Fact Check: ಕಾಂಗ್ರೆಸಿಗೆ ಲಾಭ ಆಗುವುದು ಬೇಡ, ನನ್ನ ಪರವಾಗಿ ಬಿಜೆಪಿಗೆ ಮತ ನೀಡಿ ಎಂದು ಈಶ್ವರಪ್ಪ ಹೇಳಿಲ್ಲ

ಈಶ್ವರಪ್ಪ

ಇತ್ತೀಚೆಗೆ ರಾಜಕೀಯ ನಾಯಕರ ನಕಲಿ ಹೇಳಿಕೆಯ ಪತ್ರಿಕಾ ವರದಿಗಳು ಸಾಕಷ್ಟು  ಸುದ್ದಿ ಮಾಡುತ್ತಿವೆ. ಲೋಕಸಭಾ ಚುನಾವಣಾ ಮೊದಲನೇ ಹಂತದ ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ನಮಗೆ ಹಿಂದುಗಳ ಮತ ಬೇಡ” ಎಂದಿದ್ದಾರೆ ಎಂದು ನಕಲಿ ವರದಿ ಹರಿಬಿಡಲಾಗಿತ್ತು. ನಂತರ, ಚಾಮರಾನಗರ ಬಿಜೆಪಿ ಅಭ್ಯರ್ಥಿ ಎಸ್‌ ಬಾಲರಾಜ್ ಅವರು ” ದೇಶಭಕ್ತ ಆರ್‌ಎಸ್‌ಎಸ್‌ಯಿಂದ ಮಾತ್ರ ಸಂವಿಧಾನ ಬದಲಿಸಲು ಸಾಧ್ಯ” ಎಂದು ಹೇಳಿದ್ದಾರೆ ಎಂದು ನಕಲಿ ವರದಿಯನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಡಲಾಗಿತ್ತು.

ಈಗ ಎರಡನೇ ಹಂತದ ಚುನಾವಣೆಗೆ ಇನ್ನು ಒಂದು ದಿನ ಬಾಕಿ ಇದೆ ಎನ್ನುವಾಗ, “ನನ್ನ ಪರವಾಗಿ ಬಿಜೆಪಿಗೆ ವೋಟು ಕೊಡಿ. ನನಗೆ ತಪ್ಪಿನ ಅರಿವಾಗಿದೆ, ಕಾಂಗ್ರೆಸಿಗೆ ಲಾಭ ಆಗುವುದು ಬೇಡ” ಎಂದು ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಮತ್ತು ಮಾಜಿ ಬಿಜೆಪಿ ನಾಯಕರಾದ ಈಶ್ವರಪ್ಪ ಅವರು ಹೇಳಿದ್ದಾರೆ ಎನ್ನಲಾದ ಪತ್ರಿಕಾ ವರದಿಯೊಂದು ಸಾಕಷ್ಟು ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್‌: ಈ ಪತ್ರಿಕಾ ವರದಿ ನಕಲಿಯಾಗಿದೆ. ಈಶ್ವರಪ್ಪನವರು ಈ ರೀತಿಯ ಹೇಳಿಕೆ ನೀಡಿರುವ ಕುರಿತು ಯಾವ ಮಾಧ್ಯಮಗಳು ವರದಿ ಮಾಡಿಲ್ಲ. ಈಶ್ವರಪ್ಪನವರು ಈ ಬಾರಿ ತಾನು ಪಕ್ಷೇತರವಾಗಿ ಗೆದ್ದು ಮೋದಿ ಬೆಂಬಲಿಸುತ್ತೇನೆ ಎಂದಿದ್ದಾರೆಯೇ ಹೊರತು ನನ್ನ ತಪ್ಪಿನ ಅರಿವಾಗಿದೆ, ನನ್ನ ಪರವಾಗಿ ಬಿಜೆಪಿಗೆ ಮತ ನೀಡಿ ಎಂದು ಹೇಳಿಕೆ ನೀಡಿಲ್ಲ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪನವರು “ಸುಳ್ಳು ಸುದ್ದಿ ಹರಡುವ ಮೂಲಕ ರಾಜಕೀಯ ಷಡ್ಯಂತ್ರವನ್ನು ಮಾಡಿದ್ದಾರೆ. ಸೋಲುವ ಹತಾಶೆಯಿಂದ ಇಂತಹ ಕೃತ್ಯಗಳನ್ನು ಮಾಡಿದ್ದಾರೆ. ಇದು ಅಪರಾಧ. ಕೇವಲ ಪತ್ರಿಕಾ ವರದಿ ಅಲ್ಲದೆ ‘ನನ್ನ ತಪ್ಪಿನ ಅರಿವಾಗಿ ಬಿಜೆಪಿ ಬೆಂಬಲಿಸಿದ್ದೇನೆ’ ಎನ್ನುವ ಅರ್ಥದಲ್ಲಿ ನನ್ನ ಮತ್ತು ಮೋದಿಯವರ ಪೋಟೋ ಬಳಸಿ ಸುಳ್ಳು ಪೋಸ್ಟರ್‌ ಕೂಡ ತಯಾರಿಸಿದ್ದಾರೆ. ಇಷ್ಟು ವರ್ಷದ ರಾಜಕಾರಣದಲ್ಲಿ ಇಂತಹ ಹೀನ ಕೃತ್ಯವನ್ನು ಇದೆ ಮೊದಲ ಬಾರಿ ನೋಡುತ್ತಿದ್ದೇನೆ. ರಾಘವೇಂದ್ರ(ಯಡಿಯೂರಪ್ಪನವರ ಹಿರಿಯ ಮಗ) ಅವರ ಮೇಲೆ ತನಿಖೆ ನಡೆಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ ಎಂದು ಟಿವಿ 9 ವರದಿ ಮಾಡಿದೆ.

ಆದ್ದರಿಂದ ಈಶ್ವರಪ್ಪನವರ ಹೇಳಿಕೆ ಎಂದು ಹರಿದಾಡುತ್ತಿರುವ ಪತ್ರಿಕಾ ವರದಿ ಸುಳ್ಳು ಸುದ್ದಿಯಾಗಿದೆ.


ಇದನ್ನು ಓದಿ: ಕರ್ನಾಟಕ ಕಾಂಗ್ರೆಸ್‌ ಕಾರ್ಯಕರ್ತರು ಮೋದಿ ಪ್ರತಿಕೃತಿ ಸುಡಲು ಹೋಗಿ ಬೆಂಕಿ ಹಚ್ಚಿಕೊಂಡಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *