ನನ್ನ ತೆರಿಗೆ ನನ್ನ ಹಕ್ಕು ಹೋರಾಟ ಆರಂಭವಾದ ನಂತರ ಹಾಗಾದರೆ ಹಿಂದೂಗಳು ಹಿಂದೂ ದೇವಾಲಯಕ್ಕೆ ಹಾಕುವ ಹಣ ಹಿಂದೂಗಳಿಗೆ ಸೇರಬೇಕಲ್ಲವೇ? ಭಿನ್ನ ಧರ್ಮದ ದೇವಾಲಯಗಳಿಗೆ ಏಕೆ ಕೊಡಬೇಕು? ಎಂದು ಹಲವಾರು ಜನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಹ, “ಈ ಆರ್ಥಿಕ ವರ್ಷದಿಂದ ಹಿಂದುಗಳು ಕಟ್ಟಿರುವ ತೆರಿಗೆ ಹಣ ಹಿಂದೂಗಳ ಅಭಿವೃದ್ಧಿಗೆ ಮಾತ್ರ ಉಪಯೋಗ ಆಗಬೇಕು.
ಹಿಂದುಗಳು ಕಟ್ಟಿದ ತೆರಿಗೆ ಹಣ ಬೇರೆ ಧರ್ಮಗಳ ಜನರಿಗೆ ಸೇರುವುದು ಹಿಂದುಗಳಿಗೆ ಆಗುವ ಅನ್ಯಾಯ. ಹಿಂದೂಗಳ ತೆರಿಗೆ , ಹಿಂದೂಗಳ ಹಕ್ಕು” ಎಂದು ಬರೆದುಕೊಂಡಿದ್ದಾರೆ. ಇದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
ಕರ್ನಾಟಕ ರಾಜ್ಯದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆ ಅಥವಾ ಮುಜರಾಯಿ ಇಲಾಖೆಯ ಅಡಿಯಲ್ಲಿ ಸುಮಾರು 34,563 ದೇವಾಲಯಗಳಿವೆ. ಅವುಗಳಲ್ಲಿ 205 ದೇವಾಲಯಗಳು ಕೆಟಗರಿ ’ಎ’ ಅಡಿಯಲ್ಲಿ ಬರುತ್ತವೆ. ಅಂದರೆ 25 ಲಕ್ಷ ರೂ.ಗಳಿಗಿಂತ ಹೆಚ್ಚು ವಾರ್ಷಿಕ ಆದಾಯವನ್ನು ಹೊಂದಿರುವ ದೇವಾಲಯಗಳನ್ನು ಈ ಕೆಟಗರಿಯಲ್ಲಿ ಗುರುತಿಸಲಾಗಿದೆ. ಆ ದೇವಾಲಯಗಳು ತಮ್ಮ ವಾರ್ಷಿಕ ಆದಾಯದಲ್ಲಿ 10% ಹಣವನ್ನು ಮಾತ್ರ ಸರ್ಕಾರಕ್ಕೆ ಕಟ್ಟುತ್ತವೆ. ಉಳಿದ ಹಣವನ್ನು ತಾವೇ ಬಳಸಿಕೊಳ್ಳುತ್ತವೆ.
ಅದೇ ರೀತಿಯಾಗಿ 139 ದೇವಾಲಯಗಳು ಕೆಟಗರಿ ’ಬಿ’ ಅಡಿಯಲ್ಲಿ ಬರುತ್ತವೆ. ಇವುಗಳು 5 ಲಕ್ಷದಿಂದ 25 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುತ್ತವೆ. ಇವುಗಳು ತಮ್ಮ ಆಧಾಯದಲ್ಲಿ ಶೇ 5% ಮಾತ್ರ ಸರ್ಕಾರಕ್ಕೆ ಕಟ್ಟಿ, ಉಳಿದ ಹಣದಲ್ಲಿ ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು, ಚಟುವಟಿಕೆಗಳನ್ನು ನಿರ್ವಹಿಸಿಕೊಳ್ಳಬಹುದು. ಇದರ ಖರ್ಚುವೆಚ್ಚದ ಲೆಕ್ಕಪತ್ರಗಳನ್ನು ಮುಜರಾಯಿ ಇಲಾಖೆಗೆ ಸಲ್ಲಿಸಬೇಕು.
ವಾರ್ಷಿಕ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಸುಮರು 34,000ಕ್ಕೂ ಹೆಚ್ಚು ದೇವಾಲಯಗಳು ಕೆಟಗರಿ ’ಸಿ’ ಅಡಿಯಲ್ಲಿ ಬರುತ್ತವೆ. ಈ ದೇವಾಲಯಗಳು ಯಾವುದೇ ಹಣವನ್ನು ಸರ್ಕಾರಕ್ಕೆ ಕಟ್ಟುತ್ತಿಲ್ಲ. ಅಲ್ಲಿ ಕಡಿಮೆ ಹಣ ಸಂಗ್ರಹವಾಗುತ್ತಿದ್ದು ಅದನ್ನು ತಮ್ಮ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುತ್ತಿವೆ. ಜೊತೆಗೆ ಸರ್ಕಾರ ಸಹ ಈ ದೇವಾಲಯಗಳಿಗೆ ಅನುದಾನ ನೀಡುತ್ತಿದೆ.
ಈ ಕುರಿತು ಹಿಂದಿನ ಬೊಮ್ಮಾಯಿ ಸರ್ಕಾರದಲ್ಲಿ ಮುಜರಾಯಿ ಇಲಾಖೆ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿಯವರು ಸ್ಪಷ್ಟನೆ ನೀಡಿರುವುದನ್ನು ಇಲ್ಲಿ ನೋಡಬಹುದು.
ಹಿಂದೂ ದೇವಾಲಯಗಳ ಹಣದಲ್ಲಿ ಒಂದೇ ಒಂದು ಪೈಸೆಯೂ ಅನ್ಯಧರ್ಮೀಯ ಸಂಸ್ಥೆಗಳಿಗೆ ನೀಡುವುದಿಲ್ಲ. ಹಿಂದೂ ದೇವಾಲಯಗಳ ಹುಂಡಿಯ ಭಕ್ತರ ಹಣ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಮಾತ್ರವೇ ಸೀಮಿತವಾಗಿದೆ. ಯಾವುದೇ ಕಾರಣಕ್ಕೂ ದುರುಪಯೋಗವಾಗಲಾರದು.
– ಶ್ರೀ @KotasBJP
ಸಚಿವರು, ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ pic.twitter.com/goQpgzILaG— BJP Karnataka (@BJP4Karnataka) June 9, 2021
ಅಂದರೆ ಎ ಮತ್ತು ಬಿ ಈ ಎರಡೂ ಕೆಟಗರಿಯ ಒಟ್ಟು 344 ದೇವಾಲಯಗಳು ಮಾತ್ರ ಸರ್ಕಾರಕ್ಕೆ ಕ್ರಮವಾಗಿ 10% ಮತ್ತು 5% ಹಣ ಪಾವತಿಸುತ್ತಿವೆ. ಆ ಹಣವನ್ನು ಸರ್ಕಾರ ಬೇರೆ ಧರ್ಮದ ಯಾವುದೇ ದೇವಾಲಯಗಳ ಅಭಿವೃದ್ಧಿಗೆ ಒಂದು ರೂ ಸಹ ಬಳಸುವುದಿಲ್ಲ. ಇನ್ನು ದೇವಾಲಯಗಳಲ್ಲಿ ಉಳಿದ ಹಣವನ್ನು ಸಾಮಾನ್ಯ ಸಂಗ್ರಹಣಾ ನಿಧಿ ಎಂದು ದೇವಾಲಯದ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ. ಆಯುಕ್ತರು ಈ ಖಾತೆಯನ್ನು ನಿರ್ವಹಿಸುತ್ತಾರೆ. ಈ ಹಣವನ್ನು ಉಪಯೋಗಿಸುವಲ್ಲಿಯೂ ಕಾಯಿದೆಯಲ್ಲಿರುವ ಸೆಕ್ಷನ್ 17, ನಿಯಮ 18 ಹಾಗೂ 19 ನಿಯಮಾವಳಿಗಳೇ ಅನ್ವಯವಾಗುತ್ತದೆ.
ಈ ಕುರಿತು 2022ರಲ್ಲಿ ಸಿದ್ದರಾಮಯ್ಯನವರು ಸ್ಪಷ್ಟಕರಣ ನೀಡಿರುವುದನ್ನು ಇಲ್ಲಿ ನೋಡಬಹುದು.
ಹಿಂದೂ ಮತ್ತು ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರ ವರ್ಷಾಸನ ಮತ್ತು ತಸ್ತೀಕ್ ನೀಡುತ್ತಿರುವುದು ದೇವಸ್ಥಾನಗಳ ಆದಾಯವಲ್ಲ. ಅದು ಸರ್ಕಾರದ ಹಣ. ರಾಜ್ಯದಲ್ಲಿರುವ 30,663 ಹಿಂದೂ ಮತ್ತು ಹಿಂದೂಯೇತರ ಪೂಜಾ ಸ್ಥಳಗಳಿಗೆ ವರ್ಷದಲ್ಲಿ ತಸ್ತೀಕ್ ಮತ್ತು ವರ್ಷಾಸನಗಳ ರೂಪದಲ್ಲಿ ರೂ.150.92 ಕೋಟಿ ನೀಡಲಾಗುತ್ತಿದೆ.
4/8#SaveTemples— Siddaramaiah (@siddaramaiah) January 3, 2022
ರಾಜ್ಯ ಸರ್ಕಾರವೇ ದೇವಾಸ್ಥಾನಗಳಿಗೆ ಹಣ ನೀಡುತ್ತದೆ.
2022ರಲ್ಲಿ ರಾಜ್ಯ ಸರ್ಕಾರದಿಂದ ತಸ್ತಿಕ್ ಮತ್ತು ವರ್ಷಸಾನ ಹೆಸರಿನಲ್ಲಿ 875 ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ರೂ.4.20 ಕೋಟಿ ಹಣವನ್ನೂ ಹಾಗೂ ರೂ. 146.72 ಕೋಟಿ ಹಣವನ್ನು ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ನೀಡಲಾಗಿತ್ತು. ಈ ಹಣವೂ ದೇವಾಲಯಗಳ ಹಣವಲ್ಲ. ಇದು ಸರ್ಕಾರ ನೀಡಿದ್ದ ಪರಿಹಾರದ ಹಣವಾಗಿತ್ತು.
2020-21ರಲ್ಲಿ ಮುಜರಾಯಿ ಇಲಾಖೆಯು ರಾಜ್ಯಾದ್ಯಂತ ದೇವಾಲಯಗಳ ಅಭಿವೃದ್ಧಿಗೆ ಸುಮಾರು 208.29 ಕೋಟಿ ರೂ. ನೀಡಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆಗೆ ಅತಿ ಹೆಚ್ಚು (15.33 ಕೋಟಿ ರೂ.) ಅನುದಾನ ನೀಡಲಾಗಿದೆ.
ಏನಿದು ತಸ್ತೀಕ್ ಹಣ?
ತಸ್ತೀಕ್ ಅಂದರೆ ಮೈಸೂರು ಇನಾಂ ರದ್ದಿಯಾತಿ ಕಾಯ್ದೆ 1955ರಂತೆ 01.07.1970ರಿಂದ ಧರ್ಮಾದಾಯ ಮತ್ತು ದೇವಾದಾಯ ಇನಾಂ ಜಮೀನುಗಳ ಹಕ್ಕುಗಳನ್ನು ಸರ್ಕಾರವು ಕಾಯ್ದೆಯ ಕಲಂ 17ರಂತೆ ತನ್ನಲ್ಲಿ ನಿಹಿತಗೊಳಿಸಿಕೊಂಡಿತು. ಜಮೀನುಗಳನ್ನು ವಶಪಡಿಸಿಕೊಂಡ ಹಿಂದಿನ 5 ವರ್ಷಗಳ ಬೆಳೆಯನ್ನು ಆಧರಿಸಿ ತಸ್ತೀಕ್‌ಅನ್ನು ಜಿಲ್ಲಾಧಿಕಾರಿಗಳು/ ಉಪವಿಭಾಗಾಧಿಕಾರಿಗಳು ನಿಗದಿಗೊಳಿಸುತ್ತಾರೆ. ಸಂಸ್ಥೆಯ/ ವ್ಯಕ್ತಿಯ ಜಮೀನುಗಳನ್ನು ನಿಹಿತಗೊಳಿಸಿಕೊಂಡದ್ದರಿಂದ ಅವರಿಗೆ ಪರಿಹಾರ ನೀಡುವ ಉದ್ದೇಶದಿಂದ ತಸ್ತೀಕ್ ನೀಡಲಾಗುತ್ತದೆ.
ವರ್ಷಾಸನ
ವರ್ಷಾಸನ ಅಂದರೆ, ಕರ್ನಾಟಕ ಭೂ ಸುಧಾರಣೆ ಕಾಯ್ದೆ- 1961ರಂತೆ 01.03.1974ರಂದು ಜಾರಿಗೆ ಬಂದ ಸರ್ಕಾರದಲ್ಲಿ ನಿಹಿತವಾದ ಜಮೀನುಗಳಿಗೆ ವರ್ಷಾಸನ ನಿಗದಿಗೊಳಿಸಲಾಗುತ್ತದೆ. ದೇವರಾಜ ಅರಸು ಅವರ ಕಾಲದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟ ಸಂಸ್ಥೆಗಳ ನಿರ್ವಹಣೆಗಾಗಿ ಈ ತಸ್ತೀಕ್ ಮತ್ತು ವರ್ಷಾಸನಗಳನ್ನು ನೀಡಲಾಗುತ್ತಿದೆ. ಹಿಂದೆ ರಾಜಮಹಾರಾಜರು ಈ ಧಾರ್ಮಿಕ ಸಂಸ್ಥೆಗಳ ನಿರ್ವಹಣೆಗೆಂದು ಜಮೀನುಗಳನ್ನು ಇನಾಂ ನೀಡಿದ್ದರು. ಆ ಜಮೀನುಗಳಿಂದ ಬರುವ ಆದಾಯದ ಮೇಲೆ ಆ ಸಂಸ್ಥೆಗಳ ನಿರ್ವಹಣೆ ನಡೆಯುತ್ತಿತ್ತು. ಸರ್ಕಾರ ಆ ಜಮೀನುಗಳನ್ನು ವಶಕ್ಕೆ ಪಡೆದು ಬಡ ರೈತರಿಗೆ ಮಂಜೂರು ಮಾಡಿತ್ತು. ಅದಕ್ಕಾಗಿ ಸರ್ಕಾರ ಈ ಸಂಸ್ಥೆಗಳು ಅಸ್ತಿತ್ವದಲ್ಲಿ ಇರುವವರೆಗೆ ಪರಿಹಾರ ನೀಡುತ್ತವೆ. ಇದು ಸರ್ಕಾರದಿಂದ ನೀಡುವ ಪರಿಹಾರವೇ ಹೊರತು ದೇವಾಲಯಗಳ ಹಣವನ್ನು ಹಂಚುವುದಲ್ಲ.
ಇದನ್ನೂ ಓದಿ; Fact Check: ರಾಹುಲ್ ಗಾಂಧಿಯವರು ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.