Fact Check: ಅಂಬೇಡ್ಕರ್‌ರವರು ತಮ್ಮ ಚುನಾವಣಾ ಏಜೆಂಟ್ ಆಗಿ RSS ಕಾರ್ಯಕರ್ತನನ್ನು ನೇಮಿಸಿದ್ದರು ಎಂಬುದು ಸುಳ್ಳು

ಚುನಾವಣಾ

ವಿಶ್ವದ ಮಹಾಜ್ಞಾನಿಗಳಲ್ಲಿ ಒಬ್ಬರೆನಿಸಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ಮತ್ತು ಅವರು ಪ್ರತಿನಿಧಿಸಿದ ಸಮುದಾಯವನ್ನು ತಮ್ಮ ಪರವಾಗಿ ಓಲೈಸಿಕೊಳ್ಳಲು ಭಾರತದ ಹಲವು ರಾಷ್ಟ್ರೀಯ ಪಕ್ಷಗಳು, ಸಿದ್ದಾಂತಿಗಳು ಪ್ರತಿನಿತ್ಯ ಪ್ರಯತ್ನಿಸುತ್ತಿದ್ದಾರೆ. ಅಂದು ಅಂಬೇಡ್ಕರ್‌ರವರನ್ನು ತೀವ್ರವಾಗಿ ಟೀಕಿಸಿ, ಅಪಪ್ರಚಾರ ಮಾಡಿದವರೇ ಇಂದು ಅಂಬೇಡ್ಕರ್‌ ಅವರನ್ನು ರಾಜಕೀಯ ಮತ್ತು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ.

ಈಗ, 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಂಬೇಡ್ಕರರ ವಿರುದ್ಧ ನೆಹರೂರವರು ತಮ್ಮ ಸ್ವತಃ ಸಹಾಯಕನನ್ನೇ ಕಣಕ್ಕಿಳಿಸಿ ಅಂಬೇಡ್ಕರರನ್ನು ಸೋಲಿಸಿದ್ದರು. ಹಾಗೂ 1954ರ ಉಪಚುನಾವಣೆಯಲ್ಲಿ ಅಂಬೇಡ್ಕರ್ ಅವರು ತಮ್ಮ ಚುನಾವಣಾ ಏಜೆಂಟ್ ಆಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ದತ್ತೋಪಂತ ಠೇಂಗಡಿಯವರನ್ನು ನೇಮಿಸಿದ್ದರು ಎಂಬ 2017ರ ವಿಕ್ರಮ ಪತ್ರಿಕೆಯ ಬರಹವನ್ನು ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸಲಾಗುತ್ತಿದೆ.

ಆರ್‌ಎಸ್‌ಎಸ್
ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ 2017ರ ವಿಕ್ರಮ ಪತ್ರಿಕೆಯ ಬರಹ

ಈ ಹಿಂದೆ ಅಂಬೇಡ್ಕರರು ಆರ್‌ಎಸ್‌ಎಸ್‌ ಶಾಖೆಯೊಂದಕ್ಕೆ ಭೇಟಿ ನೀಡಿದ್ದರು ಎಂಬ ಆಧಾರ ರಹಿತ ಸುಳ್ಳನ್ನು ಹಂಚಿಕೊಳ್ಳಲಾಗುತ್ತಿತ್ತು. ಈ ವಿಷಯದ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌  ಲೇಖನವನ್ನು ನೀವು ಇಲ್ಲಿ ಓದಬಹುದು.

ಡಾ. ಅಂಬೇಡ್ಕರ್‌ ಮತ್ತು ಆರ್‌ಎಸ್‌ಎಸ್‌ಗೆ  ಸಂಬಂಧಿಸಿದಂತೆ ಮೊದಲ ಲೇಖನ ಪ್ರಕಟವಾಗಿದ್ದು,  23 ಏಪ್ರೀಲ್ 2020ರಲ್ಲಿ ದಿ ಪ್ರಿಂಟ್‌ ವೆಬ್‌ಸೈಟ್‌ನಲ್ಲಿ ರಾಜಿವ್ ತುಲಿ ಎಂಬ RSS ಕಾರ್ಯಕರ್ತ ಬರೆದ ಲೇಖನದಿಂದ. ಈ ಲೇಖನದಲ್ಲಿ ರಾಜಿವ್ ತುಲಿಯವರು 1954ರ ಉಪಚುನಾವಣೆಯಲ್ಲಿ ಅಂಬೇಡರ್‌ರವರ ಶೆಡ್ಯೂಲ್ ಕಾಸ್ಟ್‌ ಫೆಡರೇಷನ್ ಪಕ್ಷವು ಭಾರತೀಯ ಜನಸಂಘದೊಟ್ಟಿಗೆ ಮೈತ್ರಿ ಮಾಡಿಕೊಂಡಿತ್ತು. ಮತ್ತು ಬಂಢಾರ ಕ್ಷೇತ್ರದ ಚುನಾವಣಾ ಬೂತ್ ಒಂದರ ಎಲೆಕ್ಷನ್ ಏಜೆಂಟ್ ಆಗಿ ಅಂಬೇಡ್ಕರರು ಆರ್‌ಎಸ್‌ಎಸ್‌ನ ಕಾರ್ಯಕರ್ತ ದತ್ತೋಪಂತ ಠೇಂಗಡಿಯವರನ್ನು ನೇಮಿಸಿಕೊಂಡಿದ್ದರು ಎಂದಿದ್ದಾರೆ. ಇನ್ನೂ ಮುಂದುವರೆದು “ಒಮ್ಮೆ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಶನ್ ಜೊತೆಗೆ ಸಂಬಂಧ ಹೊಂದಿರುವ ಕೆಲವು ದಲಿತ ನಾಯಕರ ಗುಂಪು, ದತ್ತೋಪಂತ ಠೇಂಗಡಿ ಎಂಬ ಬ್ರಾಹ್ಮಣನನ್ನು ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಏಕೆ ನೇಮಿಸಿದ್ದೀರಿ ಎಂದು ಕೇಳಿದರು. ಅದಕ್ಕೆ ಪ್ರತಿಯಾಗಿ ‘ನಿಮ್ಮಲ್ಲಿ ಯಾರಾದರೂ ಠೇಂಗಡಿಗಿಂತ ದೊಡ್ಡ ದಲಿತರಾದ ದಿನ, ನಾನು ನಿಮ್ಮನ್ನು ಒಕ್ಕೂಟದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುತ್ತೇನೆ’ ಎಂದು ಅಂಬೇಡ್ಕರರು ಹೇಳಿದ್ದರು ಎಂದಿದ್ದಾರೆ. ಇದನ್ನೆಲ್ಲ ಅವರು ಮೌಖಿಕ ಇತಿಹಾಸದ ಆಧಾರದ ಮೇಲೆ ಬರೆದಿರುವುದಾಗಿ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಆದ್ದರಿಂದ  ಇದರ ಸತ್ಯಾಸತ್ಯತೆಯನ್ನು ತಿಳಿಯೋಣ ಬನ್ನಿ.

ಫ್ಯಾಕ್ಟ್‌ಚೆಕ್: 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಂಬೇಡ್ಕರರವರು ಬಾಂಬೆ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಸ್ವರ್ಧಿಸಿದ್ದರು. ಆಗ ಅಂಬೇಡ್ಕರ್‌ರವರ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದವರು ನಾರಾಯಣ ಸದೊಬ ಕಾಜ್ರೋಲ್ಕರ್. ಇವರು ಈ ಹಿಂದೆ ಅಂಬೇಡ್ಕರರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆಯೇ ಹೊರತು ನೆಹರುರವರಿಗೆ ಅಲ್ಲ. ಅಂದು ಅಂಬೇಡ್ಕರ್ ಜೊತೆಗೆ ಮೈತ್ರಿ ಮಾಡಿಕೊಂಡ ಏಕೈಕ ಪಕ್ಷ ಅಶೋಕ್ ಮೆಹ್ತಾರವರ ನೇತೃತ್ವದ ಸೋಷಿಯಲಿಸ್ಟ್ ಪಾರ್ಟಿ.

ಇನ್ನೂ 1954ರ ಭಂಡಾರ ಉಪಚುನಾವಣೆಯಲ್ಲಿ ಭಾರತೀಯ ಜನಸಂಘ ಅಂಬೇಡ್ಕರವರನ್ನು ಬೆಂಬಲಿಸಿತ್ತು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಆರ್‌ಎಸ್‌ಎಸ್‌ ಹಿಂದುಮಹಾಸಭಾ ಮತ್ತು ಭಾರತೀಯ ಜನಸಂಘದ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿತ್ತೇ ವಿನಃ ಅಂಬೇಡ್ಕರ್‌ರವರನ್ನು ಅಲ್ಲ. ಅಂಬೇಡ್ಕರ್ ಜೊತೆಗೆ ಮೈತ್ರಿ ಮಾಡಿಕೊಂಡ ಏಕೈಕ ಪಕ್ಷ ಅಶೋಕ್ ಮೆಹ್ತಾ ನಾಯಕತ್ವದ ಸೋಷಿಯಲಿಸ್ಟ್ ಪಾರ್ಟಿ. ಆ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿಂದೂ ಮಹಾಸಭಾ ಅಭ್ಯರ್ಥಿಯನ್ನು ಬೆಂಬಲಿಸಿತ್ತು.

ಈ ಕುರಿತು ವೇಲಿವಾಡ ಎಂಬ ಅಂಬೇಡ್ಕರ್‌ವಾದಿ ಮಾಧ್ಯಮವೊಂದರಲ್ಲಿ ರಾಜೀವ್ ತುಲಿಯವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿರುವ ಅಂಬೇಡ್ಕರ್ ಅನುಯಾಯಿ ಮತ್ತು ಅಂಬೇಡ್ಕರ್ ಅವರ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಶನ್‌ನ ಕಾರ್ಯಕರ್ತ ರಾಜಭಾವು ಖೋಬ್ರಗಡೆಯವರ ಮುಮ್ಮಗ ದೀಪಾಂಕರ್ ಕಾಂಬ್ಳೆಯವರು ಫ್ಯಾಕ್ಟ್ ಚೆಕ್ ಲೇಖನ ಪ್ರಕಟಿಸಿದ್ದಾರೆ.

ಆ ಲೇಖನದಲ್ಲಿ ಅವರು, ‘ನನ್ನ ತಾಯಿಯ ಅಜ್ಜ ರಾಜಭಾವು ಖೋಬ್ರಗಡೆಯವರ ಜೀವನ ಚರಿತ್ರೆಯನ್ನು ಪ್ರೊಫೆಸರ್ ಝಂಜಲ್ ಅವರು ಬರದಿದ್ದಾರೆ. ಅದರಲ್ಲಿ ಡಾ.ಅಂಬೇಡ್ಕರ್ ಅವರು ರಾಜಾಭಾವು ಅವರನ್ನು ಭಂಡಾರ ವಲಯದ ಉಸ್ತುವಾರಿಯನ್ನಾಗಿ ಮಾಡಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಏಕೆಂದರೆ ರಾಜಾಭಾವು ಆಗ ವಿದರ್ಭ ಪ್ರದೇಶದಲ್ಲಿ ಶೆಡ್ಯೂಲ್ಡ್ ಕ್ಯಾಸ್ಟ್  ಫೆಡರೇಶನ್‌ನ ಪದಾಧಿಕಾರಿಯಾಗಿದ್ದರು’ ಎಂದು ಪ್ರತಿಪಾದಿಸಿದ್ದಾರೆ.

ಇನ್ನೂ ಬಾಂಬೆ ಮಿರರ್ ಸಹ “ಅಂಬೇಡ್ಕರ್ ರಂತಹ ಮೇಧಾವಿ ಮತ್ತು ಜನನಾಯಕ ಚುನಾವಣೆಗಳನ್ನು ಏಕೆ ಸೋಲಬೇಕಾಯ್ತು ?” ಇದು ಹೇಗೆ ಪ್ರಜಾಪ್ರಭುತ್ವ ಭಾರತದ ಸೋಲಾಗಿದೆ ಎಂದು ಅಂಬೇಡ್ಕರ್‌ರವರ ರಾಜಕೀಯ ಮತ್ತು ಚುನಾವಣಾ ಹೋರಾಟದ ಕುರಿತು ಲೇಖನ ಪ್ರಕಟಿಸಿದೆ. ಇವುಗಳಲ್ಲಿ ಎಲ್ಲಿಯೂ RSS ಆಗಲಿ, ಭಾರತೀಯ ಜನ ಸಂಘವೇ ಆಗಲಿ ಅಂಬೇಡ್ಕರ್‌ ಅವರಿಗೆ ಬೆಂಬಲ ಸೂಚಿಸಿದ ಉಲ್ಲೇಖವಿಲ್ಲ. ರಾಜೀವ್ ತುಲಿಯವರು, ಆರ್‌ಎಸ್‌ಎಸ್‌ನ ಅಗ್ರನಾಯಕರಾಗಿದ್ದ ದತ್ತೋಪಂತ್ ಥೆಂಗಾಡಿ ಅವರು ಬರೆದ “ಡಾ.ಅಂಬೇಡ್ಕರ್ ಔರ್ ಸಮಾಜಿಕ ಕ್ರಾಂತಿ ಕಿ ಯಾತ್ರಾ” ಪುಸ್ತಕದ ಆಧಾರದಲ್ಲಿ  ಮೇಲೆ ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಆದರೆ ಈ ಬಲಪಂಥೀಯ ಏಕೈಕ ಕೃತಿಯು ಅಂಬೇಡ್ಕರರು RSS ಶಾಖೆಗೆ ಭೇಟಿ ನೀಡಿದ್ದರು, ತಮ್ಮ ಚುನಾವಣಾ ಏಜೆಂಟ್ ಆಗಿ RSSನ ಕಾರ್ಯಕರ್ತ ದತ್ತೋಪಂತ ಠೇಂಗಡಿಯವರನ್ನು ನೇಮಿಸಿದ್ದರು ಎಂದು ಆಧಾರರಹಿತವಾಗಿ ಬರೆಯಲ್ಪಟ್ಟಿದೆ ಹೊರತು ಯಾವುದೇ ಅಧಿಕೃತ  ದಾಖಲೆಗಳನ್ನು ಒಳಗೊಂಡಿಲ್ಲ.

ಅಂಬೇಡ್ಕರ್‌ರವರು ಬದುಕಿದ ಸಂದರ್ಭದಲ್ಲೇ ಅವರಿಂದ ಮಾಹಿತಿ ಪಡೆದು ಜೀವನ ಚರಿತ್ರೆ ರಚಿಸಿದ ಧನಂಜಯ್ ಕೀರ್‌ರವರ ಪುಸ್ತಕ “ಡಾ. ಬಾಬಾಸಾಹೇಬ್ ಅಂಬೇಡ್ಕರ್‌” ಪುಸ್ತಕದಲ್ಲಿ ಎಲ್ಲಿಯೂ ಇದರ ಉಲ್ಲೇಖವಿಲ್ಲ. ಇನ್ನು ಅಂಬೇಡ್ಕರ್‌ವರ ಆಪ್ತ ಸಹಾಯಕ ನಾನಕ್ ಚಂದ್ ರತ್ತು ರವರು ಬರೆದಿರುವ “Reminiscences and remembrances of Dr. B.R. Ambedkar” ಪುಸ್ತಕದಲ್ಲಿಯೂ ಸಹ ಅಂಬೇಡ್ಕರ ಚುನಾವಣಾ ಏಜೆಂಟ್ ಬಗ್ಗೆ ಉಲ್ಲೇಖವಿಲ್ಲ.

ಡಾ. ಅಂಬೇಡ್ಕರ್‌ರವರು ತಮ್ಮ ಪ್ರಬುದ್ಧ ಭಾರತದಲ್ಲಿ ವಿ .ಡಿ ಸಾವರ್ಕರ್‌ರವರನ್ನು ಟೀಕಿಸಿ ಬರೆದ ಲೇಖನ.

ಈಗಾಗಲೇ ಅಂಬೇಡ್ಕರ್‌ರವರ ಜೀವಿತಾವದಿಯಲ್ಲಿ ಮಾಡಿದ ಭಾಷಣಗಳು ಮತ್ತು ಅವರ ಬರವಣಿಗೆಗಳನ್ನೆಲ್ಲಾ ಸಂಗ್ರಹಿಸಿದ “ಅಂಬೇಡ್ಕರ್ ಭಾಷಣ ಮತ್ತು ಬರಹಗಳು” ಸರಣಿಯಲ್ಲಿ ಸಹ ಇದರ ವಿವರಗಳಿಲ್ಲ. ಹಿಂದು ಧರ್ಮದ, RSS ಮತ್ತು ಹಿಂದು ಮಹಾಸಭಾದ ಕಟುವಿಮರ್ಶಕರಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್‌ ರವರು ತಮ್ಮ ಮೂಕ ನಾಯಕ, ಬಹಿಷ್ಕೃತ ಭಾರತ ಮತ್ತು ಪ್ರಬುದ್ಧ ಭಾರತದಲ್ಲಿ ಹಿಂದು ಧರ್ಮದಲ್ಲಿ ಆಚರಿಸಲ್ಪಡುತ್ತಿರುವ ಅನಿಷ್ಟ ಪದ್ದತಿಗಳ, ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣವಾದದ ವಿರುದ್ದ ಸರಣಿ ಲೇಖನಗಳನ್ನು ಪ್ರಕಟಿಸಿದ್ದರು. ಕೊನೆಗೆ ಹಿಂದು ಧರ್ಮ ತೊರೆದು ಬೌದ್ದ ಧರ್ಮವನ್ನು ಅನುಸರಿಸಿದರು. ಆದ್ದರಿಂದ ಅಂಬೇಡ್ಕರ್ ಅವರು ತಮ್ಮ ಚುನಾವಣಾ ಏಜೆಂಟ್ ಆಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ದತ್ತೋಪಂತ ಠೇಂಗಡಿಯವರನ್ನು ನೇಮಿಸಿದ್ದರು ಎಂಬುದು ಸುಳ್ಳು.


ಇದನ್ನು ಓದಿ: Fact Check: ಡಾ. ಬಿ.ಆರ್ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *