ಕಾಂಗ್ರೆಸ್ ಅಭ್ಯರ್ಥಿ ಗೀತಾ ಮತ್ತು ಶಿವರಾಜ್‌ಕುಮಾರ್ ಅಲ್ಪಸಂಖ್ಯಾರತನ್ನು ಓಲೈಸಲು ಕುಂಕುಮ ಅಳಿಸಿದ್ದಾರೆ ಎಂಬುದು ಸುಳ್ಳು

ಗೀತಾ ಶಿವರಾಜ್‌ಕುಮಾರ್‌ರವರು ಈ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಆದರೆ ಅವರು ಮತ್ತು ಅವರ ಪತಿ ಶಿವರಾಜ್‌ಕುಮಾರ್‌ರವರು ಅಲ್ಪಸಂಖ್ಯಾರತನ್ನು ಓಲೈಸಲು ಹಣೆಯಲ್ಲಿನ ಕುಂಕುಮ ಅಳಿಸಿದ್ದಾರೆ ಎಂದು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ವಿಡಿಯೋದ ಸ್ಕ್ರೀನ್‌ ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಹುಡುಕಿದಾಗ ಅದೇ ರೀತಿಯ ಹಲವು ವಿಡಿಯೋಗಳು ಯೂಟ್ಯೂಬ್‌ನಲ್ಲಿ ಕಂಡುಬಂದಿವೆ. ಗೀತಾ ಶಿವರಾಜ್‌ಕುಮಾರ್ ಮತ್ತು ಶಿವರಾಜ್‌ ಕುಮಾರ್‌ರವರು ಧರಿಸಿರುವ ಬಟ್ಟೆಗಳ ಆಧಾರದಲ್ಲಿ ಆ ವಿಡಿಯೋ ಏಪ್ರಿಲ್ 9 ರಂದು ಯುಗಾದಿ ಹಬ್ಬದ ದಿನ ಶಿವಮೊಗ್ಗದ ವಿನೋಬನಗರದ ಶ್ರೀರಾಮನಗರ ನಿವಾಸಿಗಳು ಏರ್ಪಡಿಸಿದ್ದ ‘ನವ ಸಂವತ್ಸರದ ಸಂಭ್ರಮದಲ್ಲಿ ಗೀತಕ್ಕ ಶಿವಣ್ಣ ನಮ್ಮೊಂದಿಗೆ’ ಎಂಬ ಕಾರ್ಯಕ್ರಮದ್ದು ಎಂದು ತಿಳಿದುಬಂದಿದೆ. ಅದರ ಆಧಾರದಲ್ಲಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಕಾರ್ಯಕ್ರಮದಲ್ಲಿ ಫೋಟೋಗಾಗಿ ವೇದಿಕೆಗೆ ಬಂದ ಮಕ್ಕಳ ಜೊತೆ ಶಿವಣ್ಣ ಏನ್ ಮಾಡಿದ್ರು ನೋಡಿ? ಎಂದು 2 ನಿಮಿಷ 54 ಸೆಕೆಂಡ್‌ನ ವಿಡಿಯೋವನ್ನು ಟಿವಿ9 ಕನ್ನಡ ತನ್ನ ಯೂಟ್ಯೂಬ್‌ನಲ್ಲಿ ಏಪ್ರಿಲ್ 10 ರಂದು ಪ್ರಸಾರ ಮಾಡಿದೆ. ಆ ವಿಡಿಯೋ 24ನೇ ಸೆಕೆಂಡ್‌ನಲ್ಲಿ ಗೀತಾ ಶಿವರಾಜ್‌ ಕುಮಾರ್‌ರವರ ಹಣೆಯ ಮೇಲೆ ಎರಡು ಕಡೆ ಕುಂಕುಮ ಹಚ್ಚಿರುವುದನ್ನು ಕಾಣಬಹುದು. 34ನೇ ಸೆಕೆಂಡ್‌ನಲ್ಲಿ ಇನ್ನು ಶಿವರಾಜ್ ಕುಮಾರ್ ಬೆವರು ಒರೆಸಿದಾಗ ಕುಂಕುಮ ಸಹ ಅರ್ಧ ಅಳಿಸಿದೆ. ಹಾಗಾಗಿ ಪೂರ್ತಿ ಅಳಿಸಿದ್ದಾರೆ ಹೊರತು ಉದ್ದೇಶಪೂರ್ವಕವಾಗಿ ಅಲ್ಲ.

ಇನ್ನು 42ನೇ ಸೆಕೆಂಡ್‌ನಲ್ಲಿ ಗೀತಾ ಶಿವರಾಜ್ ಕುಮಾರ್‌ ಎದುರಿಗೆ ಇದ್ದವರ ಜೊತೆ ಸನ್ನೆ ಮಾಡುತ್ತಾ ಕುಂಕುಮ ಸರಿಪಡಿಸಿಕೊಳ್ಳುವುದನ್ನು ನೋಡಬಹುದು. ಅವರ ಹಣೆಯಲ್ಲಿ ಎರಡು ಕಡೆ ಕುಂಕುಮ ಇದ್ದುದರಿಂದ ಎದುರಿಗಿದ್ದರ ಸೂಚನೆಯ ಮೇರೆಗೆ ಸರಿಪಡಿಸಿಕೊಳ್ಳಲು ಯತ್ನಿಸಿ ಕುಂಕುಮ ಅಳಿಸಿದ್ದಾರೆ. ಆನಂತರ ಸರಿ ಹೋಯಿತ ಎಂಬರ್ಥದಲ್ಲಿ ಎದುರಿಗೆ ಇದ್ದರಿಗೆ ಸನ್ಹೆ ಮಾಡುವುದನ್ನು ಸಹ ವಿಡಿಯೋದ 50 ರಿಂದ 59 ಸೆಕೆಂಡ್‌ವರೆಗೂ ನೋಡಬಹುದು.

“ಶಿವಮೊಗ್ಗ: ಮತದಾರರ ನಡುವೆ ಯುಗಾದಿ ಆಚರಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ, ಶಿವರಾಜ್​​ಕುಮಾರ್” ಎಂಬ ಶೀರ್ಷಿಕೆಯಲ್ಲಿ ಈಟಿವಿ ಕನ್ನಡ ವರದಿ ಪ್ರಕಟಿಸಿದೆ. ಅದರಲ್ಲಿ ಇಬ್ಬರೂ ಪೂಜೆ ಮಾಡುವುದು ಸೇರಿದಂತೆ ಹಲವು ಫೋಟೊ ಮತ್ತು ವಿಡಿಯೋಗಳನ್ನು ನಾವು ಕಾಣಬಹುದು. ಅದರಲ್ಲಿ ಅಭಿಮಾನಿಗಳು ಬೆಳ್ಳಿ ಕಡಗ ಹಾಕಿ ಪೂಜೆ ಮಾಡಿದ್ದಾರೆ. ಕುಂಕುಮ ಸಹ ಇಟ್ಟಿದ್ದಾರೆ. ಅದನ್ನು ಇಲ್ಲಿ ನೋಡಬಹುದು.

ಆನಂತರ ಬೆಳ್ಳಿ ಕಡಗ ಹಾಕಿದ ಫ್ಯಾನ್​ಗೆ ಧನ್ಯವಾದ ಹೇಳಿದ ಗೀತಕ್ಕ ಎಂಬ ನ್ಯೂಸ್ ಫಸ್ಟ್ ಕನ್ನಡ ಸುದ್ದಿ ವಾಹಿನಿ ಪ್ರಕಟಿಸಿದ ವಿಡಿಯೋ ಕಂಡುಬಂದಿದೆ. ಆ ವಿಡಿಯೋದ ಉದ್ದಕ್ಕೂ ಅವರು ಕುಂಕುಮ ಧರಿಸಿರುವುದನ್ನು ಕಾಣಬಹುದು.

ಗೀತಾ ಶಿವರಾಜ್‌ಕುಮಾರ್‌ ರವರು ಬಹಳ ಸಮಯ ಕುಂಕುಮ ಧರಿಸಿರುವುದನ್ನು ಹಲವು ವಿಡಿಯೋದಲ್ಲಿ, ಫೋಟೊಗಳಲ್ಲಿ ನೋಡಬಹುದು. ಅವರ ಹಣೆಯಲ್ಲಿ ಎರಡು ಕಡೆ ಕುಂಕುಮ ಇದ್ದುದ್ದರಿಂದ ಒಂದನ್ನು ಅಳಿಸಲು ಯತ್ನಿಸಿದ್ದಾರೆ ಅಷ್ಟೆ. ಆದರೆ ಟಿವಿ9 ಪ್ರಕಟಿಸಿ ಮೂಲ ವಿಡಿಯೋವನ್ನು ಎಡಿಟ್ ಮಾಡಿ ಕೇವಲ ಕುಂಕುಮ ಅಳಿಸುವ ಭಾಗ ಇಟ್ಟುಕೊಂಡು ಅಪಪ್ರಚಾರ ಮಾಡಲಾಗಿದೆ.


ಇದನ್ನೂ ಓದಿ; Fact Check: ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಎಂದು ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ ಎಂಬುದು ಎಡಿಟೆಡ್ ವಿಡಿಯೋ


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *