Fact Check: ರಾಜ್ಯ ಸರ್ಕಾರ ವಾಹನ ಚಾಲನಾ ತರಬೇತಿ ಶುಲ್ಕ ಹೆಚ್ಚಿಸಿದೆಯೇ ಹೊರತು ಡ್ರೈವಿಂಗ್‌ ಲೈಸೆನ್ಸ್ ದರವಲ್ಲ

ಡ್ರೈವಿಂಗ್‌

ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗಾಗಿ ಡ್ರೈವಿಂಗ್‌ ಲೈಸೆನ್ಸ್ ದರಗಳನ್ನು ಏರಿಸುತ್ತಿದೆ ಎಂದು ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪೋಸ್ಟರ್‌ನಲ್ಲಿ “ಡೈವಿಂಗ್ ಲೈಸೆನ್ಸ್ ದರ ಹೆಚ್ಚಿಸುತ್ತಿರುವ ರಾಜ್ಯ ಸರ್ಕಾರ ಹಿಂದಿನ ದರ ಹೊಸ ದರ ಕಾರು ಚಾಲನಾ, ದರ 4,000 ರಿಂದ 7,000ರೂ, ದ್ವಿಚಕ್ರ ವಾಹನಗಳ ದರ 2,200 ರಿಂದ 3,000ರೂ, ಆಟೋ ರಿಕ್ಷಾ 3,000 ರಿಂದ 4,000ರೂ ಬೃಹತ್ ಸಾರಿಗೆ ವಾಹನ 6,000 ರಿಂದ 9,000ರೂ, ಕಾರ್ ಡ್ರೈವಿಂಗ್ ಲೈಸೆನ್ಸ್ ಗೆ ಕನಿಷ್ಠ 8,500 ಖರ್ಚು ಮಾಡಬೇಕಿದೆ, ಇದು ಗಿಂಬಳ ಬಿಟ್ಟು, ಬಿಟ್ಟಿ ಯೋಜನೆ ಆಸೆ ತೋರಿಸಿ ಪಾಕೆಟ್ ಗೆ ಕತ್ರಿ ಹಾಕುತ್ತಿದೆ ಕಾಂಗ್ರೇಸ್” ಎಂದಿದೆ ಎಂದು ಪ್ರತಿಪಾದಿಸಲಾಗುತ್ತಿದೆ.ಫ್ಯಾಕ್ಟ್‌ಚೆಕ್‌: ರಾಜ್ಯದಲ್ಲಿ ಡ್ರೈವಿಂಗ್‌ ಲೈಸೆನ್ಸ್ ಗೆ ವಿಧಿಸಲಾಗುವ ದರಗಳ ಪರಿಶೀಲನೆ ಮಾಡಿದಾಗ, ಈ ವೇಳೆ ಕಲಿಕಾ ಚಾಲನೆ ಪರವಾನಗಿಗೆ ₹150, ಚಾಲನಾ ಪರವಾನಗಿ ದರ ₹200, ಅಂತಾರಾಷ್ಟ್ರೀಯ ಚಾಲನಾ ಪರವಾನಗಿಗೆ ₹1000, ಹೆಚ್ಚುವರಿ ದರ್ಜೆಯ ವಾಹನದ ಚಾಲನಾ ಪರವಾನಗಿಗೆ ₹500, ಚಾಲನಾ ಪರವಾನಗಿ ನವೀಕರಣಕ್ಕೆ ₹200 ಎಂದಿರುವುದನ್ನು ನೋಡಬಹುದು. ರಾಜ್ಯ ಸಾರಿಗೆ ಇಲಾಖೆ ವೆಬ್‌ಸೈಟ್ ನಲ್ಲಿ ಈ ವಿವರಗಳು ಲಭ್ಯವಿವೆ. 

ಎಪ್ರಿಲ್‌ 11, 2018ರ ಸುವರ್ಣ ನ್ಯೂಸ್‌ ವರದಿ ಪ್ರಕಾರ, “ನೂತನ ವರ್ಷದ ಖುಷಿಯಲ್ಲಿರುವ  ವಾಹನ ಸವಾರರಿಗೆ  ಕೇಂದ್ರ ಸರ್ಕಾರ ಶಾಕ್ ನೀಡಿದೆ. ವಾಹನ ಪರವಾನಗಿ, ಎಲ್ಎಲ್ಆರ್ ಪರವಾನಗಿ ಪಡೆಯಲು ಮೊದಲಿನ ದರಕ್ಕಿಂತ 6 ಪಟ್ಟು ಹೆಚ್ಚು ಶುಲ್ಕ ಪಾವತಿಸಬೇಕಾಗಿದೆ. ಕೇಂದ್ರ ಸರ್ಕಾರದ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವಾಲಯ 2016ರ ಡಿ.29ರಿಂದ ಅನ್ವಯವಾಗುವಂತೆ ಪರಿಷ್ಕರಣೆಯ ಆದೇಶ ಹೊರಡಿಸಿದೆ.” ಎಂದಿದೆ. ಇದೇ ವರದಿಯಲ್ಲಿ ಚಾಲನೆ ಪರವಾನಗಿಯನ್ನು ₹200 ಗೆ ಏರಿಸಲಾಗಿದೆ ಮತ್ತು ಕಲಿಕಾ ಚಾಲನಾ ಪರವಾನಗಿಗೆ ₹150 ಎಂದಿರುವುದನ್ನು ನೋಡಬಹುದು.

ಜನವರಿ 7, 2017ರ ಇಟಿ ಆಟೋ ವರದಿಯಲ್ಲಿ, ಚಾಲನಾ ಪರವಾನಗಿ ದರ 5 ಪಟ್ಟು ಏರಿಕೆಯಾಗಿದೆ ಎಂದಿದೆ. “ಸಾರಿಗೆ ಸಚಿವಾಲಯವು ಚಾಲನಾ ಪರವಾನಗಿಯ ದರವನ್ನು ₹40ರಿಂದ ₹200 ಗೆ ಏರಿಕೆ ಮಾಡಿದೆ, ಇದರೊಂದಿಗೆ ಹೆಚ್ಚುವರಿ ದರ್ಜೆಯ ವಾಹನದ ಚಾಲನಾ ಪರವಾನಗಿ ದರವನ್ನು ₹200 ರಿಂದ ₹500 ಕ್ಕೆ ಏರಿಕೆ ಮಾಡಲಾಗಿದೆ ಎಂದಿದೆ.

ಇತ್ತೀಚೆಗೆ ಚಾಲನಾ ಪರವಾನಗಿ (ಡ್ರೈವಿಂಗ್‌ ಲೈಸೆನ್ಸ್) ದರಗಳು ಏರಿಕೆಯಾಗಿಲ್ಲ, ಆದರೆ ಸರ್ಕಾರವು ಇತ್ತೀಚಿಗೆ ವಾಹನ ಚಾಲನಾ ತರಬೇತಿ ಶುಲ್ಕ ಏರಿಕೆಗೆ ಅನುವು ಮಾಡಿದೆ. ಡ್ರೈವಿಂಗ್ ಸ್ಕೂಲ್ ಮಾಲೀಕರ ಒಂದು ದಶಕದಿಂದ ಚಾಲನಾ ತರಬೇತಿ ಶುಲ್ಕ ಏರಿಸುವಂತೆ ರಾಜ್ಯ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು.  ಈಗ 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಾಹನ ಚಾಲನಾ ತರಬೇತಿ ಶುಲ್ಕ ಏರಿಕೆ ಮಾಡಲಾಗಿದೆ.

ಈ ಪ್ರಕಾರ ನಾವು ವರದಿಗಳನ್ನು ಶೋಧಿಸಲಾಗಿ, ಡಿಸೆಂಬರ್ 14, 2023ರ ಟೈಮ್ಸ್ ಆಫ್‌ ಇಂಡಿಯಾ ವರದಿ ಲಭ್ಯವಾಗಿದೆ. ಆ ಪ್ರಕಾರ “ರಾಜ್ಯದಲ್ಲಿ ಚಾಲನಾ ತರಬೇತಿ ಶಾಲೆಗಳ ಶುಲ್ಕಗಳನ್ನು ಪರಿಷ್ಕರಿಸಲು ಸರ್ಕಾರ ಅನುವು ಮಾಡಿದೆ. ಇದರಿಂದ ಕಾರು ಚಾಲನೆ ತರಬೇತಿ ಶುಲ್ಕ ₹4 ಸಾವಿರಗಳಿಂದ ₹7 ಸಾವಿರ ಗಳಿಗೆ ಏರಿಕೆಯಾಗಲಿದೆ. ಸಾರಿಗೆ ವಾಹನ ತರಬೇತಿ ಶುಲ್ಕ ₹6 ಸಾವಿರ ದಿಂದ ₹9 ಸಾವಿರ ಕ್ಕೆ ಏರಿಕೆಯಾಗಲಿದೆ ದ್ವಿಚಕ್ರ ವಾಹನಗಳ ತರಬೇತಿ ಶುಲ್ಕ ₹2200 ರಿಂದ ₹3 ಸಾವಿರಗಳಿಗೆ ಏರಿಕೆಯಾಗಲಿದೆ, ಇದು ಜನವರಿ 1 2021ರಿಂದ ಜಾರಿಗೆ ಬರಲಿದೆ ಎಂದಿದೆ. ಅಲ್ಲದೇ ಇಲಾಖೆ ನಿಗದಿ ಪಡಿಸಿದ ಶುಲ್ಕದ ಹೊರತಾಗಿ ಚಾಲನಾ ಪರವಾನಗಿ ಪಡೆಯಲು ಅಭ್ಯರ್ಥಿಗಳು ಜಿಎಸ್‌ಟಿ ಮತ್ತು ಇತರ ಶುಲ್ಕಗಳನ್ನು ಭರಿಸಬೇಕು. ವಾಹನ ತರಬೇತಿ ಶಾಲೆಗಳ ರಾಜ್ಯ ಒಕ್ಕೂಟದ ಆಗ್ರಹದ ಮೇರೆಗೆ ಸರ್ಕಾರ ಶುಲ್ಕಗಳನ್ನು ಪರಿಷ್ಕರಿಸಿದೆ ಎಂದು ಸಾರಿಗೆ ವಿಭಾಗದ ಹೆಚ್ಚವರಿ ಆಯುಕ್ತ ಸಿ.ಮಲ್ಲಿಕಾರ್ಜುನ ಅವರು ಹೇಳಿದ್ದಾರೆ” ಎಂದಿದೆ.

ಡಿಸೆಂಬರ್ 15, 2023ರ ಟಿವಿ 9 ವರದಿಯಲ್ಲಿ “ಚಾಲನಾ ತರಬೇತಿಯ ಪರಿಷ್ಕೃತ ಶುಲ್ಕ 2024ರ ಜನವರಿ 1ರಿಂದಲೇ ಜಾರಿಗೆ ಬರಲಿದೆ. ಸಾರಿಗೆ ಇಲಾಖೆ ಪರಿಷ್ಕೃತ ದರ ಪಟ್ಟಿಯನ್ನ ಪ್ರಕಟಿಸಿದೆ. ಹೊಸ ವರ್ಷಕ್ಕೆ‌ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡ್ಕೋಳ್ಳೋಣ ಅಂತಿದ್ದವರಿಗೆ ಸಾರಿಗೆ ಇಲಾಖೆ ದರ ಏರಿಕೆಯ ಶಾಕ್ ಕೊಟ್ಟಿದೆ. ಪರಿಷ್ಕೃತ ದರವು, ಮೋಟಾರ್ ಸೈಕಲ್ ಈ ಹಿಂದೆ 2,200 ರೂ. ಇದ್ದುದನ್ನು ಈಗ 3,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಆಟೋರಿಕ್ಷಾಗಳ ಚಾಲನಾ ತರಬೇತಿಗೆ 3000 ರೂ. ಇದ್ದುದನ್ನು 4000 ರೂ.ಗೆ ಹೆಚ್ಚಿಸಲಾಗಿದೆ. ಲಘು ಮೋಟಾರ್​ಗಳಿಗೆ 4000 ರೂ. ಇದ್ದುದನ್ನು 7000 ರೂ.ಹೆ ಏರಿಕೆ ಮಾಡಲಾಗಿದೆ. ಸಾರಿಗೆ ವಾಹನಗಳ ತರಬೇತಿ ದರವನ್ನು 6000 ರೂ.ನಿಂದ 9000 ರೂ.ಗೆ ಪರಿಷ್ಕರಿಸಲಾಗಿದೆ.” ಎಂದಿದೆ.

ಆದ್ದರಿಂದ ಸರ್ಕಾರ ಚಾಲನಾ ಪರವಾನಿಗೆ (ಡ್ರೈವಿಂಗ್‌ ಲೈಸೆನ್ಸ್) ಕುರಿತ ದರಗಳನ್ನು ಪರಿಷ್ಕರಿಸಿಲ್ಲ ಬದಲಾಗಿ ಮೋಟಾರು ವಾಹನ ತರಬೇತಿ ಶಾಲೆಗಳ ತರಬೇತಿ ಶುಲ್ಕಗಳನ್ನು ಪರಿಷ್ಕರಿಸಲು ಅನುಮತಿ ನೀಡಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಡ್ರೈವಿಂಗ್‌ ಲೈಸನ್ಸ್‌ ದರ ಹೆಚ್ಚು ಮಾಡಿದೆ ಎಂಬ ಪ್ರತಿಪಾದನೆ ಸುಳ್ಳು.


ಇದನ್ನು ಓದಿ: ವಯನಾಡ್ ದೇವಾಲಯ ಅತಿಕ್ರಮಣ ಎಂದು ಪಾಕಿಸ್ತಾನದ ಫೋಟೊ ಹಂಚಿಕೆ


ವಿಡಿಯೋ ನೋಡಿ: ಯುವಕನನ್ನು ಸಾರ್ವಜನಿಕವಾಗಿ ನೇಣುಹಾಕಿರುವ ಕುರಿತು ಇತ್ತೀಚಿನ ಯಾವುದೇ ವರದಿಗಳಿಲ್ಲ


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *