ಗದಗದಲ್ಲಿ 200 ಯುನಿಟ್‌ಗಿಂತ ಹೆಚ್ಚು ಕರೆಂಟ್‌ ಬಳಸಿರುವ ಕಾರಣಕ್ಕಾಗಿ ಹೆಚ್ಚಿನ ಬಿಲ್‌ ಬಂದಿದೆಯೇ ಹೊರತು, ಗೃಹಜ್ಯೋತಿ ಯೋಜನೆಯಿಂದಲ್ಲ

ನೆನ್ನೆ 16 ಮೇ 2024 ರಂದು ನ್ಯೂಸ್‌ 18 ಸುದ್ದಿ ಮಾಧ್ಯಮದವರು ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯ ಕುರಿತಂತೆ ಲೇಖನವೊಂದನ್ನು ಪ್ರಕಟಿಸಿದ್ದು ಇದರಲ್ಲಿ “Gruha Jyothi: ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಶಾಕ್! 80-90 ರೂ ಬದಲಿಗೆ 400-500 ಕರೆಂಟ್ ಬಿಲ್​! ಸರ್ಕಾರದ ವಿರುದ್ಧ ಆಕ್ರೋಶ” ಎಂಬ ಶೀರ್ಷಿಕೆಯೊಂದಿಗೆ ಲೇಖನವೊಂದನ್ನು ಪ್ರಕಟಿಸಿದೆ. ಈ ವರದಿಯಲ್ಲಿ “ಗದಗ ನಗರದ ಗಂಗೀಮಡಿ ಬಡಾವಣೆಯ ಬಹುತೇಕ ಮನೆಗಳಿಗೆ ದುಪ್ಪಟ್ಟು ಬಿಲ್ ಬರುತ್ತಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಗೃಹಜ್ಯೋತಿ ಯೋಜನೆ ಜಾರಿಗೂ ಮುನ್ನ ಕೇವಲ 80ರಿಂದ 100 ರೂಪಾಯಿ ಬಿಲ್ ಬರುತ್ತಿತ್ತು. ಆದರೆ ಈಗ ಬರುತ್ತಿರುವ ಬಿಲ್ ನೋಡಿ ಬಡ ಕುಟುಂಬಗಳು ಕಂಗಾಲಾಗಿದ್ದು, ಹೆಸ್ಕಾಂಗೆ ಶಾಪ ಹಾಕುತ್ತಿದ್ದಾರೆ.” ಎಂದು ವರದಿಯಲ್ಲಿ ತಿಳಿಸಲಾಗಿದೆ.

ಫ್ಯಾಕ್ಟ್‌ಚೆಕ್‌: ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಗದಗ ಜಿಲ್ಲೆಯ ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ, ಹೆಸ್ಕಾಂ ಸಿಬ್ಬದಿ ” ಈಗ ಬೇಸಿಗೆ ಇರುವುದರಿಂದ ಸಾಮಾನ್ಯವಾಗಿಯೇ ಜನರು ಫ್ಯಾನ್‌, ಫ್ರಿಡ್ಜ್‌ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹೆಚ್ಚಾಗಿ ಬಳಸುತ್ತಾರೆ. ಹೆಚ್ಚಿಗೆ ಬಿಲ್ ಬಂದಿರುವ ಮನೆಗಳಲ್ಲಿ ಅವರು 200 ಯುನೀಟ್‌ಗಿಂತ ಹೆಚ್ಚಿಗೆ ಬಳಸಿದ್ದಾರೆ ಆಗಾಗಿ ಅಷ್ಟು ಬಿಲ್ ಬಂದಿದೆಯೇ ಹೊರತು ಬೇರೇನಿಲ್ಲ. ನಮ್ಮ ಸಿಬ್ಬಂದಿಗಳು ಪ್ರತೀ ಮನೆಗಳ ಮೀಟರ್‌ ಬೋರ್ಡ್‌ ರೀಡಿಂಗ್‌ ಅನುಗುಣವಾಗಿಯೇ ಬಿಲ್ ನೀಡಿರುತ್ತಾರೆಯೇ ಹೊರತು ನಾವು ಅದರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ” ಎಂದರು.

ಗೃಹಜ್ಯೋತಿ ಯೋಜನೆ ಜಾರಿಯಾದ ನಂತರ ಪ್ರತಿ ಯುನೀಟ್‌ನ ಬೆಲೆ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲ ಇದು ನಿಜವೇ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಹೆಸ್ಕಾಂ ಅಧಿಕಾರಿ ” ಇಲ್ಲ ಮೊದಲಿನಂತೆಯೇ 5 ರೂಪಾಯಿ 90 ಪೈಸೆ ಇದೆ ಎಂದಿದ್ದಾರೆ. ಗದಗ ನಗರದ ಗಂಗೀಮಡಿ ಬಡಾವಣೆ ಬಿಟ್ಟು ಬೇರೆ ಬಡಾವಣೆಗಳಲ್ಲಿಯೂ ಇದೇ ರೀತಿ ಆಗಿರುವ ಕುರಿತು ಮಾಹಿತಿ ಕೇಳಿದಾಗ, “ಸಧ್ಯ ಅಂತಹ ಯಾವುದೇ ಆರೋಪ ಕೇಳಿ ಬಂದಿಲ್ಲ” ಎಂದಿದ್ದಾರೆ.

ವಿದ್ಯುತ್ ದರದ ಹೆಚ್ಚಳದ ಕುರಿತು ಹುಡುಕಿದಾಗ ಮೇ 2023ರಲ್ಲಿಯೇ(ಗೃಹ ಜ್ಯೋತಿ ಯೋಜನೆಗೂ ಮುನ್ನ) ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರ ಹೆಚ್ಚಳ ಮಾಡಿರುವುದು ವರದಿಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್’ಸಿ) ನಿರ್ಧಾರದಿಂದ ದರ ಏರಿಕೆಯಾಗಿದೆ. ಎಫ್’ಸಿಎ (ಇಂಧನ ಶುಲ್ಕ) ಪ್ರತೀ ಬಾರಿ 20-50 ಪೈಸೆ ಇರುತ್ತದೆ. ಆದರೆ, ಈಗ ರೂ.2.55 ಹೆಚ್ಚಿಸಿರುವುದರಿಂದ ತೊಂದರೆಯಾಗುತ್ತಿದೆ ಎಂದು ವಾಣಿಜ್ಯೋದ್ಯಮಿಗಳು ಬೇಸರ ವ್ಯಕ್ತಪಡಿಸಿದ್ದರು.

ಆದ್ದರಿಂದ ಕರೆಂಟ್‌ ಬಿಲ್‌ ಹೆಚ್ಚಾಗಿ ಬಂದಿರುವ ಮನೆಗಳಲ್ಲಿ 200 ಯುನಿಟ್‌ಗಿಂತ ಹೆಚ್ಚು ಕರೆಂಟ್‌ ಬಳಸಿರುವ ಕಾರಣಕ್ಕಾಗಿ ಹೆಚ್ಚಿನ ಬಿಲ್‌ ಬಂದಿದೆಯೇ ಹೊರತು, ಗೃಹಜ್ಯೋತಿ ಯೋಜನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.


ಇದನ್ನು ಓದಿ: ಟಿಪ್ಪು ಸುಲ್ತಾನ್‌ ಸಿನಿಮಾದಲ್ಲಿ ಶಾರುಖ್‌ ಖಾನ್‌ ಅಭಿನಯಿಸಲಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕುರಿತು ಮಾಡಿದ ಭಾಷಣವನ್ನು ಸಂವಿಧಾನ ಬದಲಿಸುತ್ತೇವೆ ಎಂದಿದ್ದರು ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *