ರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳವಾಗಲಿದೆ. “ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ತೆರಿಗೆ ಎರಡು ಪಟ್ಟು, ವಾಣಿಜ್ಯ ಸಂಸ್ಥೆಗಳ ತೆರಿಗೆ ಮೂರು ಪಟ್ಟು ಹೆಚ್ಚಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಲೈಫ್ ಟೈಮ್ ತೆರಿಗೆ ಶೇ.10ರಷ್ಟು ಮತ್ತು ಹೊಸ ವಾಹನಗಳ ನೋಂದಣಿ ತೆರಿಗೆ ಶೇ.3ರಷ್ಟು ಹೆಚ್ಚಳ ಮಾಡಲಾಗುತ್ತದೆ. ಸರ್ಕಾರ ಈ ಹಿಂದೆ ಹಾಲು, ಪೆಟ್ರೋಲ್ ಮತ್ತು ಮದ್ಯದ ಮೇಲಿನ ತೆರಿಗೆ ಹೆಚ್ಚಿಸಿತ್ತು” ಎಂದು ಹೇಳಲಾ ವಿಡಿಯೋ ಒಂದು Index. daily ಎಂಬ ಇಂಸ್ಟಾಗ್ರಾಮ್ ಪುಟದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕದ ಸರ್ಕಾರ ಐದು ಬಿಟ್ಟಿ ಭಾಗ್ಯಗಳಿಗೆ 52 ಸಾವಿರ ಕೋಟಿ ಖರ್ಚು ಮಾಡುತ್ತಿರುವ ಪರಿಣಾಮ ತೆರಿಗೆ ಹೆಚ್ಚಳವಾಗಲಿಕ್ಕೆ ಕಾರಣ ಎಂದು ಕರ್ನಾಟಕದ ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಸಹ ಟೀಕಿಸಲಾಗಿದೆ. ಹಾಗಿದ್ದರೆ ವಿಡಿಯೋದಲ್ಲಿ ಹೇಳಿರುವಂತೆ ನಿಜವಾಗಿಯೂ ಕರ್ನಾಟಕ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಹೆಚ್ಚಳಕ್ಕೆ ಮುಂದಾಗಿದೆಯಾ? ಎಂಬುವುದನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್: ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, “ಆತ್ಮೀಯ ನಾಗರಿಕರೇ, 1ನೇ ಏಪ್ರಿಲ್ 2024 ರಿಂದ ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಕೆಲವು ಸುಳ್ಳು ಸುದ್ದಿಯ ವೀಡಿಯೊಗಳು ಹರಿದಾಡುತ್ತಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯಲ್ಲಿ ಯಾವುದೇ ಹೆಚ್ಚಳ ಮಾಡುತ್ತಿಲ್ಲ” ಎಂದು ತಿಳಿಸಿದ್ದಾರೆ. ಜೊತೆಗೆ ಅನುರಾಗ್ ಸಿಂಗ್ ಅವರು ಸುಳ್ಳು ಮಾಹಿತಿ ಹರಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕೂಡ ಈ ಕುರಿತು ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದ್ದು, “ಏಪ್ರಿಲ್ 1ರಿಂದ ಅನ್ವಯವಾಗುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ದರ ಏರಿಕೆಯಾಗಲಿದೆ ಎನ್ನುವ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. BBMP ಯಾವುದೇ ಆಸ್ತಿ ತೆರಿಗೆಯನ್ನು ಏರಿಕೆ ಮಾಡಿಲ್ಲ 2016ರಲ್ಲಿ ಸೂಚಿಸಿರುವ ದರದಂತೆಯೇ ಪ್ರಸ್ತುತ ಆಸ್ತಿ ತೆರಿಗೆ ದರಗಳು ಚಾಲ್ತಿಯಲ್ಲಿರುತ್ತವೆ ಹಾಗೂ ಮುಂದುವರಿಯಲಿವೆ. ಬೆಂಗಳೂರಿನ ನಿವಾಸಿಗಳು ಆತಂಕಪಡುವ ಅವಶ್ಯಕತೆಯಿಲ್ಲ” ಎಂದಿದ್ದಾರೆ.
ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಬಿಬಿಎಂಪಿ ಆಯುಕ್ತರು ನೀಡಿರುವ ಸ್ಪಷ್ಟನೆ ಪ್ರಕಾರ, ‘Index.daily’ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಹೇಳಿರುವ ಸುದ್ದಿ ಸುಳ್ಳು ಮಾಹಿತಿಯಾಗಿದೆ.
ಇದನ್ನು ಓದಿ: Fact Check: ಸಾಜಿದ್ ಅಂತ್ಯಕ್ರಿಯೆಯಲ್ಲಿ 30,000 ಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಿದ್ದರು ಎಂಬುದಕ್ಕೆ ಆಧಾರವಿಲ್ಲ
ವಿಡಿಯೋ ನೋಡಿ: JNU ವಿದ್ಯಾರ್ಥಿ ಒಕ್ಕೂಟ ಚುನಾವಣೆಯಲ್ಲಿ ABVP ನಾಲ್ಕು ಸ್ಥಾನ ಗಳಿಸಿದೆ ಎಂದು ಸುದ್ದಿ ತಿರುಚಿದ ಕನ್ನಡ ಮಾಧ್ಯಮಗಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.