OpenAI ಸಿಇಒ ಮೀರಾ ಮುರಾಟಿಯವರು ಭಾರತೀಯ ಮೂಲದವರು ಎಂಬುದು ಸುಳ್ಳು

OpenAI

ಇದೇ ನವೆಂಬರ್ 19ರಂದು ಅಮೆರಿಕದ ಸ್ಯಾನ್​ಫ್ರಿನ್ಸಿಸ್ಕೋ ಮೂಲದ ಓಪನ್ ಎಐ ಸಂಸ್ಥೆ (OpenAI) ತನ್ನ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿ ಆಚ್ಚರಿ ಮೂಡುವಂತೆ ಮಾಡಿತು. ಸಂಸ್ಥೆಯನ್ನು ಮುನ್ನಡೆಸಲು ಅವರು ಸಮರ್ಪಕರಲ್ಲ ಎಂಬುದು ಮೇಲ್ನೋಟಕ್ಕೆ ಕಂಪನಿ ಕೊಟ್ಟಿರುವ ಕಾರಣವಾಗಿದೆ. ಅವರ ಸ್ಥಾನಕ್ಕೆ ಮೀರಾ ಮುರಾಟಿ (Mira Murati) ಅವರನ್ನು ನಿಯೋಜಿಸಲಾಗಿದೆ. ಮೀರಾ ಅವರು ಹಂಗಾಮಿ ಸಿಇಒ ಆಗಿ ತಾತ್ಕಾಲಿಕ ಅವಧಿಯವರೆಗೆ ಓಪನ್ ಎಐ ಅನ್ನು ಮುನ್ನಡೆಸಲಿದ್ದಾರೆ. ಇದೇ ವೇಳೆ, ಮೀರಾ ಮುರಾಟಿ ಅವರು ಭಾರತೀಯ ಮೂಲದವರು ಎನ್ನುವಂತಹ ಸುದ್ದಿ ಕೆಲವೆಡೆ ದಟ್ಟವಾಗಿ ಹಬ್ಬಿದೆ. ಮೀರಾ ನಿಜಕ್ಕೂ ಭಾರತೀಯ ಮೂಲದವರಾ?

ಕೆಲವು ಮಾಧ್ಯಮ ಸಂಸ್ಥೆಗಳು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಮುರಾಟಿ ಭಾರತೀಯ ಮೂಲದವರು  ಎಂದು ತಪ್ಪಾಗಿ ವರದಿ ಮಾಡಿದ್ದಾರೆ. ಅವರು ಅರ್ಧ ಭಾರತೀಯೆ. ಅವರ ಪೋಷಕರಲ್ಲಿ ಒಬ್ಬರು ಭಾರತೀಯ ಮೂಲದವರು ಎಂದೂ ಸೋಷಿಯಲ್ ಮೀಡಿಯಾದಲ್ಲಿ ವಾದಿಸುವವರಿದ್ದಾರೆ. ಓಪನ್ ಎಐನಲ್ಲಿ ಸಿಟಿಒ ಆಗಿದ್ದ ಮೀರಾ ಮುರಾಟಿ ಅವರ ಹೆಸರಿನಲ್ಲಿರುವ ಮೀರಾ ಪದ ಭಾರತೀಯದ್ದೆಂಬ ಭಾವನೆ ತರುತ್ತದೆ. ಇನ್ನು, ಮುರಾತಿ(ಟಿ) ಎಂಬುದನ್ನು ಕೆಲವರು ಮೂರ್ತಿ ಎಂದು ಭಾವಿಸಿದ್ದಾರೆ.  OpenAIನ ಹಂಗಾಮಿ ಸಿಇಒ ಮೀರಾ ಮೂರ್ತಿ ಯಾರು? ಎಂದು ವಿಜಯವಾಣಿ ಲೇಖನ ಪ್ರಕಟಿಸಿತ್ತು, ನಂತರ ಮೀರಾ ಮುರಾಟಿ ಎಂದು ಸರಿಪಡಿಸಿ ಲೇಖನ ಪ್ರಕಟಿಸಿದೆ. ನ್ಯೂಸ್ 18 ಕನ್ನಡ, ಮತ್ತು  ಹಿಂದುಸ್ತಾನ್ ಟೈಮ್ಸ್‌ ಸಹ ಮೀರಾ ಅವರ ಪೋಷಕರು ಭಾರತೀಯ ಮೂಲದವರು ಎಂದು ಲೇಖನದಲ್ಲಿ ಪ್ರಕಟಿಸಿದೆ.

ಫ್ಯಾಕ್ಟ್‌ಚೆಕ್: ಮೀರಾ ಮುರಾಟಿ ಅವರು ಆಲ್ಬೇನಿಯಾ ಮೂಲದವರು ಎಂಬುದು ಬಹಳ ಸ್ಪಷ್ಟವಾಗಿರುವ ಸಂಗತಿ. ಮೀರಾ ಅವರು ಎಂಜಿನಿಯರ್ ಮತ್ತು ವ್ಯವಹಾರ ಕಾರ್ಯನಿರ್ವಾಹಕರಾಗಿದ್ದು, 2018 ರಲ್ಲಿ ಓಪನ್ಎಐಗೆ ಸೇರಿದರು, ಕಂಪನಿಯ ಸಿಟಿಒ ಆಗಿ ಸೇವೆ ಸಲ್ಲಿಸಿದರು ಮತ್ತು 17 ನವೆಂಬರ್ 2023 ರಿಂದ, ಸ್ಯಾಮ್ ಆಲ್ಟ್ಮನ್ ಬದಲಿಗೆ ಓಪನ್ಎಐನ ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಮುರಾಟಿ ಎಂಬುದು ಆಲ್ಬೇನಿಯಾದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ನಾಮಪದ. ಮೀರಾ ಕೂಡ ಆಲ್ಬೇನಿಯಾದಲ್ಲಿ ಸಾಮಾನ್ಯವಾಗಿರುವ ಹೆಸರುಪದ.

34 ವರ್ಷದ ಮೀರಾ ಮುರಾಟಿ ಅವರು ಭಾರತೀಯ ಮೂಲದವರು ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ. ಸ್ವತಃ ಅವರೇ ಯಾವತ್ತೂ ಕೂಡ ಭಾರತೀಯ ಮೂಲದ ಬಗ್ಗೆ ಹೇಳಿಲ್ಲ. ತಮ್ಮನ್ನು ಆಲ್ಬೇನಿಯಾ ಮೂಲದವರು ಎಂದೇ ಹೇಳಿಕೊಂಡಿರುವುದುಂಟು. ಅವರ ತಂದೆ ತಾಯಿ ಆಲ್ಬೇನಿಯಾ ಮೂಲದವರು. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 1988ರಲ್ಲಿ ಜನಿಸಿದ ಅವರು ಕೆನಡಾದಲ್ಲಿ ಶಾಲಾ ಶಿಕ್ಷಣ ಪಡೆದಿದ್ದಾರೆ. ನಂತರ ಅವರು ಅಮೆರಿಕದ ನ್ಯೂ ಹ್ಯಾಂಪ್​ಶೈರ್ ರಾಜ್ಯದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇದೀಗ ಸ್ಯಾನ್ ಫ್ರಾನ್ಸಿಸ್ಕೋಗೆ ವಾಪಸ್ ಬಂದು ನೆಲಸಿದ್ದಾರೆ. ಓಪನ್ ಎಐನ ಪ್ರಧಾನ ಕಚೇರಿ ಕೂಡ ಸ್ಯಾನ್ ಫ್ರಾನ್ಸಿಸ್ಕೋದಲ್ಲೇ ಇರುವುದು. ಆದ್ದರಿಂದ ಮೀರಾ ರವರು ಭಾರತೀಯ ಮೂಲದವರು ಎಂಬುದು ಸುಳ್ಳು.


ಇದನ್ನು ಓದಿ: ಜಾರ್ಖಂಡ್ ಪೊಲೀಸರ ಅಣಕು ಡ್ರಿಲ್ ವಿಡಿಯೋ ಸುಳ್ಳು ಹೇಳಿಕೆಗಳೊಂದಿಗೆ ವೈರಲ್ ಆಗಿದೆ


ವಿಡಿಯೋ ನೋಡಿ: ತಿರುಪತಿ ಪುರೋಹಿತರ ಮನೆಯಲ್ಲಿ 128KG ಚಿನ್ನ ಪತ್ತೆ ಎಂದು ನಕಲಿ ವಿಡಿಯೋ ಹಂಚಿಕೆ.!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *