Fact Check | ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಬಿಡುಗಡೆಯಾಗಲಿದೆ ಎಂದು ಅನುರಾಗ್‌ ಠಾಕೂರ್‌ ಹೇಳಿಲ್ಲ

“ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಕೇಂದ್ರ ಸರ್ಕಾರಿ ನೌಕರರಿಗೆ COVID-19 ಸಾಂಕ್ರಾಮಿಕ ಸಮಯದಲ್ಲಿ ಮತ್ತು ಕಳೆದ 18 ತಿಂಗಳುಗಳಿಂದ ಬಾಕಿ ಉಳಿದಿರುವ ತುಟ್ಟಿಭತ್ಯೆ (ಡಿಎ) ಪಾವತಿ ಮಾಡುವುದಾಗಿ ಘೋಷಿಸಿದ್ದಾರೆ. ಈ ವಿಡಿಯೋ ನೋಡಿ. ಮತ್ತು ಈ ವಿಡಿಯೋವನ್ನು ಎಲ್ಲಾರಿಗೂ ಹಂಚಿಕೊಳ್ಳಿ” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಅದರಲ್ಲೂ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಸರ್ಕಾರಿ ಅಧಿಕಾರಿಗಳಲ್ಲಿ ಹೊಸ ನಿರೀಕ್ಷೆ ಮನೆ ಮಾಡಿದೆ. ಅದರಲ್ಲೂ ಅನುರಾಗ್‌ ಠಾಕೋರ್‌ ಅವರೇ ತುಟ್ಟಿಭತ್ಯೆ ವಿತರಣೆಯ ಬಗ್ಗೆ ಘೋಷಣೆ ಮಾಡಿದ್ದಾರೆ ಎಂಬ ವಿಡಿಯೋ ಕಂಡ ನಂತರ ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿದ್ದಾರೆ. ಈ ಕುರಿತು ನಿಜವೆಷ್ಟು, ಸುಳ್ಳುಳೆಷ್ಟು ಎಂಬುದನ್ನು ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್‌

ತುಟ್ಟಿಭತ್ಯೆ ನಿಜಕ್ಕೂ ಕೂಡ ನೀಡಲಾಗುವುದು ಎಂದು ಘೋಷಣೆಯನ್ನ ಮಾಡಲಾಗಿದೆಯೇ ಎಂದು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಪರಿಶೀಲನೆ ನಡೆಸಿದೆ. ಆದರೆ ಯಾವ ವರದಿಯಲ್ಲೂ ಕೂಡ ಈ ಬಗ್ಗೆ ಉಲ್ಲೇಖವಿಲ್ಲ. ಇದರಿಂದ  COVID-19 ಸಾಂಕ್ರಾಮಿಕ ಸಮಯದಲ್ಲಿ ತಡೆಹಿಡಿಯಲಾದ ತುಟ್ಟಿಭತ್ಯೆ ಬಾಕಿ ಬಿಡುಗಡೆ ಕುರಿತು ಕೇಂದ್ರ ಸರ್ಕಾರದಿಂದ ಇತ್ತೀಚೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಸಂಸತ್‌ಗೆ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ..

ಆದರೆ ಮಾರ್ಚ್ 2023 ರಲ್ಲಿ, ಕೇಂದ್ರ ಸರ್ಕಾರವು 18 ತಿಂಗಳ ಮೌಲ್ಯದ ತುಟ್ಟಿಭತ್ಯೆ (ಡಿಎ) ಬಾಕಿಯನ್ನು ವಿತರಿಸದಿರುವ ತನ್ನ ನಿರ್ಧಾರವನ್ನು ಸಂಸತ್ತಿಗೆ ತಿಳಿಸಿತು. ಈ ಕುರಿತ ಹೇಳಿಕೆಯ ಪತ್ರದ ನಕಲು ಕೂಡ ವರದಿಯೊಂದರಲ್ಲಿ ಪತ್ತೆಯಾಗಿದೆ.

ಇನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಒಳಗೊಂಡ ಪ್ರಸ್ತುತ ಪ್ರಸಾರವಾಗುತ್ತಿರುವ ವೀಡಿಯೊ ಕುರಿತು ಕೂಡ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆಯನ್ನು ನಡೆಸಿದೆ. ಇದಕ್ಕಾಗಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ಪರಿವರ್ತಿಸಿ ಅವುಗಳನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು.

ಈ ವೇಳೇ ಹಲವಾರು ವಿಡಿಯೋಗಳ ಲಿಂಕ್‌ ಕಂಡು ಬಂದಿದ್ದು, ಅವುಗಳ ಕುರಿತು ಪರಿಶೀಲನೆ ನಡೆಸಿದಾಗ ಮೂಲ ವಿಡಿಯೋ ಪತ್ತೆಯಾಗಿದೆ. ಜೂನ್ 2019 ರಲ್ಲಿ ಲೋಕಸಭೆಯ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ವೀಡಿಯೊವನ್ನೇ ಬಳಸಿಕೊಂಡ ಕಿಡಿಗೇಡಿಗಳು ಆ ವಿಡಿಯೋವಿನ ಮೂಲ ಆಡಿಯೋವನ್ನು ಡಿಜಿಟಲೀಕರಣಗೊಳಿಸಿ ಬದಲಾಯಿಸಿ ಸುಳ್ಳು ಹಬ್ಬಿಸಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ. ಒಟ್ಟಾರೆಯಾಗಿ ಕೇಂದ್ರ ಸಚಿವ ಅನುರಾಗ್‌ ಠಾಕೋರ್‌ ಅವರು ಯಾವುದೇ ತುಟ್ಟಿಭತ್ಯೆ ವಿತರಣೆ ಬಗ್ಗೆ ಘೋಷಣೆ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ : Fact Check: ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯಲ್ಲಿ ಮೋದಿಯವರಿಗೆ ಮೊದಲನೇ ಸ್ಥಾನ ಎಂಬುದು ಸುಳ್ಳು


ವಿಡಿಯೋ ನೋಡಿ : Fact Check: ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯಲ್ಲಿ ಮೋದಿಯವರಿಗೆ ಮೊದಲನೇ ಸ್ಥಾನ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *