Fact Check: ಬರದಲ್ಲೂ KRS ನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂಬುದು ಸುಳ್ಳು

KRS

ಈ ಬಾರಿ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ಇರುವುದರಿಂದ ಬೇಸಿಗೆ ಸಮೀಪಿಸುತ್ತಿದ್ದಂತೆ ನೀರಿಗಾಗಿ ಸಮಸ್ಯೆ ಶುರುವಾಗಿದೆ. ಬೆಂಗಳೂರಿನಾದ್ಯಂತ ಕುಡಿಯುವ ನೀರಿಗೆ ಸಮಸ್ಯೆಯಾಗಿ ಟ್ಯಾಂಕರ್‌ಗಳಲ್ಲಿ ನೀರು ತರಿಸಿಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ. ಸಧ್ಯ ರಾಜ್ಯದ 195 ತಾಲ್ಲೂಕುಗಳನ್ನು ಪರಪೀಡಿತ ಪ್ರದೇಶಗಳೆಂದು ಪಟ್ಟಿ ಮಾಡಿ ಆಯಾ ತಾಲೂಕುಗಳಿಗೆ ಬರ ಪರಿಹಾರದ ಹಣವನ್ನು ನೀಡುವ ಸಲುವಾಗಿ ಕೆಲಸಗಳು ನಡೆಯುತ್ತಿವೆ.

ಆದರೆ “ಬೆಂಗಳೂರಿನಲ್ಲಿ ಕುಡಿಯಲು ಹನಿ ನೀರು ಕೂಡ ಸಿಗುತ್ತಿಲ್ಲ. ಆದರೆ, ನಾಡ ದ್ರೋಹಿ  ಕಾಂಗ್ರೆಸ್ ತಮಿಳುನಾಡಿಗೆ ಮಾತ್ರ ಕಳ್ಳತನದಿಂದ ಕಾವೇರಿ ನೀರು ಹರಿಸುತ್ತಲೇ ಇದೆ. ತಮಿಳುನಾಡಿನ ಮೆಟ್ಟೂರು ಜಲಾಶಯ ತುಂಬಿ ತುಳುಕುತ್ತಿದ್ದರೂ, ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾವನ್ನು ಯಶಸ್ವಿಗೊಳಿಸಲು ಇರುವ ಕಾವೇರಿಯ ಒಡಲನ್ನು ಬಗೆಯುತ್ತಿದೆ ನಾಡ ದ್ರೋಹಿ ಕಾಂಗ್ರೆಸ್. ಕನ್ನಡಿಗರ ಮೇಲೆ ಅದೆಷ್ಟು ದ್ವೇಷ ಸಾಧಿಸುತ್ತಿರಬೇಡ ಈ ಸ್ಲೀಪಿಂಗ್ ಸರ್ಕಾರ!” ಎಂದು ರಾಜ್ಯ ಬಿಜೆಪಿಯೂ ಆರೋಪಿಸಿದ್ದಾರೆ.

NDA ಮೈತ್ರಿಯೊಂದಿಗೆ ಬಿಜೆಪಿ ಭಾಗವಾಗಿರುವ ಜೆಡಿ (ಎಸ್) ಕೂಡ ಇದೇ ರೀತಿ ಪೋಸ್ಟ್‌ಅನ್ನು ಹಂಚಿಕೊಂಡಿದೆ. ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ಬೆಂಬಲಿಗರು ಇದೇ ಪ್ರತಿಪಾದನೆಯೊಂದಿಗೆ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.ಫ್ಯಾಕ್ಟ್‌ಚೆಕ್: 11 ಮಾರ್ಚ್ 2024ರ ವರದಿಗಳ ಪ್ರಕಾರ, KRS ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ ಹರಿಸಲಾಗಿದೆ ಎಂದು ನೀರಾವರಿ ಇಲಾಖೆ ಸ್ಪಷ್ಟೀಕರಣ ನೀಡಿದೆ ಎಂದು ಇಟಿವಿ ಭಾರತ್ ವರದಿ ಪ್ರಕಟಿಸಿದೆ.

ಬೆಂಗಳೂರಿಗೆ ನೀರಿನ ಬರ ಇದ್ದರೂ ತಮಿಳುನಾಡಿಗೆ‌ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳ ಆರೋಪ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಪ್ರತಿಕಾ ಪ್ರಕಟಣೆ ಹೊರಡಿಸಿದೆ. ”ಇಲಾಖೆಯ ಮೈಸೂರು ವಿಭಾಗ ಹಾಗೂ ಬೆಂಗಳೂರು ನಗರಕ್ಕೆ ಕುಡಿಯಲು ನೀರು ಸರಬರಾಜು ಮಾಡುವ ಉದ್ದೇಶಕ್ಕಾಗಿ ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟೆಯನ್ನು ಉಪಯೋಗಿಸಲಾಗುತ್ತಿದೆ. ಕಾವೇರಿ ನದಿಯಿಂದ ಬೆಂಗಳೂರು, ಮೈಸೂರು ಮತ್ತು ಇತರೆ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯಲು ಹಾಗೂ ಕೈಗಾರಿಕೆಗಳಿಗೆ ಸರಬರಾಜು ಮಾಡಲು ಪ್ರತಿದಿನ ಒಟ್ಟಾರೆ 1000 ಕ್ಯೂಸೆಕ್​ನಷ್ಟು ನೀರಿನ ಅಗತ್ಯತೆ ಇದೆ” ಎಂದು ನೀರಾವರಿ ಇಲಾಖೆ ತಿಳಿಸಿದೆ ಹೇಳಿದೆ.ಬೆಂಗಳೂರು ಜಲ ಮಂಡಳಿ (ಬಿಡಬ್ಲ್ಯೂಎಸ್​​ಎಸ್​​ಬಿ) ನೀಡಿರುವ ಮಾಹಿತಿಯಂತೆ ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟೆ ಬಳಿಯಿಂದ ನೀರನ್ನು ತೊರೆಕಾಡನಹಳ್ಳಿವರೆಗೆ ಹರಿಸಿ, ತೊರೆಕಾಡನಹಳ್ಳಿಯಲ್ಲಿ ಸ್ಥಾಪಿಸಿರುವ ಜಲಸ್ಥಾವರ ಮುಖಾಂತರ ಸುಮಾರು 1470 ಎಂಎಲ್​ಡಿ (600 ಕ್ಯೂಸೆಕ್​ನಷ್ಟು) ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿದೆ. ಮಾರ್ಚ್​ 6ರಿಂದ 8ವರೆಗೆ ಶಿವಾ ಅಣೆಕಟ್ಟಿನಲ್ಲಿನ ನೀರಿನ ಮಟ್ಟವು ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗಿ ಅಣೆಕಟ್ಟೆಯ ಮೇಲ್ಭಾಗದಿಂದ 36 ಇಂಚಿನಷ್ಟು ಕೆಳಮಟ್ಟ ತಲುಪಿದೆ. ಇದರಿಂದ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪ್ರಮಾಣವನ್ನು ಸರಬರಾಜು ಮಾಡಲು ವ್ಯತ್ಯಯವಾಗಿದೆ ಎಂದಿದೆ.ಮಾರ್ಚ್​ 9ರಂದು ಬೆಂಗಳೂರು ಜಲ ಮಂಡಳಿ ಅಧಿಕಾರಿಗಳು ಕೆಆರ್​​ಎಸ್ ಜಲಾಶಯಕ್ಕೆ ಭೇಟಿ ನೀಡಿ, ನೀರಿನ ಹರಿವಿನ ಪ್ರಮಾಣವನ್ನು ಹೆಚ್ಚಿಸಲು ಕೋರಿದ್ದಾರೆ. ಅದರಂತೆ ಕೆಆರ್​​ಎಸ್ ಜಲಾಶಯದಿಂದ ಹಂತ ಹಂತವಾಗಿ ನೀರನ್ನು ಏರಿಕೆ ಮಾಡಿ, ಸುಮಾರು 4780 ಕ್ಯೂಸೆಕ್​ಗಳಷ್ಟು ನೀರನ್ನು ಹರಿಬಿಡಲಾಗಿದೆ. ನಂತರ, ಕೆಆರ್​ಎಸ್ ಡ್ಯಾಂನಿಂದ ಕಾವೇರಿ ಪಾತ್ರದುದ್ದಕ್ಕೂ ಬೆಂಗಳೂರು ಜಲ ಮಂಡಳಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಇಲಾಖೆ ವಿವರಿಸಿದೆ.

ಆದ್ದರಿಂದ KRS ನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂಬುದು ಸುಳ್ಳು


ಇದನ್ನು ಓದಿ: Fact Check: ತುಮಕೂರಿನಲ್ಲಿ ರಥ ಸುಟ್ಟ ಆರೋಪಿ ಹಿಂದುವೇ ಹೊರತು ಮುಸ್ಲಿಂ ಅಲ್ಲ


ವಿಡಿಯೋ ನೋಡಿ: Fact Check | ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *