ಕನೌಜ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೇಲೆ ಜನರು ಶೂ ಮತ್ತು ಚಪ್ಪಲಿಗಳನ್ನು ಎಸೆಯುತ್ತಿರುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. (ಇಲ್ಲಿ ಮತ್ತು ಇಲ್ಲಿ ) ಅಖಿಲೇಶ್ ಯಾದವ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಕನೌಜ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ತಮ್ಮ ಸ್ವಕ್ಷೇತ್ರದಲ್ಲಿಯೇ ಈ ರೀತಿಯ ಸ್ವಾಗತ ಎದುರಿಸಿದ್ದಾರೆ ಎಂದು ಅಖಿಲೇಶ್ ಯಾದವ್ ಅವರನ್ನು ಟೀಕಿಸಲಾಗುತ್ತಿದೆ.
ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ಅಖಿಲೇಶ್ ಯಾದವ್ ಅವರ 2024 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಜನರು ಇತ್ತೀಚೆಗೆ ಶೂ ಮತ್ತು ಚಪ್ಪಲಿಗಳನ್ನು ಎಸೆದ ಘಟನೆಯ ಕುರಿತು ಯಾವುದೇ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ಇಂತಹ ಘಟನೆ ನಡೆದಿದ್ದರೆ ಅದನ್ನು ಹಲವು ಸುದ್ದಿ ಸಂಸ್ಥೆಗಳು ವರದಿ ಮಾಡಿರುತ್ತಿದ್ದವು. ಆದರೆ ಇಂತಹ ಯಾವುದೇ ವರದಿ ಲಭ್ಯವಾಗಿಲ್ಲ.
ವೈರಲ್ ವೀಡಿಯೊವನ್ನು ಎಚ್ಚರಿಕೆಯಿಂದ ಗಮನಿಸಿದ ನಂತರ, ನಾವು Instagram ಖಾತೆಯಿಂದ ‘@vikashyadavauraiyawale’ ವಾಟರ್‌ಮಾರ್ಕ್ ಅನ್ನು ಗಮನಿಸಿದೆವು. ಅವರ Instagram ಖಾತೆಯನ್ನು ಹುಡುಕಿದಾಗ, ಅವರು 02 ಮೇ 2024 ರಂದು ಅದೇ ವೈರಲ್ ವೀಡಿಯೊವನ್ನು (ಆರ್ಕೈವ್ ಲಿಂಕ್) ಅವರ ಪುಟದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವೀಡಿಯೊದೊಂದಿಗೆ ‘ಲೈವ್ ಫ್ರಮ್ ಕನ್ನೌಜ್’ ಎಂಬ ಶೀರ್ಷಿಕೆ ಇದೆ.
ವೈರಲ್ ವೀಡಿಯೊವನ್ನು ಸ್ಲೋ ಮೋಷನ್ ಮೂಲಕ ಎಚ್ಚರಿಕೆಯಿಂದ ಗಮನಿಸಿದಾಗ, ಅಖಿಲೇಶ್ ಯಾದವ್ ಕಡೆಗೆ ಶೂಗಳು ಮತ್ತು ಚಪ್ಪಲಿಗಳ ಬದಲಿಗೆ ಹೂವುಗಳು ಮತ್ತು ಹೂಮಾಲೆಗಳನ್ನು ಎಸೆಯಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇಡೀ ವಿಡಿಯೋದಲ್ಲಿ ಎಲ್ಲಿಯೂ ಶೂ ಮತ್ತು ಚಪ್ಪಲಿ ಕಾಣಿಸುವುದಿಲ್ಲ.
ನಂತರ ನಾವು ಸಮಾಜವಾದಿ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನು ಪರಿಶೀಲಿಸಿದಾಗ 27 ಏಪ್ರಿಲ್ 2024 ರ ವೀಡಿಯೊವನ್ನು ಪತ್ತೆಹಚ್ಚಿದ್ದೇವೆ. ಈ ವೀಡಿಯೊದಲ್ಲಿ, ವೈರಲ್ ವೀಡಿಯೊದಲ್ಲಿ(ರ್ಯಾಲಿಯಲ್ಲಿ) ಅಖಿಲೇಶ್ ಯಾದವ್ ಅವರ ಪಕ್ಕದಲ್ಲಿ ಕಾಣಿಸಿಕೊಂಡಿರುವ ಮಹಿಳೆಯನ್ನು ಈ ಕೆಳಗಿನ ಚಿತ್ರದಲ್ಲಿಯೂ ನೀವು ಕಾಣಬಹುದು. ವೀಡಿಯೊ ವಿವರಣೆಯ ಪ್ರಕಾರ, ಅಖಿಲೇಶ್ ಯಾದವ್ ಅವರು ಕನೌಜ್ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ರಸುಲಾಬಾದ್‌ನಲ್ಲಿ ರೋಡ್‌ಶೋ ನಡೆಸಿದರು. ಆದ್ದರಿಂದ, ವೈರಲ್ ವೀಡಿಯೊ 27 ಏಪ್ರಿಲ್ 2024 ರಂದು ಕನೌಜ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರಸೂಲಾಬಾದ್‌ನಲ್ಲಿ ನಡೆದ ಅವರ ಚುನಾವಣಾ ಪ್ರಚಾರ ರ್ಯಾಲಿಯದ್ದಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಖಿಲೇಶ್ ಯಾದವ್ ಮೇಲೆ ಜನರು ಹೂ ಮತ್ತು ಹಾರಗಳನ್ನು ಎಸೆಯುವ ಈ ವೀಡಿಯೊವನ್ನು ಜನರು ಶೂಗಳನ್ನು ಎಸೆಯುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿ: ರಾಹುಲ್ ಗಾಂಧಿಯನ್ನು ಭಾರತದ ರಾಜಕೀಯ ಹೀರೋ ಎಂದು ಎಲ್.ಕೆ.ಅಡ್ವಾಣಿ ಹೇಳಿಲ್ಲ
ವಿಡಿಯೋ ನೋಡಿ: ಮುಸ್ಲಿಂ ವ್ಯಕ್ತಿಯೊಬ್ಬ ಕಲ್ಲಂಗಡಿಗೆ ರಾಸಾಯನಿಕ ಹಾಕಿ ಸಿಕ್ಕಿಬಿದ್ದಿದ್ದಾನೆ ಎಂದು ಹಂಚಿಕೊಳ್ಳುತ್ತಿರುವುದು ಜಾಗೃತಿ ವಿಡಿಯೋ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ