ಚರ್ಚ್-ಮಸೀದಿಗೆ ಕಡಿಮೆ ವಿದ್ಯುತ್ ದರ, ದೇವಾಸ್ಥಾನಗಳಿಗೆ ಹೆಚ್ಚಿನ ವಿದ್ಯುತ್ ದರ ಎಂಬುದು ಸುಳ್ಳು

ನಮ್ಮ ರಾಜ್ಯದಲ್ಲಿನ ವಿದ್ಯುತ್ ನಿಗಮ ಮಂಡಳಿಯು ಚರ್ಚ್-ಮಸೀದಿಗೆ ಕಡಿಮೆ ವಿದ್ಯುತ್ ದರ, ದೇವಾಸ್ಥಾನಗಳಿಗೆ ಹೆಚ್ಚಿನ ವಿದ್ಯುತ್ ದರ ವಿಧಿಸಿ ಎಂದು ಆಪಾದಿಸಿ ಪೋಸ್ಟ್ ಒಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಅದು ಈ ಕೆಳಗಿನಂತಿದೆ…

“ವಿದ್ಯುತ್ ದರಗಳು
ಸಾಮಾನ್ಯ ನಾಗರಿಕರಿಗೆ ಪ್ರತಿ ಘಟಕಕ್ಕೆ ರೂ.7.85.
ಮಸೀದಿಗೆ 1.85 ರೂ
ಚರ್ಚ್‌ಗೆ 1.85 ರೂ
ದೇವಸ್ಥಾನಕ್ಕೆ 7.85 ರೂ.
ಇದು ನಮ್ಮ ಜಾತ್ಯತೀತ ಭಾರತ.

ಮಸೀದಿ ಖಾಸಗಿ ಆಸ್ತಿಯಾಗಿದ್ದರೆ, ಸರ್ಕಾರವು ಧರ್ಮಗುರುಗಳಿಗೆ ಏಕೆ ಸಂಬಳ ನೀಡುತ್ತದೆ?

ದೇವಸ್ಥಾನ ಸರ್ಕಾರಿ ಆಸ್ತಿಯಾಗಿದ್ದರೆ ಅರ್ಚಕರಿಗೆ ಸರ್ಕಾರಿ ಸಂಬಳ ಏಕೆ ಸಿಗುವುದಿಲ್ಲ? ಈ ಲಿಂಕ್ ಅನ್ನು ಸೇರಿಸಲು ನಿಮ್ಮ 5 ಹಿಂದೂ ಸಹೋದರ ಸಹೋದರಿಯರಿಗೆ ಕಳುಹಿಸಿ” ಎಂದು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್ ಚೆಕ್

ಕರ್ನಾಟಕದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ), ಮಂಗಳೂರು ವಿದ್ಯುತ್ ಸರಬರಾಜು ನಿಗಮ (ಮೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ, (ಹೆಸ್ಕಾಂ), ಗುಲ್ಬರ್ಗ ವಿದ್ಯುತ್ ಸರಬರಾಜು ನಿಗಮ (ಜೆಸ್ಕಾಂ), ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC) ದಂತಹ ವಿಭಾಗಗಳಿವೆ. ಈ ವಿಭಾಗಗಳು Low tension supply ಮತ್ತು High tension supply ಎಂಬ ಎರಡು ವಿಭಾಗಗಳ ಅಡಿಯಲ್ಲಿ ವಿದ್ಯುತ್ ದರ ನಿಗದಿ ಮಾಡುತ್ತವೆ.

ಧಾರ್ಮಿಕ ಸಂಸ್ಥೆಗಳು Low tension supply ವಿಭಾಗದ LT-2(a) ಎಂಬ ಉಪವರ್ಗದ ಅಡಿಯಲ್ಲಿ ಬರುತ್ತವೆ. ಇವುಗಳಲ್ಲದೆ ಆಸ್ಪತ್ರೆಗಳು, ಔಷಧಾಲಯಗಳು, ಅಗ್ನಿಶಾಮಕ ಕೇಂದ್ರಗಳು, ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಡೆಸುವ ಆರೋಗ್ಯ ಕೇಂದ್ರಗಳು, ವೇರ್ ಹೌಸ್, ಪುನರ್ವಸತಿ ಕೇಂದ್ರಗಳಂತಹ ಸಂಸ್ಥೆಗಳು ಇದೇ ವರ್ಗದಲ್ಲಿ ಬರಲಿದ್ದು, ಇವುಗಳಿಗೆ ಕಡಿಮೆ ವಿದ್ಯುತ್ ದರ ಅನ್ವಯವಾಗುತ್ತದೆ.

“ಇಲ್ಲಿ ಧಾರ್ಮಿಕ ಸಂಸ್ಥೆಗಳು ಅಂದರೆ ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು, ಗುರುದ್ವಾರಗಳು, ಆಶ್ರಮಗಳು, ಮಠಗಳು ಮತ್ತು ಧಾರ್ಮಿಕ/ದತ್ತಿ ಸಂಸ್ಥೆಗಳು ಸೇರಿವೆ ಮತ್ತು ಎಲ್ಲಕ್ಕೂ ಒಂದೇ ಸಮಾನ ದರ ವಿಧಿಸಲಾಗುತ್ತದೆ” ಎಂದು ಬೆಸ್ಕಾಂನ ಸುಂಕದ ಆದೇಶದಲ್ಲಿ ಉಲ್ಲೇಖಿಸಿದೆ.

BESCOM ನ ವಿದ್ಯುತ್ ದರದ ಆದೇಶಗಳನ್ನು ನಾವು ಕಾಣಬಹುದು. ಅದರಂತೆ 50 KW ವರೆಗೆ 110ರೂ ಮತ್ತು ಪ್ರತಿ ಹೆಚ್ಚುವರಿ KW ಗೆ 210 ರೂ ದರ ನಿಗಧಿಪಡಿಲಾಗಿದೆ. ಅಲ್ಲದೇ ಪ್ರತಿ ಯೂನಿಟ್‌ಗೆ (ಗಂಟೆಗೆ ಕಿಲೋ-ವ್ಯಾಟ್) 4.75 ರೂ ದರ ಇದ್ದು, ಬಳಕೆ ಮಿತಿ 100 ಯೂನಿಟ್‌ಗಳನ್ನು ಮೀರಿದರೆ ಎಲ್ಲಾ ಯೂನಿಟ್‌ಗಳಿಗೆ 7 ರೂ ದರ ವಿಧಿಸಲಾಗುತ್ತದೆ. ಇದು ದೇವಸ್ಥಾನ, ಮಸೀದಿ ಮತ್ತು ಚರ್ಚ್‌ ಎಲ್ಲಕ್ಕೂ ಅನ್ವಯವಾಗುತ್ತದೆ.

ಒಂದು ವೇಳೆ ಧಾರ್ಮಿಕ ಸಂಸ್ಥೆಗಳು ಕಲ್ಯಾಣ ಮಂಟಪ, ಅತಿಥಿ ಗೃಹದಂತೆ ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್ ಬಳಕೆ ಮಾಡಿದರೆ ಅದು High tension supply ವಿಭಾಗದ HT-4 ಸುಂಕಗಳು ಎಂಬ ಉಪವರ್ಗದ ಅಡಿಯಲ್ಲಿ ಬರುತ್ತದೆ.

ಆದರೆ ಯಾವುದೇ  ಧಾರ್ಮಿಕ ಸಂಸ್ಥೆಗಳನ್ನು (ದೇವಸ್ಥಾನ, ಚರ್ಚ್ ಮತ್ತು ಮಸೀದಿ) ಧರ್ಮದ ಆಧಾರದಲ್ಲಿ ಅಳೆಯದೇ ಒಂದೇ ರೀತಿಯ ವಿದ್ಯುತ್ ದರ ನಿಗದಿ ಮಾಡುವ ವರ್ಗೀಕರಣನ್ನು ಮಾಡಲಾಗಿದೆ. ಇದರಲ್ಲಿ ಯಾವುದೇ ತಾರತಮ್ಯ ನಡೆಯುವುದಿಲ್ಲ ಎಂದು ಬೆಸ್ಕಾಂ ಹೇಳಿದೆ. ಹಾಗಾಗಿ ಚರ್ಚ್-ಮಸೀದಿಗೆ ಕಡಿಮೆ ವಿದ್ಯುತ್ ದರ, ದೇವಾಸ್ಥಾನಗಳಿಗೆ ಹೆಚ್ಚಿನ ವಿದ್ಯುತ್ ದರ ಎಂಬುದು ಸುಳ್ಳು.


ಇದನ್ನೂ ಓದಿ; ಅಜಿತ್ ಹನುಮಕ್ಕನವರ್ ಹೇಳಿದ್ದು ಸುಳ್ಳು: ಟಿಪ್ಪು ಖಡ್ಗದ ಮೇಲೆ ‘ಕಾಫೀರರ ಮೇಲೆ ಸಿಡಿಲಿನಂತೆ ಎರಗುವ ಖಡ್ಗ’ ಎಂದು ಬರೆದಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *