ಭಾರತದ ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡು ಅವರನ್ನು ಭಯೋತ್ಪಾದಕರು, ಧರ್ಮ ದ್ರೋಹಿಗಳು ಎಂದು ಬಿಂಬಿಸುವ ಹುನ್ನಾರಗಳು ನಡೆಯುತ್ತಿರುವುದು ದುರಂತದ ಸಂಗತಿ. ಪ್ರತೀದಿನವೂ ಅನೇಕ ಸುಳ್ಳು ಆರೋಪಗಳನ್ನು ಹೊರಿಸಿ ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ನಮ್ಮ ಭಾರತೀಯ ಸಂವಿಧಾನದಲ್ಲಿ ಭಾರತೀಯ ಪ್ರತಿಯೊಬ್ಬ ಪ್ರಜೆಯನ್ನು ಆತನ ಧರ್ಮ, ಜಾತಿ, ಭಾಷೆ, ಹುಟ್ಟಿನ ಸ್ಥಳ, ಬಣ್ಣ ಹೀಗೆ ಯಾವ ಆಧಾರದ ಮೇಲೆಯೂ ತಾರತಮ್ಯ ಎಸಗಬಾರದು ಎಂದು ಹೇಳುತ್ತದೆ. ಆದರೆ ಇಂದು ಆಡಳಿತಾರೂಢ ಪಕ್ಷಗಳೇ ಈ ರೀತಿ ದ್ವೇಷ ರಾಜಕಾರಣ ಮತ್ತು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವುದು. ನಮ್ಮ ಭಾರತದ ಪರಂಪರೆಗೆ ಮಾಡುತ್ತಿರುವ ಅವಮಾನವಾಗಿದೆ. ನಮ್ಮ ಸಂವಿಧಾನಕ್ಕೆ ನಾವು ತೋರಿಸುತ್ತಿರುವ ಅಗೌರವವಾಗಿದೆ.
ಈಗ, ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿದ್ದಾರೆ. ಕಾವಲುಗಾರ ವಾಹನ ಹೀಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದರೂ ಜಿಹಾದಿಗಳು ವಾಹನವನ್ನು ಹೀಗೆ ಕಳುಹಿಸಲು ಹಠ ಹಿಡಿದಿದ್ದಾರೆ. ಎಂದು ಪ್ರತಿಪಾದಿಸಿದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪ್‌ನಲ್ಲಿ ಸಹ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಫ್ಯಾಕ್ಟ್‌ಚೆಕ್: 2023 ರ ಆಗಸ್ಟ್ 1 ರಂದು ಹೈದರಾಬಾದ್‌ನಿಂದ ಕರ್ನಾಟಕದ ವಾಡಿ ಜಂಕ್ಷನ್‌ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿತ್ತು. ಹಲ್ಕಟ್ಟಾ ಶರೀಫ್‌ನಲ್ಲಿ ಹಜರತ್ ಖ್ವಾಜಾ ಸೈಯದ್ ಮೊಹಮ್ಮದ್ ಬಡೇಶ ಕ್ವಾದ್ರಿ ಚಿಸ್ತಿ ಯಮಾನಿ ಅವರ 46 ನೇ ವಾರ್ಷಿಕೋತ್ಸವದ(ಉರುಸ್) ಆಚರಣೆಯಲ್ಲಿ ಪಾಲ್ಗೊಳ್ಳುವ ಯಾತ್ರಾರ್ಥಿಗಳ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನಾಲ್ಕು ವಿಶೇಷ ರೈಲುಗಳನ್ನು ಓಡಿಸಲಾಗಿತ್ತು. ಈ ಕುರಿತು ಅನೇಕರು ಯೂಟೂಬ್‌ನಲ್ಲಿ ವಿಡಿಯೋ ಸಹ ಹಂಚಿಕೊಂಡಿದ್ದು ಅದನ್ನಿಲ್ಲಿ ನೋಡಬಹುದು.
ಹಜರತ್ ಖ್ವಾಜಾ ಶೇಖ್ ಮೊಹಮ್ಮದ್ ಬಾದಶಾ ಖಾದ್ರಿ-ಉಲ್-ಚಿಶ್ತಿ ಯಮಾನಿ ರಾಯಚೂರಿ ರಹಮತುಲ್ಲಾನ್ ಅಲೈಹ್ ಅವರು ಭಾರತದಲ್ಲಿ ಚಿಸ್ತಿ ಪಂಥದ ಪ್ರಸಿದ್ಧ ಸೂಫಿ ಸಂತರಾಗಿದ್ದರು ಮತ್ತು ಅವರು ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ವಾಡಿಯ ಹೊರಗಿನ ಹಲ್ಕಟ್ಟಾ ಶರೀಫ್‌ನಲ್ಲಿ ಸಮಾಧಿಯಾಗಿದ್ದಾರೆ. ಈ ಉರುಸ್ ನಲ್ಲಿ ಪಾಲ್ಗೊಳ್ಳಲು ಅವರ ಸಾವಿರಾರು ಅನುಯಾಯಿಗಳು ಹಲ್ಕಟ್ಟಾ ಶರೀಫ್‌ಗೆ ಪ್ರಯಾಣಿಸುತ್ತಾರೆ. ಈ ಉರುಸ್ ಸಂತನ ಮರಣದ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.
ಜುಲೈ 27, 2023 ರಂದು ದಕ್ಷಿಣ ಮಧ್ಯ ರೈಲ್ವೆಯ ಈ ಪತ್ರಿಕಾ ಪ್ರಕಟಣೆಯಲ್ಲಿ, “ಹೈದರಾಬಾದ್-ವಾಡಿ ನಡುವೆ ಉರ್ಸ್ ಆಚರಣೆಗಾಗಿ ಕಾಯ್ದಿರಿಸದ ವಿಶೇಷ ರೈಲುಗಳು.” ಎಂದು ವಿಶೇಷ ರೈಲುಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವುದನ್ನು ಈ ಕೆಳಗೆ ನೋಡಬಹುದು.
ಕಳೆದ ವರ್ಷ ದರ್ಗಾದ ಹಸಿರು ಮಸೀದಿ ಕಟೌಟ್ ಅನ್ನು ಪರಿಗಣಿಸಿ ವಿಶೇಷ ರೈಲನ್ನು ಇದೇ ರೀತಿ ಅಲಂಕರಿಸಲಾಗಿತ್ತು. 2015 ರಿಂದ ಯಾತ್ರಾರ್ಥಿಗಳಿಗಾಗಿ ಇದೇ ರೀತಿಯಲ್ಲಿ ದಕ್ಷಿಣ ಮಧ್ಯ ರೈಲ್ವೆಯು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಅವುಗಳ ಟ್ವೀಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಅಲ್ಲದೆ, ಈ ಹಿಂದೆ ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಸಹ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಆದ್ದರಿಂದ ಹಬ್ಬಗಳ ಸಂದರ್ಭದಲ್ಲಿ ಹೆಚ್ಚುವರಿ ವಿಶೇಷ ರೈಲುಗಳನ್ನು ಬಿಡುವುದು ಮೊದಲಿನಿಂದಲೂ ನಡೆದುಕೊಂಡು ಬರುತ್ತಿದೆ. ಸಧ್ಯ ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್ ಆಗಿ ಬದಲಿಸಿದ್ದರು ಎಂಬ ಪ್ರತಿಪಾದನೆ ಸಂಪೂರ್ಣ ಎಂಬುದು ಸುಳ್ಳು.
ಇದನ್ನು ಓದಿ: ಮೋದಿಯವರ ಕಾಲದಲ್ಲಿ ನಿರ್ಮಿತವಾದ ಮುಂಬೈ ಸೇತುವೆ ಎಂದು ಚೀನಾದ ಪೋಟೋ ಹಂಚಿಕೊಳ್ಳಲಾಗುತ್ತಿದೆ
ವಿಡಿಯೋ ನೋಡಿ: ಡಿ.ಕೆ.ಶಿವಕುಮಾರ್ ಎಂದು BJP ನಾಯಕನ ಅಶ್ಲೀಲ ಫೋಟೋ ಹಂಚಿಕೆ
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ