“ಶರದ್ ಪವಾರ್ ಅವರ ಎನ್‌ಸಿಪಿ ಪಕ್ಷ ಅಜ್ಮಲ್ ಕಸಬ್ ಪರ ವಾದಿಸಿದ್ದ ವಕೀಲ ಮಜೀದ್ ಮೆಮನ್ ಅವರನ್ನು ರಾಜ್ಯಸಭಾ ಸಂಸದರನ್ನಾಗಿಸಿದರೆ, ಕಸಬ್ ವಿರುದ್ಧ ವಿಚಾರಣೆ ನಡೆಸಿ ಮರಣದಂಡನೆ ಶಿಕ್ಷೆಗೆ ಗುರಿಪಡಿಸಿದ ಉಜ್ವಲ್ ನಿಕಮ್‌ಗೆ ಬಿಜೆಪಿ ಎಂಪಿ ಟಿಕೆಟ್ ನೀಡಿದೆ.” ಎಂಬ ಬರಹದೊಂದಿಗೆ ಪೋಸ್ಟ್‌ವೊಂದು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದೆ. ಈ ಮೂಲಕ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಉಗ್ರಗಾಮಿ ಪರವಾದ ನಿಲುವನ್ನು ಪರೋಕ್ಷವಾಗಿ ಹೊಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇದೇ ವಿಚಾರವನ್ನು ಲಾಭವಾಗಿ ಬಳಸಿಕೊಳ್ಳುತ್ತಿರುವ ಹಲವರು ಕಾಂಗ್ರೆಸ್ ಮತ್ತು ವಿಪಕ್ಷಗಳ ವಿರುದ್ಧ ಟೀಕಾ ಪ್ರಹಾರವನ್ನು ನಡೆಸುತ್ತಿದ್ದಾರೆ. ಸಾಕಷ್ಟು ಮಂದಿ “ಕಾಂಗ್ರೆಸ್‌ನಿಂದ ಬೇರ್ಪಟ್ಟು ಉದ್ಭವವಾದ ಮತ್ತೊಂದು ಕಾಂಗ್ರೆಸ್‌ನಿಂದ ಏನನ್ನು ನಿರೀಕ್ಷಿಸಲಾಗುತ್ತದೆ?” ಎಂದು ಪರೋಕ್ಷವಾಗಿ ಕಾಂಗ್ರೆಸ್ ಉಗ್ರಗಾಮಿಗಳನ್ನು ಬೆಂಬಲಿಸುವ ಪಕ್ಷ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಹೀಗೆ ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಅಂಶ ನಿಜವೆ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.
The Difference:
Sharad Pawar made Ajmal Kasab's lawyer, Majeed Memon, Rajya Sabha MP.
And BJP gave MP ticket to Ujjwal Nikam, who hanged that terrorist Kasab.
Difference is clear. That's why Kejriwal said that if Modi wins again, then all corrupt politicians of…
— MJ (@MJ_007Club) May 12, 2024
ಫ್ಯಾಕ್ಟ್‌ಚೆಕ್
ವೈರಲ್ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಬಿಜೆಪಿಯು ವಕೀಲ ಉಜ್ವಲ್ ನಿಕಮ್ ಅವರಿಗೆ ಮುಂಬೈ ನಾರ್ತ್ ಸೆಂಟ್ರಲ್‌ನಿಂದ ಲೋಕಸಭೆಯ ಟಿಕೆಟ್ ನೀಡಿರುವುದು ಖಚಿತವಾಗಿದ. ವಕೀಲ ಉಜ್ವಲ್ ನಿಕಮ್ ಅವರು ಮುಂಬೈ 26/11 ಭಯೋತ್ಪಾದಕ ದಾಳಿಯ ವಿಚಾರಣೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ರಾಷ್ಟ್ರವ್ಯಾಪಿ ಮನ್ನಣೆ ಗಳಿಸಿದ್ದರು, ಅಜ್ಮಲ್ ಕಸಬ್‌ಗೆ ವಿರುದ್ಧ ಮತ್ತು ಕೇಂದ್ರ ಸರ್ಕಾರದ ಪರವ ಮಂಡಿಸಿದ್ದರು.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಹುಡುಕಾಟ ನಡೆಸಿದಾಗ 26/11 ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಅಜ್ಮಲ್ ಕಸಬ್ ಅನ್ನು ಸಮರ್ಥಿಸಲು ಯಾವುದೇ ವಕೀಲರು ಆಸಕ್ತಿ ಹೊಂದಿರಲ್ಲ. ಈ ಕಾರಣಕ್ಕಾಗಿ, ಪ್ರತಿ ಆರೋಪಿಯೂ ನ್ಯಾಯಯುತ ವಿಚಾರಣೆಗೆ ಒಳಗಾಗುವ ಹಕ್ಕಿದೆ ಮತ್ತು ಆರೋಪಿಯನ್ನು ಕನೂನಾತ್ಮಕ ವಕಾಲತ್ತು ವಹಿಸದಿರಲು ಅಸಾಧ್ಯ ಎಂಬ ಕಾರಣಕ್ಕಾಗಿ ಕೆಲ ವಕೀಲರನ್ನು ನೇಮಿಸಲಾಯಿತು. ಹೀಗೆ ಕಸಬ್‌ನ ರಕ್ಷಣಾ ವಕೀಲರಾಗಿ ಅಬ್ಬಾಸ್ ಕಾಜ್ಮಿ ಅವರು ನೇಮಕಗೊಂಡರು ಆದರೆ ಕಾಜ್ಮಿ ಅವರು ಕಸಬ್ ಪರ ವಕಾಲತ್ತು ವಹಿಸಲು ನಿರಾಕರಿಸಿದ ನಂತರ, ಅಸಹಕಾರಕ್ಕಾಗಿ ಅವರನ್ನು ತೆಗೆದುಹಾಕಲಾಯಿತು.
ಅಬ್ಬಾಸ್ ಕಾಜ್ಮಿಯವರ ಪದಚ್ಯುತಿ ನಂತರ ಕಸಬ್‌ನನ್ನು ಪ್ರತಿನಿಧಿಸಿದವರು ಕೆ.ಪಿ.ಪವಾರ್, ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಎಂಬ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಕಸಬ್ ಪರ ವಾದ ಮಾಡಿದ್ದರು ಮತ್ತು ವಕೀಲ ರಾಜು ರಾಮಚಂದ್ರನ್ ಅವರು ಕಸಬ್‌ನ ಮರಣದಂಡನೆಯ ವಿರುದ್ಧದ ಮೇಲ್ಮನವಿಯ ಸಂದರ್ಭದಲ್ಲಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ಅಜ್ಮಲ್ ಕಸಬ್‌ಗೆ ಮರಣದಂಡನೆ ಶಿಕ್ಷೆಯ ಪರವಾಗಿ ಮಾಜಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಗೋಪಾಲ್ ಸುಬ್ರಮಣಿಯಂ ಅವರ ನೇತೃತ್ವದ ವಕೀಲರನ್ನು ವಾದಿಸಿದ್ದರು.
ಇನ್ನು, ಭಾರತದ ಪ್ರಮುಖ ಕ್ರಿಮಿನಲ್ ವಕೀಲರಾದ ಮಜೀದ್ ಮೆಮನ್ ಅವರ ಕುರಿತು ಪರಿಶೀಲನೆ ನಡೆಸಿದಾಗ ಅವರು ಅಜ್ಮಲ್ ಕಸಬ್ ವಿಚಾರಣೆಯೊಂದಿಗೆ ಸಂಬಂಧವೇ ಹೊಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಕಸಬ್ ರಕ್ಷಿಸಲು ಅವರು ಆಸಕ್ತಿ ಹೊಂದಿಲ್ಲ ಎಂದು ಅವರು ಹೇಳಿದ್ದರ ಕುರಿತು ಕೆಲ ವರದಿಗಳು ಕೂಡ ಕಂಡು ಬಂದಿದೆ. ಮಜೀದ್ ಮೆಮನ್ ಅವರು 1993 ರ ಮುಂಬೈ ಸರಣಿ ಸ್ಫೋಟದಂತಹ ವಿವಿಧ ಉನ್ನತ ಪ್ರಕರಣಗಳನ್ನು ವ್ಯವಹರಿಸಿದ್ದಾರೆ, ಆ ಪ್ರಕರಣದ ಅನೇಕ ಆರೋಪಿಗಳನ್ನು ಪ್ರತಿನಿಧಿಸಿದ್ದಾರೆ. ಅವರು ಅಪರಾಧ ಪ್ರಕರಣಗಳಲ್ಲಿ ಹಲವಾರು ಚಲನಚಿತ್ರ ತಾರೆಯರು ಮತ್ತು ಪ್ರಮುಖ ವ್ಯಕ್ತಿಗಳನ್ನು ಸಮರ್ಥಿಸಿಕೊಂಡಿದ್ದಾರೆ. ಮಜೀದ್ ಮೆಮನ್ ಅವರು ಏಪ್ರಿಲ್ 2014 ರಿಂದ ಏಪ್ರಿಲ್ 2020 ರವರೆಗೆ NCP ಯಿಂದ ರಾಜ್ಯಸಭಾ ಸಂಸದರಾಗಿದ್ದರು . 2022 ರಲ್ಲಿ ಮಜೀದ್ ಮೆಮನ್ ಎನ್‌ಸಿಪಿ ತೊರೆದು ತೃಣಮೂಲ ಕಾಂಗ್ರೆಸ್ ಟಿಎಂಸಿ ಸೇರ್ಪಡೆಯಾಗಿದ್ದಾರೆ.
ಒಟ್ಟಾರೆಯಾಗಿ ಅಜ್ಮಲ್ ಕಸಬ್ ಪರವಾಗಿ ಮಜೀದ್ ಮೆಮನ್ ವಾದ ಮಂಡಿಸಿದ್ದರು ಮತ್ತು ಅವರಿಗೆ ಈಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಲು ಎನ್‌ಸಿಪಿ ಟಿಕೆಟ್ ನೀಡಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ.
ಇದನ್ನೂ ಓದಿ : Fact Check | ದೆಹಲಿಯಲ್ಲಿ ವಿದ್ಯುತ್ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ ಎಂಬುದು ಸುಳ್ಳು..!
ಈ ವಿಡಿಯೋ ನೋಡಿ : Fact Check | ದೆಹಲಿಯಲ್ಲಿ ವಿದ್ಯುತ್ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ ಎಂಬುದು ಸುಳ್ಳು..!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.