Fact Check | ವಯನಾಡ್ ದೇವಾಲಯ ಅತಿಕ್ರಮಣ ಎಂದು ಪಾಕಿಸ್ತಾನದ ಫೋಟೊ ಹಂಚಿಕೆ

“ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಮನಿಗೆ ಸಮರ್ಪಿತವಾದ ದೇವಾಲಯದ ಸಂಕೀರ್ಣದೊಳಗೆ ಕೋಳಿ ಅಂಗಡಿಯನ್ನು ನಡೆಸಲು ಅನುಮತಿ ನೀಡಿದ್ದು ಮಾತ್ರವಲ್ಲದೆ ಆ ಅಂಗಡಿಯನ್ನು ಈ ಹಿಂದೆ ಅವರೇ ಉದ್ಘಾಟಿಸಿದ್ದಾರೆ” ಎಂದು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಅಂತಹ ಒಂದು ವೀಡಿಯೊ ವೈರಲ್ ಆಗಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಂಡಿದ್ದಾರೆ.

“ಈ ದೇವಾಲಯವು ಪ್ರಮುಖ ಹಿಂದೂ ದೇವಾಲಯವಾಗಿದ್ದು, ವಯನಾಡಿನ ಸಂಸದರಾಗಿರುವ ರಾಹುಲ್ ಗಾಂಧಿಯವರ ಸಹಾಯದಿಂದ ಮುಸ್ಲಿಮರು ಅದನ್ನು ವಶಪಡಿಸಿಕೊಂಡರು. ದೇವಸ್ಥಾನದ ಒಳಗೆ ನಡೆಸುತ್ತಿರುವ ಕೋಳಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಇದನ್ನು ಈ ಹಿಂದೆ ರಾಹುಲ್ ಗಾಂಧಿ ಉದ್ಘಾಟಿಸಿದರು. ಹಿಂದೂಗಳು ಕಾಂಗ್ರೆಸ್‌ಗೆ ಮತ ಹಾಕಿದರೆ ಇಡೀ ರಾಷ್ಟ್ರದ ಸ್ಥಿತಿ ಹೀಗಾಗುತ್ತದೆ” ಎಂದು ಕೆಲವರು ವೈರಲ್‌ ವಿಡಿಯೋಗೆ ಕಮೆಂಟ್‌ ಮಾಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ‘ಸೀತಾರಾಮ್ ಟೆಂಪಲ್ ಚಿಕನ್ ಶಾಪ್’ನಂತಹ ವೈರಲ್ ವೀಡಿಯೊಗೆ ಸಂಬಂಧಿಸಿದ ಕೀವರ್ಡ್‌ಗಳನ್ನು ಬಳಸಿಕೊಂಡು,  ಗೂಗಲ್‌ನಲ್ಲಿ ಹುಡುಕಾಟ ನಡೆಸಿತ್ತು. ಈ ವೇಳೆ ಮಖನ್ ರಾಮ್ ಜೈಪಾಲ್ ವ್ಲಾಗ್ಸ್ ಎಂಬ ಚಾನಲ್ ಪೋಸ್ಟ್ ಮಾಡಿದ YouTube ವೀಡಿಯೊವೊಂದು ಪತ್ತೆಯಾಗಿದೆ. ವೈರಲ್ ವೀಡಿಯೊದಲ್ಲಿರುವ ಅಂಗಡಿ ವೈರಲ್‌ ವಿಡಿಯೋದಲ್ಲಿನ ಕಟ್ಟಡ ಒಂದೇ ಆಗಿದೆ ಎಂಬುದು ತಿಳಿದು ಬಂದಿದೆ.

ಈ ವೀಡಿಯೊದ ಶೀರ್ಷಿಕೆಯನ್ನು ಗಮನಿಸಿದಾಗ ಅದರಲ್ಲಿ “ವಿಭಜನೆಯ (ಭಾರತ ಪಾಕಿಸ್ತಾನ ವಿಭಜನೆಯ) ನಂತರ ಸೀತಾರಾಮ್‌ ಮಂದಿರ್‌ ಕೋಳಿ ಅಂಗಡಿಯಾಯಿತು|| ಪಾಕಿಸ್ತಾನದಲ್ಲಿ ಮಂದಿರದ ಸ್ಥಿತಿ” ಎಂದು ಟೈಟಲ್‌ ನೀಡಲಾಗಿದೆ. ವೀಡಿಯೊದಲ್ಲಿ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಜಾಂಗ್ ಜಿಲ್ಲೆಯ ಪಟ್ಟಣವಾದ ಅಹಮದ್‌ಪುರ ಸಿಯಾಲ್‌ನಲ್ಲಿ ಈ ದೇವಾಲಯವಿದೆ ಎಂದು ವ್ಲಾಗರ್ ಹೇಳುತ್ತಾರೆ. ಸೀತಾ ರಾಮ ದೇವಾಲಯವು ಅಹಮದ್‌ಪುರ ಸಿಯಾಲ್‌ನ ಜನನಿಬಿಡ ಮಾರುಕಟ್ಟೆ ಸ್ಥಳದಲ್ಲಿದೆ ಮತ್ತು ಇದು ಶತಮಾನಗಳಷ್ಟು ಹಳೆಯದು ಎಂದು ವ್ಲಾಗರ್ ಹೇಳುತ್ತದೆ.

ದೇವಾಲಯವು ಈಗ ಶಿಥಿಲಾವಸ್ಥೆಯಲ್ಲಿದೆ ಮತ್ತು ಮಾರಾಟಗಾರರಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದಿರುವ ಮಾರಾಟಗಾರರೊಬ್ಬರು ಕೋಳಿ ಮಾಂಸವನ್ನು ಮಾರಾಟ ಮಾಡುತ್ತಾರೆ. ವ್ಲಾಗರ್ ಒಬ್ಬ ಪಾಕಿಸ್ತಾನಿ ಹಿಂದೂ ಆಗಿದ್ದು, ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯಗಳ ಸ್ಥಿತಿ ಮತ್ತು ಪಾಕಿಸ್ತಾನಿ ಹಿಂದೂಗಳ ಜೀವನವನ್ನು ತೋರಿಸುವ ಅನೇಕ ವ್ಲಾಗ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

ಈ ದೇವಾಲಯದ ಕುರಿತು, ಪಾಕಿಸ್ತಾನದ  ದಿ ಫ್ರೈಡೇ ಟೈಮ್ಸ್ ವೆಬ್‌ಸೈಟ್‌ನಲ್ಲಿ ಹಲವು ಮಾಹಿತಿಗಳು ಲಭ್ಯವಾಗಿದೆ. ಈ ಲೇಖನವನ್ನು 12 ಮೇ 2017 ರಂದು ಪ್ರಕಟಿಸಲಾಗಿದೆ. ಲೇಖನದ ಪ್ರಕಾರ, ಸೀತಾ ರಾಮ ದೇವಾಲಯವನ್ನು 1887 ರಲ್ಲಿ ನಿರ್ಮಿಸಲಾಯಿತು ಮತ್ತು ಭಾರತದ ವಿಭಜನೆಯ ಮೊದಲು ನಗರದಲ್ಲಿ ಪ್ರಮುಖ ದೇವಾಲಯವಾಗಿತ್ತು. ವಿಭಜನೆಯ ನಂತರ, ದೇವಾಲಯವನ್ನು ಕೈಬಿಡಲಾಯಿತು ಮತ್ತು ದೇವಾಲಯದ ಒಳಗಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಸ್ಥಳೀಯರು ಲೂಟಿ ಮಾಡಿದರು ಎಂದು ತಿಳಿದು ಬಂದಿದೆ.

1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ನಂತರ ಮಂದಿರದ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಈ ದೇವಾಲಯವು ಈಗ ಪಾಕಿಸ್ತಾನದ ಮುಸ್ಲಿಮೇತರ ಇವಾಕ್ಯೂ ಟ್ರಸ್ಟ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಪಾಕಿಸ್ತಾನದಲ್ಲಿರುವ ಎಲ್ಲಾ ಕೈಬಿಟ್ಟ ಹಿಂದೂ ದೇವಾಲಯಗಳು ಮತ್ತು ಗುರುದ್ವಾರಗಳನ್ನು ನಿಯಂತ್ರಿಸುತ್ತದೆ. ಟ್ರಸ್ಟ್ ಆದಾಯ ಗಳಿಸಲು ಕಟ್ಟಡವನ್ನು ಸ್ಥಳೀಯರಿಗೆ ಗುತ್ತಿಗೆ ನೀಡಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಕೇರಳದ ವಯನಾಡಿನಲ್ಲಿ ರಾಹುಲ್‌ ಗಾಂಧಿ ಹಿಂದೂ ದೇವಾಲಯದಲ್ಲಿ ಮುಸಲ್ಮಾನರಿಗೆ ಕೋಳಿ ಅಂಗಡಿ ನಡೆಸಲು ನೇರವಾದರು ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಹಾಗೂ ಈ ವಿಡಿಯೋ ಭಾರತಕ್ಕೆ ಸೇರಿದಲ್ಲ ಪಾಕಿಸ್ತಾನದ್ದು ಎಂಬುದು ಕೂಡ ಸಾಬೀತಾಗಿದೆ.


ಇದನ್ನೂ ಓದಿ :  ಡಿ.ಕೆ.ಶಿವಕುಮಾರ್‌ ಎಂದು BJP ನಾಯಕನ ಅಶ್ಲೀಲ ಫೋಟೋ ಹಂಚಿಕೆ


ಈ ವಿಡಿಯೋ ನೋಡಿ :ಡಿ.ಕೆ.ಶಿವಕುಮಾರ್‌ ಎಂದು BJP ನಾಯಕನ ಅಶ್ಲೀಲ ಫೋಟೋ ಹಂಚಿಕೆ


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *