Fact Check | ಪಾಯಲ್‌ ಕಪಾಡಿಯಾ ಅವರ ಹೆಸರಿನಲ್ಲಿ ನಕಲಿ ಎಕ್ಸ್‌ (ಟ್ವಿಟರ್‌) ಖಾತೆ ಸೃಷ್ಟಿ

ಪಾಯಲ್​ ಕಪಾಡಿಯಾ ಅವರಿಗೆ ಕಾನ್​ ಚಿತ್ರೋತ್ಸವದಲ್ಲಿ ‘ಗ್ರ್ಯಾಂಡ್​ ಪ್ರಿಕ್ಸ್​’ ಪ್ರಶಸ್ತಿ ನೀಡಲಾಗಿದೆ. ‘ಆಲ್​ ವಿ ಇಮ್ಯಾಜಿನ್​ ಆಯಸ್​ ಲೈಟ್​’ ಚಿತ್ರಕ್ಕೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದ್ದು, ಇದೇ ವೇಳೆಯಲ್ಲಿ ಅವರ ಎಕ್ಸ್‌ ( ಈ ಹಿಂದಿನ ಟ್ವಿಟರ್‌ ) ಖಾತೆ ಚರ್ಚೆಗೆ ಕಾರಣವಾಗಿದೆ. ಕಾರಣ ಪಾಯಲ್‌ ಕಾಪಾಡಿಯಾ ಅವರ ಟ್ವಿಟರ್‌ ಖಾತೆಯಲ್ಲಿ ಯಾವುದು ನಿಜವಾದ ಖಾತೆ ಮತ್ತು ಯಾವುದು ನಕಲಿ ಖಾತೆ ಎಂಬ ಮಾಹಿತಿ ಸಿಗದೆ, ಹಲವು ಗಣ್ಯವ್ಯಕ್ತಿಗಳು ಸೇರಿದಂತೆ, ಚಿತ್ರರಂಗದ ನಟ-ನಟಿಯರಲ್ಲೂ ಕೂಡ ಗೊಂದಲವನ್ನು ಉಂಟು ಮಾಡಿದೆ.

ಪಾಯಲ್‌ ಕಪಾಡಿಯಾ ಅವರು ಪ್ರಶಸ್ತಿ ಗೆದ್ದ ನಂತರ ಸಾಕಷ್ಟು ಮಂದಿ ಅವರಿಗೆ ಸಾಮಾಜಿಕ ಜಾಲತಾಣವಾದ ಎಕ್ಸ್‌ ಖಾತೆಯಿಂದ ಅಭಿನಂದನೆಗಳನ್ನು ಸಲ್ಲಿಸಿದ್ದರು, ಆದರೆ ಈ ಅಭಿನಂದನೆ ಸಲ್ಲಿಕೆಗೆ @PayalKapadial ಎಂಬ ಎಕ್ಸ್‌ ಖಾತೆಯಿಂದ ಪ್ರತಿಕ್ರಿಯೆಗಳು ಕೂಡ ಬರುತ್ತಿದ್ದವು. ಜೊತೆಗೆ ಈ ಖಾತೆಗೆ 12.6 ಸಾವಿರ ಹಿಂಬಾಲಕರು ಇದ್ದು, ಹಲವು ಗಣ್ಯರು ಕೂಡ ಈ ಖಾತೆಯನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಈ ಖಾತೆಯ ಕುರಿತು ನಿಖರತೆ ಇಲ್ಲದ ಕಾರಣ ಹಲವು ಅನುಮಾನಗಳು ಕೂಡ ಮೂಡೋದಕ್ಕೆ ಪ್ರಾರಂಭವಾಗಿದೆ.

ಫ್ಯಾಕ್ಟ್‌ಚೆಕ್‌

ಪಾಯಲ್‌ ಕಪಾಡಿಯ ಅವರ ಖಾತೆಯಲ್ಲಿ 12.6 ಸಾವಿರ ಹಿಂಬಾಲಕರು ಇದ್ದರೂ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡುವಾಗ ಪಾಯಲ್‌ ಕಪಾಡಿಯ ಅವರ ಖಾತೆಯನ್ನು ಇಲ್ಲಿ ಉಲ್ಲೇಖಿಸಿಲ್ಲ. ಇದಲ್ಲದೆ ಕೆಲವು ಸಿನಿಮಾ ನಟ ನಟಿಯರು ಕೂಡ ಪಾಯಲ್‌ ಅವರ ಎಕ್ಸ್‌ ಖಾತೆಯನ್ನು ಉಲ್ಲೇಖಿಸದೆ ಟ್ವೀಟ್‌ ಮಾಡಿರುವುದು ಕಂಡು ಬಂದಿದೆ. ಹೀಗೆ ಹಲವು ಗಣ್ಯರು ಉಲ್ಲೇಖಿಸದೇ ಇದ್ದರೂ @PayalKapadial  ಖಾತೆಯಿಂದ ಮಾತ್ರ ಈ ಟ್ವೀಟ್‌ಗಳಿಗೆ ಪ್ರತಿಕ್ರಿಯೆಗಳು ಬರಲು ಆರಂಭಿಸಿದೆ.. ಜೊತೆಗೆ ಈ ಖಾತೆಯೊಂದಿಗೆ ಇನ್ನೂ ಹಲವು ಖಾತೆಗಳು ಲಿಂಕ್‌ ಹೊಂದಿರುವುದು ಕೂಡ ಕಂಡು ಬಂದಿದೆ.

ಇನ್ನು ಈ ಖಾತೆಯ ಮಾಹಿತಿ ವಿಭಾಗದಲ್ಲಿ ಪಾಯಲ್‌ ಕಪಾಡಿಯಾ ಅವರಿಗೂ ಈ ಎಕ್ಸ್‌ ಖಾತೆಗೂ ಯಾವುದೇ ರೀತಿಯಾದ ಸಂಬಂಧವಿಲ್ಲ, ಇದೊಂದು ನಕಲಿ ಖಾತೆಯಾಗಿದೆ ಎಂದು ಬರೆದುಕೊಳ್ಳಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಹುಡುಕಾಟ ನಡೆಸಿದಾಗ ಕಲಾವಿದೆ ರಿಚಾಚಂದ ಅವರ ಟ್ವೀಟ್‌ ಕಾಣಿಸಿಕೊಂಡಿದ್ದು, ಅದರಲ್ಲಿ ಅವರು ” ಇದು ಪಾಯಲ್‌ ಕಪಾಡಿಯ ಅವರ ನಿಜವಾದ ಖಾತೆ ಇದನ್ನು ಹಿಂಬಾಲಿಸಿ. ಧನ್ಯವಾದಗಳು” ಎಂದು ಪೋಸ್ಟ್‌ ಮಾಡಿರುವುದು ಕಂಡು ಬಂದಿದೆ.

ರಿಚಾಚಂದ ಅವರ ಪೋಸ್ಟ್‌ನಿಂದ ಟ್ಯಾಗ್‌ ಮಾಡಲಾಗಿದ್ದ ಪಾಯಲ್‌ ಕಪಾಡಿಯ ಅವರ ಖಾತೆಯನ್ನು ಪರಿಶೀಲನೆ ನಡೆಸಿದಾಗ @PayalKapadia86 ಎಂಬ ಖಾತೆ ಕಾಣಿಸಿಕೊಂಡಿದ್ದು ಅದರ ಮಾಹಿತಿ ವಿಭಾಗದಲ್ಲಿ ” ಸಿನಿಮಾ ನಿರ್ಮಾಪಕಿ ಪಾಯಲ್‌ ಕಪಾಡಿಯಳ ಅಧಿಕೃತ ಖಾತೆ” ಎಂದು ಬರೆದಿರುವುದ ಕಂಡು ಬಂದಿದೆ. ಇದರಲ್ಲಿ 3061 ಜನ ಹಿಂಬಾಲಕರು ಇದ್ದು, ಮೇ 2024ರಂದು ಎಕ್ಸ್‌ ( ಟ್ವಿಟರ್‌ ) ಖಾತೆಗೆ ಸೇರ್ಪಡೆಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಪಾಯಲ್‌ ಕಪಾಡಿಯ ಅವರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಖಾತೆಯನ್ನು ತೆರೆದು ಗಣ್ಯ ವ್ಯಕ್ತಿಗಳನ್ನು ಮತ್ತು ಜನ ಸಾಮಾನ್ಯರು ದಾರಿ ತಪ್ಪಿಸಿದ್ದಾರೆ. ಹಾಗೂ ಪಾಯಲ್‌ ಕಪಾಡಿಯ ಅವರು ಈ ಹಿಂದೆ ಯಾವುದೇ ಎಕ್ಸ್‌ ಖಾತೆಯನ್ನು ಹೊಂದಿಲ್ಲ. ಇತ್ತೀಚೆಗೆ ಅವರು ಎಕ್ಸ್‌ ಖಾತೆ ತೆರೆದಿದ್ದಾರೆ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ : Fact Check | ದೆಹಲಿಯಲ್ಲಿ ವಿದ್ಯುತ್‌ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ ಎಂಬುದು ಸುಳ್ಳು..!


ಈ ವಿಡಿಯೋ ನೋಡಿ : Fact Check | ದೆಹಲಿಯಲ್ಲಿ ವಿದ್ಯುತ್‌ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ ಎಂಬುದು ಸುಳ್ಳು..!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *