Fact Check: JNU ವಿದ್ಯಾರ್ಥಿ ಒಕ್ಕೂಟ ಚುನಾವಣೆಯಲ್ಲಿ ABVP ನಾಲ್ಕು ಸ್ಥಾನ ಗಳಿಸಿದೆ ಎಂದು ಸುದ್ದಿ ತಿರುಚಿದ ಕನ್ನಡ ಮಾಧ್ಯಮಗಳು

JNU

ಜವಹರಲಾಲ್ ನೆಹರು ವಿಶ್ವವಿದ್ಯಾಲಯವು ಭಾರತದಲ್ಲಿ ಅನೇಕ ದಶಕಗಳಿಂದ ವಿದ್ಯಾರ್ಥಿ ಚಳುವಳಿಯ ನೆಲೆವೀಡಾಗಿದೆ. ಶೈಕ್ಷಣಿಕವಾಗಿಯೂ ಸಹ ಸಾಕಷ್ಟು ಹೆಸರು ಮಾಡಿರುವ ಈ ವಿಶ್ವವಿದ್ಯಾಲಯವು ದೇಶಕ್ಕೆ ಅನೇಕ ವಿದ್ವಾಂಸರನ್ನು, ರಾಜಕಾರಣಿಗಳನ್ನು ಕೊಡುಗೆಯಾಗಿ ನೀಡಿದೆ. ಆದರೆ ಕಳೆದೊಂದು ದಶಕಗಳಿಂದ ಈ ವಿಶ್ವವಿದ್ಯಾಲಯದ ಮೇಲೆ ಸಾಕಷ್ಟು ಆರೋಪಗಳನ್ನು ಹೊರಿಸಲಾಗುತ್ತಿದ್ದು, ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ಬಲಪಂಥೀಯ ಸಂಘಟನೆಗಳು ಆರೋಪಿಸಿದ್ದಾರೆ. ಸಧ್ಯ ಎಡಪಂಥೀಯ ಮತ್ತು ಬಲಪಂಥೀಯ ಸಿದ್ದಾಂತಗಳ ಕಾದಾಟದ ಸ್ಥಳವಾಗಿ ಈ ವಿಶ್ವವಿದ್ಯಾಲಯವು ಮಾರ್ಪಟ್ಟಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಎಡಪಂಥೀಯ ವಿದ್ಯಾರ್ಥಿ ಒಕ್ಕೂಟಕ್ಕೆ ಎದುರಾಳಿಯಾಗಿ ಬೆಳೆಯುತ್ತಿದ್ದ ಆರ್‌ಎಸ್‌ಎಸ್‌ನ ಸಂಯೋಜಿತ ಸಂಸ್ಥೆಯಾದ ಎಬಿವಿಪಿಯು ಎಡಪಂಥೀಯ ವಿದ್ಯಾರ್ಥಿ ಒಕ್ಕುಟಗಳಿಗೆ ವಿರುದ್ಧವಾದ ಸಿದ್ದಾಂತವನ್ನು ಮಂಡಿಸುತ್ತಿದ್ದ ಪರಿಣಾಮ ಆಗಾಗ ಈ ಎರಡೂ ಒಕ್ಕುಟಗಳ ನಡುವೆ ದಾಳಿ ಮತ್ತು ಪ್ರತಿದಾಳಿ ಸಹ ನಡೆಯುತ್ತಿದ್ದವು. ಇದರ ಭಾಗವಾಗಿ ಈ ಬಾರಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಯನ್ನು ಎಲ್ಲರೂ ಎದುರು ನೋಡುತ್ತಿದ್ದರು. ಇದರ ಫಲಿತಾಂಶ ನೆನ್ನೆ(ಭಾನುವಾರ) ರಾತ್ರಿಯಷ್ಟೇ ಹೊರಬಿದ್ದಿದೆ. ಇದರಲ್ಲಿ ಎಡಪಂಥೀಯ ವಿದ್ಯಾರ್ಥಿ ಒಕ್ಕುಟವು ಎಲ್ಲಾ ನಾಲ್ಕು ಹುದ್ದೆಗಳನ್ನು ಗೆದ್ದು ಮತ್ತೆ ತಮ್ಮ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್‌ವಾದಿ ಮತ್ತು ಎಡಪಂಥೀಯ ಒಕ್ಕುಟಗಳು ಒಂದಾಗಿರುವ ಸಂದೇಶವನ್ನು ದೇಶಕ್ಕೆ ರವಾನಿಸಿವೆ.

ಆದರೆ, ಜೆಎನ್‌ಯು ಚುನಾವಣೆಯಲ್ಲಿ ಕ್ಲೀನ್ ಸ್ವೀಪ್: ನಾಲ್ಕೂ ಸ್ಥಾನದಲ್ಲೂ ABVP ಅಭ್ಯರ್ಥಿಗಳಿಗೆ ಗೆಲುವು! ಎಂಬ ಸುದ್ದಿಯನ್ನು ಕನ್ನಡದ ಸುವರ್ಣ ನ್ಯೂಸ್, ಹೊಸದಿಗಂತ ವರದಿ ಮಾಡಿದೆ. ಹಾಗೆಯೇ ಕೆಲವು ಬಲಪಂಥೀಯ ಕಾರ್ಯಕರ್ತರು ಸಹ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಹಾಗೆಯೇ ಹೀಗಾಗಲೇ ಅನೇಕ ಸುಳ್ಳು ಸುದ್ದಿಗಳನ್ನು ಹರಡಿ ಸಾಭೀತಾಗಿರುವ ಬಲಪಂಥೀಯ ಮಾಧ್ಯಮವಾದ ಪೋಸ್ಟ್‌ಕಾರ್ಡ್‌ ಸಹ ಈ ಸುದ್ದಿಯನ್ನು ತಿರುಚಿ ಪೋಸ್ಟರ್ ಒಂದನ್ನು ಹಂಚಿಕೊಂಡಿದೆ.

ಫ್ಯಾಕ್ಟ್‌ಚೆಕ್‌: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ (JNUSU) ಚುನಾವಣೆಯ ಫಲಿತಾಂಶ ಭಾನುವಾರ ರಾತ್ರಿ ಪ್ರಕಟವಾಗಿದೆ. ಎಡಪಂಥೀಯ ವಿದ್ಯಾರ್ಥಿ ಒಕ್ಕೂಟಗಳು ನಾಲ್ಕು ಹುದ್ದೆಗಳನ್ನು ಗೆದ್ದುಕೊಂಡಿವೆ. ಯುನೈಟೆಡ್ ಲೆಫ್ಟ್ ಪ್ಯಾನೆಲ್ ಮೂರು ಹುದ್ದೆಗಳನ್ನು ಗೆದ್ದರೆ, ​​BAPSA ಒಂದು ಹುದ್ದೆಯನ್ನು ಗೆದ್ದಿದೆ. RSS ಸಂಯೋಜಿತ ABVPಗೆ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.

ಅಧ್ಯಕ್ಷ ‌ಸ್ಥಾನ‌ದಲ್ಲಿ ಎಡ ವಿದ್ಯಾರ್ಥಿ ಒಕ್ಕೂಟದಿಂದ AISA ಸಂಘಟನೆಯ ಧನಂಜಯ ವಿಜಯಶಾಲಿಯಾಗಿದ್ದಾನೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಿರ್ಸಾ ಅಂಬೇಡ್ಕರ್ ಪುಲೆ ಸ್ಟೂಡೆಂಡ್ ಅಸೋಸಿಯೇಷನ್(BAPSA) ಸಂಘಟನೆಯ ಪ್ರಿಯಾಂಶಿ ಆರ್ಯಾ ವಿಜಯಶಾಲಿಯಾಗದ್ದಾಳೆ. ಎಡ ವಿದ್ಯಾರ್ಥಿ ಒಕ್ಕೂಟದಿಂದ ಉಪಾಧ್ಯಕ್ಷ ‌ಸ್ಥಾನದಲ್ಲಿ‌ ಸ್ಪರ್ಧಿಸಿರುವ SFI ವಿದ್ಯಾರ್ಥಿ ಸಂಘಟನೆಯ ಅವಿಜಿತ್ ಘೋಷ್‌ ವಿಜಯಶಾಲಿಯಾಗಿದ್ದಾನೆ ಮತ್ತು ಸಹಕಾರ್ಯದರ್ಶಿಯ ಸ್ಥಾನಕ್ಕೆ ಎಡ‌ ಒಕ್ಕೂಟದ ‌AISF ಸಂಘಟನೆಯ ‌ಅಭ್ಯರ್ಥಿ ಮೊಹಮದ್ ಸಾಜಿದ್ ಜಯಗಳಿಸಿದ್ದಾನೆ. ಈ ಮೂಲಕ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟವು (ಜೆಎನ್‌ಯುಎಸ್‌ಯು) ಸುಮಾರು ಮೂರು ದಶಕಗಳ ನಂತರ ಎಡ ಬೆಂಬಲಿತ ಗುಂಪುಗಳಿಂದ ತನ್ನ ಮೊದಲ ದಲಿತ ಅಧ್ಯಕ್ಷರನ್ನು ಭಾನುವಾರ ಆಯ್ಕೆ ಮಾಡಿದೆ.

ನಾಲ್ಕು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಜೆಎನ್‌ಯು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ(AISA) ಧನಂಜಯ್, ಎಬಿವಿಪಿ ಅಭ್ಯರ್ಥಿ ಉಮೇಶ್ ಸಿ. ಅಜ್ಮೀರಾ ಎದುರು ಗೆಲುವು ಸಾಧಿಸಿದ್ದಾರೆ. ಧನಂಜಯ್ 2,598 ಮತಗಳನ್ನು ಪಡೆದರೆ, ಉಮೇಶ್ 1,676 ಮತಗಳಷ್ಟೇ ಗಳಿಸಿದ್ದಾರೆ.

ಈ ಕುರಿತು ದೇಶದ ಬಹುತೇಕ ಮಾಧ್ಯಮಗಳು ವರದಿ ಮಾಡಿವೆ. ಆದರೂ ಕೆಲ ಕನ್ನಡ ಮಾಧ್ಯಮಗಳು ಸುದ್ದಿಯನ್ನು ತಿರುಚಿ ಹಂಚಿಕೊಂಡಿವೆ. ಟೀಕೆಗಳ ನಂತರ ಈಗ ತಮ್ಮ ಸುದ್ದಿಯನ್ನು ಸುವರ್ಣ ನ್ಯೂಸ್ ಮತ್ತು ಹೊಸದಿಗಂತ ತಿದ್ದಿವೆ.

ಆದ್ದರಿಂದ ಜೆಎನ್‌ಯು ಚುನಾವಣೆಯಲ್ಲಿ ಕ್ಲೀನ್ ಸ್ವೀಪ್: ನಾಲ್ಕೂ ಸ್ಥಾನದಲ್ಲೂ ABVP ಅಭ್ಯರ್ಥಿಗಳಿಗೆ ಗೆಲುವು! ಎಂಬುದು ಸಂಪೂರ್ಣ ಸುಳ್ಳು.


ಇದನ್ನು ಓದಿ: Fact Check: ಜವಾಹರ್‌ಲಾಲ್ ನೆಹರು ತಮಗೆ ತಾವೇ “ಭಾರತ ರತ್ನ” ಘೋಷಿಸಿಕೊಂಡರು ಎಂಬುದು ಸುಳ್ಳು


ವಿಡಿಯೋ ನೋಡಿ: ಪಾಕಿಸ್ತಾನದಲ್ಲಿ ಹಿಂದು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *