Fact Check | ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ ಎಂಬ ವರದಿ ದಿಕ್ಕು ತಪ್ಪಿಸುವಂತಿದೆ

ಸಾಮಾಜಿಕ ಜಾಲತಾಣ ಸೇರಿದಂತೆ ದೇಶದ ಹಲವು ಮಾಧ್ಯಮಗಳು ಕೂಡ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದೆ, ಹಿಂದೂಗಳ ಜನಸಂಖ್ಯೆ ತೀವ್ರ ಕುಸಿತ ಕಂಡಿದೆ ಎಂಬ ಸುದ್ದಿಯನ್ನು ಲೋಕಸಭೆ ಚುನಾವಣೆಯ ವೇಳೆಯಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಈ ಸುದ್ದಿಯನ್ನು ನೋಡಿದ ಬಹುತೇಕರು ಇದು ನಿಜವಾದ ಸುದ್ದಿ ಇರಬಹುದು ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಈ ವರದಿಯನ್ನು ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯೇ ತಯಾರು ಮಾಡಿದ್ದು, ಈ ವರದಿಯಲ್ಲಿ ಹಲವು ದತ್ತಾಂಶಗಳು, ವಿವರಗಳು, ಅಭಿಪ್ರಾಯಗಳು ಇದ್ದು, ಅವುಗಳ ಮುಖಾಂತರ ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದೆ ಎಂದು ಬಿಂಬಿಸಲಾಗಿದೆ. ಆ ಮೂಲಕ ಹಿಂದೂಗಳು ಅಪಾಯದಲ್ಲಿದ್ದಾರೆ, ಮುಸ್ಲಿಂ ಜನರ ಏಳಿಗೆ ಹೆಚ್ಚಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌

ಈ ವರದಿಯು 1950 ರಿಂದ 2015ರವರೆಗಿನ ಅಂಕಿ ಅಂಶಗಳನ್ನು ಅವಲಂಬಿಸಿದೆ. ಆದರೆ ಸ್ವಾತಂತ್ರ್ಯ ಬಂದ ನಂತರ ಜನಗಣತಿ ನಡೆದಿದ್ದು 1951 ರಲ್ಲಿ. ಹಾಗಾದರೆ ಅದಕ್ಕೂ ಮುಂಚೆ ಒಂದು ವರ್ಷದ ಅಂಕಿಅಂಶಗಳು ಎಲ್ಲಿಂದ ತೆಗೆದುಕೊಂಡರು? ಇನ್ನು ಕಡೆಯ ಜನಗಣತಿ ನಡೆದಿದ್ದು 2011ರಲ್ಲಿ. 2015ರವರೆಗಿನ ಮಾಹಿತಿ ಎಲ್ಲಿಂದ ತೆಗೆದುಕೊಂಡರು ಎಂಬ ಪ್ರಶ್ನೆ ಎದುರಾಗುತ್ತದೆ.

ಈ ವರದಿಯಲ್ಲಿನ ದತ್ತಾಂಶಗಳನ್ನು ನಾವು ಎಆರ್‌ಡಿಆ‌ರ್ ಉಲ್ಲೇಖಿಸಿರುವ ದತ್ತಾಂಶಗಳಿಂದ ತೆಗೆದುಕೊಂಡಿದ್ದೇವೆ ಎಂದು ಪ್ರಧಾನಮಂತ್ರಿ ಅವರ ಆರ್ಥಿಕ ಸಲಹಾ ಸಮಿತಿ ತಿಳಿಸಿದೆ. ಆದರೆ ಭಾರತದ ಜನಸಂಖ್ಯೆಗೆ ಸಂಬಂಧಿಸಿದಂತೆ ಎಆರ್‌ಡಿಆ‌ರ್ ಉಲ್ಲೇಖಿಸಿರುವ ದತ್ತಾಂಶಗಳಲ್ಲಿ ಹಲವು ದೋಷಗಳಿವೆ. 1951ರ ಜನಗಣತಿ ಪ್ರಕಾರ ದೇಶದ ಹಿಂದೂಗಳ ಪ್ರಮಾಣ ಶೇ.84.98ರಷ್ಟು. ಆದರೆ ಎಆರ್‌ಡಿಆ‌ರ್ ತನ್ನ ದತ್ತಾಂಶಗಳಲ್ಲಿ ಇದನ್ನು ಶೇ 80 ಎಂದು ಉಲ್ಲೇಖಿಸಿದೆ. 2001ರ ಜನಗಣತಿಯಲ್ಲಿ ಹಿಂದೂಗಳ ಪ್ರಮಾಣ ಶೇ 80.45 ಎಂದು ಇದ್ದು, ಎಆರ್‌ಡಿಆ‌ರ್ ತನ್ನ ದತ್ತಾಂಶದಲ್ಲಿ ಶೇ 73.6 ಎಂದು ಉಲ್ಲೇಖಿಸಿದೆ. ಇಂತಹ ಹಲವು ದೋಷಗಳು ಎಆರ್‌ಡಿಆ‌ರ್ ದತ್ತಾಂಶಗಳಲ್ಲಿ ಇವೆ. ಭಾರತದ ಜನಗಣತಿ ವರದಿಗೂ, ಎಆರ್‌ಡಿಆ‌ರ್ ವರದಿಗೂ ಬಹಳ ವ್ಯತ್ಯಾಸವಿದೆ. ಹಾಗಾಗಿ ಎಆರ್‌ಡಿಆ‌ರ್ ವಿಶ್ವಾಸರ್ಹ ವರದಿಯಲ್ಲ ಎಂಬ ಅಭಿಪ್ರಾಯವಿದೆ.

1951ರ ಜನಗಣತಿ ಪ್ರಕಾರ ದೇಶದಲ್ಲಿನ ಹಿಂದೂಗಳ ಪ್ರಮಾಣ ಶೇ 84.98ರಷ್ಟು. 2011ರ ಜನಗಣತಿ ಪ್ರಕಾರ ಹಿಂದೂಗಳ ಪ್ರಮಾಣ ಶೇ79.79ರಷ್ಟು. ಈ ಎರಡೂ ಸಂಖ್ಯೆಗಳನ್ನು ಈ ವರದಿಯಲ್ಲಿ, 1950ರಲ್ಲಿ ಶೇ 84.68 ಎಂದೂ, 2015ರಲ್ಲಿ ಶೇ78.06 ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಈ ಮೂಲಕ ಇಳಿಕೆ ಪ್ರಮಾಣವು ತೀರಾ ಹೆಚ್ಚು ಎಂಬಂತೆ ಬಿಂಬಿಸಲಾಗಿದೆ.
1951ರ ಜನಗಣತಿಯ ಪ್ರಕಾರ ಮುಸ್ಲಿಮರ ಜನಸಂಖ್ಯೆ ಪ್ರಮಾಣ ಶೇ 9.91ರಷ್ಟು ಇತ್ತು. 2011ರ ಜನಗಣತಿ ವೇಳೆಗೆ ಅದು ಶೇ 14.2ರಷ್ಟಾಗಿದೆ. ಆದರೆ ವರದಿಯಲ್ಲಿ ಇದನ್ನು ಶೇ 9.8ರಿಂದ ಶೇ14.09ಕ್ಕೆ ಏರಿಕೆ ಎಂದು ಉಲ್ಲೇಖಿಸಲಾಗಿದೆ. ವರದಿಯಲ್ಲಿರುವ ಈ ಅಂಕಿಅಂಶವೂ ತಪ್ಪಾಗಿದೆ.

ಎರಡನೇಯದಾಗಿ ಈ ವರದಿಯಲ್ಲಿ ಇರುವ ವಿವರಗಳು, ದತ್ತಾಂಶಗಳು ಮತ್ತು ಅಭಿಪ್ರಾಯಗಳು ಲೇಖಕರಿಗೆ ಮಾತ್ರ ಸಂಬಂಧಿಸಿದ್ದು ಎಂದು ಸಮಿತಿಯೇ ಹೇಳಿದೆ. ಈ ಹೇಳಿಕೆಯೆ ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿದೆ.

ವರದಿಯಲ್ಲೇ ನೀಡುವ ಜನಸಂಖ್ಯಾ ಪ್ರಮಾಣದ ಪ್ರಕಾರ 1950ರಿಂದ 2015ರ ಮಧ್ಯೆ ದೇಶದ ಜನಸಂಖ್ಯೆಯಲ್ಲಿ ಸಿಖ್ ಧರ್ಮೀಯರ ಪ್ರಮಾಣದಲ್ಲಿ ಶೇ 49.19ರಷ್ಟು ಏರಿಕೆಯಾಗಿದೆ. ಆದರೆ ಇದನ್ನು ಶೇ 6.58 ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಇದೇ ಅವಧಿಯಲ್ಲಿ ಬೌದ್ಧ ಧರ್ಮೀಯರ ಪ್ರಮಾಣ ಶೇ 1,520ರಷ್ಟು ಏರಿಕೆಯಾಗಿದೆ. ಆದರೆ ಅದನ್ನು ಬೇಕಂತಲೇ ಹೈಲೈಟ್ ಮಾಡಿಲ್ಲ. ಆ ಮೂಲಕ ಮುಸ್ಲಿಮರ ಜನಸಂಖ್ಯೆ ಮಾತ್ರ ಹೆಚ್ಚಿದೆ ಎಂದು ಉಲ್ಲೇಖಿಸಿ ಒಂದು ಧರ್ಮವನ್ನು ಟಾರ್ಗೆಟ್ ಮಾಡಲಾಗಿದೆ.

ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಸರ್ಕಾರಗಳು ವಿಶೇಷ ಹಕ್ಕುಗಳು ಮತ್ತು ವಿಶೇಷ ರಕ್ಷಣೆಯನ್ನು ಒದಗಿಸುತ್ತಿದೆ. ಹಾಗಾಗಿ ಅವರ ಜನಸಂಖ್ಯೆ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಫಲವತ್ತತೆ ದರ ಉಲ್ಲೇಖಿಸದ ವರದಿ

ಮುಸ್ಲಿಂ ಮಹಿಳೆಯರ ಫಲವತ್ತತೆಯ ದರ ಹಿಂದೂಗಳಿಗಿಂತಲೂ ಹೆಚ್ಚು ಕುಸಿತ ಕಾಣುತ್ತಿದೆ. ಹಾಗಾಗಿ ಕಳೆದ ಮೂರು ದಶಕಗಳಲ್ಲಿ ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯ ದರ ಕುಸಿಯುತ್ತಿದೆ. ಆದರೆ ಅದನ್ನು ಈ ವರದಿಯಲ್ಲಿ ಉಲ್ಲೇಖಿಸಿಲ್ಲ.

2021ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NHFS-5) ರ ವರದಿಯಂತೆ ಕಳೆದ ಮೂರು ದಶಕಗಳಲ್ಲಿ ಹಿಂದೂ ಮಹಿಳೆಯರ ಫಲವತ್ತತೆಯ ದರ 3.3 ನಿಂದ 1.9 ಗೆ ಕುಸಿದರೆ, ಮುಸ್ಲಿಂ ಮಹಿಳೆಯರಲ್ಲಿನ ಫಲವತ್ತತೆಯ ದರ ಸಹ 4.4 ನಿಂದ 2.3ಗೆ ಕುಸಿದಿದೆ.

1992-93 ರಿಂದ 2021ರವರೆಗೆ ಮುಸ್ಲಿಮ್ ಮಹಿಳೆಯರ ಫಲವತ್ತತೆ ದರದಲ್ಲಿ 46.5% ಇಳಿಕೆ ಕಂಡರೆ ಹಿಂದೂಗಳಲ್ಲಿ 41.2% ಇಳಿಕೆಯಾಗಿದೆ ಎಂದು ಡೇಟಾ ಸೂಚಿಸುತ್ತದೆ. ಅಂದರೆ ಸ್ವಲ್ಪ ಪ್ರಮಾಣದಲ್ಲಿ ಮುಸ್ಲಿಮರಲ್ಲಿ ಹೆಚ್ಚಿನ ಇಳಿಕೆ ಕಂಡಿದೆ.

ಇವುಗಳ ಆಧಾರದಲ್ಲಿ 2030ರ ವೇಳೆಗೆ ಎರಡೂ ಧರ್ಮದ ಫಲವತ್ತತೆಯ ದರ ಸಮಾನಂತರಕ್ಕೆ ಬರಬಹುದು ಎಂದು ಸಮೀಕ್ಷೆಗಳು ಹೇಳಿವೆ.

ಜನಸಂಖ್ಯೆ ಬೆಳವಣಿಗೆಗೂ ಧರ್ಮಕ್ಕೂ ಸಂಬಂಧವಿಲ್ಲ

ಈ ಹಿಂದೆ ಮುಸ್ಲಿಮ್ ಜನಸಂಖ್ಯೆ ವೇಗವಾಗಿ ಬೆಳೆಯಲು ಕಾರಣ ಆ ಮಹಿಳೆಯರ ಅನಕ್ಷರತೆ, ಅಜ್ಞಾನ ಕಾರಣವೇ ಹೊರತು ಧರ್ಮವಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಸಮುದಾಯದಲ್ಲಿಯೂ ಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ತಿಳುವಳಿಕೆ ಹೆಚ್ಚಾದಂತೆ ಜನಸಂಖ್ಯಾ ನಿಯಂತ್ರಣ ಸಾಧ್ಯವಾಗುತ್ತಿದೆ.

ಉದಾಹರಣೆಗೆ ಲಕ್ಷದ್ವೀಪದಲ್ಲಿ 96% ನಷ್ಟು ಮುಸ್ಲಿಮರಿದ್ದಾರೆ. ಅಲ್ಲಿ 87% ಮಹಿಳಾ ಸಾಕ್ಷರತೆ ಇರುವ ಕಾರಣದಿಂದ ಅಲ್ಲಿನ ಮಹಿಳೆಯರ ಫಲವತ್ತತೆಯ ದರ ಕೇವಲ 1.4 ಮಾತ್ರ ಇದೆ. ನಮ್ಮ ಒಟ್ಟಾರೆ ಭಾರತದ ಮಹಿಳೆಯರ ಸರಾಸರಿ ಫಲವತ್ತತೆಯ ದರ 2.0 ಇದೆ.

ಆದರೆ ಬಿಹಾರದಲ್ಲಿ ಕೇವಲ 51% ಮಹಿಳಾ ಸಾಕ್ಷರತೆ ಇರುವ ಕಾರಣದಿಂದ ಅಲ್ಲಿನ ಮಹಿಳೆಯರ ಫಲವತ್ತೆತೆಯ ದರ 3.0 ಕ್ಕಿಂತಲೂ ಹೆಚ್ಚಿದೆ. ಹಾಗಾಗಿ ಮಹಿಳೆಯರ ಸಾಕ್ಷರತೆಗೂ ಅವರ ಫಲವತ್ತತೆಯ ದರಕ್ಕೂ ಸಂಬಂಧವಿದೆ ಹೊರತು ಧರ್ಮದ ಜೊತೆಗಲ್ಲ.

ನೈಜ ಅಂಕಿ ಅಂಶಗಗಳೆಷ್ಟು?

ಸ್ವಾತಂತ್ರ್ಯ ನಂತರ ನಡೆದ 1951ರ ಜನಗಣತಿ ಪ್ರಕಾರ ದೇಶದ ಒಟ್ಟು ಜನಸಂಖ್ಯೆ 36 ಕೋಟಿ*
ಹಿಂದೂಗಳು: 30.36 ಕೋಟಿ – 84.1%
ಮುಸ್ಲಿಮರು: 3.54 ಕೋಟಿ – 9.8%

2011 ರ ಜನಗಣತಿ
ಹಿಂದೂಗಳು: 96.6 ಕೋಟಿ – 79.8%
ಮುಸ್ಲಿಮರು: 17.2 ಕೋಟಿ – 14.2%

2015ರ ಇಎಸಿ ವರದಿಯನ್ನೇ ನೋಡುವುದಾದರೆ ಹಿಂದೂಗಳ ಜನಸಂಖ್ಯೆ 99.53 ಕೋಟಿ ಇದೆ. ಅಂದರೆ 64 ವರ್ಷಗಳಲ್ಲಿ 69.17 ಕೋಟಿ ಹೆಚ್ಚಾಗಿದೆ. ಮುಸ್ಲಿಮರ ಜನಸಂಖ್ಯೆ 2015ಕ್ಕೆ 17.97 ಕೋಟಿ ಇದ್ದು 64 ವರ್ಷಗಳಲ್ಲಿ 14.42 ಕೋಟಿ ಹೆಚ್ಚಾಗಿದೆ.

ಇನ್ನು ಈ ಕುರಿತು ಪಾಪ್ಯುಲೇಷನ್‌ ಫೌಂಡೇಶನ್‌ ಆಫ್‌ ಇಂಡಿಯಾ ಕೂಡ ಟ್ವೀಟ್‌ ಮಾಡಿದ್ದು, ಮಾಧ್ಯಮಗಳು PM-ACH ಮೂಲಕ ಜನಸಂಖ್ಯೆಯ ಅಧ್ಯಯನವನ್ನು ತಪ್ಪಾಗಿ ವರದಿ ಮಾಡಬಾರದು ಎಂದು ಉಲ್ಲೇಖಿಸಿ ಪತ್ರಿಕಾ ಪ್ರಕಟಣೆಯನ್ನು ಕೂಡ ಬಿಡುಗಡೆ ಮಾಡಿದೆ. ಆ ಮೂಲಕ ಜನಸಂಖ್ಯಾ ವಿಚಾರದ ಬಗ್ಗೆ ಹರಡುತ್ತಿರುವ ಸುಳ್ಳು ಮಾಹಿತಿಯನ್ನು ತಡೆ ಹಿಡಿಯಲು ಪ್ರಯತ್ನಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ ಎಂಬ ವರದಿ ದಿಕ್ಕುತಪ್ಪಿಸುವಂತಿದೆ. ಆಧಾರವಾಗಿ ತೆಗೆದುಕೊಂಡ ದತ್ತಾಂಶಗಳು ನಂಬಲಾರ್ಹವಲ್ಲ. ಪೂರ್ಣ ಮಾಹಿತಿಯನ್ನು ನೀಡದೇ ತಮಗೆ ಬೇಕಾದ್ದನ್ನು ಮಾತ್ರ ಹೈಲೈಟ್ ಮಾಡಲಾಗಿದೆ. ಜನಸಂಖ್ಯೆ ಹೆಚ್ಚಳಕ್ಕೆ ಕಾರಣಗಳನ್ನು ಸಹ ಪೂರ್ವಗ್ರಹ ಪೀಡಿತವಾಗಿ ನೀಡಲಾಗಿದೆ. ಲೇಖಕರು ತಮಗೆ ಮನಬಂದಂತೆ ರಚಿಸಿದ ಈ ವರದಿ ವಿಶ್ವಾಸಾರ್ಹವಲ್ಲ. ಹಾಗಾಗಿ ಸರ್ಕಾರ 2021ರಿಂದಲೂ ನಡೆಸದೇ ಮುಂದೂಡುತ್ತಾ ಬಂದಿರುವ ಜನಗಣತಿ ಅದರ ಜೊತೆಗೆ ಜಾತಿ ಗಣತಿಯನ್ನು ನಡೆಸಿದಾಗ ಮಾತ್ರ ಸದ್ಯದ ನಿಖರ ಅಂಕಿ ಅಂಶಗಳು ಸಿಗಲು ಸಾಧ್ಯ.


ಇದನ್ನೂ ಓದಿ : Fact Check: ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ಈ ವಿಡಿಯೋ ನೋಡಿ : Fact Check: ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *