ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಮಣಿಸಲು ಮತ್ತು ಎದುರಾಳಿ ನಾಯಕ ಮೇಲೆ ಕೆಟ್ಟ ಹೆಸರು ತರುವ ಉದ್ದೇಶದಿಂದ ರಾಜಕೀಯ ನಾಯಕರ ಪ್ರತೀ ಭಾಷಣವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ. ಇಷ್ಟೇ ಅಲ್ಲದೆ ಸತ್ಯವನ್ನು ತಿರುಚಿ ಕೋಮುವಾದಿ ಹೇಳಿಕೆಯಾಗಿ ಬದಲಾಯಿಸಿ ಪೋಸ್ಟರ್ ಮತ್ತು ವಿಡಿಯೋಗಳನ್ನು ಹಂಚಿಕೊಳ್ಲಲಾಗುತ್ತಿದೆ.
ಈಗ, “ನಾವು ಕಾರ್ಕಳದ ಕಾಂಗ್ರೆಸ್ಸಿಗರು ಸ್ವಾತಂತ್ರ್ಯ ಚಳುವಳಿಯನ್ನು ಕಟ್ಟಿರುವಂತಹ ನಾವು ನಿಮಗೆ ಹೇಳ್ತೇವೆ ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ. ಜಿಸಸ್, ಏಸು ಇವರೆಲ್ಲರೂ ಸೇರಿ ಆಶೀರ್ವಾದವನ್ನು ಕಾಂಗ್ರೆಸ್ಸಿಗರ ಮೇಲೆ ಮಾಡಿರುವಂತಹ ಚುನಾವಣೆ” ಎಂದು ಕಾಂಗ್ರೆಸ್ ನಾಯಕ ಸುಧೀರ್ ಕುಮಾರ್ ಮುರೋಳಿಯವರು ಕಾರ್ಕಾಳದ ಕಾಂಗ್ರೆಸ್ ಸಮಾವೇಶದಲ್ಲಿ ಹೇಳಿದ್ದಾರೆ ಎಂಬ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್: ಈ ವಿಡಿಯೋ ಎಡಿಟೆಡ್ ಆಗಿದೆ. ಸುಧೀರ್ ಕುಮಾರ್ ಮುರೋಳಿಯವರು ತಮ್ಮ ಭಾಷಣದಲ್ಲಿ ಹೇಳಿರುವುದು ಇಷ್ಟು, “ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಮೆಸ್ಕಾಂಗೆ ಕೆಲವು ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರಂತೆ ನಾನು ಡೆಟಾ ಕಲೆಕ್ಟ್ ಮಾಡಿದಾಗ ತಿಳಿಯಿತು ಅವರ ಪಿಎಯ ಅಣ್ಣನ ಹೆಂಡತಿಯನ್ನು ಇವರ ಬಿಸಿನೆಸ್ ಪಾರ್ಟ್‌ನರ್ ಅವರ ತಮ್ಮನ ಹೆಂಡತಿಯನ್ನು ಮೆಸ್ಕಾಂ ಉದ್ಯೋಗವನ್ನು ಕೊಡಿಸಿದ್ದಾರೆ. ನಾನು ಇವತ್ತು ಪ್ರಮಾಣಿಕವಾಗಿ ಕೇಳ್ತೇನೆ ಕೇವಲ ಎರಡು ಚೀಲ ಜುಬ್ಬಾ ಹಿಡಿದುಕೊಂಡು ಬಂದು ಗೋಪಾಲ್ ಬಂಡಾರ್ ಎಂಬ ಪ್ರಾಮಾಣಿಕರೆದುರಿಗೆ ಚುನಾವಣೆಗೆ ನಿಂತಂತಹ ನೀವು ಕಡೇ ಪಕ್ಷ ನಿಮಗಾಗಿ ಜೀವ ತೇಯ್ದಂತಹ ವಿಶ್ವ ಹಿಂದೂ ಪರಿಷತ್ತಿನ, ಬಜರಂಗ ದಳದ, ಬಿಜೆಪಿ ಯುವ ಮೋರ್ಚಾದ ಕೆಲವೇ ಕೆಲವು ಕಾರ್ಯಕರ್ತರನ್ನು ನೀವು ಉದ್ಯೋಗಕ್ಕೆ ತೆಗೆದುಕೊಂಡಿದ್ದರೆ ಮಿಸ್ಟರ್ ಸುನೀಲ್ ಕುಮಾರ್ ನಿಮಗೆ ನಾನು ಸ್ಯೆಲ್ಯೂಟ್ ಅನ್ನು ಹೊಡೆಯುತ್ತಿದ್ದೆ” ಎಂದಿದ್ದಾರೆ.
ಮುಂದುವರೆದು ನಮ್ಮಲ್ಲಿ ರಮಾನಾಥ್ ರೈ ಎಂಬ ಪ್ರಾಮಾಣಿಕ ರಾಜಕಾರಣಿ ಇದ್ದಾರೆ ಅವರ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಿ 20 ದಿವಸಗಳ ಹಿಂದೆ ಕಾರ್ಕಾಳದ ಸುನೀಲ್ ಕುಮಾರ್ ‘ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ. ನಾವು ರಾಮನ ಭಕ್ತರು’ ಎಂದು ಹೇಳಿದ್ದಾರಂತೆ. ಮಿಸ್ಟರ್ ಸುನೀಲ್ ಕುಮಾರ್ ನಾವು ಕಾಂಗ್ರೆಸ್ಸಿಗರು, ಈಶ್ವರ ಅಲ್ಲಾ ತೇರೆ ನಾಮ್ ಸಬ್ ಕೋ ಸನ್ಮತಿ ದೇ ಭಗವಾನ್ ಎಂದು ಹೇಳಿ ಸ್ವಾತಂತ್ರ್ಯ ಚಳುವಳಿಯನ್ನು ಕಟ್ಟಿರುವಂತಹ ನಾವು ನಿಮಗೆ ಹೇಳ್ತೇವೆ, ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಅಲ್ಲ. ರಾಮ, ಕೃಷ್ಣ, ಕಲ್ಲುರ್ಟಿ, ಪಂಜುರ್ಲಿ, ಕೋಡ್ದಬ್ಬು, ಕೊರಗಜ್ಜ, ಬಬ್ಬುಸ್ವಾಮಿ, ದುರ್ಗಾಪರಮೇಶ್ವರಿ, ಕಾರ್ಕಾಳದ ವೆಂಕಟರಮಣ, ಜೀಸಸ್, ಗೊಮ್ಮಟೇಶ್ವರ, ಮಹಾವೀರ, ಬುದ್ಧ ಇವರೆಲ್ಲರೂ ಸೇರಿ ಕಾಂಗ್ರೆಸ್ಸಿಗರ ಮೇಲೆ ಆಶೀರ್ವಾದ ಮಾಡಿರುವಂತಹ ಚುನಾವಣೆ” ಎಂದಿದ್ದಾರೆ.
ಅವರು ಸುನೀಲ್ ಕುಮಾರ್ ಅವರ ಮಾತನ್ನು ಉಲ್ಲೇಖಿಸಿದ್ದಾರೆಯೇ ಹೊರತು ತಾವು ಹೇಳಿಕೆ ನೀಡಿಲ್ಲ. ಆದರೆ ಇವರ ವಿಡಿಯೋವನ್ನು ಕತ್ತರಿಸಿ ತಪ್ಪು ಅರ್ಥ ಬರುವಂತೆ ಎಡಿಟ್ ಮಾಡಲಾಗಿದೆ. ವೈರಲ್ ವಿಡಿಯೋದಲ್ಲಿ “ಬಿಜೆಪಿ ಪುತ್ತೂರು ಸಾಮಾಜಿಕ ಮಾದ್ಯಮ” ಎಂಬ ಲೋಗೋ ಸಹ ಇದೆ. ಆದ್ದರಿಂದ ಬೇಕಂತಲೇ ಕೆಲವು ಕಿಡಿಗೇಡಿ ಕೋಮು ದ್ವೇಷ ಹರಡುವ ಸಲುವಾಗಿ ಇಂತಹ ಎಡಿಟೆಡ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಇದನ್ನು ಓದಿ: Fact Check | ರಾಮನವಮಿಗೆ ಕಲ್ಲು ತೂರಾಟ ನಡೆಸಲು ಮುಸ್ಲಿಂ ಸುಮುದಾಯದಿಂದ ಸಂಚು ಎಂಬುದು ಸುಳ್ಳು
ವಿಡಿಯೋ ನೊಡಿ: ಮೈಸೂರಿನ ಸಭೆಯಲ್ಲಿ ದೇವೇಗೌಡರು ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಕರೆಕೊಟ್ಟಿದ್ದಾರೆ ಎಂಬುದು ಸುಳ್ಳು
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ