ಮಹಮದ್ ರಫಿ ಬರೆದಿದ್ದ ಕಾಶ್ಮಿರವನ್ನ ನಾವು ಬಿಟ್ಟು ಕೊಡಲಾರೆವು ಎಂಬ ಈ ಹಾಡನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಕಾರಣ ಪಾಕಿಸ್ತಾನ ಈ ಹಾಡನ್ನು ಬ್ಯಾನ್ ಮಾಡಿ ಭಾರತದಲ್ಲಿ ಎಂದು ಅಂದಿನ ಪ್ರಧಾನಿಗೆ ಮನವಿ ಮಾಡಿದ ಕಾರಣ ನಿಲ್ಲಿಸಲಾಗಿತ್ತು…. ಅದೆಂತ ಪ್ರೀತಿ ಪಾಕಿಸ್ತಾನದ ಮೇಲೆ ಅಂದಿನ ಪ್ರಧಾನಿಗೆ….? ಎಂದು ಪ್ರಶ್ನಿಸಿ ಹಾಡೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
ಈ ಹಿಂದಿ ಹಾಡಿನ ಮೊದಲ ಸಾಲು ‘ಜನ್ನತ್ ಕಿ ಹೈ ತಸ್ವೀರ್ ಯೇ’ ಎಂಬ ಕೀವರ್ಡ್ ಬಳಸಿ ಹುಡುಕಿದಾಗ ಇದು 1966ರಲ್ಲಿ ಬಿಡುಗಡೆಯಾದ ‘ಜೋಹರ್ ಇನ್ ಕಾಶ್ಮೀರ್‘ ಎಂಬ ಚಿತ್ರದ್ದು ಎಂದು ತಿಳಿದುಬಂದಿದೆ. ಈ ಚಿತ್ರ ಅಥವಾ ಹಾಡನ್ನು ನಿಷೇಧಿಸಲಾಗಿತ್ತೆ ಎಂಬುದರ ಕುರಿತು ಹುಡುಕಿದಾಗ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ.
ಆನಂತರ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಹೆಸರಿನಲ್ಲಿ ಹುಡುಕಿದಾಗ 17 ಡಿಸೆಂಬರ್ 1966 ರ ದಿನಾಂಕದ ಗೆಜೆಟ್ ಆಫ್ ಇಂಡಿಯಾ ದಾಖಲೆ ಸಿಕ್ಕಿದೆ. ಅದರಲ್ಲಿ ಯಾವುದೇ ಭಾರತೀಯ ಅಥವಾ ಅಂತರಾಷ್ಟ್ರೀಯ ಸಿನಿಮಾಗಳಲ್ಲಿ ಆಕ್ಷೇಪಾರ್ಹ ಅಂಶಗಳಿದ್ದರೆ ಅದನ್ನು ತೆಗೆಯಲು ಸೂಚಿಸಿರುವುದನ್ನು ನೋಡಬಹುದು.
ಅಂತೆಯೇ ‘ಜೋಹರ್ ಇನ್ ಕಾಶ್ಮೀರ್’ ಚಿತ್ರದ ಐದನೇ ರೀಲ್‌ನಲ್ಲಿ ‘ಜನ್ನತ್ ಕಿ ಹೈ ತಸ್ವೀರ್ ಯೇ’ ಹಾಡಿನಲ್ಲಿ “ಹಾಜಿ ಪಿರ್” ಎಂಬ ಪದಗಳನ್ನು ತೆಗೆಯಬೇಕೆಂದು ಆದೇಶಿಸಿರುವುದು ಕಂಡುಬಂದಿದೆ. ಸದ್ಯ ಈ ಹಾಡು ಹಂಗಾಮ, ಸ್ಪಾಟಿಫೈ, ಯೂಟ್ಯೂಬ್ ಸೇರಿದಂತೆ ಹಲವೆಡೆ ಲಭ್ಯವಿದ್ದು, ಅದರಲ್ಲಿ ಹಾಜಿ ಪಿರ್ ಎಂಬ ಪದಗಳಿಲ್ಲ.
ಹಾಗಾಗಿ ಹಾಡಿನಲ್ಲಿ ಎರಡು ಪದಗಳನ್ನು ತೆಗೆಯಬೇಕೆಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸೂಚಿಸಿದೆಯೇ ಹೊರತು ಹಾಡನ್ನಾಗಲಿ, ಆ ಚಿತ್ರವನ್ನಾಗಲಿ ಭಾರತದಲ್ಲಿ ನಿಷೇಧಿಸಿಲ್ಲ ಎಂಬುದು ಸತ್ಯ.
ಕಾಶ್ಮಿರವನ್ನ ನಾವು ಬಿಟ್ಟು ಕೊಡಲಾರೆವು ಎಂಬ ಈ ಹಾಡನ್ನು ಭಾರತ ಸರ್ಕಾರ ಬ್ಯಾನ್ ಮಾಡಿಲ್ಲ. ಆ ಹಾಡು ಈಗಲೂ ಹಲವೆಡೆ ಲಭ್ಯವಿದೆ.
ಇದನ್ನೂ ಓದಿ: ಜಾರಾ ಪಟೇಲ್ ವಿಡಿಯೋಗೆ ನಟಿ ರಶ್ಮಿಕಾ ಮಂದಣ್ಣ ಮುಖ ಜೋಡಿಸಿ ಡೀಪ್ ಫೇಕ್ ಎಡಿಟ್
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.