Fact Check: ಯುಟ್ಯೂಬರ್ ಧ್ರುವ್ ರಾಠೀ ಪಾಕಿಸ್ತಾನ ಮೂಲದವರೆಂದು ಸುಳ್ಳು ಹರಡಲಾಗುತ್ತಿದೆ

ಭಾರತದಲ್ಲಿ ಪ್ರಸಿದ್ದಿ ಪಡೆದ ಅನೇಕ ಯೂಟೂಬರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಶಾಲಿಗಳು(ಸೋಷಿಯಲ್ ಮಿಡಿಯಾ ಇನ್ಫ್ಲುಯೆನ್ಸರ್‌ಗಳು) ಅನೇಕರಿದ್ದಾರೆ. ಅವರುಗಳು ಆಹಾರ, ಪ್ರವಾಸ, ಶಿಕ್ಷಣಕ್ಕೆ ಸಂಬಂದಿಸಿದಂತೆ ಅನೇಕ ವಿಷಯಗಳ ಮೇಲೆ ವಿಡಿಯೋಗಳನ್ನು ಮಾಡುತ್ತಿದ್ದಾರೆ ಆದರೆ ಸಾಮಾಜಿಕ, ರಾಜಕೀಯ ಮತ್ತು ಪರಿಸರಕ್ಕೆ ಸಂಬಂದಿಸಿದಂತೆ ವಿಡಿಯೋಗಳನ್ನು ಮಾಡಿ ಪ್ರಖ್ಯಾತಿ ಪಡೆದ ಯೂಟೂಬರ್‌ಗಳಲ್ಲಿ ಧೃವ್ ರಾಠೀ ಪ್ರಮುಖರು. ಕಾರಣ ಅವರ ಅಧ್ಯಯನಶೀಲತೆ ಮತ್ತು ವಿಷಯದ ನಿಖರತೆಗಾಗಿ ಹೆಚ್ಚೆಚ್ಚು ಜನರನ್ನು ತಲುಪುತ್ತಿದ್ದಾರೆ. ಸಧ್ಯ ಮಾರ್ಚ್ 2024 ರ ಹೊತ್ತಿಗೆ, ಅವರು ಎಲ್ಲಾ ಚಾನೆಲ್ಗಳಲ್ಲಿ ಸುಮಾರು 21.56 ಮಿಲಿಯನ್ ಚಂದಾದಾರರನ್ನು ಮತ್ತು ಒಟ್ಟು 4.1 ಬಿಲಿಯನ್ ವೀಡಿಯೊ ವೀಕ್ಷಣೆಗಳನ್ನು ಹೊಂದಿದ್ದಾರೆ.

ಇತ್ತೀಚೆಗೆ ಅವರು ಮಾಡಿದ “ಭಾರತ ಸರ್ವಾಧಿಕಾರವಾಗುತ್ತಿದೆಯೇ?” ವಿಡಿಯೋವನ್ನು 23 ಮಿಲಿಯನ್ ಜನ ವೀಕ್ಷಿಸಿದ್ದಾರೆ ಮತ್ತು ದೇಶದಾದ್ಯಂತ ಈ ವಿಡಿಯೋ ಚರ್ಚೆಯನ್ನು ಹುಟ್ಟುಹಾಕಿದೆ. ಅವರು ಇಂದು ಹಂಚಿಕೊಂಡಿರುವ “ಅರವಿಂದ್ ಕೇಜ್ರಿವಾಲ್ ಜೈಲಿಗೆ! | ಸರ್ವಾಧಿಕಾರ ಖಚಿತವಾಗಿದೆಯೇ?” ವಿಡಿಯೋ ಕೇವಲ 21 ಗಂಟೆಗೆ (ಸುದ್ದಿ ಬರೆಯುವ ಹೊತ್ತಿಗೆ) 11 ಮಿಲಿಯನ್ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಆದರೆ ಇವರು ಕುರಿತು ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದ್ದು ಅದರಲ್ಲಿ, “ಈ ಯುಟ್ಯೂಬರ್ ನಕಲಿ ಹೆಸರು ದ್ರುವಾ ರಾಠಿ ಆದರೆ ದಾವೂದ್ ಗ್ಯಾಂಗ್ ನ ಸದಸ್ಯ. ಆದರೆ ಈತನ ಮೂಲ ಹೆಸರು ಬದ್ರುದ್ದಿನ್ ರಶೀದ್ ಲಹೋರಿ ಮತ್ತು ಈತನ ಹೆಂಡತಿ ಪಾಕಿಸ್ತಾನಿ ಮೂಲದ ಜುಲೈಕಾ. ಅವರು ಕರಾಚಿಯಲ್ಲಿರುವ ವಿಶ್ವದ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ರಹಸ್ಯ ಅಲಿಶಾನ್ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಅವರಿಗೆ ಐಎಸ್ಐ ಮತ್ತು ಪಾಕಿಸ್ತಾನ ಸೇನೆಯ ವೈ + ಮತ್ತು ಝಡ್ + ಭದ್ರತೆಯನ್ನು ಒದಗಿಸಲಾಗುತ್ತದೆ.” ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ನಿಜಕ್ಕೂ ಧ್ರುವ್ ರಾಠೀ ಮುಸಲ್ಮಾನರೇ, ಅವರು ಮೂಲತಃ ಪಾಕಿಸ್ತಾನದವರೇ ತಿಳಿಯೋಣ ಬನ್ನಿ.

ಫ್ಯಾಕ್ಟ್‌ಚೆಕ್‌: ಧ್ರುವ್ ರಾಠೀಯ ಕುರಿತು ವಿಕಿಪಿಡಿಯಾದಲ್ಲಿ, ಅವರು ಹರಿಯಾಣ ರಾಜ್ಯದ ಹಿಂದೂ ಜಾಟ್ ಕುಟುಂಬದಲ್ಲಿ ಜನಿಸಿದ್ದಾರೆ. ಮೆಕನಿಕಲ್ ಇಂಜಿನಿಯರ್ ಪದವಿ ಪಡಿದಿರುವ ಇವರು ಉನ್ನತ ಶಿಕ್ಷಣವನ್ನು ಜರ್ಮನಿಯಲ್ಲಿ ಮುಗಿಸಿದ್ದಾರೆ ಎಂದಿದೆ. ಧ್ರುವ್ ಅವರು ಜೂಲಿ ಎಂಬ ಜರ್ಮನಿ ಯುವತಿಯನ್ನು ವಿವಾಹವಾಗಿ ಸಧ್ಯ ಜರ್ಮನಿಯಲ್ಲಿಯೇ ವಾಸಿಸುತ್ತಿದ್ದಾರೆ.

ಧ್ರುವ್ ಅವರು ಹರಿಯಾಣ ಮೂಲದವರು ಎಂದು ದೃಢಪಡಿಸಲು ಅವರು ಇತ್ತೀಚೆಗೆ ತಮ್ಮ ಚಾನೇಲ್‌ನ ಚಂದಾದಾರರು 1 ಕೋಟಿ ತಲುಪಿದ ಖುಷಿಗೆ ತಮ್ಮ ಬಾಲ್ಯ ಮತ್ತು ವೈಯಕ್ತಿಕ ಜೀವನದ ಕುರಿತು ಅವರೇ ವಿಡಿಯೋ ಒಂದನ್ನು ತಮ್ಮ ಅಧಿಕೃತ ಯುಟೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ನೀವಿಲ್ಲಿ ನೋಡಬಹುದು. ಇದರಿಂದ ಧ್ರುವ್ ಅವರು ಭಾರತೀಯ ಮೂಲದವರು ಎಂದು ಸ್ಪಷ್ಟವಾಗಿ ತಿಳಿಯಬಹುದು.

ಪ್ರಸ್ತುತ ಇವರು ಎರಡು ಕೋಟಿಗೂ ಅಧಿಕ ಚಂದಾದಾರರೊಂದಿಗೆ ಭಾರತದ ಪ್ರಖ್ಯಾತ ಯೂಟ್ಯೂಬರ್‌ಗಳಲ್ಲಿ ಧ್ರುವ್ ರಾಠೀ ಪ್ರಮುಖರಾಗಿದ್ದಾರೆ. 2023 ರಲ್ಲಿ, ಅವರನ್ನು ಟೈಮ್ ನಿಯತಕಾಲಿಕದ ಮುಂದಿನ ಪೀಳಿಗೆಯ ನಾಯಕರ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರು ಇತ್ತೀಚೆಗೆ ಕೇಂದ್ರ ಸರ್ಕಾರದ ಹಗರಣಗಳು ಮತ್ತು ಸರ್ವಾಧಿಕಾರದ ಬಗ್ಗೆ ವಿಡಿಯೋ ಮಾಡಿದ್ದರಿಂದ ಅವರ ಕುರಿತು ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ. ಇವರಿಗೂ ಪಾಕಿಸ್ತಾನ ಮತ್ತು ದಾವುದ್ ಇಬ್ರಾಹಿಂಗೂ ಯಾವುದೇ ಸಂಬಂಧವಿಲ್ಲ.


ಇದನ್ನು ಓದಿ: Fact Check: ಕೇಜ್ರಿವಾಲ್ ಅವರು ನ್ಯಾಯಲಯದಲ್ಲಿ ತಮ್ಮ ಪರವಾಗಿ ತಾವೆ ವಾದ ಮಾಡಿಲ್ಲ ಮತ್ತು ಜೈಲಿನಲ್ಲಿ ಹಾಡು ಹಾಡಿಲ್ಲ


ವಿಡಿಯೋ ನೋಡಿ: Fact Check: ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಫ್ರಿ ನೀಡಲು ಪುರುಷರ ಬಸ್ ದರ ಹೆಚ್ಚಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *