ರಾಮ ಮಂದಿರದ ಮೇಲೆ ಭಗವಧ್ವಜ ಹಾರಿಸಿದ ದಿನವೇ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ಹೇಳಿಲ್ಲ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಯೋಧ್ಯೆಯ ರಾಮಮಂದಿರದ ಕೆಲಸಗಳು ಭರದಿಂದ ಸಾಗುತ್ತಿವೆ. ಅಯೋಧ್ಯೆಯ “ರಾಮ ಮಂದಿರ”, “ಹಿಂದೂ ರಾಷ್ಟ್ರ” ಮತ್ತು “ಅಖಂಡ ಭಾರತ” ಬಿಜೆಪಿ ಮತ್ತು ಬಲಪಂಥೀಯರು ಪ್ರತಿಪಾದಿಸುತ್ತಿರುವ “ಉಗ್ರ ಹಿಂದುತ್ವದ” ಪ್ರತೀಕವಾಗಿದೆ ಮತ್ತು ಆಢಳಿತಾರೂಢ ಬಿಜೆಪಿಯ ರಾಜಕೀಯದ ಅಸ್ತ್ರವಾಗಿದೆ. ಆದ್ದರಿಂದ ಬಿಜೆಪಿ ನಾಯಕರು ಭಾರತವನ್ನು ಮುಂಬರುವ ದಿನಗಳಲ್ಲಿ ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲಾಗುವುದು ಎಂದು ತಮ್ಮ ಪಕ್ಷದ ಬೆಂಬಲಿಗರಿಗೆ ಈಗಾಗಲೇ ಭರವಸೆಯನ್ನು ನೀಡುತ್ತಾ ಬಂದಿದ್ದಾರೆ.

ಅದರಂತೆ, “ರಾಮಜನ್ಮ ಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಮೇಲೆ ಭಗವಧ್ವಜ ಹಾರಿಸಿದ ದಿನವೇ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಲಾಗುತ್ತದೆ” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ ಎಂಬ ಪೋಸ್ಟರ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಯೋಗಿ ಆದಿತ್ಯನಾಥ್

ಫ್ಯಾಕ್ಟ್‌ಚೆಕ್: 1 ಜೂನ್ 2022ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಗರ್ಭಗೃಹದ ಶಿಲಾ ಪೂಜೆಯ ಸಮಯದಲ್ಲಿ ಯೋಗಿ ಆದಿತ್ಯನಾಥ್ “ಅಯೋಧ್ಯೆಯ ರಾಮ ಮಂದಿರ ಭಾರತದ ‘ರಾಷ್ಟ್ರ ಮಂದಿರ’ವಾಗಲಿದೆ” ಎಂದಿದ್ದರು. ಫ್ರೆಬ್ರವರಿ 2023ರಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ “ಹಿಂದು ರಾಷ್ಟ್ರ ಮತ್ತು ಅಖಂಡ ಭಾರತ್ ಮುಂಬರುವ ದಿನಗಳಲ್ಲಿ ನಿಜವಾಗುತ್ತದೆ” ಎಂದಿದ್ದರು. ಆದರೆ ಅವರು ಎಲ್ಲಿಯೂ ಶ್ರೀರಾಮ ಮಂದಿರದ ಮೇಲೆ ಭಗವಧ್ವಜ ಹಾರಿಸಿದ ದಿನವೇ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಲಾಗುತ್ತದೆ ಎಂದು ಹೇಳಿಲ್ಲ.

ಈ ಕುರಿತು ಯಾವುದೇ ವರದಿಗಳು ಲಭ್ಯವಿಲ್ಲ. ಆದ್ದರಿಂದ ರಾಮ ಮಂದಿರದ ಮೇಲೆ ಭಗವಧ್ವಜ ಹಾರಿಸಿದ ದಿನವೇ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ಅವರು ಹೇಳಿಲ್ಲ.

ಭಾರತೀಯರಾಗಿ ನಾವು ನೆನಪಿಡಬೇಕಾದ ಸಂಗತಿ ಎಂದರೆ ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ರಾಷ್ಟ್ರ ಧರ್ಮ ಮತ್ತು ರಾಷ್ಟ್ರ ಭಾಷೆಗೆ ಮಾನ್ಯತೆ ನೀಡಿಲ್ಲ.  ಹಾಗೂ ಸರ್ವ ಧರ್ಮಗಳನ್ನು ಸಮನ್ವಯವಾಗಿ ಕಂಡು ಎಲ್ಲರೂ ಅವರವರ ನಂಬಿಕೆಯ ಧರ್ಮ, ನಂಬಿಕೆ, ಆಚರಣೆಯನ್ನು ಅನುಸರಿಸಬಹುದು ಎಂದು ಸೂಚಿಸಿದೆ. ಸಂವಿಧಾನ ಕತೃ ಡಾ. ಬಿ. ಆರ್ ಅಂಬೇಡ್ಕರ್‌ರವರು ಸೇರಿದಂತೆ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿ ನಾಯಕರು ಸಹ ನಮ್ಮ ಸಾರ್ವಜನಿಕ ಜೀವನದಲ್ಲಿ ಧರ್ಮಾಧಾರಿತ ರಾಜಕಾರಣ ತರಬಾರದು ಎಂದು ಸಲಹೆ ನೀಡಿದ್ದಾರೆ.

ಭಾರತದ ಸುಪ್ರೀಂ ಕೋರ್ಟ್ರಾಜಕಾರಣಿಗಳು ರಾಜಕೀಯದಲ್ಲಿ ಧರ್ಮವನ್ನು ಬಳಸುವುದನ್ನು ನಿಲ್ಲಿಸಿದರೆ ದ್ವೇಷ ಭಾಷಣಗಳು ದೂರವಾಗುತ್ತವೆ” ಎಂದು ಹೇಳಿದೆ. ದ್ವೇಷದ ಭಾಷಣಗಳನ್ನು ಮೂಲಭೂತವಾದಿ ಶಕ್ತಿಗಳು ಮಾಡುತ್ತಿವೆ ಮತ್ತು ಜನರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬೇಕು ಎಂದು ನ್ಯಾಯಾಲಯ ದೇಶದ ಜನತೆಗೆ ಕಿವಿಮಾತು ಹೇಳಿದೆ.


ಇದನ್ನು ಓದಿ: ಬಿಜೆಪಿಗೆ ಮತ ನೀಡಬೇಡಿ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರು ಹೇಳಿಲ್ಲ


ವಿಡಿಯೋ ನೋಡಿ: Nehru | ನೆಹರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದು ಸುಳ್ಳು | Seva Dal | Fact check | Fake News


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *