ಸಮಾಜವಾದಿ ಪಕ್ಷದ ಕಾರ್ಯಕರ್ತರು ‘ಸೈಕಲ್ ನಿಶಾನ್ ಜಿಂದಾಬಾದ್’ ಎಂದು ಕೂಗಿದ್ದಾರೆಯೇ ಹೊರತು ಪಾಕಿಸ್ತಾನ್ ಜಿಂದಾಬಾದ್ ಎಂದಲ್ಲ

ಪಾಕಿಸ್ತಾನ್

ಇತ್ತೀಚೆಗೆ ಇಂಡಿಯಾ ಒಕ್ಕೂಟದ ಪಕ್ಷಗಳು ಪ್ರಚಾರ ನಡೆಸುವ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಕರ್ನಾಟಕದಲ್ಲಿ ವಿಧಾನ ಸೌಧದಲ್ಲಿ ಈ ಘೋಷಣೆ ಕೂಗಿದ ಕುರಿತ ವಿವಾದ ಹಿನ್ನಲೆಗೆ ಸರಿಯುತ್ತಿದ್ದಂತೆ, ರಾಮನಗರದಲ್ಲಿ ಡಿ.ಕೆ ಸುರೇಶ್ ಅವರ ಪ್ರಚಾರದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಕೂಗಲಾಗಿದೆ ಎಂದು ಮತ್ತು ರಾಯಚೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಮಾರ್ ನಾಯಕ್ ಅವರ ಪ್ರಚಾರದ ವೇಳೆ ಈ ರೀತಿಯ ದೇಶದ್ರೋಹಿ ಘೋಷಣೆ ಕೂಗಲಾಗಿದೆ ಎಂದು ಸುಳ್ಳು ಹಂಚಿಕೊಳ್ಳಲಾಗುತ್ತಿತ್ತು.

ಈಗ, ಯುಪಿಯ ಅಜಂಗಢದಲ್ಲಿ ಸಮಾಜವಾದಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಿದ್ದಾರೆ. ಎಂದು ಆರೋಪಿಸಿ ಅನೇಕರು ವಿಡಿಯೋ ಒಂದನ್ನು ಹಂಚಿಕೊಳ್ಳುತ್ತಿದ್ದಾರೆ. ಆಂಧ್ರಪ್ರದೇಶ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಷ್ಣು ವರ್ಧನ್ ರೆಡ್ಡಿ ಅವರು X ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ಇಂಡಿಯಾ ಒಕ್ಕೂಟವನ್ನು ಟೀಕಿಸಿದ್ದಾರೆ. ಅವರ ಟ್ವೀಟ್ 1.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು 800 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.

ಮೇ 8 ರಂದು ಉತ್ತರ ಪ್ರದೇಶದ ಕನೌಜ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ್ರೋಹಿ ಘೋಷಣೆ ಕೂಗಿರುವುದನ್ನು ಟೀಕಿಸಿದ್ದಾರೆ. ಸಮಾಜವಾದಿ ಪಕ್ಷದ ಕಾರ್ಯಕರ್ತರು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗುತ್ತಿರುವ ಬಗ್ಗೆ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಭಾಗವನ್ನು ಬಿಜೆಪಿಯ ಅಧಿಕೃತ ಎಕ್ಸ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

 

ಇನ್ನೂ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು ಸಮಾಜವಾದಿ ಪಕ್ಷ ಮತ್ತು ಇಂಡಿಯಾ ಒಕ್ಕುಟವನ್ನು ಟೀಕಿಸುತ್ತಿದ್ದಾರೆ.

ಫ್ಯಾಕ್ಟ್‌ಚೆಕ್: ಈ ಕುರಿತು ಹಿಂದಿಯಲ್ಲಿ ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ವೈರಲ್ ವೀಡಿಯೊಗೆ ಸಂಬಂಧಿಸಿದ ಹಲವಾರು ವರದಿಗಳು ಕಂಡುಬಂದಿವೆ. ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ಉತ್ತರ ಪ್ರದೇಶದ ಅಜಂಗಢದ ಮುಬಾರಕ್‌ಪುರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರು ಎಸ್‌ಪಿ ಲೋಕಸಭಾ ಅಭ್ಯರ್ಥಿ ಧರ್ಮೇಂದ್ರ ಯಾದವ್ ಪರ ಪ್ರಚಾರ ನಡೆಸುತ್ತಿದ್ದ ರ್ಯಾಲಿಯಲ್ಲಿ ಈ ಘಟನೆ ಸಂಭವಿಸಿದೆ. ‘ಸೈಕಲ್ ನಿಶಾನ್’ (ಸೈಕಲ್ ಚಿಹ್ನೆ) ಜಿಂದಾಬಾದ್ ಎಂಬ ನಿಜವಾದ ಘೋಷಣೆಯನ್ನು ಕೂಗಲಾಗಿದೆ(ಬೈಸಿಕಲ್ ಸಮಾಜವಾದಿ ಪಕ್ಷದ ಅಧಿಕೃತ ಚಿಹ್ನೆಯಾಗಿದೆ) ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಈ ಕುರಿತು ಪ್ರತಿಕ್ರಯಿಸಿರುವ ಅಜಂಗಢ ಎಸ್‌ಪಿ ಶೈಲೇಂದ್ರ ಲಾಲ್ ಅವರು ಮೇ 7 ರಂದು ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ. ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಯನ್ನು ಕೂಗಲಾಗಿದೆ ಎಂಬ ಹೇಳಿಕೆ ಸುಳ್ಳು ಎಂದು ಅವರು ಖಚಿತಪಡಿಸಿದ್ದಾರೆ. ರ್ಯಾಲಿಯಲ್ಲಿದ್ದ ಜನರು ‘ಸೈಕಲ್ ನಿಶಾನ್ ಜಿಂದಾಬಾದ್’ ಎಂಬ ಘೋಷಣೆಯನ್ನು ಕೂಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ದೈನಿಕ್ ಭಾಸ್ಕರ್‌ ವರದಿಯಲ್ಲೂ ಸಹ ಇದೇ ಹೇಳಿಕೆಯನ್ನು ಎಸ್‌ಪಿ ಶೈಲೇಂದ್ರ ಲಾಲ್ ಹೇಳಿದ್ದಾರೆ.

ಇದಲ್ಲದೆ, ನಾವು ವೈರಲ್ ವಿಡಿಯೋವಿಗೆ ಸಂಬಂಧಿತ ಭಾಗದ ಆಡಿಯೊವನ್ನು ನಿಧಾನಗೊಳಿಸಿ ಕೇಳಿದಾಗ ಪಕ್ಷದ ಕಾರ್ಯಕರ್ತರು ‘ಸೈಕಲ್ ನಿಶಾನ್’ ಅಥವಾ ‘ಸೈಕಲ್ ನಿಸಾನ್’ ಎಂದು ಹೇಳಿರುವುದನ್ನು ಸ್ಪಷ್ಟವಾಗಿ ಕೇಳಬಹುದು.

ಆದ್ದರಿಂದ ಸಮಾಜವಾದಿ ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂಬುದು ಸುಳ್ಳು ಆರೋಪವಾಗಿದೆ.


ಇದನ್ನು ಓದಿ: ಕಾಂಗ್ರೆಸ್‌ ಪ್ರಣಾಳಿಕೆಯ ಕುರಿತು ಹರಡುತ್ತಿರುವ ಸುಳ್ಳುಗಳೇನು ಮತ್ತು ಸತ್ಯವೇನು?


ವಿಡಿಯೋ ನೋಡಿ: ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *