Fact Check: ಟಿಪ್ಪುವಿನ ಖಡ್ಗದ ಮೇಲೆ ಹಿಂದೂ ವಿರೋಧಿ ಬರಹವಿಲ್ಲ | Tippu Sultan | Sword |

Tippu Sultan Sword

ಟಿಪ್ಪು ಸುಲ್ತಾನನ ಇತಿಹಾಸಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಚರ್ಚೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಟಿಪ್ಪು ಸುಲ್ತಾನ್ ಅವರ ಅರಮನೆಯ ಖಾಸಗಿ ಕೋಣೆಯಲ್ಲಿ ಪತ್ತೆಯಾಗಿದ್ದ ಖಡ್ಗವನ್ನು ಲಂಡನ್‌ನ ಹರಾಜು ಸಂಸ್ಥೆ ಬೊನ್ಹಾಮ್ಸ್(Bonhams)ನಲ್ಲಿ ಭಾರತೀಯ ವಸ್ತುವಿನ ಎಲ್ಲಾ ಹರಾಜು ದಾಖಲೆಗಳನ್ನು ಮುರಿದಿದೆ.  ಲಂಡನ್ ನಲ್ಲಿ ನಡೆದ ಈ ಹರಾಜಿನಲ್ಲಿ £14 ಮಿಲಿಯನ್ ($ 17.4 ಮಿಲಿಯನ್)ಗೆ ಅಂದರೆ 140 ಕೋಟಿಗೆ ಮಾರಾಟವಾಗಿದೆ. ಈಗ ಅದೇ ಖಡ್ಗದ ಮೇಲೆ ಹಿಂದು ವಿರೋಧಿ ಬರಹವಿದೆ ಎಂಬ ಸುದ್ದಿಯನ್ನು ಹಲವು ವರ್ಷಗಳಿಂದ ಹಂಚಿಕೊಳ್ಳಲಾಗುತ್ತಿದೆ.

ಟಿಪ್ಪು ಸುಲ್ತಾನ್ ಖಡ್ಗದ ಮೇಲೆ ” ನನ್ನ ವಿಜಯದ ಕತ್ತಿಯು ಕಾಫೀರರ ನಾಶಕ್ಕಾಗಿ. ನಂಬಿಕೆಯ ಒಡೆಯನಾದ ಹೈದರ್ ವಿಜಯಶಾಲಿಯಾಗಿದ್ದಾನೆ, ಮತ್ತು ಇದಲ್ಲದೆ, ಅವನು ಅವಿಶ್ವಾಸಿಗಳಾಗಿದ್ದ(ಕಾಫೀರರ) ದುಷ್ಟ ಜನಾಂಗವನ್ನು ನಾಶಪಡಿಸಿದನು.” ಎಂದು ಬರೆದಿದೆ. ಆದ್ದರಿಂದ ಆತ ದಕ್ಷಿಣ ಭಾರತದ ಔರಂಗಜೇಬ್ ಎಂದು ಆರೋಪಿಸುತ್ತಿದ್ದಾರೆ. ಇದಕ್ಕೆ ಮೂಲ ಆಧಾರವಾಗಿ ಮೈಸೂರು ಗೆಜೆಟೀರ್ ನಲ್ಲಿ ಟಿಪ್ಪುವಿನ ಖಡ್ಗದ ಮೇಲಿನ ಶಾಸನವನ್ನು ಉಲ್ಲೇಖಿಸಿ ಈ ಮೇಲಿನ ಆಪಾಧನೆಯನ್ನು ಮಾಡಲಾಗುತ್ತಿದೆ. ಇದನ್ನೆ ಹಲವಾರು ಜನ ನಂಬಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸುದ್ದಿಮಾಧ್ಯಮಗಳು ಸಹ ಇದನ್ನೇ ವರದಿ ಮಾಡಿವೆ.

ಫ್ಯಾಕ್ಟ್‌ಚೆಕ್: ವಾಸ್ತವಾಗಿ ಟಿಪ್ಪು ಸುಲ್ತಾನ್ ಖಡ್ಗದ ಹಿಡಿಕೆಯಲ್ಲಿ ಅರೇಬಿಕ್ ಲಿಪಿಯಲ್ಲಿ ಬರೆದಿರುವುದು “ಯಾ ನಸೀರ್, ಯಾ ಫತಾಹ್, ಯಾ ನಸೀರ್, ಯಾ ಮುಈನ್…” ಎಂಬುದಾಗಿದೆ. ಮತ್ತು ಅದರ ಹಿಡಿಕೆಯ ಎರಡೂ ತುದಿಗಳಲ್ಲಿ ಯಾ ಅಲ್ಲಾಹ್..‌ ಯಾ ಅಲ್ಲಾಹ್… ಎಂದು ಬರೆಯಲಾಗಿದೆ. ಇದರ ಅರ್ಥ ‘ಓ ಸಹಾಯ ನೀಡುವವನೇ, ಓ ಯಶಸ್ಸು ನೀಡುವವನೇ, ಓ ಬೆಳಕು ತೋರುವವನೇ, ಓ ಅಲ್ಲಾಹ್.. ಓ ಅಲ್ಲಾಹ್.. ಎಂಬುದಾಗಿದೆ. ಇದನ್ನು ಅರೇಬಿಕ್ ಮತ್ತು ಉರ್ದು ಓದಲು ಬಲ್ಲ ಯಾರು ಬೇಕಾದರೂ ಸುಲಭವಾಗಿ ಓದಬಹುದು.

ಮೈಸೂರು ಗೆಜೆಟೀರ್‌ನಲ್ಲಿರುವ ಮಾಹಿತಿ ತಪ್ಪಾಗಿದ್ದು, ಕೇವಲ ಖಡ್ಗದ ಹಿಡಿಯ ಮೇಲೆ ಶಾಸನದ ಅಷ್ಟೊಂದು ಬರಹವನ್ನು ಬರೆಯಲು ಸಾಧ್ಯವಿಲ್ಲ. ಅನುವಾದಿಸಿದ ಯಾರೋ ಉದ್ದೇಶ ಪೂರ್ವಕವಾಗಿ ಈ ರೀತಿಯ ಅರ್ಥ ಬರುವಂತೆ ತಪ್ಪಾಗಿ ಮಾಹಿತಿ ನೀಡಿದ್ದಾರೆ.ಟಿಪ್ಪು ಸುಲ್ತಾನ್ ಅರಮನೆಯ ಖಾಸಗಿ ವಸತಿಗೃಹದಲ್ಲಿ ಈ ಖಡ್ಗ ಪತ್ತೆಯಾಗಿದ್ದು, ಟಿಪ್ಪು ಸುಲ್ತಾನ್ ಹತ್ಯೆಯ ನಂತರ ಅವರ ಧೈರ್ಯದ ಸಂಕೇತವಾಗಿ ಬ್ರಿಟಿಷ್ ಮೇಜರ್ ಜನರಲ್ ಡೇವಿಡ್ ಬೇರ್ಡ್ ಅವರಿಗೆ ನೀಡಲಾಯಿತು. ಖಡ್ಗವನ್ನು ವಿಶ್ವದ ಅಪರೂಪದ ಕಲಾಕೃತಿಗಳಲ್ಲಿ ಒಂದೆಂದು ವಿವರಿಸಲಾಗಿದೆ. ಖಡ್ಗದ ಮೇಲೆ ಬಂಗಾರದ ಕ್ಯಾಲಿಯಗ್ರಾಪಿಯಲ್ಲಿ ಅಕ್ಷರಗಳನ್ನು ಬರೆಯಲಾಗಿದೆ. ಬರಹದಲ್ಲಿ ಎಲ್ಲಿಯೂ ಕಾಫೀರ್, ಹೈದರ್ ಶಬ್ದಗಳ ಉಲ್ಲೇಖ ಇಲ್ಲ. ಇನ್ನೂ ಹಿಂದುಗಳ ನಂಬಿಕೆಯಂತೆ ಪೋಷಕರನ್ನು ಪೂಜಿಸುವ(ancestral worship) ಸಂಸ್ಕೃತಿಯೂ ಸಹ ಇಸ್ಲಾಮಿನಲ್ಲಿ ಮನ್ನಣೆಯಿಲ್ಲ ಆದ್ದರಿಂದ ತನ್ನ ತಂದೆ ಹೈದರ್ ನನ್ನು ದೇವರಿಗೆ ಹೋಲಿಸುವ ಸಾಧ್ಯತೆ ಇಲ್ಲ.ಟಿಪ್ಪು ಸುಲ್ತಾನ್ ಆಕಾಲದ ಇತರ ರಾಜರಂತೆ ತನ್ನ ಧರ್ಮಕ್ಕೆ ನಿಷ್ಟನಾಗಿದ್ದನು. ಆದರೆ ಹಿಂದು ದೇವರು, ಧಾರ್ಮಿಕ ಸ್ಥಳಗಳನ್ನು ಸಹ ಗೌರವದಿಂದ ಕಾಣುತ್ತಿದ್ದುದ್ದಕ್ಕೆ ಆತ ದೇವಾಲಯಗಳಿಗೆ ದಾನವಾಗಿ ನೀಡಿರುವ ಅನೇಕ ಉಲ್ಲೇಖಗಳೇ ಇದಕ್ಕೆ ಸಾಕ್ಷಿ. ಅಖಂಡ ದಕ್ಷಿಣ ಭಾರತವನ್ನು ಗೆದ್ದು ಸಾಮ್ರಾಟನಾಗಬೇಕೆಂದು ಕನಸು ಕಾಣುತ್ತಿದ್ದ ಹೈದರ್ ಮತ್ತು ಟಿಪ್ಪು ಸುಲ್ತಾನನಿಗೆ ದಂಡಯಾತ್ರೆಗಳು ಅನಿವಾರ್ಯವಾಗಿದ್ದವು. ಇದಕ್ಕೆ ತೊಡಕಾಗಿ ಬ್ರಿಟೀಷರು ಕಾಣತೊಡಗಿದರು. ಬ್ರಿಟೀಷರಿಗೂ ಸಹ ಅಖಂಡ ಭಾರತವನ್ನು ಗೆಲ್ಲುವ ಕನಸಿಗೆ ಹೈದರ್, ಟಿಪ್ಪು ತೊಡಕಾಗಿದ್ದರು ಆದ್ದರಿಂದ ತಮ್ಮ ಚರಿತ್ರೆಯಲ್ಲಿ ಅವರನ್ನು ಕ್ರೂರಿಗಳು, ಧರ್ಮಾಂಧರು ಎಂದು ಚಿತ್ರಿಸಲಾಯಿತು. ಅದು ಮುಂದುವರೆಯುತ್ತಾ ಬಂದು ಬಲಪಂಥೀಯ ಇತಿಹಾಸಕಾರರು ಆತ ಮುಸ್ಲಿಂ ಆಗಿದ್ದ ಕಾರಣಕ್ಕೆ ಅನೇಕ ಆರೋಪಗಳನ್ನು ಹೊರಿಸಿದರು. ಅವು ಇಂದಿಗೂ ಮುಂದುವರೆಯುತ್ತಿವೆ. ಆದ್ದರಿಂದ ಇತಿಹಾಸಕ್ಕೆ ನಿಷ್ಟರಾದ ವಿದ್ವಾಂಸರ, ಇತಿಹಾಸಕಾರರ ಬರಹಗಳು ಮಾತ್ರ ನಮ್ಮ ಗೊಂದಲಗಳನ್ನು ಬಗೆಹರಿಸಬಲ್ಲವು. ಆದ್ದರಿಂದ ಸಧ್ಯ ಟಿಪ್ಪು ಸುಲ್ತಾನ್‌ ಖಡ್ಗದ ಮೇಲೆ ಹಿಂದೂ ವಿರೋಧಿ ಬರಹವಿದೆ ಎಂಬುದು ಸುಳ್ಳು.


ಇದನ್ನು ಓದಿ: Fact Check: ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: ರೈಲಿನಿಂದ ನಮಾಜ್‌ಗೆ ತೊಂದರೆಯೆಂದು ರೈಲು ನಿಲ್ದಾಣ ಧ್ವಂಸ ಎಂಬುದು ಸುಳ್ಳು | Namaz | Murshidabad | Fact Check |


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *