ಜಗತ್ತು ಕಂಡ ಶೋಷಿತರ ಪರವಾಗಿನ ಅಪ್ರತಿಮ ಹೋರಾಟಗಾರ, ಮಹಾನ್ ಜ್ಞಾನಿ, ವಿದ್ವಾಂಸ, ಭಾರತದ ಸಂವಿಧಾನದ ಕತೃ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್‌ರವರ ಕುರಿತು ಹಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದಲಿತ ಸಮುದಾಯದಲ್ಲಿ ಹುಟ್ಟಿ, ತನ್ನ ಸ್ವಂತ ಪರಿಶ್ರಮದಿಂದ ಓದಿ, ವಿದ್ವತ್ ಗಳಿಸಿ, ಸತತ ಕೆಲಸಗಳ ಮೂಲಕ ಶೋಷಿತರ ವಿಮೋಚಕರಾದ ಅಂಬೇಡ್ಕರ್‌ರವರ ತೇಜೋವಧೆ ಮಾಡಲು ಒಂದು ವರ್ಗ ನಿರತರಾಗಿದೆ. ಹಲವಾರು ಬಲಪಂಥೀಯರಿಗೆ ಅಂಬೇಡ್ಕರ್‌ರವರ ಸಾಧನೆಗಳನ್ನು ಅರಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಹಾಗಾಗಿ ಅವರ ವಿರುದ್ಧ ವಿಷ ಕಾರುತ್ತಲೇ ಇದ್ದಾರೆ. ಈಗ ಹಸಿ ಸುಳ್ಳಿನ ಮೂಲಕ ಅಂಬೇಡ್ಕರ್‌ರವರ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದ್ದಾರೆ.
20 ಜನವರಿ 1954 ರಲ್ಲಿ ಮಹಾರಾಷ್ಟ್ರದ ಭಂಡಾರದ ನಿವಾಸಿ ಕರುಣಾ ಯಾದವ್ ಮೇಲೆ ಡಾ ಭೀಮ್ ರಾವ್ ಅಂಬೇಡ್ಕರ್ ಅತ್ಯಾಚಾರವೆಸಗಿದ್ದಾರೆ ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ವೈರಲ್ ಆಗುತ್ತಿದೆ. ಹಿಂದೂ ರಾಷ್ಟ್ರ ಜೈ ಶ್ರೀರಾಂ (@_Hindu_Hu) ಹೆಸರಿನ X ಬಳಕೆದಾರ BR ಅಂಬೇಡ್ಕರ್ ಸ್ವತಂತ್ರ ಭಾರತದ ಮೊದಲ ಅತ್ಯಾಚಾರಿ ಎಂದು ಹೇಳುವ ಪಠ್ಯವನ್ನು ಹೊಂದಿರುವ ಪೋಸ್ಟ್‌ನ ಚಿತ್ರವನ್ನು ಹಂಚಿಕೊಂಡಿದ್ದಾನೆ. ಅರ್ಕೈವ್ ಮಾಡಿದ ಲಿಂಕ್ ಅನ್ನು ಇಲ್ಲಿ ನೋಡಬಹುದು.
ಇದೇ ಪ್ರತಿಪಾದನೆಯನ್ನು ಮಾರ್ಚ್ 2023 ರಲ್ಲಿ @Kunwarchainsin2 ಮತ್ತು @PollBaBa3 ಎಂಬುವವರು ಸಹ ಹಂಚಿಕೊಂಡಿದ್ದಾರೆ.
First incident of rape in independent India👇
Karuna Yadav's family consisted of his father Vivek Yadav and mother Shakuntala Yadav
and a younger brother Pushkar Yadav.
Karuna was the only girl among the children of the Yadav family.
On 20 January 1954, she became a victim👇
— Dr.Jyoti S Patel 🇮🇳 (@DrJyoti_S_PATEL) March 17, 2023
ಫ್ಯಾಕ್ಟ್ ಚೆಕ್
ಅಂಬೇಡ್ಕರ್‌ರವರು ಸ್ವಾತಂತ್ರ್ಯ ನಂತರ ಕಾನೂನು ಮಂತ್ರಿಯಾಗಿದ್ದರು. ಎಲ್ಲಾ ಸಮುದಾಯದ ಮಹಿಳೆಯರ ಒಳಿತಿಗಾಗಿ ಹಿಂದೂ ಕೋಡ್ ಬಿಲ್ ಎಂಬ ಮಸೂದೆ ತಯಾರಿಸಿದ್ದರು. ಅದು ಸಂಸತ್ತಿನಲ್ಲಿ ಅಂಗೀಕಾರವಾಗದಿದ್ದದುರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂತಹ ಗಣ್ಯ ವ್ಯಕ್ತಿಯ ಮೇಲೆ ಅತ್ಯಾಚಾರದಂತಹ ಯಾವುದೇ ಆರೋಪ ಆ ಸಂದರ್ಭದಲ್ಲಿ ಬಂದಿಲ್ಲ. ಆ ಕುರಿತು ಯಾವ ವರದಿಗಳು, ದಾಖಲೆಗಳು ಇಲ್ಲ.
ಇನ್ನು ಡಾ.ಬಿ.ಆರ್ ಅಂಬೇಡ್ಕರ್‌ರವರ ಬರಹ ಮತ್ತು ಭಾಷಣಗಳ ಹಿಂದಿ ಪುಸ್ತಕದ ಸಂಪುಟ – 40 ಭಾಗ ಮೂರರಲ್ಲಿ 1946 ರಿಂದ 1956ರವರೆಗಿನ ಅಂಬೇಡ್ಕರ್‌ರವರ ಜೀವನ ಚರಿತ್ರೆಯನ್ನು ನೋಡಬಹುದು.
ಅದರಲ್ಲಿ ಅಂಬೇಡ್ಕರ್‌ರವರು 24 ಜನವರಿ 1954 ರಂದು ಮುಂಬೈನ ಸೇಂಟ್ ಕ್ಸೇವಿಯರ್ಸ್ ಕಾಲೇಜಿನ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆನಂತರ ಅವರು 21 ಏಪ್ರಿಲ್ 1954 ರಂದು ಉಪಚುನಾವಣೆಯ ಪ್ರಚಾರಕ್ಕಾಗಿ ನಾಗ್ಪುರದಿಂದ ಭಂಡಾರಾಕ್ಕೆ ಹೋಗಿದ್ದರು ಎಂದು ಉಲ್ಲೇಖಿಸಲಾಗಿದೆ.
ಅಂದರೆ ಪೋಸ್ಟ್‌ನಲ್ಲಿ ಆರೋಪಿಸಿದಂತೆ 20 ಜನವರಿ 1954ರಲ್ಲಿ ಅಂಬೇಡ್ಕರ್‌ರವರು ಮುಂಬೈನಲ್ಲಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಉಪ ಚುನಾವಣೆ ಪ್ರಚಾರಕ್ಕೆಂದು ಭಂಡಾರಕ್ಕೆ ಹೋಗಿದ್ದಾರೆ. ಆದರೆ ಇದನ್ನೆ ತಿರುಚಿ ಬಾಬಾ ಸಾಹೇಬರ ಮೇಲೆ ಸುಳ್ಳು ಹರಡಲಾಗಿದೆ.
ಕರುಣಾ ಯಾದವ್ ಎಂಬ ಯುವತಿಯ ಬಗ್ಗೆ ಯಾವುದೇ ನಂಬಲರ್ಹ ಮಾಹಿತಿಗಳು ಲಭ್ಯವಾಗಿಲ್ಲ ಎಂದು Dfrac ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ಅಂಬೇಡ್ಕರ್ ಮೇಲಿನ ಅಪಪ್ರಚಾರ ಬಹಳ ಹಿಂದಿನಿಂದಲೂ ನಡೆಯುತ್ತಿದೆ, ಗೂಗಲ್‌ನಲ್ಲಿಯೂ ಸಹ ಸ್ವತಂತ್ರ ಭಾರತದ ಮೊದಲ ಅತ್ಯಾಚಾರಿ ಎಂದು ಪದೇ ಪದೇ ಸರ್ಚ್ ಮಾಡುವ ಮೂಲಕ ಅಂಬೇಡ್ಕರ್‌ರವರ ತೇಜೋವಧೆ ಮಾಡಲು ನಿರಂತರ ಯತ್ನ ನಡೆಯುತ್ತಿದೆ ಎಂದು ಹಲವು ಅಂಬೇಡ್ಕರ್‌ವಾದಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಅಂಬೇಡ್ಕರ್ ರವರ ಹೆಸರು ಕೆಡಿಸಲು ಈ ಸುಳ್ಳು ಸುದ್ದಿಯನ್ನು ಸೃಷ್ಟಿಸಲಾಗಿದೆ ಎಂಬುದು ಮೇಲಿನ ಎಲ್ಲಾ ಅಂಶಗಳಿಂದ ಸ್ಪಷ್ಟವಾಗಿದೆ.
ಇದನ್ನೂ ಓದಿ: ಅಂಬೇಡ್ಕರ್‌ರವರಿಗೆ ಪ್ರತಿ ಹಂತದಲ್ಲಿ ಬ್ರಾಹ್ಮಣರು ಸಹಾಯ ಮಾಡಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.