ಹಮಾಸ್‌ 5 ಲಕ್ಷ, ನಾವು 25 ಕೋಟಿ ಶೀರ್ಷಿಕೆಯಲ್ಲಿ ಫೇಕ್ ನ್ಯೂಸ್: 2019ರ ವಿಡಿಯೋ ಪ್ರಕಟಿಸಿದ ಸುವರ್ಣ ನ್ಯೂಸ್

5 ಲಕ್ಷ

ಅವರು 5 ಲಕ್ಷ ಮಾತ್ರ. ಆದರೆ ನಾವು 25 ಕೋಟಿ ಮಂದಿ ಇದ್ದೇವೆ. ಮೋದಿ ಹಾಗೂ ಅಮಿತ್ ಶಾ ಸರಿಯಾಗಿ ಕೇಳಿಸಿಕೊಳ್ಳಿ. 25 ಕೋಟಿ ಜನಸಂಖ್ಯೆಯಲ್ಲಿ 5 ಕೋಟಿ ಮಂದಿ ಹೋರಾಟದಲ್ಲಿ ಪ್ರಾಣ ನೀಡಿದರೂ ನಾವು 20 ಕೋಟಿ ಇರುತ್ತೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನ ಬದಲಿಸಿ, ಶರಿಯಾ ಕಾನೂನು ಜಾರಿಗೆ ತರುತ್ತೇವೆ ಎಂಬುದಾಗಿ ವ್ಯಕ್ತಿಯೊಬ್ಬ ಹೇಳುವ ವಿಡಿಯೋವೊಂದು ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

ತದ ನಂತರ ಸುವರ್ಣ ನ್ಯೂಸ್ ತನ್ನ ವೆಬ್‌ಸೈಟ್‌ನಲ್ಲಿ “ಹಮಾಸ್ 5 ಲಕ್ಷ -ನಾವು 25 ಕೋಟಿ, ಭಾರತದ ಸಂವಿಧಾನ ಕಿತ್ತುಹಾಕಿ ಶರಿಯಾ ಕಾನೂನು ತರುತ್ತೇವೆ” ಎಂಬ ಶೀರ್ಷಿಕೆಯಲ್ಲಿ ನವೆಂಬರ್ 7 ರಂದು ಸುದ್ದಿ ಪ್ರಕಟಿಸಿದೆ. “ಒಟ್ಟು 5 ಲಕ್ಷದಷ್ಟಿರುವ ಹಮಾಸ್ ಇಸ್ರೇಲ್ ನಡುಗಿಸುತ್ತಿದೆ. ನಾವು 25 ಕೋಟಿ ಇದ್ದೇವೆ. ಮೋದಿ, ಅಮಿತ್ ಶಾ ಕೇಳಿಸಿಕೊಳ್ಳಿ, ಭಾರತದ ಸಂವಿಧಾನ ಕಿತ್ತು ಹಾಕಿ ಶರಿಯಾ ಕಾನೂನು ಜಾರಿಗೆ ತರುತ್ತೇವೆ.” ಈ ಶೀರ್ಷಿಕೆಯಲ್ಲಿ ಮುಸ್ಲಿಂ ವ್ಯಕ್ತಿ ಹೇಳಿಕೆ ನೀಡಿದ್ದಾರೆ, ಆ ವಿಡಿಯೋ ವೈರಲ್ ಆಗಿದೆ ಎಂದು ಕನ್ನಡದ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಕಟಿಸಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್:

ವಿಡಿಯೋದ ಸ್ಕ್ರೀನ್‌ ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ನಲ್ಲಿ ಹುಡುಕಿದಾಗ ಹತ್ತಾರು ಜನರು ವಿವಿಧ ಶೀರ್ಷಿಕೆಗಳನ್ನು ಕೊಟ್ಟು ಅದೇ ವಿಡಿಯೋವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಅಲ್ಲದೇ ಈ ವಿಡಿಯೋವನ್ನು 2019ರಿಂದಲೂ ಅಂತರ್ಜಾಲದಲ್ಲಿ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

ರಿಷಿ ಬಾಗ್ರೀ ಎಂಬ ಬಲಪಂಥೀಯ ವಿಚಾರಧಾರೆಯುಳ್ಳ ವ್ಯಕ್ತಿ ಡಿಸೆಂಬರ್ 20, 2019ರಲ್ಲಿ ‘ಇದು ಎಲ್ಲರ ಕಣ್ಣು ತೆರೆಸುವಂತಿರಬೇಕು’ ಎಂಬ ಶೀರ್ಷಿಕೆಯಡಿಯಲ್ಲಿ ಇದೇ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಅದನ್ನು ಈ ಕೆಳಗೆ ನೋಡಬಹುದು.

ಆಶಿಶ್ ಮೆರ್ಖಡೆ ಎಂಬ ವ್ಯಕ್ತಿ ಇದೇ ವಿಡಿಯೋವನ್ನು ಜನವರಿ 29, 2020ರಲ್ಲಿ ಟ್ವೀಟ್ ಮಾಡಿ, “ಅಧಿಕಾರ ಸಿಕ್ಕ ದಿನ ಡಾ.ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ರವರು ಬರೆದ ಸಂವಿಧಾನವನ್ನೇ ಬುಡಮೇಲು ಮಾಡುತ್ತಾರೆ, ಅಂದರೆ ಷರಿಯಾ ಕಾನೂನನ್ನು ತರುತ್ತಾರೆ ಎಂದು ಮುಸ್ಲಿಂ ಮುಖಂಡರು ಹೇಳುತ್ತಿದ್ದಾರೆ. ಬಾಬಾಸಾಹೇಬರನ್ನು ನಂಬಿ NRC ವಿರುದ್ಧ ಪ್ರತಿಭಟಿಸುವವರನ್ನು ನಾವು ಇನ್ನೂ ಬೆಂಬಲಿಸುತ್ತೇವೆಯೇ???” ಎಂಬ ಶೀರ್ಷಿಕೆ ನೀಡಿದ್ದಾರೆ.

ಜೊತೆಗೆ ವಿಡಿಯೋದಲ್ಲಿ ಮಾತನಾಡುವ ವ್ಯಕ್ತಿ ಎಲ್ಲಿಯೂ ಹಮಾಸ್ ಅಥವಾ ಇಸ್ರೇಲ್ ಎಂಬ ಪದಗಳನ್ನು ಬಳಸಿಲ್ಲ. ಸುವರ್ಣ ನ್ಯೂಸ್ ಪ್ರತಿಪಾದಿಸಿರುವುದು ಸುಳ್ಳು, ಈ ವಿಡಿಯೋಗೂ ಹಮಾಸ್-ಇಸ್ರೇಲ್ ಬಿಕ್ಕಟ್ಟಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ. ಈ ಕುರಿತು ಕನ್ನಡದ ವಾರ್ತಾಭಾರತಿ ವೆಬ್‌ಸೈಟ್ ನವೆಂಬರ್ 8 ರಂದು ಫ್ಯಾಕ್ಟ್ ಚೆಕ್ ಪ್ರಕಟಿಸಿದ ನಂತರ ಸುವರ್ಣ ನ್ಯೂಸ್ ತನ್ನ ವರದಿಯ ಶೀರ್ಷಿಕೆಯನ್ನು “ನಾವು 25 ಕೋಟಿ, ಭಾರತದ ಸಂವಿಧಾನ ಕಿತ್ತು ಶರಿಯಾ ಕಾನೂನು ತರುತ್ತೇವೆ: ಸೋಷಿಯಲ್ ಮೀಡಿಯಾದ ಈ ವೀಡಿಯೋ ಡೀಪ್ ಫೇಕಾ?” ಎಂದು ಬದಲಿಸಿದೆ. ಆದರೆ ಸುದ್ದಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಇನ್ನು ಈ ವಿಡಿಯೋ ಎಲ್ಲಿಯದು ಎಂಬುದರ ಕುರಿತು ಹುಡುಕಿದಾಗ “ವಿಡಿಯೋದಲ್ಲಿ ಮಾತನಾಡುವ ವ್ಯಕ್ತಿ ಗುಜರಾತ್‌ನಲ್ಲಿ ಮುಸ್ಲಿಮರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿವೆ” ಎಂದು ಹೇಳಿರುವುದರ ಆಧಾರದಲ್ಲಿ ಗುಜರಾತ್‌ನ ವಿಡಿಯೋ ಇರಬಹುದೆಂದು ತೀರ್ಮಾನಿಸಬಹುದು. ಆದರೆ ಈ ಕುರಿತು ನಿಖರ ಮಾಹಿತಿ ದೊರಕಿಲ್ಲ. ಅಲ್ಲದೇ ಸಿಎಎ, ಎನ್‌ಆರ್‌ಸಿ ಕಾನೂನಿನ ವಿರುದ್ಧದ ಹೋರಾಟ ಇದು ಆಶಿಶ್ ಮೆರ್ಖಡೆಯವರು ಟ್ವೀಟ್ ಮಾಡಿದ್ದಾರೆ. 2019ರ ಡಿಸೆಂಬರ್ ಮತ್ತು 2020ರ ಜನವರಿ ತಿಂಗಳಿನಲ್ಲಿ ಸಿಎಎ-ಎನ್‌ಆರ್‌ಸಿ ವಿರೋಧಿ ಹೋರಾಟದಲ್ಲಿ ದೇಶದಲ್ಲಿ ತಾರಕಕ್ಕೇರಿತ್ತು. ಅದೇ ಸಂದರ್ಭದಲ್ಲಿ ಈ ವಿಡಿಯೋ ಹಂಚಿಕೊಂಡಿರುವುದರಿಂದ ಇದು ಸಿಎಎ ವಿರುದ್ಧದ ಹೋರಾಟ ಎಂಬ ತೀರ್ಮಾನಕ್ಕೆ ಬರಬಹುದು.

ಒಟ್ಟಾರೆಯಾಗಿ ಹೇಳುವುದಾದರೆ 4 ವರ್ಷಗಳ ಹಿಂದಿನ ಸಿಎಎ ವಿರೋಧಿ ಹೋರಾಟದ ಸಂದರ್ಭದ ವಿಡಿಯೋವನ್ನು ಇತ್ತೀಚಿನ ಹಮಾಸ್-ಇಸ್ರೇಲ್ ಸಂಘರ್ಷಕ್ಕೆ ಹೋಲಿಸಿ, ಭಾರತೀಯ ಮುಸ್ಲಿಮರು ಸಂವಿಧಾನ ಕಿತ್ತು ಹಾಕಿ ಶರಿಯಾ ಕಾನೂನು ತರುತ್ತಾರೆ ಎಂಬ ತಪ್ಪು ಅರ್ಥ ಬರುವಂತೆ ಹೋಲಿಸಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಆದರೆ ವಿಡಿಯೋ ಹಳೆಯದು ಮತ್ತು ಹಮಾಸ್ ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಸತ್ಯ.


ಇದನ್ನೂ ಓದಿ: Fact Check : ಸೋನಿಯಾ ಗಾಂಧಿ ಹಿಂದೂ ವಿರೋಧಿ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಬರೆದಿದ್ದಾರೆಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *