Fact Check | ಬಾಂಗ್ಲಾದೇಶದ ಮುಸ್ಲಿಂ ನಾಯಕನ ಹಳೆಯ ವಿಡಿಯೋವನ್ನು ಭಾರತದ್ದು ಎಂದು ಸುಳ್ಳು ಮಾಹಿತಿ ಹಂಚಿಕೆ

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ಹಿಂದೂಗಳ ಮನೆ ಬಾಗಿಲಿಗೆ ಹೋಗುತ್ತೇವೆ, ಮತ್ತು ಹಿಂದೂಗಳನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಮಾಡುತ್ತೇವೆ ಎಂದು ಮುಸಲ್ಮಾನ ವಿದ್ವಾಂಸನೊಬ್ಬ ಹೇಳಿಕೆ ನೀಡಿದ್ದಾನೆ. ಜಾಗೃತರಾಗಿ ಹಿಂದೂಗಳೆ ಈಗಾಲಾದರೂ ಎಚ್ಚತ್ತುಕೊಳ್ಳಿ, ಚುನಾವಣೆಯಲ್ಲಿ ನೀವು ಯಾರಿಗೆ ಮತ ಹಾಕಬೇಕು ಎಂಬುದನ್ನು ಈಗಾಲಾದರು ಸರಿಯಾಗಿ ನಿರ್ಧರಿಸಿ’ ಎಂದು ವಿವಿಧ ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಾತನಾಡುತ್ತಿದ್ದು ಆತನ ಹಿಂಬದಿಯಲ್ಲಿ ಇರುವವರೆಲ್ಲ ಮುಸಲ್ಮಾನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ವಿಡಿಯೋವನ್ನು ನೋಡಿದ ಬಹುತೇಕರು ಇದನ್ನು ನಿಜವೆಂದು ಭಾವಿಸಿ ಶೇರ್‌ ಕೂಡ ಮಾಡುತ್ತಿದ್ದಾರೆ. ಇನ್ನು ಇಂತಹ ಕೋಮು ಪ್ರಚೋದನೆ ಹೇಳಿಕೆಯನ್ನು ಚುನಾವಣೆ ಸಂದರ್ಭದಲ್ಲಿ ಯಾರು ನೀಡುವಂತಿಲ್ಲ. ಆದರೂ ಈ ರೀತಿಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಇದು ನಿಜವಾದ ವಿಡಿಯೋನಾ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌

ಈ ಕುರಿತು ಸತ್ಯಶೋಧನೆಯನ್ನು ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ ವ್ಯಾಪಕವಾಗಿ ವಿವಿಧ ಸುಳ್ಳುಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋಗಳೇ ಪ್ರಮುಖವಾಗಿ ಕಾಣಿಸಿಕೊಂಡವು ಬಳಿಕ ಇನ್ನಷ್ಟು ಹುಡುಕಿದಾಗ ವೈರಲ್‌ ಆಗುತ್ತಿರುವ ವಿಡಿಯೋದ ಮೂಲ ವಿಡಿಯೋ ಪತ್ತೆಯಾಗಿದೆ. ಈ ವೇಳೆ ವೈರಲ್‌ ವಿಡಿಯೋವಿನ ಅಸಲಿಯತ್ತು ಬಯಲಾಗಿದೆ.

ಹೌದು ವೈರಲ್‌ ವಿಡಿಯೋವಿನ ಮೂಲ ವಿಡಿಯೋವನ್ನು ಎಕ್ಸ್‌ ಖಾತೆಯ ಬಳಕೆದಾರರೊಬ್ಬರು 6 ಮೇ 2021ರಂದು ಹಂಚಿಕೊಂಡಿದ್ದರು ಇದರಲ್ಲಿ ವಿಡಿಯೋದ ಪೂರ್ಣ ಆವೃತ್ತಿಯನ್ನು ಕಾಣಬಹುದಾಗಿದೆ. ವೈರಲ್‌ ವಿಡಿಯೋದಲ್ಲಿರುವ ಅದೇ ವ್ಯಕ್ತಿ ಮೈಕ್ರೋಫೋನ್ ಹಿಡಿದುಕೊಂಡು ಬಾಂಗ್ಲಾದೇಶದ ದಿನಜ್‌ಪುರದಿಂದ ಮಾತನಾಡುತ್ತಿದ್ದೇನೆ ಎಂದು ಹೇಳುವುದನ್ನು ಕಾಣಬಹುದು. ಅಲ್ಲಿಗೆ ಈ ವಿಡಿಯೋ ಭಾರತದ್ದೂ ಅಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯ ಸಂದರ್ಭದ ಭಾಷಣದ ವಿಡಿಯೋ ಕೂಡ ಇದಲ್ಲ ಎಂಬುದು ಖಚಿತವಾಗಿದೆ.

ಇನ್ನು ಈ ವಿಡಿಯೋದಲ್ಲಿನ ಮಾಹಿತಿಯನ್ನು ಆಧಾರಿಸಿ ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿ ಹುಡುಕಿದಾಗ ಈ ವ್ಯಕ್ತಿಯ ಯೂಟ್ಯೂಬ್‌ ಚಾನಲ್‌ ಮತ್ತು ಫೇಸ್‌ಬುಕ್‌ ಪೇಜ್‌ ಲಭ್ಯವಾಗಿದೆ. ಅವುಗಳಿಂದ ಈತನ ಹೆಸರು ‘ಸೈಯದ್ ಇರ್ಷಾದ್ ಅಹ್ಮದ್ ಅಲ್ ಬುಖಾರಿ ಎಂದು ತಿಳಿದು ಬಂದಿದ್ದು, ಈತ ಬಾಂಗ್ಲಾದೇಶದ ದಿನಜ್‌ಪುರದವನಾಗಿದ್ದು, ಅಂತರರಾಷ್ಟ್ರೀಯ ಇಸ್ಲಾಮಿಕ್ ವಿದ್ವಾಂಸಕನಾಗಿದ್ದಾನೆ ಎಂಬುದು ತಿಳಿದು ಬಂದಿದೆ. ಇನ್ನು ಇವನ ಯುಟ್ಯುಬ್‌ ಚಾನಲ್‌ನಲ್ಲಿ ಕಂಡ ಬಂದ ವೈರಲ್‌ ಭಾಷಣವನ್ನು ಈತ ಈ ವಿಡಿಯೋವನ್ನು 30 ಏಪ್ರಿಲ್‌ 2021 ರಂದು ಹಂಚಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ಈತ ಎಲ್ಲಿಯೂ ಕಾಂಗ್ರೆಸ್‌ ಎಂಬ ಪದವನ್ನೇ ಬಳಸಿಲ್ಲ ಎಂಬುದು ಖಚಿತವಾಗಿದೆ

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದ ಮೇಲೆ ಈ ವಿಡಿಯೋಗೂ ಭಾರತ ಮತ್ತು ಕಾಂಗ್ರೆಸ್‌ ಪಕ್ಷಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಹಾಗೂ ಈ ವಿಡಿಯೋ ಮುಖಾಂತರ ಕಾಂಗ್ರೆಸ್‌ ಪಕ್ಷದ ಬಗ್ಗೆ ಜನರಲ್ಲಿ ನಕರಾತ್ಮಕ ಮನೋಭಾವನೆ ಮೂಡಿಸುವ ಸಲುವಾಗಿ ಈ ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ.


ಇದನ್ನೂ ಓದಿ : Fact Check | ಕುಕ್ಕೆ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ಕ್ರಿಶ್ಚಿಯನ್‌ ಅಧಿಕಾರಿ ನೇಮಿಸಿದೆ ಎಂಬುದು ಸುಳ್ಳು


ಈ ವಿಡಿಯೋ ನೋಡಿ : Fact Check | ಕುಕ್ಕೆ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ಕ್ರಿಶ್ಚಿಯನ್‌ ಅಧಿಕಾರಿ ನೇಮಿಸಿದೆ ಎಂಬುದು ಸುಳ್ಳು


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *