ಕಳೆದ ಎರಡು ಮೂರು ವರ್ಷದಿಂದ ಮಹಿಳಾ ಕುಸ್ತಿಪಟುಗಳ ವಿಡಿಯೋ ಒಂದು ವೈರಲ್ ಆಗುತ್ತಿದೆ. “ದುಬೈನಲ್ಲಿ ನಡೆದ ಮಹಿಳಾ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪಾಕಿಸ್ತಾನದ ಮಹಿಳಾ ಕುಸ್ತಿಪಟು ಗೆದ್ದಿದ್ದರು. ಭಾರತೀಯ ಮಹಿಳೆಯರನ್ನು ಗೇಲಿ ಮಾಡಿದ ಅವರು ವೇದಿಕೆಯ ಮೇಲೆ ಯಾವುದೇ ಭಾರತೀಯ ಮಹಿಳೆ ಬಂದು ತನ್ನೊಂದಿಗೆ ಸ್ಪರ್ಧಿಸಬಹುದೇ ಎಂದು ಸವಾಲು ಹಾಕಿದರು. ಇದ್ದಕ್ಕಿದ್ದಂತೆ ತಮಿಳುನಾಡಿನ ಕವಿತಾ ವಿಜಯಲಕ್ಷ್ಮಿ ಎಂಬ ಭಾರತೀಯ ಹುಡುಗಿ ತಾನು ಸಿದ್ಧ ಎಂದು ಕೈ ಎತ್ತಿದಳು. ಚಾಮುಂಡಿ ರೂಪ ತಾಳಿ, ಕುಂಕುಮ ಧರಿಸಿ ವೇದಿಕೆ ಮೇಲೆ ಕಾಣಿಸಿಕೊಂಡು, ಎರಡು ಬಾರಿ ಪಾಕಿಸ್ತಾನದ ಕುಸ್ತಿಪಟುವನ್ನು ಸೋಲಿಸಿ ಗೆದ್ದಿದ್ದಾಳೆ. ನೋಡಿ ಆನಂದಿಸಿ. ನಮ್ಮ ದೇಶವನ್ನು ಅವಮಾನಿಸುವ ಯಾರಿಗಾದರೂ ಇದೇ ಭವಿಷ್ಯ.🚩🚩” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಮತ್ತೆ ಮತ್ತೆ ಹಂಚಿಕೊಳ್ಳಲಾಗುತ್ತಿದೆ. ಕೆಲವೆಡೆ ಪಾಕ್ ಕುಸ್ತಿ ಪಟುವನ್ನು ಸೋಲಿಸಿದ RSS ಮಹಿಳೆ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿತ್ತು.
ವೈರಲ್ ವಿಡಿಯೋದಲ್ಲಿ ಮಹಿಳೆಯರ ಫ್ರೀ ಸ್ಟೈಲ್ ಕುಸ್ತಿಯ ವೇಳೆ ಮಹಿಳಾ ಕುಸ್ತಿಪಟು ಒಬ್ಬರು ಅಖಾಡಲ್ಲಿ ನಿಂತು, ಪ್ರೇಕಕ್ಷರ ಗ್ಯಾಲರಿಯ ಕಡೆಗೆ ಪ್ರೇಕ್ಷಕರಿಗೆ ಸವಾಲು ಹಾಕುತ್ತಿರುವುದು ಕಾಣುತ್ತದೆ. ನಂತರ ಹಳದಿ ಬಣ್ಣದ ಸಲ್ವಾರ್ ಕಮೀಜ್ ಧರಿಸಿರುವ ಮಹಿಳೆಯೊಬ್ಬರು ಸವಾಲು ಸ್ವೀಕರಿಸಿ ಕುಸ್ತಿಯಲ್ಲಿ ಮೇಲುಗೈ ಸಾಧಿಸುವುದನ್ನು ನೋಡಬಹುದು. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
ಈ ಕುರಿತು ಹುಡುಕಿದಾಗ ಜುಲೈ 17, 2016ರಂದು ಡೆಕ್ಕನ್ ಕ್ರಾನಿಕಲ್ ಪ್ರಕಟಿಸಿರುವ ಲೇಖನ ದೊರಕಿದೆ. ಅದರಲ್ಲಿ ಹಳದಿ ಬಣ್ಣದ ಸಲ್ವಾರ್-ಕಮೀಜ್ ಧರಿಸಿದ ಯುವತಿಯೊಬ್ಬಳು ಮಹಿಳಾ ಕುಸ್ತಿಪಟು BB ಬುಲ್ ಬುಲ್ ಅವರನ್ನು ಕೆಲವೇ ನಿಮಿಷಗಳಲ್ಲಿ ಸೋಲಿಸಿದಳು ಎಂದು ಬರೆಯಲಾಗಿದೆ. ಗೆದ್ದ ಮಹಿಳೆಯ ಹೆಸರು ಕವಿತಾ ಎಂಬುದಾಗಿದ್ದು, ಅವರು ಹರಿಯಾಣದ ಪೊಲೀಸ್ ಅಧಿಕಾರಿ ಎಂದು ಗುರುತಿಸಲಾಗಿದೆ. ಅವರು ಪವರ್-ಲಿಫ್ಟಿಂಗ್ ಮತ್ತು ಮಿಶ್ರ ಮಾರ್ಷಲ್ ಆರ್ಟ್ಸ್ ಚಾಂಪಿಯನ್ ಕೂಡ ಆಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಪಾಕಿಸ್ತಾನ ಮಹಿಳೆ ಎಂಬ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ.
ವೈರಲ್ ವಿಡಿಯೋದಲ್ಲಿ ಹಿಂದಿನ ಹೋರ್ಡಿಂಗ್‌ಗಳಲ್ಲಿ ಗ್ರೇಟ್ ಖಲಿಯ ಭಾವಚಿತ್ರ ಮತ್ತು CWE ಎಂದು ಬರೆದಿರುವುದರ ಆಧಾರದಲ್ಲಿ ಹುಡುಕಿದಾಗ ಸೆಪ್ಟಂಬರ್ 30, 2017 ರಂದು DNA ಪತ್ರಿಕೆ ಪ್ರಕಟಿಸಿದ ವರದಿ ಲಭ್ಯವಾಗಿದೆ. “ಬಿಬಿ ಬುಲ್ ಬುಲ್ Vs ಕವಿತಾ CWE” ಎಂಬ ಶೀರ್ಷಿಕೆಯ ವರದಿಯಲ್ಲಿನ ಫೋಟೋಗಳು ಸಹ ವೈರಲ್ ವಿಡಿಯೋದಲ್ಲಿನ ಫೋಟೊಗಳೇ ಆಗಿವೆ. ಪಂಜಾಬ್‌ನ ಜಲಂಧರ್‌ನ CWE (ಕಾಂಟಿನೆಂಟಲ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್) ಕ್ರೀಡಾಕೂಟದಲ್ಲಿ ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಬಿಬಿ ಬುಲ್ ಬುಲ್ ಅವರನ್ನು ಹರಿಯಾಣದ ಮಾಜಿ ಪೊಲೀಸ್ ಅಧಿಕಾರಿ, ಪವರ್-ಲಿಫ್ಟಿಂಗ್ ಮತ್ತು ಎಂಎಂಎ ಚಾಂಪಿಯನ್ ಕವಿತಾ ಅವರು ಸೋಲಿಸಿದರು ಎಂದು ವರದಿ ಹೇಳಿದೆ.
CWE ಬಗ್ಗೆ ಹುಡುಕಿದಾಗ ಅದು ಗ್ರೇಟ್ ಖಲಿಯವರ ನೇತೃತ್ವದಲ್ಲಿ WWE ರೀತಿಯ ಪೂರ್ವ ನಿರ್ಧರಿತ (ಸ್ಕ್ರಿಪ್ಟೆಡ್) ನಾಟಕೀಯ ಕುಸ್ತಿ ಕ್ರೀಡಾಕೂಟಗಳನ್ನು ನಡೆಸುತ್ತದೆ ಎಂದು ತಿಳಿದುಬಂದಿದೆ. ನೋಡುಗರಿಗೆ ನಿಜವೆನಿಸುವ ಆದರೆ ನಾಟಕೀಯ ಕುಸ್ತಿ ಇದಾಗಿರುತ್ತದೆ. ಅದರ ಹಲವು ವಿಡಿಯೋಗಳನ್ನು CWE ಯೂಟ್ಯೂಬ್‌ನಲ್ಲಿ ನೋಡಬಹುದು. ಈ ಕೆಳಗಿನ ವಿಡಿಯೋ ನೋಡಿದರೆ ನಿಮಗೆ ತಿಳಿಯುತ್ತದೆ.
https://www.youtube.com/watch?v=Qf9aEJdxU0w
ಸವಾಲು ಹಾಕಿದ ಮಹಿಳೆ ಪಾಕಿಸ್ತಾನದವರಲ್ಲ
ಬಿಬಿ ಬುಲ್ ಬುಲ್‌ರವರ ಹಿನ್ನೆಲೆ ತಿಳಿಯಲು ಹುಡುಕಿದಾಗ ದಿ ಟೆಲಿಗ್ರಾಫ್ ಮತ್ತು PTC Punjabi ಪತ್ರಿಕೆಗಳು ಅವರ ಸಂದರ್ಶನ ಪ್ರಕಟಿಸಿರುವುದು ಕಂಡುಬಂದಿದೆ. ಅದರಂತೆ ಅವರ ಮೂಲ ಹೆಸರು ಸರಬ್ಜಿತ್ ಕೌರ್ ಆಗಿದ್ದು, ಕುಸ್ತಿಗಾಗಿ ಅವರು ತಮ್ಮ ಹೆಸರನ್ನು ಬಿಬಿ ಬುಲ್ ಬುಲ್ ಎಂದು ಬದಲಿಸಿಕೊಂಡಿದ್ದಾರೆ. ಅವರು ಮೂಲತಃ ಪಂಜಾಬ್‌ನವರಾಗಿದ್ದು, ಜಲಂಧರ್‌ನಲ್ಲಿ ತನ್ನ ಕುಸ್ತಿ ತರಬೇತಿಯನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂದು ಅವರನ್ನು ಹೆಸರಿಸಲಾಗಿದೆ.
ಗೆದ್ದ ಮಹಿಳೆ ಯಾರು?
ಇನ್ನು ಕುಸ್ತಿಯಲ್ಲಿ ಗೆದ್ದ ಹಳದಿ ಬಟ್ಟೆ ಧರಿಸಿರಿವ ಮಹಿಳೆ ತಮಿಳುನಾಡಿನ ತೂತುಕುಡಿಯ ವಿಜಯಲಕ್ಷ್ಮಿ ಅಲ್ಲ. ಅವರ ಹೆಸರು ಕವಿತಾ ಆಗಿದ್ದು ತಾನು ಹರಿಯಾಣದವರು ಎಂದು ಹೇಳಿಕೊಂಡಿದ್ದಾರೆ. ಅವರು WWE ನಲ್ಲಿ ಭಾಗವಹಿಸಿದ ಭಾರತದ ಮೊದಲ ಮಹಿಳೆಯಾಗಿದ್ದು, ಅವರ ವಿಡಿಯೋವನ್ನು WWE ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ನೋಡಬಹುದು. ಜೊತೆಗೆ ಕವಿತಾ ಅವರಿಗೂ RSS ಗೂ ಸಂಬಂಧವಿಲ್ಲ. 5 ಸೆಪ್ಟೆಂಬರ್ 2017 ರಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಎಂಬ ಇಂಗ್ಲಿಷ್ ಪತ್ರಿಕೆ ಪ್ರಕಟಿಸಿದ ಮತ್ತೊಂದು ಲೇಖನದ ಪ್ರಕಾರ, ಕವಿತಾ ದೇವಿ ಈ ಹಿಂದೆ MMA ಚಾಂಪಿಯನ್ ಆಗಿದ್ದರು. ಪ್ರಸ್ತುತ, ಅವರು ವೃತ್ತಿಪರ ಕುಸ್ತಿಪಟು ಮಾತ್ರವಲ್ಲದೆ, ಹರಿಯಾಣ ಮಾಜಿ ಪೊಲೀಸ್ ಅಧಿಕಾರಿಯೂ ಆಗಿದ್ದಾರೆ. ಹಾಗಾಗಿ ಅವರಿಗೂ RSSಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
Check what Kavita Devi aka Hard KD has to say to all you members of @WWE Universe India #DubaiTryout 2017 pic.twitter.com/Qh1GyogHC7
— WWE India (@WWEIndia) April 29, 2017
ಒಟ್ಟಾರೆಯಾಗಿ ಹೇಳುವುದಾದರೆ, 16 ಜೂನ್ 2016 ರಂದು ಪಂಜಾಬ್‌ನಲ್ಲಿ ನಡೆದ CWE ಯ ಚಾಂಪಿಯನ್‌ಶಿಪ್ ಪಂದ್ಯಾವಳಿಯನ್ನು, ದುಬೈನಲ್ಲಿ ನಡೆದ ಕುಸ್ತಿ ಪಂದ್ಯ ಎಂದು ತಪ್ಪಾಗಿ ತಿರುಚಲಾಗಿದೆ. ಪಂಜಾಬ್‌ನ ಮಹಿಳೆ ಬಿಬಿ ಬುಲ್ ಬುಲ್ ರವರನ್ನು ಪಾಕಿಸ್ತಾನದ ಮಹಿಳೆಯಾಗಿ ತಪ್ಪಾಗಿ ಬಿಂಬಿಸಲಾಗಿದೆ. ಅವರನ್ನು ಸೋಲಿಸಿದ ಹರಿಯಾಣದ ಕವಿತಾ ದೇವಿಯವರನ್ನು ತಮಿಳುನಾಡಿನವರೆಂದೂ, RSS ನವರೆಂದು ಸುಳ್ಳು ಹರಡಲಾಗಿದೆ. ಸತ್ಯವೆಂದರೆ ಇಬ್ಬರೂ ಭಾರತದ ಮಹಿಳಾ ಕುಸ್ತಿಪಟುಗಳೇ ಆಗಿದ್ದಾರೆ. ಇದೊಂದು ಪೂರ್ವ ನಿರ್ಧರಿತ (ಸ್ಕ್ರಿಪ್ಟೆಡ್) ನಾಟಕೀಯ ಕುಸ್ತಿಯಾಗಿದೆ.
ಇದನ್ನೂ ಓದಿ: ದೇವಸ್ಥಾನದ ಅರ್ಚಕನನ್ನು ಥಳಿಸಿದ ವ್ಯಕ್ತಿ ಮುಸ್ಲಿಂ ಅಲ್ಲ ಹಿಂದೂ: ಈ ಘಟನೆ 3 ವರ್ಷ ಹಿಂದಿನದು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.