ಪಶ್ಚಿಮ ಬಂಗಾಳದ ಚುನಾವಣೆಯ ಹಳೆಯ ವಿಡಿಯೋವನ್ನು ಮಧ್ಯಪ್ರದೇಶಕ್ಕೆ ಸೇರಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಂಚರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ, ತೆಲಂಗಾಣ ಹಾಗೂ ಮಿಝೋರಾಂ ನಲ್ಲಿ ಈಗಾಗಲೇ ಚುನಾವಣೆಗಳು ಜರುಗುತ್ತಿವೆ. ಈ ಸುದ್ದಿ ಬರೆಯುವ ಹೊತ್ತಿಗೆ ಮಧ್ಯ ಪ್ರದೇಶದ ಚುನಾವಣೆಯು ಮುಗಿದಿದೆ. ಆದರೆ ಮಿಕ್ಕ ರಾಜ್ಯಗಳಿಗೆ ಹೋಲಿಸಿದರೆ ಮಧ್ಯ ಪ್ರದೇಶದಲ್ಲಿ ಹರಿದಾಡಿದಷ್ಟು ಸುಳ್ಳು ಸುದ್ದಿಗಳು, ಅಪಪ್ರಚಾರಗಳು ಬೇರೆಲ್ಲೂ ನಡೆದಿಲ್ಲ. ಮಧ್ಯಪ್ರದೇಶದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಹರಿದಾಡುತ್ತಿದ್ದ ಹಲವಾರು ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್ ಬಯಲುಗೊಳಿಸಿದೆ. ಅವುಗಳನ್ನು ನೀವು ಇಲ್ಲಿ ನೋಡಬಹುದು.

ಇತ್ತೀಚೆಗೆ ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ನಾಯಕ ಹಳ್ಳಿಗೆ ಪ್ರಚಾರಕ್ಕೆಂದು ಹೋದ ಸಂದರ್ಭದಲ್ಲಿ ಅಲ್ಲಿನ ಜನರು ಅವರನ್ನು ಪ್ರಚಾರ ಮಾಡದಂತೆ ತಡೆದು ಅಲ್ಲಿಂದ ಓಡಿಸಿದ್ದಾರೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಮಧ್ಯಪ್ರದೇಶದಲ್ಲಿ ಚುನಾವಣೆಗು ಮುಂಚೆಯೇ ಅಲ್ಲಿನ ಜನರು ಫಲಿತಾಂಶ ಪ್ರಕಟಿಸಿದ್ದಾರೆ” ಎಂದು ಬರೆದು ಅನೇಕರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್: ಇದು ಪಶ್ಚಿಮ ಬಂಗಾಳದ 2021ರ ವಿಧಾನ ಸಭಾ ಚುನಾವಣಾ ಸಂದರ್ಭದ ವಿಡಿಯೋ ಆಗಿದೆ. ಅನಿರ್ಬನ್ ಗಂಗೂಲಿ ಎಂಬ ಬೋಲ್ಪುರ್ ಬಿಜೆಪಿ ಅಭ್ಯರ್ಥಿ ಇಲಮ್‌ಬಜಾರ್ ಎಂಬ ಊರಿಗೆ ಪ್ರಚಾರಕ್ಕೆ ತೆರಳಿದ ವೇಳೆ ಆಕ್ರೋಶಗೊಂಡ ಅಲ್ಲಿನ ಜನ ಅನಿರ್ಬನ್‌ ಅವರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅನಿರ್ಬನ್ ಗಂಗೂಲಿ ಅಂಗರಕ್ಷಕರು ಅವರಿಗೆ ಯಾವ ತೊಂದರೆಯೂ ಆಗದಂತೆ ಅಲ್ಲಿಂದ ಕರೆದೊಯ್ದಿದ್ದಾರೆ.

2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಎಂಟು ಹಂತಗಳಲ್ಲಿ ನಡೆಯಿತು. ಅನಿರ್ಬನ್ ಗಂಗೂಲಿ ಬೋಲ್ಪುರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಆದರೆ ಅವರು ಸೋಲನ್ನು ಎದುರಿಸಬೇಕಾಯಿತು. ಈಗ ಅವರ ಕಾರಿನ ಮೇಲೆ ನಡೆದ ದಾಳಿಯ ವೀಡಿಯೊವನ್ನು ಮಧ್ಯಪ್ರದೇಶ ವಿಧಾನಸಭೆಯ ಸಂದರ್ಭದ್ದು ಎಂದು ಹಂಚಿಕೊಳ್ಳಲಾಗುತ್ತಿದೆ.

ಈ ದಾಳಿಯ ಕುರಿತು 29 ಏಪ್ರಿಲ್ 2021ರಂದೇ ಪ್ರತಿಕ್ರಯಿಸಿರುವ ಅನಿರ್ಬನ್ ಗಂಗೂಲಿಯವರು ತಮ್ಮ ಟ್ವಿಟರ್(X) ಖಾತೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಎಂದು ತಮಗೆ ಕಾಳಜಿ ತೋರಿದವರಿಗೆ ಧನ್ಯವಾದ ತಿಳಿಸಿದ್ದಾರೆ. ಆದ್ದರಿಂದ ಇದು ಮಧ್ಯಪ್ರದೇಶದ ಚುನಾವಣೆಗೆ ಸಂಬಂಧಿಸಿದ ಇತ್ತೀಚಿನ ವಿಡಿಯೋ ಎಂಬುದು ಸುಳ್ಳು.


ಇದನ್ನು ಓದಿ: ರಾಮ ಮಂದಿರದ ಮೇಲೆ ಭಗವಧ್ವಜ ಹಾರಿಸಿದ ದಿನವೇ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ಹೇಳಿಲ್ಲ


ವಿಡಿಯೋ ನೋಡಿ: ರಾಹುಲ್ ಗಾಂಧಿ ಕಪ್ಪು ಬಟ್ಟೆ ಧರಿಸಿ ರಾಮಮಂದಿರದ ವಿರುದ್ಧ ಪ್ರತಿಭಟಿಸಿಲ್ಲ | Rahul Gandhi | Rama Mandir | Black


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *