ಡಿ.31ರೊಳಗೆ ಗ್ಯಾಸ್ ಏಜೆನ್ಸಿ ಬಳಿ KYC ಮಾಡಿಸದ್ದರೆ ಸಿಲಿಂಡರ್ 1400 ರೂ ಆಗುತ್ತದೆ ಎಂಬುದು ಸುಳ್ಳು

“ನೆನೆಪಿಗೆ ತುರ್ತು. ಡಿಸೆಂಬರ್ 31 ರ ಒಳಗಡೆ ಗ್ಯಾಸ್ ಸಂಪರ್ಕ ಇದ್ದವರು ತಮ್ಮ ಅದಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಗ್ಯಾಸ್ ಏಜೆನ್ಸಿ ನೀಡಿದ ಪುಸ್ತಕ ಅಥವಾ ಕಾರ್ಡ್ ಮೂರನ್ನು ತೆಗೊಂಡು ತಮ್ಮ ಗ್ಯಾಸ್ ನೀಡುವ ಎಜೆನ್ಸಿ ಬಳಿ ಹೋಗಿ KYC ಮಾಡಿಸಬೇಕು. ಮಾಡಿಸಿದರೆ ನಿಮಗೆ ಜನವರಿ 1 ರಿಂದ ಸಬ್ಸಿಡಿ ಬರುತ್ತದೆ. ಈಗ ಇರುವ ಸಿಲಿಂಡರ್ ಗೆ 903 ರಿಂದ 500 ಸಿಗುತ್ತದೆ. Kyc ಮಾಡದಿದ್ದರೆ ಸಬ್ಸಿಡಿ ರಹಿತವಾಗಿ ಕಮರ್ಷಿಯಲ್ ಆಗಿ ಮಾರ್ಪಟ್ಟು 1400 ಕ್ಕೆ ಪಡೆದುಕೊಳ್ಳಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ಯಾಸ್ ಏಜೆನ್ಸಿಗೆ ಸಂಪರ್ಕಿಸಿರಿ” ಎಂಬ ಸಂದೇಶ ವಾಟ್ಸಾಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಒನ್ ಇಂಡಿಯಾ ಕನ್ನಡ ಸೇರಿದಂತೆ ಹಲವು ಮಾಧ್ಯಮಗಳು ಇದೇ ದಾಟಿಯಲ್ಲಿ ವರದಿ ಮಾಡಿವೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಕನ್ನಡ ಫ್ಯಾಕ್ಟ್ ಚೆಕ್ ತಂಡವು ಇಂಡೇನ್ ಗ್ಯಾಸ್ ಸರಬರಾಜು ಮಾಡುವ ಕವಿತಾ ಎಂಟರ್‌ಪ್ರೈಸಸ್ ಗ್ಯಾಸ್ ಏಜೆನ್ಸಿಯ ನಿರ್ವಾಹಕರಾದ ವೆಂಕಟೇಶ್ ರವರಿಗೆ ಫೋನ್ ಮಾಡಿ ವೈರಲ್ ಸಂದೇಶದ ಬಗ್ಗೆ ಸ್ಪಷ್ಟೀಕರಣ ಕೇಳಲಾಯಿತು. ಅವರು, “ಉಜ್ವಲ ಯೋಜನೆಯಡಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಮಾತ್ರ ಡಿಸೆಂಬರ್ 31ರೊಳಗೆ KYC ಮಾಡಿಸಬೇಕು. ಉಳಿದ ಗ್ರಾಹಕರು ಕೆವೈಸಿ ಮಾಡಿಸಬೇಕಾದ ಅಗತ್ಯವಿಲ್ಲ. KYC ಮಾಡಿಸಿದಾಕ್ಷಣ 500 ರೂಗೆ ಗ್ಯಾಸ್ ಸಿಲಿಂಡರ್ ಸಿಗುತ್ತದೆ ಎಂಬುದು ಸುಳ್ಳು” ಎಂದು ತಿಳಿಸಿದರು.

KYC

ಒಂದು ವೇಳೆ KYC ಮಾಡಿಸದಿದ್ದರೆ ಅವರದು ಕಮರ್ಷಿಯಲ್ ಆಗಿ ಬದಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹಾಗೇನಿಲ್ಲ. ಗೃಹ ಬಳಕೆಯ ಗ್ರಾಹಕರಾಗಿಯೇ ಮುಂದುವರಿಯುತ್ತಾರೆ. ಆದರೆ ಅವರಿಗೆ ಸಿಗುವ ಸಣ್ಣ ಪುಟ್ಟ ಸಬ್ಸಿಡಿ ನಿಂತು ಹೋಗಬಹುದು. ಹಾಗಾಗಿ ಕೆವೈಸಿ ಮಾಡಿಸಬೇಕು” ಎಂದು ಮಾಹಿತಿ ನೀಡಿದರು.

ಈ ಕುರಿತು ಹುಡುಕಿದಾಗ ವಾರ್ತಾಭಾರತಿ ಮಾಧ್ಯಮದಲ್ಲಿನ ವರದಿ ಕಂಡುಬಂದಿದೆ. ಉಜ್ವಲ ಯೋಜನೆಯ ನೋಡಲ್ ಅಧಿಕಾರಿ ರಾಹುಲ್ ಅವರು ವಾಟ್ಸಾಪ್‌ನಲ್ಲಿ ವೈರಲ್ ಸಂದೇಶ ಸುಳ್ಳು. ಉಜ್ವಲ ಯೋಜನೆಯ ಗ್ರಾಹಕರಿಗೆ ಮಾತ್ರ ಸಬ್ಸಿಡಿ ನೀಡುತ್ತಿದ್ದು ಅವರು ಮಾತ್ರ ಆಧಾರ ದೃಢೀಕರಿಸಬೇಕು ಎಂದಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಹೇಮಲತಾರವರು ವಾರ್ತಾಭಾರತಿಯೊಂದಿಗೆ ಮಾತನಾಡಿ, “ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ ಹುರುಳಿಲ್ಲ. ಉಜ್ವಲ ಗ್ರಾಹಕರಿಗೆ ಮಾತ್ರ ಆಧಾರ್ ದೃಢೀಕರಣ ಕಡ್ಡಾಯವಾಗಿದೆ. ಉಳಿದ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಬ್ಸಿಡಿ ಘೋಷಣೆ ಮಾಡಿಲ್ಲ. ಹಾಗಾಗಿ ಗ್ರಾಹಕರು ಗೊಂದಲಕ್ಕೆ ಒಳಗಾಗಬಾರದು” ಎಂದು ತಿಳಿಸಿದ್ದಾರೆ.

KYC

ಒಟ್ಟಾರೆಯಾಗಿ ಹೇಳುವುದಾದರೆ ಎಲ್ಲಾ ಗ್ರಾಹಕರು KYC ಮಾಡಿಸಬೇಕಾದ ಅಗತ್ಯವಿಲ್ಲ. ಉಜ್ವಲ ಯೋಜನೆಯ ಗ್ರಾಹಕರು ಮಾತ್ರ ಆಧಾರ್ ದೃಢೀಕರಣ ಮಾಡಿಸಬೇಕಿದೆ. ಒಂದು ವೇಳೆ ಮಾಡಿಸದಿದ್ದರೂ ಸಹ ಅವರ ಗ್ಯಾಸ್ ಕಮರ್ಷಿಯಲ್ ಆಗಿ 1400 ರೂ ಆಗುವುದಿಲ್ಲ. ಮಾಡಿಸಿದವರಿಗೆ 500 ರೂಗೆ ಸಿಲಿಂಡರ್ ಸಿಗುವುದಿಲ್ಲ. ಕೇಂದ್ರ ಸರ್ಕಾರ ಅಂತಹ ಯಾವುದೇ ನಿರ್ದೇಶನ ನೀಡಿಲ್ಲ. ಹಾಗಾಗಿ ವಾಟ್ಸಾಪ್‌ನಲ್ಲಿನ ವೈರಲ್ ಸಂದೇಶ ಸುಳ್ಳಾಗಿದೆ.


ಇದನ್ನೂ ಓದಿ; Fact Check | ಡಾಕ್ಟರ್ ಕಣ್ಣು ಮುಚ್ಚಿಕೊಂಡು ಚಿಕಿತ್ಸೆ ಕೊಡ್ಲಿ ಎಂಬುದು ಕಾಲ್ಪನಿಕ ಸಂದರ್ಶನ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *