ಕೇರಳ ಪೋಲಿಸರು ಶಬರಿಮಲೆಗೆ ತೆರಳುತ್ತಿದ್ದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ ಎಂಬುದು ಸುಳ್ಳು

Sabarimala

ಶಬರಿಮಲೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸಾಕಷ್ಟು ಸುಳ್ಳು ಸುದ್ದಿಗಳು, ಸುಳ್ಳು ಪ್ರತಿಪಾದನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಶಬರಿಮಲೆಯಲ್ಲಿರುವ ವಾವರ್ ಸ್ವಾಮಿ ಮಸೀದಿಯ ಕುರಿತು ಅಪಪ್ರಚಾರ ಮಾಡಿ ಅನೇಕ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿತ್ತು. ಈಗ ಕೇರಳದ ಕಮುನಿಸ್ಟ್‌ ಸರ್ಕಾರ ಮತ್ತು ಇಂಡಿಯಾ ಒಕ್ಕೂಟವನ್ನು ಅಲ್ಲಗೆಳೆಯುವ ಸಲುವಾಗಿ  “ಕೇರಳದಲ್ಲಿ ಹಿಂದುಗಳ ಪರಿಸ್ಥಿತಿ ಹೇಗಿದೆ ನೋಡಿ. ಮಕ್ಕಳು ಎಂಬುದನ್ನು ಲೆಕ್ಕಿಸದೆ ಶಬರಿಮಲೆಗೆ ತೆರಳುತ್ತಿದ್ದ ಬಾಲಕನನ್ನು ಕೇರಳ ಪೋಲಿಸರು ತಮ್ಮ ವಶಕ್ಕೆ ಪಡೆದಿದ್ದಾರೆ.” ಎಂಬ ಸಂದೇಶದ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಇದನ್ನು ಮಾಜಿ ಸಚಿವ ಸಿ.ಟಿ ರವಿ, ಬಲಪಂಥೀಯ ಕಾರ್ಯಕರ್ತ ಮಿಸ್ಟರ್ ಸಿನ್ಹ ಸೇರಿದಂತೆ ಹಲವಾರು ಬಿಜೆಪಿ ನಾಯಕರು, ಕಾರ್ಯಕರ್ತರು ಈ ವಿಡಿಯೋವನ್ನು ತಮ್ಮ ವಾಲ್‌ನಲ್ಲಿ ಹಂಚಿಕೊಂಡಿದ್ದಾರೆ. ಮಿಸ್ಟರ್ ಸಿನ್ಹರವರು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುತ್ತಿರುವುದನ್ನು ಅನೇಕ ಫ್ಯಾಕ್ಟ್‌ಚೆಕ್‌ ಮಾಧ್ಯಮಗಳು ಹೀಗಾಗಲೇ ವರದಿ ಮಾಡಿವೆ.ಫ್ಯಾಕ್ಟ್‌ಚೆಕ್: ಶಬರಿಮಲೆಯ ಮಂಡಲ ತೀರ್ಥಯಾತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಾಲಕನೊಬ್ಬ ತನ್ನ ತಂದೆಯಿಂದ ಬೇರ್ಪಟ್ಟು ಗಾಭರಿಗೊಂಡು ಅಳುತ್ತಿರುವ ವಿಡಿಯೋ ಇದಾಗಿದೆ. ತಕ್ಷಣ ಸಹಾಯಕ್ಕೆ ಬಂದ ಪೋಲೀಸ್ ಒಬ್ಬರು ಆತನ ತಂದೆಯನ್ನು ಹುಡುಕಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ವಿಡಿಯೋದಲ್ಲಿ ತೋರಿಸಲಾಗಿರುವ ಬಸ್ ಖಾಸಗಿ ಬಸ್ ಆಗಿದ್ದು ಪೋಲಿಸ್ ವಾಹನ ಅಲ್ಲ. ಈ ಘಟನೆಯನ್ನು ಏಷ್ಯನ್‌ನೆಟ್ ನ್ಯೂಸ್‌ ವರದಿಮಾಡಿದೆ. ಪೂರ್ತಿ ವಿಡಿಯೋದಲ್ಲಿ ಪೋಲಿಸರು ಬಾಲಕನಿಗೆ ಸಮಾಧಾನ ಹೇಳುವುದನ್ನು ನೋಡಬಹುದು ಮತ್ತು ತನ್ನ ತಂದೆ ದೊರಕಿದ ಬಳಿಕ ಆತ ಕೈಮುಗಿದು ಪೋಲೀಸರಿಗೆ ಧನ್ಯವಾದ ತಿಳಿಸುವುದನ್ನು ನೋಡಬಹುದು. ಈ ಬಾರಿ ಶಬರಿಮಲೆಯ ಮಂಡಲ ತೀರ್ಥಯಾತ್ರೆ ನವೆಂಬರ್ 17, 2023 ರಿಂದ ಪ್ರಾರಂಭವಾಗಿ ಡಿಸೆಂಬರ್ 27, 2023 ರಂದು ಕೊನೆಗೊಳ್ಳಲಿದೆ. ಆಗಾಗಿ ಲಕ್ಷಾಂತರ ಜನರು ಈ ಮಂಡಲ ತೀರ್ಥಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದು ಮೂಲಭೂತ ಸೌಕರ್ಯ ಕಲ್ಪಿಸುವುದೇ ಕೇರಳ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಇದೇ ಡಿಸೆಂಬರ್ 10, 2023 ರಂದು ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆಗೆ ತೆರಳುತ್ತಿದ್ದಾಗ 10 ವರ್ಷದ ಬಾಲಕಿ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾ ಸಹ ವರದಿ ಮಾಡಿದೆ. ಯಾತ್ರಾರ್ಥಿಗಳ ಭಾರಿ ದಟ್ಟಣೆಯನ್ನು ಸರಿದೂಗಿಸುವ ಸಲುವಾಗಿ, ರಾಜ್ಯ ಸರ್ಕಾರವು ದರ್ಶನದ ಸಮಯವನ್ನು ಪ್ರತೀದಿನ ಒಂದು ಗಂಟೆ ವಿಸ್ತರಿಸಿದೆ.

ಆದ್ದರಿಂದ ಸಿ.ಟಿ ರವಿಯವರನ್ನು ಸೇರಿದಂತೆ ಬಿಜೆಪಿ ಬೆಂಬಲಿಗರು ಪ್ರತಿಪಾದಿಸುತ್ತಿರುವಂತೆ ಕೇರಳದ ಕಮುನಿಸ್ಟ್‌ ಸರ್ಕಾರ ಪೋಲಿಸ್ ಇಲಾಖೆ ಬಳಸಿ ಶಬರಿಮಲೆಗೆ ತೆರಳುವ ಯಾವುದೇ ಭಕ್ತರನ್ನು ತಡೆದಿಲ್ಲ. ಮತ್ತು ಯಾವುದೇ ಬಾಲಕನನ್ನು ತಮ್ಮ ವಶಕ್ಕೆ ಪಡೆದಿಲ್ಲ. ಇಂತಹ ಕೋಮು ಸೌಹಾರ್ಧ ಕದಡುವ ಸುಳ್ಳು ಸುದ್ದಿಗಳಿಂದ ಎಚ್ಚರವಹಿಸಿರಿ. 


ಇದನ್ನು ಓದಿ: Fact Check | ವೈರಲ್ ಅಶ್ಲೀಲ ಫೋಟೊಗಳು ಅಯೋಧ್ಯೆಯ ರಾಮಮಂದಿರದ ಅರ್ಚಕ ಮೋಹಿತ್‌ ಪಾಂಡೆಯವರದ್ದಲ್ಲ


ವಿಡಿಯೋ ನೋಡಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎಡಿಟ್ ವಿಡಿಯೋ ಹಂಚಿ ಸುಳ್ಳು ಸಾರಿದ BJP ನಾಯಕರು | Siddaramaiah


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *