Fact Check: ಜರ್ಮನಿಯ ರೈಲು ಮಾರ್ಗದ ಚಿತ್ರವನ್ನು ಪ್ರಧಾನಿ ಮೋದಿಯವರ ವಾರಣಾಸಿ ಕ್ಷೇತ್ರದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

ವಾರಣಾಸಿ

“ಈ ಮೆಟ್ರೋ ಚಿತ್ರ ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾದ ವಾರಣಾಸಿಯದು” ಎಂಬ ಹೇಳಿಕೆಯೊಂದಿಗೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚಿತ್ರವೊಂದು ವೈರಲ್ ಆಗುತ್ತಿದೆ. ವಾರಣಾಸಿಯ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ ಎಂಬ ಹೇಳಿಕೆಗಳೊಂದಿಗೆ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗಷ್ಟೇ “ಯುಪಿಎ ಸರ್ಕಾರದಲ್ಲಿ ಕೇವಲ ಮೂರ್ನಾಲ್ಕು ನಗರಗಳಲ್ಲಿ ಮೆಟ್ರೋ ವ್ಯವಸ್ಥೆ ಇತ್ತು ಮೋದಿ ಪ್ರಧಾನಿಯಾದ ನಂತರ ಈಗ 20 ನಗರಗಳಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ” ಎಂದು ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್ ಒಂದರಲ್ಲಿ ಸಿಂಗಾಪುರ್‌ನ ಮೆಟ್ರೋ ಚಿತ್ರವನ್ನು ಬಳಸಿಕೊಂಡು ಸಿಕ್ಕಿಬಿದ್ದಿತ್ತು. 

ಈಗ, ‘ಸಲೀಂ ಅಹಮದ್’ ಎಂಬ ಫೇಸ್‌ಬುಕ್ ಬಳಕೆದಾರರು ಮೇ 15, 2024 ರಂದು “ಅಪ್ನಾ ಬನಾರಸ್ ಧನ್ಯವಾದಗಳು ಮೋದಿ ಜೀ” ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ (ಆರ್ಕೈವ್ ಲಿಂಕ್). ವೈರಲ್ ಚಿತ್ರವು ‘ಗದೌಲಿಯಾ-ಸೋನಾರ್‌ಪುರ್’ ಎಂಬ ಶೀರ್ಷಿಕೆಯೊಂದಿಗೆ ಎರಡು ರೈಲುಗಳನ್ನು ಒಳಗೊಂಡಿದೆ.

ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ವೈರಲ್ ಪೋಸ್ಟ್ ನಕಲಿ ಎಂದು ಕಂಡುಬಂದಿದೆ. ಜರ್ಮನಿಯ ಹಳೆಯ ಚಿತ್ರವನ್ನು ವಾರಣಾಸಿಯ ಚಿತ್ರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಈ ಚಿತ್ರಕ್ಕೂ ವಾರಣಾಸಿಗೂ ಯಾವುದೇ ಸಂಬಂಧವಿಲ್ಲ.

ಈ ಮೆಟ್ರೋ ರೈಲಿನ ಚಿತ್ರ ಯಾವ ದೇಶಕ್ಕೆ ಸಂಬಂಧಿಸಿದ್ದು ಎಂದು ತಿಳಿಯಲು ನಾವು ಗೂಗಲ್ ರಿವರ್ಸ್‌ ಇಮೇಜ್‌ ನಲ್ಲಿ ಹುಡುಕಿದಾಗ ವೈರಲ್ ಚಿತ್ರವನ್ನು ಒಳಗೊಂಡ ಅನೇಕ ಮೆಟ್ರೋ ಚಿತ್ರಗಳು ಲಭ್ಯವಾಗಿದೆ. ಫೇಸ್‌ಬುಕ್ ಪುಟ ‘ಎಥಿಯೋಕಾರ್ಮಾರ್ಕೆಟ್‘ ಈ ಚಿತ್ರವನ್ನು ಆಗಸ್ಟ್ 25, 2019 ರಂದು ಪೋಸ್ಟ್ ಮಾಡಿದ್ದು, ಇದು ಜರ್ಮನಿಯದು ಎಂದು ಹೇಳುತ್ತದೆ (ವೆಬ್‌ಸೈಟ್ ಲಿಂಕ್).

ಹುಡುಕಾಟದ ಸಮಯದಲ್ಲಿ, ಮೇ 2, 2015 ರಂದು ಅಪ್‌ಲೋಡ್ ಮಾಡಲಾದ ವೆಬ್‌ಸೈಟ್‌ನಲ್ಲಿ ಈ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ವೈರಲ್ ಚಿತ್ರದಲ್ಲಿರುವ ರೈಲು ಜರ್ಮನಿಯ ವೂಪರ್ಟಲ್‌ನಲ್ಲಿರುವ ಸಸ್ಪೆನ್ಶನ್ ರೈಲ್ವೆ(suspension railway)ಯ ವೀಡಿಯೊದಲ್ಲಿ ಕಂಡುಬಂದಿದೆ.

ವಾರಣಾಸಿಯಲ್ಲಿ ಈ ರೀತಿಯ ಮೆಟ್ರೋ ರೈಲಿನ ವ್ಯವಸ್ಥೆ ಇರುವ ಕುರಿತು ನಾವು ಸಾಕಷ್ಟು ಹುಡುಕಾಟ ನಡೆಸಿದಾಗ, ವೈರಲ್ ಚಿತ್ರವನ್ನು ಹೋಲುವಂತಹ ಸಸ್ಪೆನ್ಶನ್ ರೈಲಿನ ವ್ಯವಸ್ಥೆ ವಾರಣಾಸಿಯಲ್ಲಿ ಇಲ್ಲದಿರುವುದು ಖಾತ್ರಿಯಾಗಿದೆ. ಆದ್ದರಿಂದ ಜರ್ಮನಿಯ ಸಸ್ಪೆನ್ಶನ್ ರೈಲು ಮಾರ್ಗದ ಚಿತ್ರ ವಾರಣಾಸಿಯದ್ದು ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.


ಇದನ್ನು ಓದಿ: 20 ನಗರಗಳಲ್ಲಿ ಮೆಟ್ರೋ ಸೇವೆಗಳು ಎಂದು ಬಿಜೆಪಿ ಮೋದಿ ಪೋಸ್ಟರ್‌ನಲ್ಲಿ ಸಿಂಗಾಪುರದ ಮೆಟ್ರೋ ರೈಲಿನ ಫೋಟೋವನ್ನು ಬಳಸಿದೆ


ವಿಡಿಯೋ ನೋಡಿ: ರಾಹುಲ್ ಮತ್ತು ಸೋನಿಯಾ ಗಾಂಧಿಯ ಹಿಂದಿನ ಫೋಟೋ ಯೇಸುಕ್ರಿಸ್ತನದ್ದು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *