ಹಮಾಸ್ ಇಸ್ರೇಲ್ ನಡುವಿನ ಯುದ್ದ ಹಲವು ಸುಳ್ಳು ಸುದ್ದಿಗೆ ಸಾಕ್ಷಿಯಾಗಿದೆ. ಈ ಯುದ್ಧದಿಂದಾಗಿ ಹಲವು ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆಯೂ ಕೂಡ ವ್ಯಾಪಕವಾಗಿ ಸುಳ್ಳು ಸುದ್ದಿಗಳು ಹರಡಲು ಪ್ರಾರಂಭವಾಗಿದೆ. ಆ ಸುಳ್ಳು ಸುದ್ದಿಗಳಿಂದಾಗಿ ಹಲವು ಬಹು ರಾಷ್ಟ್ರೀಯ ಕಂಪನಿಗಳು ಕೂಡ ಈಗ ಹೊಸ ಹೊಸ ಸಂಕಷ್ಟಗಳಿಗೆ ಸಿಲುಕಿಕೊಳ್ಳುತ್ತಿವೆ.
ಈಗ ಹೀಗೆ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸರಣಿ ಜಾಗತಿಕ ಮನ್ನಣೆ ಗಳಿಸಿರುವ ಹಾಗೂ ತನ್ನ ತಂಪು ಪಾನಿಯ ಉತ್ಪನ್ನಗಳ ಮೂಲಕ ಹೆಸರುವಾಸಿಯಾಗಿರುವ ಪೆಪ್ಸಿಕೊ ಕಂಪನಿಯದ್ದು. ಕಳೆದ ಎರಡು ಮೂರು ದಿನಗಳಿಂದ ಪೆಪ್ಸಿ ಕಂಪನಿಯ ಕುರಿತು ಹಮಾಸ್ ಇಸ್ರೇಲ್ ಯುದ್ಧಕ್ಕೆ ಸುದ್ದಿಯೊಂದು ವ್ಯಾಪಕವಾಗಿ ಹರಡಿದ್ದು ಇದು ಪೆಪ್ಸಿ ಕಂಪನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅದರಲ್ಲೂ ಪ್ರಮುಖವಾಗಿ ಸಾಕಷ್ಟು ಮಂದಿ ಪೆಪ್ಸಿಕೊ ಕಂಪನಿಯನ್ನು ಇಸ್ರೇಲಿ ಕಂಪನಿ ಎಂದು ತಪ್ಪಾಗಿ ಅರ್ಥೈಸಿಕೊಂಡು “ಇಸ್ರೇಲಿ ಕಂಪನಿಯಾಗಿರುವ ಪೆಪ್ಸಿಕೊ ಹಮಾಸ್ ಮತ್ತು ಪ್ಯಾಲೆಸ್ಟೈನ್‌ಗೆ ಬೆಂಬಲ ನೀಡುವ ಸಲುವಾಗಿ ತನ್ನ ತಂಪು ಪಾನಿಯದ ಕ್ಯಾನ್‌ಗಳ ಡಿಸೈನ್ ಬದಲಾಯಿಸಿದೆ.” ಎಂದು ಸುಳ್ಳು ಸುದ್ದಿಗಳನ್ನು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದಾರೆ.
ಈ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದಾಗ ಇದೊಂದು ಸುಳ್ಳು ಸುದ್ದಿಯಾಗಿದ್ದು ಅಸಲಿಗೆ ಪೆಪ್ಸಿಕೊ ಕಂಪನಿ ಇಸ್ರೆಲ್ ಕಂಪನಿಯಲ್ಲ ಎಂಬುದು ವಾಸ್ತವ ಸಂಗತಿಯಾಗಿದೆ. ಪೆಪ್ಸಿಕೊ ಕಂಪನಿ ಅಮೆರಿಕಗೆ ಸೇರಿದ್ದು ಇದನ್ನು 1965ರಲ್ಲಿ ಸ್ಥಾಪಿಸಲಾಯಿತು. ಇನ್ನು ಕಂಪನಿ ಹಮಾಸ್‌ಗೆ ಬೆಂಬಲ ನೀಡಲು ತನ್ನ ಡಿಸೈನ್ ಅನ್ನು ಬದಲಾಯಿಸಿಕೊಂಡಿದೆ ಮತ್ತು ಇದಕ್ಕೆ ಪೂರಕ ಎಂಬಂತೆ ಹೊಸ ಜಾಹಿರಾತುಗಳನ್ನ ನೀಡಿದೆ ಎಂಬುವುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ.
ಈ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣದ ಪೇಜ್‌ಗಳಲ್ಲಿ ಎಲ್ಲಿಯೂ ಕೂಡ ಈ ಬಗ್ಗೆ ಉಲ್ಲೇಖವಿಲ್ಲ. ಮತ್ತು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋಗಳು ಕೂಡ ಪೆಪ್ಸಿಕೊ ಕಂಪನಿಯ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಕೂಡ ಕಂಡು ಬಂದಿಲ್ಲ ಹಾಗೂ ಈ ಬಗ್ಗೆ ಕಂಪನಿಯ ಯಾವುದೇ ವಕ್ತಾರರು ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಹಾಗಾಗಿ ಪೆಪ್ಸಿಕೊ ಕಂಪನಿ ಹಮಾಸ್‌ಗೆ ಬೆಂಬಲ ನೀಡಲು ಡಿಸೈನ್ ಬದಲಾಯಿಸಿದೆ ಎಂಬುದು ಸುಳ್ಳಾಗಿದೆ.