ದೇವಾಲಯಗಳಿಗೆ ಮಾತ್ರ ತೆರಿಗೆ, ಮಸೀದಿ-ಚರ್ಚ್‌ಗಳಿಗೆ ತೆರಿಗೆಯಿಲ್ಲ ಎಂಬುದು ಸುಳ್ಳು

ಮಸೀದಿ ಚರ್ಚ್‌ಗಳಿಗೂ ತೆರಿಗೆ ವಿಧಿಸಿ. ಇಲ್ಲದಿದ್ದರೆ ನಮ್ಮ ಪವಿತ್ರ ದೇವಾಲಯಗಳಿಂದ ತೆರಿಗೆಯನ್ನು ತೆಗೆದುಹಾಕಿ. ಇದಕ್ಕೆ ಸಹಮತವಿದ್ದರೆ ಶೇರ್ ಮಾಡಿ ಎಂಬ ಸಂದೇಶವನ್ನು ಯುನೈಟೆಡ್ ಹಿಂದೂಸ್ ಎಂಬ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಆಗಸ್ಟ್ 26, 2020ರಲ್ಲಿ ಈ ಸಂದೇಶ ಪೋಸ್ಟ್ ಮಾಡಲಾಗಿದ್ದರೂ ಇಂದಿಗೂ ಹಲವಾರು ಜನರು ಅದನ್ನು ನಿಜವೆಂದು ನಂಬಿ ಶೇರ್ ಮಾಡುತ್ತಿದ್ದಾರೆ. ಅಲ್ಲದೇ ಹಲವಾರು ಜನರು ಟ್ವಿಟರ್‌ನಲ್ಲಿ ಇದೇ ರೀತಿಯ ಹೇಳಿಕೆಗಳನ್ನು ಟ್ವೀಟ್ ಮಾಡಿದ್ದಾರೆ. ಆ ಪೋಸ್ಟ್‌ಗಳಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್ 

ಈ ಕುರಿತು ಗೂಗಲ್‌ನಲ್ಲಿ ಹುಡುಕಿದಾಗ ಕೇಂದ್ರ ಹಣಕಾಸು ಸಚಿವಾಲಯವು 2017 ರಲ್ಲಿ ಇದೇ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡಿರುವ ಟ್ವೀಟ್ ಕಂಡು ಬಂದಿದೆ. ಅದರಲ್ಲಿ “ಚರ್ಚ್‌ಗಳು ಮತ್ತು ಮಸೀದಿಗಳಿಗೆ ತೆರಿಗೆ ವಿನಾಯಿತಿ ನೀಡಿದ್ದು, ದೇವಾಲಯದ ಟ್ರಸ್ಟ್‌ಗಳು ಮಾತ್ರ ಜಿಎಸ್‌ಟಿ ಪಾವತಿಸಬೇಕು ಎಂದು ಹೇಳುವ ಕೆಲವು ಸಂದೇಶಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಇದು ಸಂಪೂರ್ಣವಾಗಿ ಸುಳ್ಳು. ಏಕೆಂದರೆ ಧರ್ಮದ ಆಧಾರದ ಮೇಲೆ ಜಿಎಸ್‌ಟಿ ಕಾನೂನಿನಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡಲಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ತಪ್ಪು ಸಂದೇಶಗಳನ್ನು ಹರಿಬಿಡದಂತೆ ಜನರಲ್ಲಿ ವಿನಂತಿಸುತ್ತೇವೆ.” ಎಂದು ಬರದಿದ್ದು, ಆ ಕುರಿತು ಪತ್ರಿಕಾ ಹೇಳಿಕೆ ಸಹ ನೀಡಲಾಗಿದೆ.

ಈ ಕುರಿತು ಆಲ್ಟ್‌ನ್ಯೂಸ್ ಹಲವು ಮುಸ್ಲಿಂ ಟ್ರಸ್ಟ್‌ಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆದಿದ್ದು, ಅವುಗಳ ಸಹ ಜಿಎಸ್‌ಟಿ ತೆರಿಗೆ ಪಾವತಿಸುತ್ತಿದ್ದು, ಜಿಎಸ್‌ಟಿ ನೋಂದಣಿ ಪತ್ರ  ಹೊಂದಿವೆ. ಅಹಮದಾಬಾದ್ ಸುನ್ನಿ ಮುಸ್ಲಿಂ ವಕ್ಫ್ ಸಮಿತಿ (ಟ್ರಸ್ಟ್) ಅಧ್ಯಕ್ಷರಾದ ರಿಜ್ವಾನ್ ಖಾದ್ರಿಯವರು ಆಲ್ಟ್‌ನ್ಯೂಸ್ ಜೊತೆ ಮಾತನಾಡಿ, ತಮ್ಮ ಟ್ರಸ್ಟ್ ವಾರ್ಷಿಕ 20 ಲಕ್ಷಕ್ಕಿಂತ ಹೆಚ್ಚಿನ ಬಾಡಿಗೆ ಸಂಗ್ರಹಿಸುವುದರಿಂದ ನಾವು ಜಿಎಸ್‌ಟಿ ಪಾವತಿಸುತ್ತಿದ್ದೇವೆ. ಜಿಎಸ್‌ಟಿ ಪರಿಚಯಿಸುವ ಮುನ್ನ ಸಹ ತೆರಿಗೆ ಪಾವತಿಸುತ್ತಿದ್ದೆವು ಎಂದು ಹೇಳಿರುವುದಾಗಿ ಆಲ್ಟ್ ನ್ಯೂಸ್ ವರದಿ ಮಾಡಿದೆ.

ಜಿಎಸ್‌ಟಿ ತೆರಿಗೆ ಕುರಿತು

40 ಲಕ್ಷ ರೂ.ಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಯಾವುದೇ ಸಂಸ್ಥೆ (ವಿಶೇಷ ಸಂದರ್ಭಗಳಲ್ಲಿ ರೂ. 20 ಲಕ್ಷಕ್ಕಿಂತ ಹೆಚ್ಚು ಅದಾಯ ಪಡೆಯುವವರು) ಕಡ್ಡಾಯವಾಗಿ ಜಿಎಸ್‌ಟಿ ನೋಂದಣಿ ಮಾಡಿಸಬೇಕಿದೆ. ಇದರಲ್ಲಿ ಧರ್ಮದ ಆಧಾರದಲ್ಲಿ ಯಾವುದೇ ವಿಂಗಡಣೆ ಇರುವುದಿಲ್ಲ. ಎಲ್ಲಾ ಧರ್ಮದ ಸಂಸ್ಥೆಗಳು ಸಹ ಜಿಎಸ್‌ಟಿ ನೋಂದಣಿ ಮಾಡಿಸಬೇಕಿದೆ.

ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 12AA ಅಡಿಯಲ್ಲಿ ನೋಂದಾಯಿಸಲಾದ ಟ್ರಸ್ಟ್‌ಗಳು ಮಾತ್ರ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಅಂದರೆ ಚಾರಿಟಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ತೆರಿಗೆ ವಿನಾಯಿತಿ ಇದ್ದು, ಉಳಿದಂತೆ ಸಂಸ್ಥೆಯ ಆವರಣದ ಬಾಡಿಗೆ ನೀಡುವುದು, ಟ್ರಸ್ಟ್ ವಾಹನಗಳನ್ನು ಭಕ್ತಾದಿಗಳು ಬಳಸುವುದು ಸೇರಿ ಇತರ ಚಟುವಟಿಕೆಗಳಿಗೆ ಎಲ್ಲಾ ಧಾರ್ಮಿಕ ಸಂಸ್ಥೆಗಳು ಸಹ ತೆರಿಗೆ ಪಾವತಿಸಬೇಕಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಮೇಲಿನ ಎಲ್ಲಾ ಆಧಾರಗಳಿಂದ ಕೇವಲ ಹಿಂದೂ ದೇವಾಲಯಗಳು ಮಾತ್ರ ತೆರಿಗೆ ಪಾವತಿಸುತ್ತಿವೆ, ಮಸೀದಿ-ಚರ್ಚ್‌ಗಳು ತೆರಿಗೆ ಪಾವತಿಸುತ್ತಿಲ್ಲ ಎಂಬುದು ತಪ್ಪು ಸಂದೇಶ ಎಂಬುದು ಸಾಬೀತಾಗಿದೆ.


ಇದನ್ನೂ ಓದಿ: Fact Check | ಜನ್‌ಧನ್‌ ಯೋಜನೆಯಲ್ಲಿ 30 ಲಕ್ಷದವರೆಗೆ ಸಾಲ, ಸಬ್ಸಿಡಿ ಸಿಗಲಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *