Fact Check | ದೆಹಲಿಯಲ್ಲಿ ವಿದ್ಯುತ್‌ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ ಎಂಬುದು ಸುಳ್ಳು..!

“ಇಂದಿನಿಂದ ದೆಹಲಿಯಲ್ಲಿ 46 ಲಕ್ಷ ಕುಟುಂಬಗಳಿಗೆ ವಿದ್ಯುತ್ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗುವುದು. ಅಂದರೆ ನಾಳೆಯಿಂದ ದೆಹಲಿಯಲ್ಲಿ ಗ್ರಾಹಕರು ಪಡೆಯುವ ವಿದ್ಯುತ್ ಬಿಲ್‌ಗಳು ಇನ್ನು ಮುಂದೆ ಸಬ್ಸಿಡಿಯನ್ನು ಒಳಗೊಂಡಿರುವುದಿಲ್ಲ. ಹಾಗಾಗಿ ಶೂನ್ಯ ಬಿಲ್ ಪಡೆಯುತ್ತಿದ್ದವರು ನಾಳೆಯಿಂದ ಹೆಚ್ಚಿನ ಬಿಲ್ ಪಾವತಿಸಲು ಆರಂಭಿಸಬೇಕಾಗುತ್ತದೆ. ಶೇ.50 ರಷ್ಟು ರಿಯಾಯಿತಿ ಪಡೆಯುತ್ತಿದ್ದವರು ಕೂಡ ಹೆಚ್ಚಿನ ಬಿಲ್‌ಗಳನ್ನು ಪಡೆಯುತ್ತಾರೆ ಎಂದು ಆಪ್‌ ಸಚಿವೆ ಅತಿಶಿ ಹೇಳಿದ್ದಾರೆ ಎಂಬ ವಿಡಿಯೋವೊಂದು ವೈರಲ್ ಆಗಿದೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ “ಉಚಿತಕ್ಕಾಗಿ ಮತ ಹಾಕಿದ ಜನರು ಇದಕ್ಕೆ ಅರ್ಹರು..! ಉಚಿತಗಳು ಆರ್ಥಿಕ ವಿಪತ್ತಿಗೆ ಖಚಿತವಾದ ವಿಧಾನವಾಗಿದೆ. ಇದೀಗ ದೆಹಲಿಯ ಜನರಿಗೆ ಅರ್ಥವಾಗುತ್ತಿರಬಹುದು” ಎಂದು ಹಲವರು ತಮ್ಮ ಎಕ್ಸ್ ಖಾತೆಯಲ್ಲಿ ಅತಿಶಿ ಅವರ ಹೇಳಿಕೆಯ ವಿಡಿಯೋದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ವೈರಲಾಗುತ್ತಿರುವ ವಿಡಿಯೋ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್

ಈ ವೈರಲ್ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಿದ್ದು,  14 ಏಪ್ರಿಲ್ 2023 ರಂದು ANI ಸುದ್ದಿ ಸಂಸ್ಥೆ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ವೊಂದು ಕಂಡುಬಂದಿದೆ. ಈ ಪೋಸ್ಟ್‌ನಲ್ಲಿ, ವೈರಲ್ ವಿಡಿಯೋದಲ್ಲಿನ ಅತಿಶಿಯವರ ಸಂಪೂರ್ಣ ಹೇಳಿಕೆಯ ವಿಡಿಯೋವನ್ನು ಕಾಣಬಹುದಾಗಿದೆ.

ಈ ವಿಡಿಯೋದಲ್ಲಿ ಆಪ್‌ ಸಚಿವೆ ಅತಿಶಿ ಅವರು “ಅರವಿಂದ್ ಕೇಜ್ರಿವಾಲ್‌ ಸರ್ಕಾರವು ವಿದ್ಯುತ್ ಸಬ್ಸಿಡಿಯನ್ನು ನೀಡುತ್ತದೆ. ಇದರ ಅಡಿಯಲ್ಲಿ 200 ಯೂನಿಟ್ ಗಳವರೆಗೆ ವಿದ್ಯುತ್ ಉಚಿತವಾಗಿದೆ. 200 ರಿಂದ 400 ಯೂನಿಟ್ ವರೆಗೆ ಶೇಕಡ 50ರಷ್ಟು ವಿದ್ಯುತ್ ಬಿಲ್ ಮನ್ನಾ ಆಗಿದೆ. ಈ ಸಹಾಯಧನವನ್ನ ವಕೀಲರು ರೈತರು ಮತ್ತು 1984ರ ಗಲಭೆಯ ಸಂತ್ರಸ್ತರಿಗೂ ನೀಡಲಾಗುತ್ತಿತ್ತು. ಆದರೆ ಇಂದಿನಿಂದ ಎಲ್ಲಾ ವಿದ್ಯುತ್ ಸಬ್ಸಿಡಿಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಕಾರಣ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು. ಆಪ್‌ ಸಚಿವರನ್ನು ಹತ್ತಿಕ್ಕುವ ಕೆಲಸವನ್ನು ಲೆಫ್ಟಿನೆಂಟ್‌ ಗವರ್ನರ್‌ ಮಾಡುತ್ತಿದ್ದಾರೆ. ವಿದ್ಯುತ್ ಸಬ್ಸಿಡಿ ವಿತರಣೆಗೆ ಅವರು ಅನುಮೋದನೆಯನ್ನು ನೀಡುತ್ತಿಲ್ಲ” ಎಂದು ಹೇಳಿಕೆಯನ್ನು ನೀಡಿದ್ದರು.

ಇದಾದ ಬಳಿಕ 8 ಮಾರ್ಚ್ 2024 ರಂದು ಇಂಡಿಯನ್ ಎಕ್ಸ್‌ಪ್ರೆಸ್‌ ಪ್ರಕಟಿಸಿದ ವರದಿಯಲ್ಲಿ, ಕೇಜ್ರಿವಾಲ್ ತಮ್ಮ ನಿವಾಸದಲ್ಲಿ ಕ್ಯಾಬಿನೆಟ್ ಸಭೆ ನಡೆಸಿದ ನಂತರ ವಿದ್ಯುತ್ ಸಬ್ಸಿಡಿ ಯೋಜನೆ 2025 ರ ವರೆಗೂ ಮುಂದುವರೆಯುತ್ತದೆ ಎಂದು ಘೋಷಿಸಿದ್ದರು.

ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ..
ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ..

ಬಳಿಕ 14 ಏಪ್ರಿಲ್ 2024 ರಂದು ಮಿಂಟ್‌ ನಲ್ಲಿ ಪ್ರಕಟವಾದ ವರದಿಯ ಪ್ರಕಾರ ವಿಕೆ ಸಕ್ಸೇನಾ ಅವರು ಆಪ್‌ ಸಚಿವರ ಆರೋಪಗಳನ್ನು ತಳ್ಳಿಹಾಕಿದ್ದು, ವಿದ್ಯುತ್ ಸಬ್ಸಿಡಿ 2023 ರಿಂದ 2024ಕ್ಕೆ ವಿಸ್ತರಣೆ ಮಾಡಲು ಅನುಮೋದನೆಯನ್ನು ನೀಡಲಾಗಿದೆ ಅಂತಲೂ ಹೇಳಿಕೆಯನ್ನು ನೀಡಿದ್ದರು.

ಮಿಂಟ್‌ ವರದಿ
ಮಿಂಟ್‌ ವರದಿ

ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವಿದ್ಯುತ್‌ ಸಬ್ಸಿಡಿಯ ಕುರಿತು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಮತ್ತು ಆಪ್‌ ಸಚಿವರ ನಡುವೆ ಜಟಾಪಟಿ ಇದ್ದದ್ದು ನಿಜ ಎಂಬುದು ಗೊತ್ತಾಗಿದೆ.ಆದರೆ ದೆಹಲಿಯಲ್ಲಿ ವಿದ್ಯುತ್ ಸಬ್ಸಿಡಿಯನ್ನು ಕಡಿತಗೊಳಿಸಲಾಗಿದೆ ಎಂಬುದು ಸುಳ್ಳು. ಇಲ್ಲಿ ಅತಿಶಿ ಅವರ ವಿಡಿಯೋದಲ್ಲಿ ಸಬ್ಸಿಡಿಯನ್ನು ನಿಲ್ಲಿಸಲಾಗುತ್ತದೆ ಅದಕ್ಕೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರೇ ಕಾರಣ ಎಂಬ ಅಂಶವನ್ನು ತೆಗೆದುಹಾಕಿ ವಿಡಿಯೋವನ್ನು ಅರ್ಧ ಎಡಿಟ್ ಮಾಡಿ ದೆಹಲಿಯಲ್ಲಿ ವಿದ್ಯುತ್ ಸಬ್ಸಿಡಿ ನಿಲ್ಲಿಸಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಹರಡಲಾಗಿದೆ ಎಂಬುದು ಹಲವು ವರದಿಗಳಿಂದ ಸಾಬೀತಾಗಿದೆ.


ಇದನ್ನೂ ಓದಿ : ಕರೋನಾ ಲಸಿಕೆ ವಿಚಾರಿಸಿ ಬರುವ ಕರೆಯನ್ನು ಸ್ವೀಕರಿಸಿದರೆ ನಿಮ್ಮ ಮೊಬೈಲ್ ಹ್ಯಾಕ್‌ ಆಗುತ್ತದೆ ಎಂಬ ಸಂದೇಶ ಸುಳ್ಳು


ಈ ವಿಡಿಯೋ ನೋಡಿ : ಕರೋನಾ ಲಸಿಕೆ ವಿಚಾರಿಸಿ ಬರುವ ಕರೆಯನ್ನು ಸ್ವೀಕರಿಸಿದರೆ ನಿಮ್ಮ ಮೊಬೈಲ್ ಹ್ಯಾಕ್‌ ಆಗುತ್ತದೆ ಎಂಬ ಸಂದೇಶ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *