Fact Check | ಬೌದ್ಧ ಸನ್ಯಾಸಿ ಮಹಾಬೋಧಿ ದೇವಾಲಯದ ಕಾಣಿಕೆ ಪೆಟ್ಟಿಗೆಯಿಂದ ಹಣ ಕದ್ದಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಬೌದ್ಧ ಸನ್ಯಾಸಿಯೊಬ್ಬ ಮಹಾಬೋಧಿ ದೇವಾಲಯದ ಕಾಣಿಕೆ ಪೆಟ್ಟಿಯಿಂದ ಹಣವನ್ನು ಕದಿಯುತ್ತಿದ್ದಾನೆ. ಕಾಣಿಕೆ ಡಬ್ಬಿಯಿಂದ ಹಣವನ್ನು ತೆಗೆದು ಎಣಿಸಿದ ಬಳಿಕ, ಗೌತಮ ಬುದ್ಧನ ಪ್ರತಿಮೆಯ ಕಾಲಿಗೆ ನಮಸ್ಕರಿಸುತ್ತಾನೆ. ಇಂತಹ ನಾಚಿಗೆಗೇಡಿನ ಸಂಗತಿಯ ಬಗ್ಗೆ ಯಾಕೆ ಕ್ರಮ ಆಗಿಲ್ಲ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಂಡು ತಮ್ಮ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ.

ಇಲ್ಲಿ ದುರಂತವೆಂದರೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಕೂಡ ಈ ವೈರಲ್‌ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೆ ವರದಿ ಮಾಡಿವೆ. ಹೀಗಾಗಿ ಈ ಸುದ್ದಿ ವಾಹಿನಿಗಳ ವರದಿಯನ್ನು ವೀಕ್ಷಿಸಿದ ಬಹುತೇಕರು ಇದು ನಿಜವಾದ ಘಟನೆಯಾಗಿರಬಹುದು ಎಂದು ಭಾವಿಸಿ ವೈರಲ್‌ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಬೌದ್ಧ ಸನ್ಯಾಸಿ ನಿಜಕ್ಕೂ ಕಾಣಿಕೆಯ ಡಬ್ಬಿಯಿಂದ ಹಣವನ್ನು ಕದ್ದರೆ..? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌

ಈ ವೈರಲ್‌ ವಿಡಿಯೋದ  ಕುರಿತು ಸತ್ಯ ಶೋಧನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ, ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಇದೇ ರೀತಿಯ ಹಲವು ವರದಿಗಳು ಕಂಡ ಬಂದವು. ಇನ್ನಷ್ಟು ಹುಡುಕಿದಾಗ 5 ಮೇ  2024ರಂದು ಬಿಹಾರದ ಗಯಾ ಪೊಲೀಸರ ಟ್ವೀಟ್‌ವೊಂದು ಕಂಡು ಬಂದಿದೆ. ಈ ಟ್ವಿಟ್‌ನಲ್ಲಿ ಮಹಾಬೋಧಿ ದೇವಾಲಯದ ನಿರ್ವಹಣಾ ಮಂಡಳಿ ಈ ಆರೋಪವನ್ನು ತಳ್ಳಿ ಹಾಕಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.

ಇದೇ ಟ್ವಿಟ್‌ನಲ್ಲಿ “ದೇವಾಲಯದ ಕಾಣಿಕೆ ಡಬ್ಬಿಗಳಿಗೆ ಹಾಕಿದ ಹಣ ದೇವಾಲಯಕ್ಕೆ ಸೇರುತ್ತದೆ. ಜೊತೆಗೆ ದೇವಾಲಯಕ್ಕೆ ಬರುವ ಭಕ್ತರು ದೇವಾಲಯದಲ್ಲಿರುವ ಸನ್ಯಾಸಿಗಳಿಗೆ ಹಣ ನೀಡುತ್ತಾರೆ. ಅದು ಆ ಸನ್ಯಾಸಿಗಳಿಗೆ ಸೇರುತ್ತದೆ. ಸನ್ಯಾಸಿಗಳ ಹಣವನ್ನು ಅವರೇ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಇನ್ನು ವೈರಲ್‌ ವಿಡಿಯೋದಲ್ಲಿ ದೇವಾಲಯದ ಕಾಣಿಕೆ ಡಬ್ಬಿ ಸನ್ಯಾಸಿಗಿಂತ 10 ಮೀಟರ್‌ ದೂರದಲ್ಲಿ ಇತ್ತು” ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟ ಪಡಿಸಿದ್ದಾಗಿ ಪೊಲೀಸರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಹಾಗಾಗಿ ವೈರಲ್‌ ವಿಡಿಯೋದಲ್ಲಿ ಹೇಳಿಕೊಂಡಂತೆ ದೇವಾಲಯದ ಕಾಣಿಕೆ ಡಬ್ಬಿಯಿಂದ ಬೌದ್ಧ ಸನ್ಯಾಸಿ ಹಣ ಕದ್ದಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ.


ಇದನ್ನೂ ಓದಿ : ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ಈ ವಿಡಿಯೋ ನೋಡಿ : ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *