ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ “ಭಾರತೀಯ ಸಶಸ್ತ್ರ ಪಡೆಗಳಿಂದ ಕೊಲ್ಲಲ್ಪಟ್ಟ ಭಯೋತ್ಪಾದಕರ ಕುಟುಂಬ ಸದಸ್ಯರಿಗೆ ತಲಾ ₹ 1 ಕೋಟಿ ನೀಡುವುದಾಗಿ, ಮತ್ತು ಸೆರೆಮನೆಯಲ್ಲಿರುವ ಎಲ್ಲಾ ಉಗ್ರರನ್ನು ಬಿಡುಗಡೆ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕ ಸಗೀರ್ ಸೈಯದ್ ಖಾನ್ ಭರವಸೆ ನೀಡುತ್ತಿದ್ದಾರೆ” ಎಂದು ಪ್ರತಿಪಾದಿಸಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.
ಫಾಕ್ಟ್ ಚೆಕ್
ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರ ಮೇಲೆ R. ಎಂಬ ಲೋಗೊ ಇರುವುದರಿಂದ ಇದು ರಿಪಬ್ಲಿಕ್ ಟಿವಿಯ ವಿಡಿಯೋ ಎಂದು ಸ್ಪಷ್ಟವಾಗುತ್ತದೆ. ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ ರಿಪಬ್ಲಿಕ್ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ಡಿಸೆಂಬರ್ 26, 2018ರಲ್ಲಿ ಅಂದರೆ ಆರು ವರ್ಷಗಳ ಹಿಂದೆ ಪ್ರಕಟಿಸಲಾದ ವಿಡಿಯೋವೊಂದು ಕಂಡುಬಂದಿದೆ. ಹಾಗಾಗಿ ಈ ವಿಡಿಯೋ ಬಹಳ ಹಿಂದಿನದು ಎಂದು ತಿಳಿದುಬಂದಿದೆ.
ಇನ್ನು ಆ ವಿಡಿಯೋದಲ್ಲಿ ಸಗೀರ್ ಸಯೀದ್ ಖಾನ್ ಏನು ಹೇಳಿದ್ದಾರೆ ಎಂದು ಪರಿಶೀಲಿಸಿದಾಗ, “ಕಾಶ್ಮೀರವನ್ನು ಸ್ವರ್ಗ ಎಂದು ಕರೆಯಲಾಗುತ್ತಿತ್ತು, ಈಗ ಶವಗಳಿಂದ ತುಂಬಿದೆ… ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಲ್ಲಿ ಕೊಲ್ಲಲ್ಪಟ್ಟ ಅಮಾಯಕರ ಕುಟುಂಬಗಳಿಗೆ ₹ 1 ಕೋಟಿ ಪರಿಹಾರ ಮತ್ತು ಒಬ್ಬರಿಗೆ ಉದ್ಯೋಗ ನೀಡಲಾಗುವುದು. ಭಯೋತ್ಪಾದನೆ ಪ್ರಕರಣಗಳಲ್ಲಿ ಕಂಬಿ ಹಿಂದೆ ಬಿದ್ದಿರುವ ಅಮಾಯಕರನ್ನು ಬಿಡುಗಡೆ ಮಾಡಲಾಗುವುದು. ಇಲ್ಲಿನ ಹತ್ಯೆಗಳಿಗೆ ಕಾರಣರಾದ ಬಿಜೆಪಿ ನಾಯಕರು, ಅವರು ಎಷ್ಟೇ ಪ್ರಮುಖರು ಮತ್ತು ಶಕ್ತಿಶಾಲಿಗಳಾಗಿದ್ದರೂ, ಹೊಸ ಕಾನೂನನ್ನು ಜಾರಿಗೊಳಿಸಲಾಗುವುದು ಮತ್ತು ಅವರನ್ನು ಗಲ್ಲಿಗೇರಿಸಲಾಗುವುದು… ಏಕೆಂದರೆ ಸೇನೆಯು ಅವರ ಆದೇಶವನ್ನು ಅನುಸರಿಸುತ್ತಿದೆ” ಎಂದಿದ್ದಾರೆ.
ಡಿಸೆಂಬರ್ 27, 2018 ರ ದಿನಾಂಕದಂದು ಪ್ರಕಟವಾದ ಎಬಿಪಿ ನ್ಯೂಸ್ ವರದಿಯಲ್ಲಿಯೂ ಈ ವೈರಲ್ ದೃಶ್ಯಗಳನ್ನು ಹೊಂದಿದೆ. ‘ಕಾಂಗ್ರೆಸ್ ನಾಯಕ ಸಗೀರ್ ಸಯೀದ್ ಖಾನ್ ಲ್ಯಾಂಡ್ಸ್ ಪಾರ್ಟಿ ಇನ್ ಎ ಸೂಪ್’ ಎಂಬ ಶೀರ್ಷಿಕೆಯ ವರದಿಯಲ್ಲಿ, “ಕಣಿವೆಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ನಾವು ಒಂದು ಕೋಟಿ ರೂಪಾಯಿ ಪರಿಹಾರ ನೀಡುತ್ತೇವೆ. ಅವರ ಕುಟುಂಬದ ಸದಸ್ಯರಿಗೂ ಸರ್ಕಾರಿ ಉದ್ಯೋಗ ನೀಡುತ್ತೇವೆ. ಶಂಕಿತ ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುವುದು” ಎಂದು ಖಾನ್ ಹೇಳಿದರು ಎಂದು ಬರೆಯಲಾಗಿದೆ.
ಘಟನೆಯನ್ನು ವಿವರವಾಗಿ ವಿವರಿಸುತ್ತಾ, ಡಿಸೆಂಬರ್ 27, 2018 ರ ಇಂಡಿಯಾ ಟುಡೇ ವರದಿಯು, “ಕಾಂಗ್ರೆಸ್ ನಾಯಕ ಸಗೀರ್ ಸಯೀದ್ ಖಾನ್ ಅವರು, ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಗುರಿಯಾಗಿಸಿಕೊಂಡು, ಕೇಸರಿ ಪಕ್ಷವು ಜಮ್ಮು ಮತ್ತು ಕಾಶ್ಮೀರದಲ್ಲಿ “ಮುಗ್ಧ ಜನರ ಮೇಲೆ ದೌರ್ಜನ್ಯ” ನಡೆಸುತ್ತಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದೆ. ಅಂದರೆ ಸೈಯದ್ ಖಾನ್‌ರವರು ಭಯೋತ್ಪಾದನೆ ಹೆಸರಿನಲ್ಲಿ ಬಿಜೆಪಿಯು ಮುಗ್ಧ ಜನರನ್ನು ಬೇಟೆಯಾಗುತ್ತಿದೆ ಎಂದು ಆರೋಪಿಸಿ ಅವರನ್ನು ರಕ್ಷಿಸುತ್ತೇವೆ ಎಂದಿದ್ದಾರೆ.
ಸಗೀರ್ ಸಯೀದ್ ಖಾನ್ ರಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಸಯೀದ್ ಖಾನ್ ಅವರ ಟೀಕೆಗಳನ್ನು ಪಕ್ಷವು ತಿರಸ್ಕರಿಸುತ್ತದೆ ಎಂದು ಹೇಳಿಕೆ ನೀಡಿತು. ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ವಕ್ತಾರ ರವೀಂದರ್ ಶರ್ಮಾ ಮಾತನಾಡಿ “ಸಗೀರ್ ಸಯೀದ್ ಖಾನ್ ಹೇಳಿಕೆಯನ್ನು ಕಾಂಗ್ರೆಸ್ ನಿರಾಕರಿಸುತ್ತದೆ ಮತ್ತು ತಿರಸ್ಕರಿಸುತ್ತದೆ. ಅವರು ಪಕ್ಷದ ವಕ್ತಾರರಲ್ಲ. ಅಂತಹ ವಿಷಯಗಳ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ಆದೇಶವಿಲ್ಲ… ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಾವು ನಮ್ಮ ಭದ್ರತಾ ಪಡೆಗಳ ಜೊತೆ ನಿಲ್ಲುತ್ತೇವೆ” ಎಂದು ಹೇಳಿದ್ದಾರೆ.
ಡಿಸೆಂಬರ್ 26, 2018 ರಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್‌ನ ಫೇಸ್‌ಬುಕ್ ಪೋಸ್ಟ್ ನಲ್ಲಿ ರವೀಂದರ್ ಶರ್ಮಾ ಅವರು ಖಾನ್ ಅವರ ಟೀಕೆಗಳನ್ನು ತಿರಸ್ಕರಿಸಿದ ವೀಡಿಯೋ ಕಂಡುಬಂದಿದೆ. ಪಿಸಿಸಿ ಮುಖ್ಯ ವಕ್ತಾರ ರವೀಂದರ್ ಶರ್ಮಾ ಅವರು ಹೇಳಿಕೆಯಲ್ಲಿ ಹಾಜಿ ಸಗೀರ್ ಸಯೀದ್ ಖಾನ್ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಜೆಕೆಪಿಸಿಸಿಯನ್ನು ಸಂಪರ್ಕಿಸದೆ ಪಕ್ಷದ ನೀತಿ ವಿಷಯದ ಬಗ್ಗೆ ಯಾವುದೇ ಹೇಳಿಕೆ ನೀಡಲು ಅವರಿಗೆ ಯಾವುದೇ ಆದೇಶವಿಲ್ಲ ಮತ್ತು ಪಕ್ಷದ ಅಲ್ಪಸಂಖ್ಯಾತ ವಿಭಾಗದಿಂದ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
“ಭಯೋತ್ಪಾದನೆಯನ್ನು ಕಟ್ಟುನಿಟ್ಟಾಗಿ ಎದುರಿಸಬೇಕು ಮತ್ತು ಜನರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ಪಕ್ಷದ ನಿಲುವು. ಕೇಂದ್ರ ನಾಯಕತ್ವದ ಅನುಮೋದನೆ, ಅಧಿಕೃತ ಮತ್ತು ನಾಮನಿರ್ದೇಶಿತ ಅಧಿಕೃತ ವಕ್ತಾರರ ಅನುಮೋದನೆಯಿಲ್ಲದೆ ಈ ವಿಷಯದಲ್ಲಿ ಯಾವುದೇ ನೀತಿ ಹೇಳಿಕೆ ನೀಡಲು ಯಾವುದೇ ವ್ಯಕ್ತಿಗೆ ಯಾವುದೇ ಅಧಿಕಾರವಿಲ್ಲ. ಹಾಗಾಗಿ ಸಗೀರ್ ಖಾನ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ರವಿಂದರ್ ಶರ್ಮಾ ತಿಳಿಸಿದ್ದಾರೆ. ಡಿಸೆಂಬರ್ 2018 ರಿಂದ ಖಾನ್ ಅವರ ಹೇಳಿಕೆಗಳನ್ನು ವಿವರಿಸುವ ಅನೇಕ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಅಂತಹ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಜಮ್ಮು ಮತ್ತು ಕಾಶ್ಮೀರದ ಕುರಿತು ಸಗೀರ್ ಖಾನ್ ಅವರ ಹೇಳಿಕೆಗಳು 2018 ರದ್ದಾಗಿದೆ. ಅವರು ಉಗ್ರರು ಎಂದು ಅಮಾಯಕರನ್ನು ಹಿಂಸಿಸುವುದನ್ನು ಖಂಡಿಸಿ ಅವರಿಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ ಹೊರತು ಉಗ್ರರಿಗೆ ಅಲ್ಲ. ಅದನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಅವರ ಹೇಳಿಕೆಯನ್ನು ಕಾಂಗ್ರೆಸ್ ತಿರಸ್ಕರಿಸಿದೆ ಮತ್ತು ನಿರಾಕರಿಸಿದೆ ಎಂಬುದು ಸಹ ಮುಖ್ಯವಾಗಿದೆ.
ಇದನ್ನೂ ಓದಿ; Fact Check | ರಾಹುಲ್ ಗಾಂಧಿಯವರನ್ನು ಡ್ರಗ್ಸ್ ಕೇಸ್‌ನಲ್ಲಿ ಬಂಧಿಸಲಾಗಿತ್ತು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ