Fact Check | CSK ಅಭಿಮಾನಿಗಳ ಮೇಲೆ RCB ಅಭಿಮಾನಿಗಳಿಂದ ಹಲ್ಲೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ” ಇತ್ತೀಚೆಗೆ ಚೆನೈ ಸೂಪರ್‌ ಕಿಂಗ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವೆ ನಡೆದ ಐಪಿಎಲ್‌ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಆರ್‌ಸಿಬಿ ಸೋಲಿಸಿ ಪ್ಲೇ ಆಫ್‌ಗೆ ಅರ್ಹತೆಯನ್ನು ಪಡೆದುಕೊಂಡಿದೆ. ಆದರೆ ಈ ಪಂದ್ಯದ ಬಳಿಕ ಸಂಭ್ರಮದಲ್ಲಿ ಆರ್‌ಸಿಬಿ ಅಭಿಮಾನಿಗಳು ಸಿಎಸ್‌ಕೆ ಅಭಿಮಾನಿಗಳ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಕೆಲವರು ಹಲ್ಲೆ ನಡೆಸಿದ್ದಾರೆ.” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋ ನೋಡಿದ ಹಲವರು ಇದು ನಿಜವಿರಬಹುದು ಎಂದು ಭಾವಿಸಿದ್ದಾರೆ. ಅದರಲ್ಲೂ ಸಿಎಸ್‌ಕೆ ಅಭಿಮಾನಿಗಳು ಸಾಕಷ್ಟು ಮಂದಿ ಇದೇ ವಿಡಿಯೋವನ್ನು ಹಂಚಿಕೊಂಡು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಹಲವರು ಹಲವು ರೀತಿಯಾದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ವಿಡಿಯೋದಲ್ಲಿ ಉಲ್ಲೇಖಿಸಿರುವ ಅಂಶ ನಿಜವೇ ಎಂಬುದನ್ನು ಈ  ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋದ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ 12 ಏಪ್ರಿಲ್‌ 2018ರಲ್ಲಿ ಟೈಮ್ಸ್‌ ಆಫ್‌ ಇಂಡಿಯಾ ಪ್ಲಸ್‌ ಸುದ್ದಿ ಸಂಸ್ಥೆ ತನ್ನ ಎಕ್ಸ್‌ ಖಾತೆಯಲ್ಲಿ  ” @msdhoni ಅವರ ಅಭಿಮಾನಿಗಳಲ್ಲಿ ಒಬ್ಬರಾದ ಸರವಣನ್ ಹರಿಯನ್ನು ಮಂಗಳವಾರ ಚೆಪಾಕ್ ಕ್ರೀಡಾಂಗಣದ ಹೊರಗೆ ಥಳಿಸಲಾಯಿತು. ಎಲ್ಲಾ ಪ್ರತಿಭಟನೆಗಳು ಮತ್ತು ಹಿಂಸಾಚಾರದ ಪರಿಣಾಮವಾಗಿ #WhistlePodu ( ಸಿಎಸ್‌ಕೆ ಅಭಿಮಾನಿಗಳು ಚೆನೈ ತಂಡವನ್ನು ಉತ್ತೇಜಿಸಲು ಕೂಗುವ ಘೋಷಣೆ) ಪಂದ್ಯ ಪುಣೆಗೆ ಸ್ಥಳಾಂತರಗೊಂಡಿದೆ!” ಎಂದು ಪೋಸ್ಟ್‌ ಮಾಡಿದೆ. 

ಇನ್ನು ಈ ಕುರಿತು ನ್ಯೂಸ್‌ ನೇಷನ್‌  ಮತ್ತು ಇಂಡಿಯಾ ಟುಡೆ ಕೂಡ ಈ ಬಗ್ಗೆ 11 ಏಪ್ರಿಲ್‌ 2018ರಂದು ವರದಿಯನ್ನು ಮಾಡಿದ್ದು, ಈ ವರದಿಯಲ್ಲಿ ” ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಚೆನೈನಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಇದೇ ಪ್ರತಿಭಟನೆಯ ಬಿಸಿ ಐಪಿಎಲ್‌ ಪಂದ್ಯಾವಳಿಗೆ ಕೂಡ ಮುಟ್ಟಿದೆ. ಐಪಿಎಲ್‌ ಪಂದ್ಯಾವಳಿಗಳು ತಮಿಳುನಾಡಿನಲ್ಲಿ ನಡೆಯಬಾರದು ಎಂದು ಹೋರಾಟಗಾರರು ಪ್ರತಿಭಟಿಸಿದ್ದಾರೆ. ಈ ವೇಳೆ ಮಹೇಂದ್ರ ಸಿಂಗ್‌ ಧೋನಿ ಅವರ ಅಭಿಮಾನಿ  ಸರವಣನ್ ಹರಿ ಅವರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ” ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇನ್ನು ಈ ಕುರಿತು ದ ನ್ಯೂಸ್‌ ಮಿನಿಟ್‌ ಮತ್ತು NDTV ಕೂಡ ಇದೇ ರೀತಿ ವರದಿ ಮಾಡಿವೆ. ಚೆನೈ ತಂಡದ ಉಳಿದ ಪಂದ್ಯಗಳನ್ನು ಪುಣೆಗೆ ಸ್ಥಳಾಂತರ ಮಾಡಲಾಗಿದೆ ಎಂದು ವರದಿ ಕೂಡ ಪ್ರಕಟ ಮಾಡಿದ್ದವು. ಇನ್ನು ಹೆಚ್ಚಿನ ಮಾಹಿತಿಗಾಗಿ ಚೆನೈ ಅಭಿಮಾನಿಗಳ ಮೇಲೆ ಆರ್‌ಸಿಬಿ ಅಭಿಮಾನಿಗಳಿಂದ ಹಲ್ಲೆ ನಡೆಸಿರುವ ಯಾವುದಾದರು ವರದಿ ಮಾಡಿದ್ದಾರೆಯೇ ಎಂದು ಪರಿಶೀಲಿಸಿದಾಗ ಆ ರೀತಿಯ ಯಾವುದೇ ವರದಿಗಳು ಕಂಡು ಬಂದಿಲ್ಲ. ಒಂದು ವೇಳೆ ಇಂತಹ ಘಟನೆ ನಡೆದಿದ್ದರೆ ಅದು ರಾಷ್ಟ್ರ  ಮಟ್ಟದಲ್ಲಿ ಸುದ್ದಿಯಾಗ ಬೇಕಿತ್ತು. ಆದರೆ ಆ ರೀತಿಯ ವರದಿಗಳೇ ಕಂಡು ಬಂದಿಲ್ಲ.

ಒಟ್ಟಾರೆಯಾಗಿ, ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಿಎಸ್‌ಕೆ ತಂಡ ಅಭಿಮಾನಿಗಳ ಮೇಲೆ ಆರ್‌ಸಿಬಿ ಅಭಿಮಾನಿಗಳ ಹಲ್ಲೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಮತ್ತು ವೈರಲ್‌ ವಿಡಿಯೋ ಕಾವೇರಿ ನದಿ ನೀರು ಗಲಾಟೆಯ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ ಹಾಗೂ 6 ವರ್ಷದ ಹಿಂದಿನ ವಿಡಿಯೋವಾಗಿದೆ.


ಇದನ್ನೂ ಓದಿ : 2019ರಲ್ಲಿ ತಮಿಳುನಾಡಿನ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿರುವುದು UAE ರಾಜಕುಮಾರಿಯೇ ಹೊರತು, ದುಬೈ ಶೇಖ್‌ನ ಪತ್ನಿಯಲ್ಲ


ಈ ವಿಡಿಯೋ ನೋಡಿ : 2019ರಲ್ಲಿ ತಮಿಳುನಾಡಿನ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿರುವುದು UAE ರಾಜಕುಮಾರಿಯೇ ಹೊರತು, ದುಬೈ ಶೇಖ್‌ನ ಪತ್ನಿಯಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *