‘ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನನನ್ನು ಜಿಹಾದಿ ಎಂದು ಘೋಷಿಸಿದೆ ಮತ್ತು ಸ್ವಾತಂತ್ರ್ಯ ಹೋರಾಟಗಾರನಲ್ಲ’ ಎಂದು ಹೇಳಿದೆ ಎಂದು ಬರೆಯಲಾಗಿರುವ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ಪೋಸ್ಟ್‌ನಲ್ಲಿ ‘ಟಿಪ್ಪು ಸುಲ್ತಾನ್ ಹಿಂದೂಗಳನ್ನು ಹತ್ಯೆಗೈದ, ಅತ್ಯಾಚಾರ ಮಾಡಿದ, ಮತ್ತು ಮತಾಂತರ ಮಾಡುತ್ತಿದ್ದ’ ಎಂದು ಕರ್ನಾಟಕ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಅವರು ಹೇಳಿದ್ದಾರೆ’ ಎಂದು ಬರೆಯಲಾಗಿದೆ. ಪೋಸ್ಟ್‌ನಲ್ಲಿನ ಪ್ರತಿಪಾದನೆ ನಿಜವೆ ಎಂಬುದನ್ನು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
ಈ ಕುರಿತು ಹುಡುಕಿದಾಗ 2015ರಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಆಚರಿಸುವ ಆದೇಶ ಹೊರಡಿಸಿದ ನಂತರ ಆ ಕುರಿತ ವಿವಾದದ ವರದಿಗಳು ಕಂಡುಬಂದಿವೆ. ಟಿಪ್ಪು ಜಯಂತಿ ವಿರುದ್ಧ ಕೊಡಗು ಮೂಲದ ಕೆ ಪಿ ಮಂಜುನಾಥ ಅವರು 2016ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ್ದ ಕರ್ನಾಟಕ ಹೈಕೋರ್ಟ್, ಟಿಪ್ಪು ಜಯಂತಿಯನ್ನು ಆಚರಿಸಲು ಕರ್ನಾಟಕ ಸರ್ಕಾರದ ತರ್ಕವೇನು ಎಂದು ಪ್ರಶ್ನಿಸಿತ್ತು. ಮುಖ್ಯ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ, ‘ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಲ್ಲ, ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಎದುರಾಳಿಗಳ ವಿರುದ್ಧ ಹೋರಾಡಿದ ರಾಜ’ ಎಂದು ಹೇಳಿದ್ದರು. ಆಗ ಸರ್ಕಾರದ ಪರ ವಕೀಲರು “ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡಿದ್ದ ವೀರ ಸೇನಾನಿ, ಅವರನ್ನು ನೆನೆಯುವುದು ನಮ್ಮ ಕರ್ತವ್ಯ” ಎಂದು ಹೇಳುವ ಮೂಲಕ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಈ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆನಂತರ 03 ನವೆಂಬರ್ 2016ರಂದು ಪ್ರಕರಣದ ಎರಡೂ ಕಡೆಯ ವಾದವನ್ನು ಆಲಿಸಿದ ಹೈಕೋರ್ಟ್, ಟಿಪ್ಪು ಜಯಂತಿ ಆಚರಿಸಿವುದು, ಬಿಡುವುದು ಸರ್ಕಾರದ ಪಾಲಿಸಿ ವಿಚಾರ. ಹಾಗಾಗಿ ಅರ್ಜಿದಾರರು ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗಳ ವಿರುದ್ಧ ಎತ್ತಿರುವ ಆಕ್ಷೇಪಣೆಗಳನ್ನು ರಾಜ್ಯ ಮುಖ್ಯ ಕಾರ್ಯದರ್ಶಿಗಳ ಬಳಿ ಮನವಿ ಮಾಡಬೇಕು ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು. ನ್ಯಾಯಾಲಯವು ಈ ಅಂತಿಮ ತೀರ್ಪಿನಲ್ಲಿ ಟಿಪ್ಪುವಿನ ವಿರುದ್ಧ ಯಾವುದೇ ಟೀಕೆಗಳನ್ನು ಮಾಡಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್‌ನಲ್ಲಿ ಹೇಳಿರುವಂತೆ ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನ್ ಅವರನ್ನು ಜಿಹಾದಿ ಅಥವಾ ಅತ್ಯಾಚಾರಿ ಎಂದು ಕರೆದಿಲ್ಲ. ಆ ರೀತಿಯ ಯಾವುದೇ ವರದಿಗಳು, ದಾಖಲೆಗಳು ಇಲ್ಲ. ಬದಲಿಗೆ ಟಿಪ್ಪು ಮಲಬಾರಿನಲ್ಲಿ ಅಸ್ತಿತ್ವದಲ್ಲಿ ಸ್ತನ ತೆರಿಗೆಯನ್ನು ರದ್ದುಗೊಳಿಸಿದರು, ಮದ್ಯಪಾನ ನಿಷೇಧಿಸುವ ಮೂಲಕ ಮಹಿಳೆಯರ ಪರ ಕ್ರಮ ಕೈಗೊಂಡರು ಎಂಬ ವರದಿಗಳು ಸಿಕ್ಕಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ; ಹಮಾಸ್ 5 ಲಕ್ಷ, ನಾವು 25 ಕೋಟಿ ಶೀರ್ಷಿಕೆಯಲ್ಲಿ ಫೇಕ್ ನ್ಯೂಸ್: 2019ರ ವಿಡಿಯೋ ಪ್ರಕಟಿಸಿದ ಸುವರ್ಣ ನ್ಯೂಸ್
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.