“ಒಂದು ವೇಳೆ ವಿರಾಟ್ ಕೊಹ್ಲಿ 195 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ಅಲ್ಲಿ ದ್ವಿಶತಕ ಬಾರಿಸುವ ಸಲುವಾಗಿ ಅವರು ಸಿಂಗಲ್ಸ್ ತೆಗೆದುಕೊಳ್ಳುತ್ತಿದ್ದರು. ಆದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೆ ಮಾಡಲಿಲ್ಲ. ಅವರು ಸಿಕ್ಸರ್ ಬಾರಿಸಿದರು. ಆದ್ದರಿಂದಲೇ ಅವರು ಉಳಿದವರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ವೈಯಕ್ತಿಕ ಮೈಲುಗಲ್ಲುಗಳ ಸಲುವಾಗಿ ಆಡುವವರಲ್ಲ” ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭಿರ್ ಅವರು ಹೇಳಿದ್ದಾರೆ ಎಂದು ವ್ಯಾಪಕವಾಗಿ ಸುದ್ದಿಯೊಂದು ಹರಡುತ್ತಿದೆ.
ಈ ಸುದ್ದಿಯ ಪೂರ್ವಪರವನ್ನು ಅಳೆಯದೆ, ತಿಳಿಯದೆ ಯಥಾವತ್ತಾಗಿ ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಅದರಲ್ಲಿ ಪ್ರಮುಖವಾಗಿ ನ್ಯೂಸ್ 18 ಮತ್ತು ಕನ್ನಡದ ವಿಜಯ ಕರ್ನಾಟಕ ಪತ್ರಿಕೆ ಸೇರಿದ ಹಾಗೆ ಹಲವು ಸುದ್ದಿ ಸಂಸ್ಥೆಗಳು ಕೂಡ ಇದೇ ರೀತಿಯ ಸುಳ್ಳು ಸುದ್ದಿಯನ್ನು ಬರೆದು ಜನರ ಹಾದಿ ತಪ್ಪಿಸುವ ಕೆಲಸವನ್ನು ಮಾಡಿವೆ.
ಇನ್ನು ಈ ವಿಚಾರ ಗೌತಮ್ ಗಂಭೀರ್ ಅವರ ಗಮನಕ್ಕೆ ಬರುತ್ತಿದಂತೆ ನ್ಯೂಸ್ 18 ಪೋಸ್ಟ್ ಅನ್ನು ರೀಟ್ವಿಟ್ ಮಾಡಿದ ಗೌತಮ್ ಗಂಭೀರ್, ತಾವು ಈ ಹೇಳಿಕೆಯನ್ನು ನೀಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಈ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದ ನ್ಯೂಸ್18 ಅನ್ನು ಉಲ್ಲೇಖಿಸಿ, ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಕಟುವಾದ ಶಬ್ಧಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೌತಮ್ ಗಂಭೀರ್ ಅವರ ಟ್ವಿಟ್ ಬಳಿಕ ತಮ್ಮ ತಪ್ಪನ್ನು ತಿದ್ದಿಕೊಂಡಿರುವ ನ್ಯೂಸ್ 18 ತಾವು ಪ್ರಕಟಿಸಿದ್ದ ಸುದ್ದಿಯನ್ನು ಡಿಲೀಟ್ ಮಾಡಿದೆ. ಬಳಿಕ ಗೌತಮ್ ಗಂಭೀರ್ ಅವರ ಬಳಿ ನ್ಯೂಸ್ 18 ಕೂಡ ಕ್ಷಮೆಯಾಚಿಸಿದೆ.
ಹಾಗಾಗಿ ಮೇಲಿನ ಅಪಾದನೆ ಸುಳ್ಳಾಗಿದೆ. ಆದರೆ ಕನ್ನಡದ ವಿಜಯ ಕರ್ನಾಟಕ ಡಿಜಿಟಲ್ ವೆಬ್ ಇದೇ ಸುದ್ದಿಯನ್ನ ಪ್ರಕಟಿಸಿ ಬಳಿಕ ಅದೇ ಸುದ್ದಿಯನ್ನು ತಿದ್ದಿಕೊಂಡು ಪ್ರಕಟಿಸಿದೆ.
ಇದನ್ನೂ ಓದಿ : ಆಕಸ್ಮಿಕವಾಗಿ ನಾನು ಹಿಂದೂ! ಎಂದು ಜವಹರಲಾಲ್ ನೆಹರುರವರು ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.