Fact Check : ಮಸೀದಿ ಭೂಮಿ ಮತ್ತು ಆರ್ಟಿಕಲ್‌ 370 ವಾಪಸ್ಸು ಪಡೆಯುತ್ತೇವೆ ಎಂದು ಕಮಲ್‌ ನಾಥ್‌ ಹೇಳಿಲ್ಲ

ಮಧ್ಯಪ್ರದೇಶ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಲ್ಲಿನ ಮಾಜಿ ಮುಖ್ಯಮಂತ್ರಿ ಕಮಲ್‌ ಅವರ ಕುರಿತು ವ್ಯಾಪಕವಾದ ಸುಳ್ಳು ಸುದ್ದಿಗಳು ಹಬ್ಬೋದಕ್ಕೆ ಪ್ರಾರಂಭವಾಗಿದೆ. ಇದು ಅಲ್ಲಿನ ಕಾಂಗ್ರೆಸ್‌ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಚುನಾವಣೆ ಎದುರಾಗಲಿರುವ ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಮಲ್ ನಾಥ್ ಅವರು ಮುಸ್ಲಿಂ ಸಮುದಾಯದೊಂದಿಗೆ ಸಭೆ ನಡೆಸುತ್ತಿರುವುದನ್ನು ವಿಡಿಯೋದಲ್ಲೆ ಕಾಣಬಹುದಾಗಿದೆ. ಸಭೆಯಲ್ಲಿ ಕಮಲ್ ನಾಥ್ ಅವರು ಮುಸ್ಲಿಮರಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ ಮತ್ತು ಮಸೀದಿ ಭೂಮಿಯನ್ನು ಮರಳಿ ಪಡೆಯುವ ಬಗ್ಗೆ ಮತ್ತು 370 ನೇ ವಿಧಿಯನ್ನು ತೆಗೆದು ಹಾಕುವ ಬಗ್ಗೆ ಮಾತನಾಡಿದ್ದಾರೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ಈ ವೈರಲ್‌ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ, ಇದು 5 ವರ್ಷಗಳ ಹಿಂದಿನ ವಿಡಿಯೋ ಎಂದು ತಿಳಿದು ಬಂದಿದೆ. ಈ ವಿಡಿಯೋವನ್ನು 21 ನವೆಂಬರ್‌ 2018 ರಂದು ಇಂಡಿಯಾ ಟುಡೆ ಮತ್ತು ನ್ಯೂಸ್‌ 18 ಮಧ್ಯಪ್ರದೇಶ್‌ ಛತ್ತೀಸ್‌ಘಡ್‌ ವರದಿ ಮಾಡಿದ್ದು ಆ ವರದಿಗಳಲ್ಲಿ ಎಲ್ಲಿಯೂ ಮಸಿದಿ ಭೂಮಿಯ ಬಗ್ಗೆಯಾಗಲಿ ಅಥವಾ ಆರ್ಟಿಕಲ್‌ 370 ಬಗ್ಗೆಯಾಗಲಿ ಕಮಲ್‌ನಾಥ್‌ ಅವರು ಮಾತನಾಡಿರುವ ಕುರಿತು ವರದಿ ಆಗಿಲ್ಲ.

ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಕಮಲ್‌ನಾಥ್‌ ಅವರ ಧ್ವನಿಯನ್ನು ಎಡಿಟ್‌ ಮಾಡಲಾಗಿದೆ ಎಂಬ ವರದಿಗಳು ಕಂಡು ಬಂದಿವೆ. ಮತ್ತು ಮೂಲ ವಿಡಿಯೋವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ ವೈರಲ್‌ ವಿಡಿಯೋಗೆ ಸಂಬಂಧ ಪಟ್ಟ ತುಣುಕುಗಳು ಸಿಕ್ಕಿದ್ದು ಅದರಲ್ಲಿ ಕಮಲ್‌ನಾಥ್‌ ಅವರು ಆರ್‌ಎಸ್‌ಎಸ್‌ನ ನಡೆಯ ಬಗ್ಗೆ ಮಾತನಾಡಿದ್ದಾರೆ ಎಂಬುದು ತಿಳಿದು ಬಂದಿದೆ.

ಹಾಗಾಗಿ ಕಮಲ್‌ನಾಥ್‌ ಮುಸಲ್ಮಾನರಿಗೆ ಮಸೀದಿ ಭೂಮಿಯನ್ನು ಕೋಡಿಸುತ್ತೇನೆ ಎಂದಿರುವುದು ಮತ್ತು ಆರ್ಟಿಕಲ್‌ 370 ಅನ್ನು ಹಿಂಪಡೆಯುತ್ತೇವೆ ನೋಡಿ ಎಂದು ಹೇಳಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದೆ ಮತ್ತು ವೈರಲ್‌ ವಿಡಿಯೋದಲ್ಲಿ ನಕಲಿ ಅಡಿಯೋವನ್ನು ಬಳಸಿ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ. ಮತ್ತು ಕಮಲ್‌ನಾಥ್‌ ಅವರ ವಿರುದ್ಧ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಹತ್ತೀರ ಬರುತ್ತಿದ್ದಂತೆ ಇನ್ನು ಹಲವು ರೀತಿಯ ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹರಡಲಾಗುತ್ತಿದೆ.


ಇದನ್ನೂ ಓದಿ : ಫ್ಯಾಕ್ಟ್ ಚೆಕ್: ದೇಶಾದ್ಯಂತ ಪಟಾಕಿ ನಿಷೇಧ ಎಂದು ಸುಪ್ರೀಂ ಆದೇಶಿಸಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *