Fact Check: ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ

ಇತ್ತೀಚೆಗೆ ರಾಜಕೀಯ ಮುಖಂಡರ ಭಾಷಣಗಳನ್ನು ತಪ್ಪಾಗಿ ಅರ್ಥ ಬರುವಂತೆ ತಿರುಚಿ ಹಂಚಿಕೊಳ್ಳುವುದು ಸರ್ವೇ ಸಾಮಾನ್ಯವಾಗುತ್ತಿದೆ. ಚುನಾವಣಾ ಸಂದರ್ಭಗಳಲ್ಲಿ ಇಂತಹ ವಿಡಿಯೋಗಳನ್ನು ಹೆಚ್ಚು ಹರಿಬಿಡಲಾಗುತ್ತಿದೆ. ಅನೇಕ ಬಾರಿ ಇಂತಹ ತಿರುಚಿದ ವಿಡಿಯೋಗಳಿಂದ ಜನರಿಗೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ಅಥವಾ ಯಾರದೇ ಭಾ‍ಷಣದ ತುಣುಕನ್ನು ನೋಡಿದಾಗ ಅವರ ಮಾತನ್ನು ಸಂಪೂರ್ಣವಾಗಿ ನಂಬಿ ಅಭಿಪ್ರಾಯ ರೂಪಿಸಿಕೊಳ್ಳುವ ಮೊದಲು ಅವರ ಪೂರ್ತಿ ಭಾಷಣ ನೋಡಿ ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ.

ಈಗ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನು ಮಾಡುತ್ತದೆ ಎಂದು ಅದರ ಅಧ್ಯಕ್ಷ ಖರ್ಗೆಯವರ ಬಾಯಿ ಇಂದಲೇ ಕೇಳಿ. ಕಾಂಗ್ರೆಸ್ ಹಿಂದೂಗಳ ಮನೆಗೆ ನುಗ್ಗಿ, ಅಲ್ಲಿರುವ ಬೀರುಗಳ ಬಾಗಿಲು ತೆರೆದು ಅಲ್ಲಿರುವ ಸಂಪತ್ತನ್ನು ಹೆಚ್ಚು ಮಕ್ಕಳಿರುವ ಮುಸಲ್ಮಾನರಿಗೆ ಹಂಚುತ್ತದೆ.” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಹೇಳಿದ್ದಾರೆ ಎನ್ನಲಾಗುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್: ಈ ವೈರಲ್ ವಿಡಿಯೋ ಎಡಿಟೆಡ್ ಆಗಿದೆ. 4 ಮೇ 2024 ರಂದು ಗುಜರಾತಿನ ಅಹಮದಾಬಾದ್‌ ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಮಾತಿನಾಡಿದ್ದು, ಮೂಲ ವಿಡಿಯೋದಲ್ಲಿ ಕಾಂಗ್ರೆಸ್‌ನ ಲೋಕಸಭಾ ಪ್ರಣಾಳಿಕೆಯನ್ನು ಒಂದೊಂದಾಗಿ ವಿವರಿಸುತ್ತಿದ್ದ ಅವರು “ಯಾವ ಸಮುದಾಯದಲ್ಲಿ ಎಷ್ಟು ಜನ ವಿದ್ಯಾವಂತರಿದ್ದಾರೆ, ಎಷ್ಟು ಜನ ಪದವಿ ಪಡೆದವರಿದ್ದಾರೆ. ಅವರ ವಾರ್ಷಿಕ ಆದಾಯ ಎಷ್ಟು? ತಲಾ ಆದಾಯ ಎಷ್ಟು? ಈ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವ ಸಲುವಾಗಿ ನಾವು ಜಾತಿಗಣತಿ ಮಾಡಲು ನಿರ್ಧರಿಸಿದ್ದೇವೆ. ಆದರೆ ಮೋದಿಯವರು ನಿಮ್ಮ ಮನೆಗೆ ನುಗ್ಗಿ ಹಣ ದೋಚಿ ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುತ್ತಾರೆ ಎಂದು ಸುಳ್ಳು ಹೇಳಿದ್ದಾರೆ. ಎಂದು ಕಾಂಗ್ರೆಸ್‌ ಪ್ರಣಾಳಿಕೆಯ ಕುರಿತು ಜನರಿಗೆ ಸುಳ್ಳು ಹೇಳುತ್ತಿರುವ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ.

ಮುಂದುವರೆದು “ನಾವು ನಮ್ಮ ಪ್ರಣಾಳಿಕೆಯಲ್ಲಿ ಎಲ್ಲಿಯೂ ಮುಸ್ಲಿಮರಿಗೆ ಮಾತ್ರ ಎಂದು ಹೇಳಿಲ್ಲ. ಇದು ಬಡವರು, ಹಿಂದುಳಿದವರಿಗೂ ಸೇರಿದಂತೆ ಭಾರತದ 180 ಕೋಟಿ ಜನರಿಗಾಗಿ ನಾವು ನ್ಯಾಯ ಪ್ರಣಾಳಿಕೆಯನ್ನು ತಯಾರಿಸಿದ್ದೇವೆ. ಈ ರೀತಿ ಮೋದಿಯವರು ಸುಳ್ಳು ಹಬ್ಬಿಸುವುದು ಪ್ರಧಾನಿ ಆಗಿ ಅವರಿಗೆ ಕ್ಷೋಭೆಯಲ್ಲ, ಜೊತೆಗೆ ದೇಶಕ್ಕೆ ಮತ್ತು ನಮಗೂ ಕ್ಷೋಭೆಯಲ್ಲ” ಎಂದಿದ್ದಾರೆ. ಅವರು ಮಾತನ್ನು ಕಟ್ ಮಾಡಿ ಸುಳ್ಳು ಹಬ್ಬಿಸಲಾಗಿದೆ.


ಇದನ್ನು ಓದಿ: ರಾಯಚೂರಿನಲ್ಲಿ ರವಿ ಸಾಬ್ ಜಿಂದಾಬಾದ್ ಎಂದಿದ್ದನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಿ ಹಂಚಿಕೆ


ವಿಡಿಯೋ ನೋಡಿ: ಸಂವಿಧಾನ ಮುಗಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿಲ್ಲ, ಇದು ಎಡಿಟೆಡ್ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *