ನರೇಂದ್ರ ಮೋದಿ ಭಾರತದ ಮೊದಲ ಒಬಿಸಿ ಪ್ರಧಾನಿ ಎಂಬುದು ಸುಳ್ಳು

ಬಿಜೆಪಿಯು ಭಾರತಕ್ಕೆ ಮೊದಲ ಒಬಿಸಿ (ಇತರ ಹಿಂದುಳಿದ ವರ್ಗ) ಪ್ರಧಾನಿಯನ್ನು ನೀಡಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಪ್ರತಿಪಾದಿಸಿದ್ದಾರೆ. ಮಹಿಳೆಯರಿಗೆ 33% ಮೀಸಲಾತಿ ಒದಗಿಸುವ ಸಂವಿಧಾನದ 128ನೇ ತಿದ್ದುಪಡಿ ಕುರಿತು ರಾಜ್ಯಸಭೆಯಲ್ಲಿ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ಕೇವಲ ಮೂವರು ಒಬಿಸಿ ಸೆಕ್ರಟೇರಿಯಸ್‌ಗಳು ಮಾತ್ರ ಇದ್ದಾರೆ ಎಂಬ ರಾಹುಲ್ ಗಾಂಧಿಯವರ ಟೀಕೆಗೆ ಉತ್ತರಿಸುತ್ತಾ ಮಾತನಾಡಿದ ನಡ್ಡಾರವರು, “ಬಿಜೆಪಿ-ಎನ್‌ಡಿಎ ದೇಶಕ್ಕೆ ಮೊದಲ ಒಬಿಸಿ ಪ್ರಧಾನ ಮಂತ್ರಿಯನ್ನು ನೀಡಿತು ಎಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. 303 ಬಿಜೆಪಿ ಲೋಕಸಭಾ ಸದಸ್ಯರಲ್ಲಿ 85 ಮಂದಿ ಒಬಿಸಿ ವರ್ಗಕ್ಕೆ ಸೇರಿದವರು” ಎಂದು ಹೇಳಿದರು.

ಈ ವರ್ಷದ ಮೇ ತಿಂಗಳಿನಲ್ಲಿ ನಡೆದ ಸಮಸ್ತ್ ಮೋದಿ ಸಮಾಜ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. “ಕಾಂಗ್ರೆಸ್ ಕೇಂದ್ರದಲ್ಲಿ ತನ್ನ ಆಡಳಿತದಲ್ಲಿ ಒಬಿಸಿಗಳನ್ನು ನಿರ್ಲಕ್ಷಿಸಿತು, ಕಿರುಕುಳ ನೀಡಿತು ಮತ್ತು ಅವಮಾನಿಸಿತು. ಕಾಂಗ್ರೆಸ್ ತನ್ನ 56 ವರ್ಷಗಳ ಆಡಳಿತದಲ್ಲಿ ಒಬಿಸಿಗಳಿಗೆ ಏನನ್ನೂ ಮಾಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಪ್ರಧಾನಿ ಮೋದಿ ಒಬಿಸಿ ಸಮುದಾಯಕ್ಕೆ ಗೌರವ ಸಲ್ಲಿಸಿದರು. ಮತ್ತು ಮೋದಿಯ ರೂಪದಲ್ಲಿ ದೇಶಕ್ಕೆ ಮೊದಲ ಒಬಿಸಿ ಪ್ರಧಾನಿಯನ್ನು ನೀಡಿದ್ದು ಬಿಜೆಪಿ” ಎಂದಿದ್ದರು.

ಫ್ಯಾಕ್ಟ್ ಚೆಕ್: 

ಜೆ.ಪಿ ನಡ್ಡಾ ಹೇಳಿಕೆ ವಿರೋಧಿಸಿ ವಿರೋಧ ಪಕ್ಷದ ಸದಸ್ಯರು ಸದನದಲ್ಲಿಯೇ ಪ್ರತಿ ಉತ್ತರ ನೀಡಿದ್ದಾರೆ. ಭಾರತದ ಮೊದಲ ಒಬಿಸಿ ಪ್ರಧಾನ ಮಂತ್ರಿ ಹೆಚ್.ಡಿ ದೇವೇಗೌಡರೇ ಹೊರತು ನರೇಂದ್ರ ಮೋದಿಯಲ್ಲ ಎಂದು ಬಿರುಸಿನ ಮಾತಿನ ಚಕಮಕಿ ನಡೆಸಿದ್ದಾರೆ.

1996ರಲ್ಲಿ ಭಾರತದ 11ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕದ ಹೆಚ್.ಡಿ ದೇವೇಗೌಡರು ಭಾರತದ ಮೊದಲ ಒಬಿಸಿ ಪ್ರಧಾನ ಮಂತ್ರಿಯಾಗಿದ್ದಾರೆ. ಅವರು ಒಕ್ಕಲಿಗ ಸಮುದಾಯದವರಾಗಿದ್ದು, ಕರ್ನಾಟಕದಲ್ಲಿ ಆ ಸಮುದಾಯವು ಒಬಿಸಿ ಜಾತಿಗಳ ಪಟ್ಟಿಯಲ್ಲಿ ಬರುತ್ತದೆ.

“ನಿಸ್ಸಂದೇಹವಾಗಿ ಭಾರತದ ಮೊದಲ ಒಬಿಸಿ ಪ್ರಧಾನಿ ನಾನು. ಅಮಿತ್ ಶಾ ಹೇಳಿಕೆ ಸುಳ್ಳು. ಬಿಜೆಪಿ ಒಬಿಸಿ ಸಮುದಾಯದ ಒಳಿತಿಗೆ ಏನೂ ಮಾಡಿಲ್ಲ” ಎಂದು 13 ಜುಲೈ 2015 ರಂದು ದೇವೇಗೌಡರು ತಿಳಿಸಿದ್ದಾರೆ.

“ನಮ್ಮ ಸಮುದಾಯದ ಒಕ್ಕಲಿಗರು ಭೂಮಾಲೀಕರು ಮತ್ತು ಉಳುಮೆದಾರರಾಗಿದ್ದಾರೆ. ಕೇಂದ್ರ ಮತ್ತು ಕರ್ನಾಟಕದಿಂದ ನೇಮಿಸಲ್ಪಟ್ಟ ಪ್ರತಿಯೊಂದು ಆಯೋಗವು ಒಕ್ಕಲಿಗರನ್ನು “ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು” ಎಂದು ಗುರುತಿಸಿವೆ. ನಾನು ಒಬಿಸಿ ವಿದ್ಯಾರ್ಥಿಯಾಗಿ ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದೆ. ನಮ್ಮ ಸಮುದಾಯವನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸುವ ಹೋರಾಟವನ್ನು ತಮಿಳುನಾಡಿನ ಪೆರಿಯಾರ್ ಹೊರತುಪಡಿಸಿ ಬೇರೆ ಯಾರೂ ಮಾಡಿಲ್ಲ. ಮೊದಲಿನಿಂದಲೂ ನಮ್ಮ ಸಮುದಾಯ ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿದ್ದು, ಈ ವಿಷಯದಲ್ಲಿ ಯಾವುದೇ ತಕರಾರು ಇಲ್ಲ” ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.

ಜುಲೈ 1979 ರಿಂದ ಜನವರಿ 1980ರ ವರೆಗೆ ಭಾರತದ 5 ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಚರಣ್ ಸಿಂಗ್ ರವರು ಜಾಟ್ ಸಮುದಾಯಕ್ಕೆ ಸೇರಿದವರು. ಆದರೆ ಜಾಟ್ ಸಮುದಾಯವನ್ನು 1999 ರಲ್ಲಿ ಮೊದಲ ಬಾರಿಗೆ ರಾಜಸ್ಥಾನ ರಾಜ್ಯವು OBC  ಪಟ್ಟಿಗೆ ಸೇರಿಸಿತು. ಆನಂತರ ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಉತ್ತರಾಖಂಡ ಮತ್ತು ಬಿಹಾರ ರಾಜ್ಯಗಳು ಸಹ ಜಾಟ್ ಸಮುದಾಯವನ್ನು OBC ಗಳ ಕೇಂದ್ರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬುದನ್ನು ನಾವು ಗಮನಿಸಬೇಕು.

ಒಟ್ಟಾರೆಯಾಗಿ ಹೇಳುವುದಾದರೆ ನರೇಂದ್ರ ಮೋದಿ ಭಾರತದ ಮೊದಲ ಒಬಿಸಿ ಪ್ರಧಾನ ಮಂತ್ರಿ ಎಂಬ ಜೆ.ಪಿ ನಡ್ಡಾ ಮತ್ತು ಅಮಿತ್ ಶಾರವರ ಹೇಳಿಕೆ ಸಂಪೂರ್ಣ ಸುಳ್ಳಾಗಿದೆ.


ಇದನ್ನೂ ಓದಿ; ಶೃಂಗೇರಿ ಶ್ರೀಗಳು ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದಿಸಲು ನಿರಾಕರಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *