ಇತ್ತೀಚೆಗೆ ಹೈದರಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಂಪೆಲ್ಲಾ ಮಾಧವಿ ಲತಾ ಅವರು ರಾಮ ನವಮಿಯ ದಿನ ತಮ್ಮ ಪ್ರಚಾರದ ವೇಳೆ ಮಸೀದಿಯೊಂದಕ್ಕೆ ಬಾಣ ಹೊಡೆಯುವ ರೀತಿಯಲ್ಲಿ ನಟಿಸಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತದಾದ್ಯಂತ ಟೀಕೆಗಳು ವ್ಯಕ್ತವಾದ ಬೆನ್ನಲ್ಲೆ ಈಗ ಅಸದುದ್ದೀನ್ ಓವೈಸಿಯವರು ಸಹ ಇದೇ ರೀತಿಯ ಕೋಮುದ್ವೇಷದ ಹೇಳಿಕೆ ನೀಡಿದ್ದರು ಎಂದು ಮಾಧವಿ ಲತಾ ಅವರನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ.
”ಯೋಗಿ ಯಾವಾಗಲೂ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ. ಮೋದಿ ಯಾವಾಗಲೂ ಪ್ರಧಾನಿಯಾಗಿ ಉಳಿಯುವುದಿಲ್ಲ. ಸಮಯದ ಕಾರಣದಿಂದ ನಾವು ಮುಸ್ಲಿಮರು ಮೌನವಾಗಿದ್ದೇವೆ. ನಿಮ್ಮ ಅನ್ಯಾಯವನ್ನು ನಾವು ಮರೆಯುವುದಿಲ್ಲ. ಅಲ್ಲಾಹನು ತನ್ನ ಶಕ್ತಿಯಿಂದ ನಿನ್ನನ್ನು ನಾಶಮಾಡುವನು. ಕಾಲಕ್ಕೆ ತಕ್ಕಂತೆ ವಿಷಯಗಳು ಬದಲಾಗುತ್ತವೆ. ಹಾಗಾದರೆ ನಿಮ್ಮನ್ನು ರಕ್ಷಿಸಲು ಯಾರು ಬರುತ್ತಾರೆ? ಎಂದು ಹೈದರಬಾದ್ ಲೋಕಸಭಾ ಕ್ಷೇತ್ರದ AIMIM ಅಭ್ಯರ್ಥಿ ಅಸಾದುದ್ದೀನ್ ಓವೈಸಿಯವರು ಎಚ್ಚರಿಕೆ ನೀಡಿದ್ದಾರೆ ಎಂದು ಪ್ರತಿಪಾದಿಸಿದ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್:
ಈ ಕುರಿತು ಹುಡುಕಿದಾಗ ವೈರಲ್ ವೀಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಡಿಸೆಂಬರ್ 24, 2021ರ ಕಾನ್ಪುರದಲ್ಲಿ ಮಾಡಿದ ಓವೈಸಿಯ ಮೂಲ ಭಾಷಣವನ್ನು AIMIM ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಮೂಲ ವೀಡಿಯೊದಲ್ಲಿ ಅವರು ಪೊಲೀಸ್ ದೌರ್ಜನ್ಯದ ಆರೋಪದ ಪ್ರಕರಣಗಳಿಗೆ ಉತ್ತರ ಪ್ರದೇಶದ ಪೊಲೀಸರನ್ನು ಟೀಕಿಸುತ್ತಾರೆ ಮತ್ತು ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅಧಿಕಾರದಲ್ಲಿಲ್ಲದ ನಂತರ ಅವರನ್ನು ಯಾರು ರಕ್ಷಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅದನ್ನು ಎಡಿಟ್ ಮಾಡಿ ಕೋಮುದ್ವೇಷ ಹರಡಲು ಹಂಚಿಕೊಳ್ಳಲಾಗುತ್ತಿದೆ.
ತಮ್ಮ ಭಾಷಣದಲ್ಲಿ ಓವೈಸಿ ಅವರು, “ಈಗ ಶೌಕತ್ ಸಾಹಬ್ ಅವರು ಕಾನ್ಪುರದಲ್ಲಿ ರಸೂಲಾಬಾದ್ ಪೊಲೀಸ್ ಠಾಣೆಯಲ್ಲಿ 80 ವರ್ಷದ ಮೊಹಮ್ಮದ್ ರಫೀಕ್ ಅವರ ಗಡ್ಡವನ್ನು ಎಳೆದು ಪೊಲೀಸ್ ಠಾಣೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಹೇಳುತ್ತಿದ್ದರು. ಗಜೇಂದರ್ ಪಾಲ್ ಸಿಂಗ್ ಎಂಬ ಎಸ್‌ಐ ಅವರೆ ಇದು ನಿಜವಾಗಿದ್ದರೆ, ನೀವು ಅವನ ಗಡ್ಡವನ್ನು ನೋಡಿ ನಾಚಿಕೆಪಡುವುದಕ್ಕಿಂತ ಹೆಚ್ಚು ನೋವುಂಟುಮಾಡುತ್ತೀರಿ, ಮತ್ತು ನೀವು ನಮ್ಮ ಗಡ್ಡವನ್ನು 80 ವರ್ಷದ ವ್ಯಕ್ತಿಯನ್ನು ಏಕೆ ದ್ವೇಷಿಸುತ್ತಿದ್ದೀರಿ? ಇದನ್ನು ಆ ಪೊಲೀಸ್ ಅಧಿಕಾರಿಗಳಿಗೆ ಹೇಳಲು ಬಯಸುತ್ತೇನೆ”
“ಯೋಗಿ ಯಾವತ್ತೂ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ.ಮೋದಿ ಯಾವತ್ತೂ ಪ್ರಧಾನಿಯಾಗಿ ಉಳಿಯುವುದಿಲ್ಲ. ಮುಸ್ಲಿಮರು ನಾವು ಕಾಲಕ್ಕೆ ತಕ್ಕಂತೆ ಮೌನವಾಗಿದ್ದೇವೆ.ನಿಮ್ಮ ಅನ್ಯಾಯಗಳನ್ನು ನಾವು ಮರೆಯುವುದಿಲ್ಲ. ಅಲ್ಲಾಹನು ತನ್ನ ಶಕ್ತಿಯಿಂದ ನಿನ್ನನ್ನು ನಾಶಮಾಡುತ್ತಾನೆ. ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ. ಹಾಗಾದರೆ ನಿಮ್ಮನ್ನು ರಕ್ಷಿಸಲು ಯಾರು ಬರುತ್ತಾರೆ?”
ಅವರು ಯುಪಿ ಪೊಲೀಸರನ್ನು ಉದ್ದೇಶಿಸಿ, “ನಾನು ಆ ಪೊಲೀಸ್ ಅಧಿಕಾರಿಗಳಿಗೆ ಇದನ್ನು ಹೇಳಲು ಬಯಸುತ್ತೇನೆ” ಎಂದು ಹೇಳುವ ಭಾಗವನ್ನು ವೈರಲ್ ವೀಡಿಯೊದಿಂದ ತಪ್ಪಾದ ಹೇಳಿಕೆಯನ್ನು ಮಾಡಲು ಎಡಿಟ್ ಮಾಡಲಾಗಿದೆ. ಮುಂದಿನ ಭಾಷಣದಲ್ಲಿಯೂ ಸಹ ಓವೈಸಿ ಪೊಲೀಸ್ ದೌರ್ಜನ್ಯದ ಇತರ ಹಲವಾರು ಪ್ರಕರಣಗಳನ್ನು ಉಲ್ಲೇಖಿಸುತ್ತಾರೆ.
ಈ ವೈರಲ್ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ “#HaridwarGenocidalMeet ನಿಂದ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ, ನಾನು ಕಾನ್ಪುರದಲ್ಲಿ ಮಾಡಿದ 45 ನಿಮಿಷಗಳ ಭಾಷಣದಿಂದ ಕಟ್ ಮಾಡಲಾದ 1 ನಿಮಿಷದ ವೀಡಿಯೊವನ್ನು ಪ್ರಸಾರ ಮಾಡಲಾಗುತ್ತಿದೆ. ನಾನು ದಾಖಲೆಯನ್ನು ನೇರವಾಗಿ ಒದಗಿಸುತ್ತೇನೆ: 1. ನಾನು ಹಿಂಸೆಯನ್ನು ಪ್ರಚೋದಿಸಿಲ್ಲ ಅಥವಾ ಬೆದರಿಕೆಗಳನ್ನು ನೀಡಿಲ್ಲ. ನಾನು ಪೊಲೀಸ್ ದೌರ್ಜನ್ಯಗಳ ಬಗ್ಗೆ ಮಾತನಾಡಿದ್ದೇನೆ ಎರಡು ಭಾಗಗಳಲ್ಲಿ ಪೂರ್ಣ ವಿಡಿಯೋ ಇಲ್ಲಿದೆ”ಎಂದು ವೈರಲ್ ವಿಡಿಯೋ ಮತ್ತು ಮೂಲ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ಡಿಸೆಂಬರ್ 25, 2021 ರಂದು ವರದಿ ಮಾಡಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಮೊಹಮ್ಮದ್ ರಫೀಕ್‌ಗೆ ಕಿರುಕುಳ ನೀಡಿದ್ದಾರೆ ಎಂಬ ಓವೈಸಿಯ ಆರೋಪವನ್ನು ಕಾನ್ಪುರ ಪೊಲೀಸರು ತಿರಸ್ಕರಿಸಿದ್ದಾರೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಅವರ ಸೇವಾ ಪಿಸ್ತೂಲ್ ದರೋಡೆ ಮಾಡಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಕಾನ್ಪುರ ದೇಹತ್ ಪೊಲೀಸರು ಹೇಳಿದ್ದಾರೆ.
ಭೀಕ್ ಡಿಯೋ ಗ್ರಾಮದ ರೈತ ರಫೀಕ್ ಅವರನ್ನು ಸಬ್ ಇನ್ಸ್ ಪೆಕ್ಟರ್ ಗಜೇಂದ್ರ ಪಾಲ್ ಸಿಂಗ್ ಮತ್ತು ಹೆಡ್ ಕಾನ್ ಸ್ಟೇಬಲ್ ಸಮರ್ ಸಿಂಗ್ ಮೇಲೆ ಹಲ್ಲೆ ನಡಿಸಿದ ಕಾರಣಕ್ಕಾಗಿ ಡಿಸೆಂಬರ್ 7, 2021 ರಂದು ಬಂಧಿಸಲಾಯಿತು. ಮಾರ್ಚ್ 2021 ರಂದು ಅವರ ಸೊಸೆಯು ಅವರ ವಿರುದ್ಧ ದಾಖಲಿಸಿದ ಕೌಟುಂಬಿಕ ಹಿಂಸಾಚಾರದಲ್ಲಿ ಮಧ್ಯಪ್ರವೇಶಿಸಲು ಕಾನ್ಪುರ ಪೊಲೀಸರನ್ನು ಹೋದಾಗ ಈ ಘಟನೆ ಜರುಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ರಫೀಕ್ (67) ಏಳು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವರನ್ನು ಡಿಸೆಂಬರ್ 7, 2021 ರಂದು ಬಂಧಿಸಿದ್ದರು ಮತ್ತು ಅವರ ವಶದಿಂದ ಸಬ್ ಇನ್‌ಸ್ಪೆಕ್ಟರ್ ಗಜೇಂದ್ರ ಪಾಲ್ ಅವರ ಸರ್ವಿಸ್ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ರಸೂಲಾಬಾದ್ ಸ್ಟೇಷನ್ ಹೌಸ್ ಆಫೀಸರ್ ಪ್ರಮೋದ್ ಶುಕ್ಲಾ ಹೇಳಿಕೆಯನ್ನು ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ಆದ್ದರಿಂದ ಸದ್ಯ ವೈರಲ್ ಆಗುತ್ತಿರುವ ಅಸಾದುದ್ದೀನ್ ಓವೈಸಿಯವರ ವಿಡಿಯೋ ಎಡಿಟೆಡ್ ಆಗಿದ್ದು ಕೋಮು ಪ್ರಚೋದನೆಯನ್ನು ನೀಡುವಂತಹ ಹೇಳಿಕೆಯನ್ನು ಅವರು ನೀಡಿಲ್ಲ.
ಇದನ್ನು ಓದಿ: Fact Check: ಪ್ರಚಾರದ ವೇಳೆ ಬಿಜೆಪಿ ನಾಯಕರಿಗೆ ಚಪ್ಪಲಿ ಹಾರ ಹಾಕಿರುವುದು ಹಳೆಯ ವಿಡಿಯೋ
ವಿಡಿಯೋ ನೋಡಿ: ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಎಂದು ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ ಎಂಬುದು ಎಡಿಟೆಡ್ ವಿಡಿಯೋ
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ