ರಂಜಾನ್ ಮಾಸದ ಪ್ರಯುಕ್ತ ಮಸೀದಿಗಳಿಗೆ ಮಾತ್ರ ಉಚಿತ ನೀರು: ಈ ಪೋಟೊ 2017ರದು ಮತ್ತು ಸಿದ್ದರಾಮಯ್ಯನವರಿಗೆ ಸಂಬಂಧಿಸಿಲ್ಲ

ಮಾನವಿ ಪಟ್ಟಣದಲ್ಲಿ ಪವಿತ್ರ ರಂಜಾನ್ ಮಾಸದ ಪ್ರಯುಕ್ತ ಉಚಿತ ನೀರು ಸರಬರಾಜು (ಮಸೀದಿಗಳಿಗೆ ಮಾತ್ರ) ಎಂಬ ಬ್ಯಾನರ್ ಹೊಂದಿರುವ ನೀರಿನ ಟ್ಯಾಂಕರ್ ಒಂದರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಂಡು ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆಯಲ್ಲಿ ಓಟಿಗಾಗಿ ಮುಸ್ಲಿಮರ ಓಲೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ವೈರಲ್ ಆಗುತ್ತಿರುವ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ ಈ ಫೋಟೊ 2017ರಿಂದಲೇ ಅಂತರ್ಜಾಲದಲ್ಲಿ ಇರುವುದು ಪತ್ತೆಯಾಗಿದೆ. ಗುಜ್ಜಲ ಅಂಜಿ ನಾಯಕ ಕೋಟೆಕಲ್ ಎಂಬುವವರು 18 ಜುಲೈ 2017ರಂದು ಫೇಸ್‌ಬುಕ್‌ನಲ್ಲಿ ಈ ಪೋಟೊವನ್ನು ಹಂಚಿಕೊಂಡು “ಯಾವುದೇ ಒಂದು ಸಮುದಾಯನ ಓಲೈಸುವುದಕ್ಕೆ ಒಂದು ಇತಿ ಮಿತಿ ಇರಬೇಕು ಆದರೆ ಸಿದ್ದರಾಮಯ್ಯನವರು ಅದನ್ನು ಮಿರಿದ್ದಾರೆ (ಮಾನವಿ ಪಟ್ಟಣದಲ್ಲಿ ಪವಿತ್ರ ರಂಜಾನ್ ಮಾಸದ ನಿಮಿತ್ಯ ಉಚಿತ ನೀರು ಸರಬರಾಜು ಮಸೀದಿಗಳಿಗೆ ಮಾತ್ರ)” ಎಂದು ಬರೆದಿದ್ದಾರೆ. ಅಲ್ಲಿಗೆ ಈ ಫೋಟೊ ಇತ್ತೀಚಿನದ್ದಲ್ಲ ಬದಲಿಗೆ 2017ರಲ್ಲಿ ತೆಗೆದಿರುವುದು ಎಂದು ಸಾಬೀತಾಗಿದೆ.

 

ಮುಂದುವರಿದು ಫೋಟೊದಲ್ಲಿ ಸಿದ್ದರಾಮಯ್ಯನವರ ಫೋಟೊದ ಪಕ್ಕದಲ್ಲಿ ಇರುವವರ ಕುರಿತು ಹುಡುಕಿದಾಗ ಅವರು ಮಾನ್ವಿಯ ಕಾಂಗ್ರೆಸ್ ಮುಖಂಡರು, ಗುತ್ತಿಗೆದಾರರು ಮತ್ತು ಕುರುಬ ಸಮಾಜದ ಮುಖಂಡರಾದ ಎಂ. ಈರಣ್ಣನವರು ತಿಳಿದುಬಂದಿದೆ. ಅವರ ಬಗ್ಗೆ ಮತ್ತಷ್ಟು ಹುಡುಕಿದಾಗ ಅವರು ಎಂ ಈರಣ್ಣ ಫೌಂಡೇಶನ್ ಹೆಸರಿನಲ್ಲಿ ಹತ್ತಾರು ಸಮಾಜಸೇವೆ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಹಲವು ಪತ್ರಿಕಾ ವರದಿಗಳಿಂದ ತಿಳಿದುಬಂದಿದೆ.

ಪತ್ರಿಕೆಯಲ್ಲಿ ಎಂ ಈರಣ್ಣನವರ ಸಮಾಜ ಸೇವೆ ಬಗ್ಗೆ ವರದಿ

ಫೇಸ್‌ಬುಕ್‌ನಲ್ಲಿ ಎಂ ಈರಣ್ಣ ಫೌಂಡೇಶನ್ ಎಂಬ ಖಾತೆಯಿದ್ದು ಅದರಲ್ಲಿ ಅವರು ಮಾನ್ವಿಯಲ್ಲಿ ಕಡಿಮೆ ಬೆಲೆ ಆಹಾರ ಒದಗಿಸುವ “ಅಣ್ಣಾ ಕ್ಯಾಂಟೀನ್” ಸ್ಥಾಪಿಸಿದ್ದರು. ಜನರಿಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದರು. ಹಳ್ಳಿಗಳಿಗೆ ಉಚಿತ ಕುಡಿಯುವ ನೀರು ಒದಗಿಸಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ 90% ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಸಿದ್ದರು. ಅದರ ಭಾಗವಾಗಿ ರಂಜಾನ್ ತಿಂಗಳಲ್ಲಿ ಮಸೀದಿಗಳಿಗೆ ಉಚಿತ ಕುಡಿಯುವ ನೀರು ಸಹ ಒದಗಿಸಿದ್ದು, ಬ್ಯಾನರ್‌ನಲ್ಲಿ ಸಿದ್ದರಾಮಯ್ಯನವರ ಮೇಲಿನ ಅಭಿಮಾನದ ಕಾರಣಕ್ಕೆ ಅವರ ಫೋಟೊ ಸಹ ಹಾಕಿಕೊಂಡಿದ್ದಾರೆ. ಹಾಗಾಗಿ ಈ ಫೋಟೊ ಕಾಂಗ್ರೆಸ್ ಮುಖಂಡರು ತಮ್ಮ ಫೌಂಡೇಶನ್ ಮೂಲಕ ಮಸೀದಿಗಳಿಗೆ ನೀರು ಒದಗಿಸಿದ್ದು ಎಂದು ಸ್ಪಷ್ಟವಾಗಿದೆ. ಹಾಗಾಗಿ ಇದು ಸರ್ಕಾರದ ಯೋಜನೆಯಲ್ಲ ಮತ್ತು ಸಿದ್ದರಾಮಯ್ಯನವರಿಗೂ ಇದಕ್ಕೂ ಸಂಬಂಧವಿಲ್ಲ.

ಎಲ್ಲಾ ಧರ್ಮದವರಿಗೂ ಉಚಿತ ಕುಡಿಯುವ ನೀರಿನ ಸೇವೆ

ಎಂ.ಈರಣ್ಣನವರು ತಮ್ಮ MECO CONSTRUCTIONS PVT LTD MANVI ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ ಸಹ ಒದಗಿಸಿದ್ದು, ಆ ಆಂಬುಲೆನ್ಸ್ ಮೇಲೆಯೂ ಕೂಡ ತಮ್ಮ ಮತ್ತು ಸಿದ್ದರಾಮಯ್ಯನವರ ಫೋಟೊ ಹಾಕಿಕೊಂಡಿರುವುದನ್ನು ಅದೇ ಫೇಸ್‌ಬುಕ್ ಖಾತೆಯಲ್ಲಿ ನೋಡಬಹುದು. ಅವರು ಮಾನ್ವಿಯಲ್ಲ ಎಲ್ಲಾ ಧರ್ಮದವರಿಗೂ ಉಚಿತ ಕುಡಿಯುವ ನೀರಿನ ಅರವಟಿಕೆ ಅಳವಡಿಸಿದ್ದರು. ಅಲ್ಲದೇ ಅವರು ತಮ್ಮ ಸೊಸೆಗೆ ಮಾನ್ವಿ ವಿಧಾನಸಭಾ ಟಿಕೆಟ್ ಸಿಗದುದ್ದರಿಂದ ಬೇಸರಗೊಂಡು ಕಾಂಗ್ರೆಸ್ ತೊರೆದಿದ್ದರು. ಆನಂತರ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಉಚಿತ ಆಂಬುಲೆನ್ಸ್: ಸಿದ್ದರಾಮಯ್ಯನವರ ಫೋಟೊ ಹಾಕಿಕೊಂಡಿದ್ದಾರೆ

ಒಟ್ಟಾರೆಯಾಗಿ ಹೇಳುವುದಾದರೆ ರಂಜಾನ್ ಮಾಸದ ಪ್ರಯುಕ್ತ ಮಸೀದಿಗಳಿಗೆ ಮಾತ್ರ ಉಚಿತ ನೀರು ಸರಬರಾಜು ಎಂಬ ಪೋಟೊ 2017ರದು ಹೊರತು ಇತ್ತೀಚಿನದ್ದಲ್ಲ. ಇದನ್ನು ಹಾಕಿದ್ದು ಸರ್ಕಾರ ಅಥವಾ ಸಿದ್ದರಾಮಯ್ಯನವರು ಅಲ್ಲ, ಬದಲಿಗೆ ಮಾನ್ವಿಯ ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಎಂ.ಈರಣ್ಣನವರು. ಅವರು ಮುಸ್ಲಿಮರಿಗೆ ಮಾತ್ರವಲ್ಲದೇ ಎಲ್ಲಾ ಧರ್ಮದ ಬಡವರಿಗೂ ಹಲವಾರು ಸೇವೆಗಳನ್ನು ನೀಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರು ಓಟಿಗಾಗಿ ಒಂದು ಧರ್ಮದ ಓಲೈಕೆ ಮಾಡುತ್ತಿದ್ದಾರೆ ಎಂಬುದು ಸುಳ್ಳು.


ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ 32 ಸಾವಿರ ಕೋಟಿ ರೂ ಸಾಲವನ್ನು 32 ಲಕ್ಷ ಕೋಟಿ ರೂ ಎಂದು ತಿರುಚಿದ ಬಿಜೆಪಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *