Fact Check | ಸೌದಿ ಬೋಧಕ ನಾಸರ್ ಬಿನ್ ಸುಲೇಮಾನ್ ಅಲ್-ಒಮರ್ ಭಾರತದಲ್ಲಿ ಇಸ್ಲಾಂ ಹರಡುವಿಕೆಯ ಬಗ್ಗೆ ನೀಡಿರುವ ಹೇಳಿಕೆ ನಕಲಿ

 ಸಾಮಾಜಿಕ ಜಾಲತಾಣದಲ್ಲಿ “ಭಾರತ ಆಳವಾದ ನಿದ್ರೆಯಲ್ಲಿದೆ. ಇಸ್ಲಾಂ ಧರ್ಮವು ವೇಗವಾಗಿ ಬೆಳೆಯುತ್ತಿದೆ ಮತ್ತು ಸಾವಿರಾರು ಮುಸ್ಲಿಮರು ಪೊಲೀಸ್, ಸೈನ್ಯ ಮತ್ತು ಅಧಿಕಾರಶಾಹಿಗೆ ನುಸುಳಿದ್ದಾರೆ ಮತ್ತು ಪ್ರಮುಖ ಸಂಸ್ಥೆಗಳಿಗೆ ಪ್ರವೇಶಿಸಿದ್ದಾರೆ. ಇಸ್ಲಾಂ ಭಾರತದಲ್ಲಿ ಎರಡನೇ ಅತಿ ದೊಡ್ಡ ಧರ್ಮವಾಗಿದೆ. ಇಂದು ಭಾರತವೂ ಅಳಿವಿನ ಅಂಚಿನಲ್ಲಿದೆ. ಒಂದು ರಾಷ್ಟ್ರದ ಉದಯಕ್ಕೆ ದಶಕಗಳೇ ಹಿಡಿಯುವಂತೆ, ಅದರ ವಿನಾಶಕ್ಕೂ ಸಮಯ ಬೇಕಾಗುತ್ತದೆ. ಭಾರತ ರಾತ್ರೋರಾತ್ರಿ ಅಂತ್ಯವಾಗುವುದಿಲ್ಲ. ಇದನ್ನು ಕ್ರಮೇಣ ತೆಗೆದುಹಾಕಲಾಗುತ್ತದೆ.” ಎಂಬ ಬಹವನ್ನು ಹಂಚಿಕೊಳ್ಳಲಾಗುತ್ತಿದೆ.

ಇದೇ ಪೋಸ್ಟ್‌ನಲ್ಲಿ ಮುಂದುವರೆದು “ಮುಸ್ಲಿಮರಾದ ನಾವು ಅದನ್ನು ಬಹಳ ಗಂಭೀರವಾಗಿ ಅನುಸರಿಸುತ್ತೇವೆ. ಭಾರತ ಖಂಡಿತವಾಗಿಯೂ ನಾಶವಾಗುತ್ತದೆ. ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು 25% ಕ್ಕಿಂತ ಹೆಚ್ಚಿದೆ ಮತ್ತು 2050 ರ ವೇಳೆಗೆ ಭಾರತವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಇಸ್ಲಾಂ ಪ್ರೊಫೆಸರ್‌  ನಾಸರ್ ಬಿನ್ ಸುಲೇಮಾನ್ ಅಲ್-ಒಮರ್ ಹೇಳಿದ್ದಾರೆ.”  ಎಂದು ಪ್ರತಿಪಾದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 

ಫ್ಯಾಕ್ಟ್‌ಚೆಕ್‌

2050 ರ ವೇಳೆಗೆ ಭಾರತವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗುವ ಬಗ್ಗೆ ಸೌದಿ ಪ್ರಾಧ್ಯಾಪಕ ನಾಸರ್ ಬಿನ್ ಸುಲೇಮಾನ್ ಅಲ್-ಒಮರ್ ಯಾವುದಾದರು  ಹೇಳಿಕೆ ನೀಡಿದ್ದಾರೆಯೇ ಎಂದು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಿದಾಗ, ಈ ಕುರಿತು ಯಾವುದೇ  ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ.

ಹೆಚ್ಚಿನ ಮಾಹಿತಿಗಾಗಿ ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ನಾಸರ್ ಬಿನ್ ಸುಲೇಮಾನ್ ಅಲ್-ಒಮರ್ ಅವರು 2004 ರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾವನ್ನು ಉಲ್ಲೇಖಿಸಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು ಎಂದು ತಿಳಿದು ಬಂದಿದೆ. ಜೂನ್ 2004 ರಲ್ಲಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಆತ , ” ಅಮೆರಿಕಾ ಒಳಗಿನಿಂದ ಕುಸಿಯುತ್ತಿದೆ… ಇಸ್ಲಾಂ ಒಂದು ಸ್ಥಿರವಾದ ಯೋಜನೆಯ ಪ್ರಕಾರ ಮುಂದುವರಿಯುತ್ತಿದೆ, ಹತ್ತಾರು ಮುಸ್ಲಿಮರು ಅಮೇರಿಕನ್ ಸೈನ್ಯಕ್ಕೆ ಸೇರಿದ್ದಾರೆ ಮತ್ತು ಇಸ್ಲಾಂ ಅಮೇರಿಕಾದಲ್ಲಿ ಎರಡನೇ ಅತಿದೊಡ್ಡ ಧರ್ಮವಾಗಿದೆ. ಇಂದು ಅಮೆರಿಕ ಸೋತಿದೆ. ಅಮೇರಿಕಾ ವಿನಾಶದ ಹಾದಿಯಲ್ಲಿದೆ ಎಂಬುದರಲ್ಲಿ ನನಗೆ ಒಂದು ನಿಮಿಷವೂ ಸಂದೇಹವಿಲ್ಲ. ” ಎಂದು ಹೇಳಿಕೆ ನೀಡಿದ್ದಾನೆ.

ಇದಲ್ಲದೆ, ನಾಸರ್ ಬಿನ್ ಸುಲೇಮಾನ್ ಅಲ್-ಒಮರ್, 2006 ರಲ್ಲಿ ಅಲ್-ಜಜೀರಾ ಸುದ್ದಿ ಸೈಟ್‌ನಲ್ಲಿ ಉಪನ್ಯಾಸ ನೀಡುವಾಗ, ” ಇಸ್ಲಾಮಿಕ್ ರಾಷ್ಟ್ರವು ಈಗ ಜಿಹಾದ್‌ನ ದೊಡ್ಡ ಹಂತವನ್ನು ಎದುರಿಸುತ್ತಿದೆ. ಜಿಹಾದ್ ಸರಿಯಾದ ಸ್ಥಳಗಳಿವೆ – ಅಫ್ಘಾನಿಸ್ತಾನ, ಪ್ಯಾಲೆಸ್ಟೈನ್, ಇರಾಕ್, ಚೆಚೆನ್ಯಾ, ಕಾಶ್ಮೀರ ಮತ್ತು ಫಿಲಿಪೈನ್ಸ್  ಎಂದಿದ್ದಾನೆ. ಅಲ್ಲದೆ ಸುಲೇಮಾನ್ ಅಲ್-ಒಮರ್  ತನ್ನ  ಯಾವವ ಹೇಳಿಕೆಯಲ್ಲೂ ಭಾರತದಲ್ಲಿ ಮುಸ್ಲಿಂ ಧರ್ಮ ವೇಗವಾಗಿ ಹರಡುತ್ತಿದೆ ಎಂಬುದನ್ನು ಹೇಳಿಲ್ಲ.

ಇನ್ನು 2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು ಕೇವಲ ‘14.2%’ ಆಗಿತ್ತು. ‘ಪ್ಯೂ ರಿಸರ್ಚ್ ಸೆಂಟರ್’ ಪ್ರಕಟಿಸಿದ 2021 ರ ವರದಿಯ ಪ್ರಕಾರ, 2020 ರ ಹೊತ್ತಿಗೆ, ಭಾರತೀಯ ಜನಸಂಖ್ಯೆಯ ಸರಿಸುಮಾರು 15% ಮುಸ್ಲಿಮರು ಇರಲಿದ್ದಾರೆ ಎನ್ನಲಾಗಿದೆ. ಅಧ್ಯಯನದ ಪ್ರಕಾರ, ಮುಸ್ಲಿಮರು ನಿಧಾನವಾಗಿ ಬೆಳವಣಿಗೆಯನ್ನು ಮುಂದುವರೆಸುವ ನಿರೀಕ್ಷೆಯಿದೆ ಮತ್ತು 2050 ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯ 18.4% ರಷ್ಟಾಗಲಿದೆ ಎಂದು ಊಹಿಸಲಾಗಿದೆ. ಸಂಶೋಧನಾ ಅಧ್ಯಯನವು 2050 ರ ವೇಳೆಗೆ ಭಾರತದಲ್ಲಿ ಬಹುಸಂಖ್ಯಾತ ಧರ್ಮವಾಗಿ ಉಳಿಯುತ್ತದೆ ಎಂದು ಒತ್ತಿಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸೌದಿ ಪ್ರಾಧ್ಯಾಪಕ ನಾಸರ್ ಬಿನ್ ಸುಲೇಮಾನ್ ಅಲ್-ಒಮರ್ ಅವರು 2050 ರ ವೇಳೆಗೆ ಭಾರತವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಲಿದೆ ಎಂದು ಯಾವುದೇ ಹೇಳಿಕೆಗಳನ್ನು ನೀಡಲಿಲ್ಲ.


ಇದನ್ನೂ ಓದಿ : Fact Check: ರಾಯಚೂರಿನಲ್ಲಿ ರವಿ ಸಾಬ್ ಜಿಂದಾಬಾದ್ ಎಂದಿದ್ದನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಿ ಹಂಚಿಕೆ


ಈ ವಿಡಿಯೋ ನೋಡಿ : Fact Check: ರಾಯಚೂರಿನಲ್ಲಿ ರವಿ ಸಾಬ್ ಜಿಂದಾಬಾದ್ ಎಂದಿದ್ದನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *