Fact Check: ಮುಸ್ಲಿಮರ ಅಂಗಡಿಯಲ್ಲಿ ಮಾತ್ರ ಕೊಳ್ಳಿ ಎಂದು ಕೇರಳದ ಸರ್ಕಾರಿ ಶಾಲಾ ಪಠ್ಯಪುಸ್ತಕದಲ್ಲಿದೆ ಎಂಬುದು ಸುಳ್ಳು

Kerala Communist

ಕೇರಳದ ಕಮುನಿಸ್ಟ್‌ ಸರ್ಕಾರದ ವಿರುದ್ಧ ನಿರಂತರವಾಗಿ ಸುಳ್ಳು ಸುದ್ದಿಗಳನ್ನು, ಆರೋಪಗಳನ್ನು ಕೆಲವು ಕಿಡಿಗೇಡಿಗಳು ಮಾಡುತ್ತಲೇ ಇರುತ್ತಾರೆ. ಕೇರಳದಲ್ಲಿ ಕಮುನಿಸ್ಟ್‌ ಸರ್ಕಾರ ಹಿಂದುಗಳನ್ನು ಕಡೆಗಣಿಸಿ ಮುಸ್ಲೀಮರಿಗೆ ಹೆಚ್ಚು ಪ್ರಶಸ್ತ್ಯ ನೀಡುತ್ತಿದೆ ಎಂದು ಆರೋಪಿಸುತ್ತಿರುತ್ತಾರೆ. ಇಂತಹ ಅನೇಕ ಸುಳ್ಳು ವದಂತಿಯನ್ನು ಈಗಾಗಲೇ ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ಬಳಗ ಬಯಲು ಮಾಡಿದ್ದು ನೀವದನ್ನು ಇಲ್ಲಿ ನೋಡಬಹುದು.

ಅದೇ ರೀತಿ ಈಗ, “ಮುಸೀಮ್ ಅಂಗಡಿ : ನೈರ್ಮಲ್ಯ, ನಾವು ಅವರ ಅಂಗಡಿಯಿಂದ ಸಿಹಿತಿಂಡಿಗಳನ್ನು ಖರೀದಿಸಬೇಕು. ಹಿಂದೂ ಅಂಗಡಿ : ಅನೈರ್ಮಲ್ಯ, ಯಾರೂ ಸಿಹಿತಿಂಡಿಗಳನ್ನು ಖರೀದಿಸಬಾರದು. ಮುಸ್ಲಿಂ ಆದಿಲ್: ನೈರ್ಮಲ್ಯ ಮತ್ತು ಉತ್ತಮ ಅಭ್ಯಾಸಗಳನ್ನು ಹೊಂದಿದ್ದಾನೆ. ಹಿಂದೂ ಅಭಿಮನ್ಯು: ಅನೈರ್ಮಲ್ಯ, ಸ್ನಾನ ಮಾಡದಿರುವುದು, ದುರ್ವಾಸನೆ. ಕೇರಳ ಸರ್ಕಾರವು ತಮ್ಮ ಶಾಲೆಗಳಲ್ಲಿ ಇದನ್ನೇ ಕಲಿಸುತ್ತಿದೆ.” ಎಂದು ಪ್ರತಿಪಾದಿಸಿದ ಪೋಸ್ಟ್‌ ಒಂದನ್ನು ಬಲಪಂಥೀಯ ಎಕ್ಸ್ ಖಾತೆದಾರ ಸಿನ್ಹ ಎಂಬುವವರು ಹಂಚಿಕೊಂಡಿದ್ದಾರೆ. ಸಿನ್ಹ ಅವರು ಹೀಗಾಗಲೇ ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡು ಟೀಕೆಗಳಿಗೆ ಗುರಿಯಾಗಿದ್ದಾರೆ.

ಫ್ಯಾಕ್ಟ್‌ಚೆಕ್: ವೈರಲ್ ಪಠ್ಯ ಕೇರಳದ ಪೀಸ್ ಇಂಟರ್ನ್ಯಾಷನಲ್ ಶಾಲೆಯ ಪಠ್ಯಪುಸ್ತಕದ ಫೋಟೋಗಳಾಗಿವೆ, ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಕ್ಕಾಗಿ ಕೇರಳ ಪೊಲೀಸರು ಕೊಚ್ಚಿಯ ಶಾಲೆಯ ಶಾಖೆಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು 2016 ರ ಅಕ್ಟೋಬರ್ 12 ರಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿತ್ತು. ವಿವಾದಾತ್ಮಕ ಪಠ್ಯಪುಸ್ತಕದಲ್ಲಿ ಮುಸ್ಲಿಮೇತರರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಬಗ್ಗೆ ಪಾಠಗಳಿವೆ ಎಂದು ಪ್ರಕರಣದ ತನಿಖಾಧಿಕಾರಿಯೊಬ್ಬರು ದಿ ನ್ಯೂಸ್ ಮಿನಿಟ್‌ಗೆ ತಿಳಿಸಿದ್ದರು.

ಕೋಮು ವಿಷಯಗಳನ್ನು ಕಲಿಸಿದ್ದಕ್ಕಾಗಿ ಎರ್ನಾಕುಲಂನ ವಿವಾದಾತ್ಮಕ ಪೀಸ್ ಇಂಟರ್ನ್ಯಾಷನಲ್ ಶಾಲೆಯನ್ನು ಮುಚ್ಚಲು ಕೇರಳ ಸರ್ಕಾರ 2018 ರ ಜನವರಿಯಲ್ಲಿ ಆದೇಶಿಸಿತ್ತು. ಎರ್ನಾಕುಲಂ ಶಾಖೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ಸ್ಥಳಾಂತರಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಎರ್ನಾಕುಲಂನ ಪೀಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಲಿಸುವ ಪಠ್ಯಕ್ರಮದ ಭಾಗವಾಗಿರುವ ಆಕ್ಷೇಪಾರ್ಹ ವಿಷಯಗಳೊಂದಿಗೆ ಪಠ್ಯಪುಸ್ತಕಗಳನ್ನು ಮುದ್ರಿಸಿದ್ದಕ್ಕಾಗಿ ಕೊಚ್ಚಿ ನಗರ ಪೊಲೀಸರು ಡಿಸೆಂಬರ್ 3, 2016 ರಂದು ಮುಂಬೈ ಮೂಲದ ಮೂವರು ಪ್ರಕಾಶಕರನ್ನು ಬಂಧಿಸಿದ್ದರು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಕೇರಳದ ಸಾರ್ವಜನಿಕ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಅವರು ಈ ಪುಸ್ತಕವನ್ನು ಕೇರಳ ಸರ್ಕಾರದ ಶಿಕ್ಷಣ ಇಲಾಖೆ ಪ್ರಕಟಿಸಿಲ್ಲ ಎಂದು ಹೇಳಿದ್ದಾರೆ. “ಈ ಪುಸ್ತಕವನ್ನು ಕೇರಳ ಸರ್ಕಾರದ ಶಿಕ್ಷಣ ಇಲಾಖೆ ಪ್ರಕಟಿಸಿಲ್ಲ. ರಾಜ್ಯದ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಮತ್ತೊಂದು ಪ್ರಯತ್ನವಾಗಿದೆ. ನಮ್ಮ ಪರಿಚಯವಿರುವವರಿಗೆ ಕೇರಳಿಗರ ನಡುವಿನ ಸೌಹಾರ್ದತೆ ಮತ್ತು ಏಕತೆ ಅರ್ಥವಾಗುತ್ತದೆ. ದ್ವೇಷಕ್ಕೆ ಅವಕಾಶವಿಲ್ಲ – ಕೋಮುವಾದಿ ಕಾರ್ಯಸೂಚಿ ಇಲ್ಲಿ ಬೇರೂರಲು ಏಕೆ ವಿಫಲವಾಗಿದೆ.” ಎಂದು ಸ್ಪಷ್ಟನೆ ನೀಡಿದ್ದಾರೆ.

ಆದ್ದರಿಂದ ಇದು ಕೇರಳದ ಸರ್ಕಾರಿ ಪಠ್ಯಪುಸ್ತಕವಾಗಿರದೆ ಖಾಸಗಿ ಶಾಲೆಯೊಂದರ ಪಠ್ಯಪುಸ್ತಕವಾಗಿದೆ.


ಇದನ್ನು ಓದಿ: Fact Check | ಕಳೆದ ವರ್ಷ ಈದ್ ಮಿಲಾದ್ ಹಬ್ಬದ ವೇಳೆ ನಡೆದ ಗಲಭೆಯನ್ನು ಇತ್ತೀಚಿನದ್ದು ಎಂದು ಸುಳ್ಳು ಮಾಹಿತಿ ಹಂಚಿಕೆ


ವಿಡಿಯೋ ನೋಡಿ: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮುಸ್ಲಿಮರ ಟೋಪಿ ಧರಿಸಿರಲಿಲ್ಲ, ಇದು ಎಡಿಟೆಡ್ ಫೋಟೊ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *