“ಈ ವಿಡಿಯೋ ನೋಡಿ ಇಲ್ಲೋಬ್ಬ ವ್ಯಕ್ತಿ ಹಲಾಲ್ ಪಾನಿಪುರಿಯನ್ನು ಮಾರಾಟ ಮಾಡುತ್ತಿದ್ದಾನೆ. ಈತ ಮೊದಲು ಪಾನಿಪುರಿಗೆ ತಯಾರಿಸಲಾದ ಮಾಸಾಲೆ ನೀರನ್ನು ಸ್ಪೂನ್‌ನಲ್ಲಿ ಕುಡಿಯುತ್ತಾನೆ. ಬಳಿಕ ಅದು ಸ್ವಾದ ಆತನಿಗೆ ಹಿಡಿಸುವುದಿಲ್ಲ ಮತ್ತೆ ಆತ ಕುಡಿದ ಚಮಚವನ್ನು ಮಸಾಲೆ ನೀರಿಗೆ ಹಾಕುತ್ತಾನೆ. ಬಳಿಕ ಕೈಯಲ್ಲಿಯೇ ಆ ಮಸಾಲೆ ನೀರನ್ನು ತಿರುಗಿಸಿ, ಸ್ವಲ್ಪ ಸಮಯದ ಬಳಿಕ ತನ್ನ ಬೆವರನ್ನೂ ಆ ನೀರಿಗೆ ಬೆರಸುತ್ತಾನೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ವೈರಲ್ ವಿಡಿಯೋವನ್ನು ನೋಡಿದ ಹಲವರು ಇದನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ವೈರಲ್ ವಿಡಿಯೋದೊಂದಿಗಿನ ಬರಹದಲ್ಲಿ “ಹಲಾಲ್ ಪಾನಿಪುರಿ” ಎಂದು ಬರೆದಿರುವುದನ್ನು ನೋಡಿ ಈತ ಮುಸ್ಲಿಂ ಎಂದು ಹಲವರು ಭಾವಿಸಿದ್ದಾರೆ. ಹೀಗಾಗಿ ಈ ವಿಡಿಯೋಗೆ ಕೋಮು ಬಣ್ಣವನ್ನು ಕೂಡ ಬಳಿಯಲಾಗಿದೆ. ಹೀಗೆ ವೈರಲ್ ಆಗುತ್ತಿರುವ ವಿಡಿಯೋವಿನ ಅಸಲಿ ಸಂಗತಿ ಏನು ಎಂಬುದನ್ನು ಪರಿಶೀಲನೆ ನಡೆಸೋಣ.
https://twitter.com/Modified_Hindu9/status/1800925890089718207
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಟಿ ಸಂಜನಾ ಗಲ್ರಾನಿ ಅವರ ಪರಿಶೀಲಿಸಿದ ಫೇಸ್‌ಬುಕ್ ಪುಟದಲ್ಲಿ ಇದೇ ವೈರಲ್ ವಿಡಿಯೋವಿನ ವಿಸ್ತೃತ ಆವೃತಿಯ ವಿಡಿಯೋವನ್ನು 8 ಮೇ 2024ರಂದು ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ.
ಇನ್ನು ಈ ಪೋಸ್ಟ್‌ನಲ್ಲಿ ಶೀರ್ಷಕೆಯ ಜೊತೆಗೆ ” ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು! ಈ ಪುಟವು ಸ್ಕ್ರಿಪ್ಟ್ ಮಾಡಿದ ನಾಟಕಗಳು ಮತ್ತು ವಿಡಂಬನೆಗಳನ್ನು ಸಹ ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ! ಈ ವೀಡಿಯೊದಲ್ಲಿನ ಪಾತ್ರಗಳು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಾಗಿವೆ.” ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ವೈರಲ್ ವಿಡಿಯೋ ಸುಳ್ಳು ಪ್ರತಿಪಾದನೆಯಿಂದ ಕೂಡಿದೆ ಎಂಬುದು ಸಾಬೀತಾಗಿದೆ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಮುಸ್ಲಿಂ ವ್ಯಕ್ತಿಯೊಬ್ಬ ಕೆಟ್ಟ ಪಾನಿಪುರಿ ಮಾಡುತ್ತಿದ್ದಾನೆ ಮತ್ತು ಇದೊಂದು ಹಲಾಲ್ ಪಾನಿಪುರಿ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ಸ್ಕ್ರಿಪ್ಟ್ ಮಾಡಿದ ವಿಡಿಯೋವಾಗಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ನಂಬಿ ಶೇರ್ ಮಾಡುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : Fact Check | ಈದ್ ದಿನ ಪ್ರಾಣಿ ಬಲಿ – ಬಾಂಗ್ಲಾದೇಶದ ವಿಡಿಯೋವನ್ನು ಪ.ಬಂಗಾಳದ್ದು ಎಂದು ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.