Fact Check: ಜೆ.ಪಿ ನಡ್ಡಾ ಅವರು ಪ್ರಶಾಂತ್ ಕಿಶೋರ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಿದ್ದಾರೆ ಎಂಬುದು ಸುಳ್ಳು

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹೆಸರಿನಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರಶಾಂತ್ ಕಿಶೋರ್ ಅವರನ್ನು ಪಕ್ಷದ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಬರೆಯಲಾಗಿದೆ. ಈ ಪತ್ರವನ್ನು ನಿಜವೆಂದು ಪರಿಗಣಿಸಿ ವೈರಲ್ ಮಾಡಲಾಗುತ್ತಿದೆ. ಈ ಪ್ರಕಟಣೆಯನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್‌ ಅವರು ಹೊರಡಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಈ ಪ್ರಕಟಣೆಯಲ್ಲಿ “ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಶ್ರೀ ಪ್ರಶಾಂತ್ ಕಿಶೋರ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಿದ್ದಾರೆ. ಈ ನೇಮಕಾತಿ ತಕ್ಷಣವೇ ಜಾರಿಗೆ ಬರುತ್ತದೆ” ಎಂದು ಅರುಣ್ ಸಿಂಗ್ ಅವರ ಸಹಿ ಸಹ ಇದೆ. ಈ ಪ್ರಕಟಣೆ ನಿಜವೇ ಎಂದು ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಫ್ಯಾಕ್ಟ್‌ಚೆಕ್: ಜನ್ ಸೂರಜ್ ಪಕ್ಷದ ಮುಖಂಡ ಪ್ರಶಾಂತ್ ಕಿಶೋರ್ ಅವರನ್ನು ಬಿಜೆಪಿ ವಕ್ತಾರರಾಗಿ ನೇಮಕಗೊಂಡ ಕುರಿತು ಸಂಬಂಧಿತ ಕೀವರ್ಡ್‌ ಮೂಲಕ ಹುಡುಕಿದಾಗ ಇಂತಹ ಯಾವ ವರದಿಗಳು ಸಹ ಲಭ್ಯವಾಗಿಲ್ಲ. ಪ್ರಶಾಂತ್ ಕಿಶೋರ್ ಅವರು ಬಿಜೆಪಿ ಸೇರಿದ್ದರೆ ಅನೇಕ ಮಾಧ್ಯಮಗಳು ವರದಿ ಮಾಡಿರುತ್ತಿದ್ದವು. ಆದರೆ ಈ ಕುರಿತು ಯಾವ ಮಾಧ್ಯಮಗಳು ವರದಿ ಮಾಡಿಲ್ಲ. ನಾವು ಬಿಜೆಪಿ ಮತ್ತು ಪ್ರಶಾಂತ್ ಕಿಶೋರ್ ಅವರ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳನ್ನು ಸಹ ಹುಡುಕಿದ್ದೇವೆ, ಆದರೆ ಪ್ರಶಾಂತ್ ಕಿಶೋರ್ ಬಿಜೆಪಿಗೆ ಸೇರುವ ಬಗ್ಗೆ ನಮಗೆ ಎಲ್ಲಿಯೂ ಮಾಹಿತಿ ಸಿಕ್ಕಿಲ್ಲ.

ವಿಶ್ವಾಸ್ ನ್ಯೂಸ್ ಎಂಬ ಹಿಂದಿ ಮಾಧ್ಯಮವೊಂದು ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದ್ದು, ಜನತಾ ಪಕ್ಷದ ರಾಷ್ಟ್ರೀಯ ಸಂಯೋಜಕ ಅರುಣ್ ಸಿಂಗ್ ಅವರ ಸಹಿ ಇರುವುದರಿಂದ ಈ ತಂಡ ಅರುಣ್ ಸಿಂಗ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ವಿಶ್ವಾಸ್ ನ್ಯೂಸ್ ಜೊತೆ ಮಾತನಾಡಿರುವ ಅವರು, ವೈರಲ್ ಪತ್ರವನ್ನು ಎಡಿಟ್ ಮಾಡಲಾಗಿದೆ, ಈ ಪೋಸ್ಟ್ ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದಿದ್ದಾರೆ.

ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಪ್ರಶಾಂತ್ ಕಿಶೋರ್ ಅವರ ಜೊತೆಗೆ ದೂರವಾಣಿ ಮೂಲಕ ಮಾತನಾಡಿದಾಗ, ಅವರು ಈ ಪೋಸ್ಟ್ ಅನ್ನು ನಕಲಿ ಎಂದು ಹೇಳಿದ್ದಾರೆ. ಪ್ರಶಾಂತ್ ಕಿಶೋರ್ ಅವರು ಜಾನ್ ಸೂರಾಜ್ ಅವರ ಟ್ವೀಟ್ ಅನ್ನು ನಮ್ಮೊಂದಿಗೆ ಹಂಚಿಕೊಂಡಿದ್ದು, ಅದರಲ್ಲಿ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಇದೆ, ಇದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಯಾರೋ ಒಬ್ಬರಿಗೆ ಈ ವೈರಲ್ ಪತ್ರವನ್ನು ಕಳುಹಿಸಿರುವಂತೆ ತೋರುತ್ತಿದೆ. ಈ ಟ್ವೀಟ್‌ನಲ್ಲಿ ಕಾಂಗ್ರೆಸ್ ಈ ನಕಲಿ ಪತ್ರವನ್ನು ಹಂಚಿಕೊಳ್ಳುವ ಮೂಲಕ ತಪ್ಪು ಮಾಹಿತಿ ಹರಡುತ್ತಿದೆ ಎಂದು ಆರೋಪಿಸಲಾಗಿದೆ.

ಮೇ 21 ರಂದು ಎನ್‌ಡಿಟಿವಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಬಿಜೆಪಿಯ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದರು. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು 2014 ರ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕೆಲಸ ಮಾಡಿದ್ದರು. ಇದಲ್ಲದೇ ಕಾಂಗ್ರೆಸ್, ಟಿಎಂಸಿ, ಜೆಡಿಯು, ಆರ್‌ಜೆಡಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳಿಗೂ ಕಾಲಕಾಲಕ್ಕೆ ಕೆಲಸ ಮಾಡಿದ್ದಾರೆ.

ಆದ್ದರಿಂದ ಪ್ರಶಾಂತ್ ಕಿಶೋರ್ ಮತ್ತು ಅರುಣ್ ಸಿಂಗ್ ಇಬ್ಬರೂ ಈ ಪತ್ರವನ್ನು ನಕಲಿ ಎಂದು ಸ್ಪಷ್ಟಪಡಿಸಿರುವುದರಿಂದ. ಪ್ರಶಾಂತ್ ಕಿಶೋರ್ ಅವರು ಬಿಜೆಪಿ ಸೇರಿಲ್ಲ ಎಂದು ಖಚಿತವಾಗಿದೆ. 


ಇದನ್ನು ಓದಿ: ಸಿರಿಯಾ, ಪ್ಯಾಲೆಸ್ಟೈನ್ ಮುಸ್ಲಿಮರು, ಮುಸ್ಲಿಮೇತರರನ್ನು ಕೊಲ್ಲುತ್ತಿದ್ದಾರೆ ಎಂದು ISIS ಉಗ್ರರ ನರಮೇಧದ ವಿಡಿಯೋ ಹಂಚಿಕೆ


ವಿಡಿಯೋ ನೋಡಿ: ಮೋದಿ ಪ್ರಧಾನಿಯಾಗುವ ಮುನ್ನ ಭಾರತದಲ್ಲಿ ಕೇವಲ 300 ಸ್ಟಾರ್ಟಪ್‌ಗಳಿದ್ದವು ಎಂಬುದು ಸುಳ್ಳು | Modi


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *