ಮತ ಎಣಿಕೆ ಬಳಿಕ ವಿವಿ ಪ್ಯಾಟ್ ಸ್ಲಿಪ್‌ಗಳನ್ನು ತೆಗೆದಿಡುತ್ತಿರುವ ಈ ವಿಡಿಯೋ ಹಳೆಯದು

ವಿವಿ ಪ್ಯಾಟ್

ಮತ ಎಣಿಕೆ ಕೇಂದ್ರದಲ್ಲಿ ವಿವಿ ಪ್ಯಾಟ್‌ನಲ್ಲಿರುವ ಸ್ಲಿಪ್‌ಗಳನ್ನು ತೆಗೆದು ಕಪ್ಪು ಕವರ್‌ನಲ್ಲಿ ಇಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇವಿಎಂ ಹೈಜಾಕ್ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿಯೂ ಇದೇ ವಿಡಿಯೋ ಬಿಜೆಪಿ ಇವಿಎಂ ಮೆಷಿನ್‌ಗಳನ್ನು ತಿರುಚುತ್ತಿದೆ ಎಂಬ ಆಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್ ಚೆಕ್

ಈ ವಿಡಿಯೋದ ಸ್ಕ್ರೀನ್ ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಲ್ಲಿ ಹುಡುಕಿದಾಗ ಶೆನಾಜ್ ಎಂಬುವವರು ಡಿಸೆಂಬರ್ 13, 2022ರಂದೇ ಇದೇ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿರುವುದು ಕಂಡುಬಂದಿದೆ. “ಗುಜರಾತ್ ನಲ್ಲಿ ಬಿಜೆಪಿಗೆ ದಿಗ್ವಿಜಯ. ಆ ರಾಜ್ಯದ ಭಾವನಗರ ಕ್ಷೇತ್ರದ ಸ್ಟ್ರಾಂಗ್ ರೂಮ್ ಒಂದರ ದೃಶ್ಯ” ಎಂದು ಇದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲಿಗೆ ಇದು 2022ರ ಹಳೆಯ ವಿಡಿಯೋ ಆಗಿದ್ದು, ಇದಕ್ಕೂ ಹಾಲಿ ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲ ಎಂಬುದು ದೃಢಪಟ್ಟಿದೆ.

ಈ ಕುರಿತು ಮತ್ತಷ್ಟು  ಹುಡುಕಿದಾಗ ಭಾವನಗರ ಜಿಲ್ಲಾಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿರುವ ಟ್ವೀಟ್ ದೊರಕಿದೆ. ಅದರಲ್ಲಿ ಅವರು, “ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಮತ ಎಣಿಕೆ ಮುಗಿದ ನಂತರ, ಮತಪತ್ರಗಳನ್ನು VVPAT ಯಂತ್ರಗಳಿಂದ ತೆಗೆದು, ಕಪ್ಪು ಲಕೋಟೆಯಲ್ಲಿ ಸೀಲ್ ಮಾಡಿ ಇರಿಸಲಾಗುತ್ತದೆ ಮತ್ತು ವಿವಿ ಪ್ಯಾಟ್‌ಗಳನ್ನು ಭವಿಷ್ಯದ ಚುನಾವಣೆಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. ಇಡೀ ಪ್ರಕ್ರಿಯೆಯನ್ನು ವೀಡಿಯೋಗ್ರಾಫ್ ಮಾಡಲಾಗಿದೆ, ಒಂದು ಪ್ರತಿಯನ್ನು ಸ್ಟ್ರಾಂಗ್ ರೂಮ್‌ನಲ್ಲಿ ಸಂಗ್ರಹಿಸಲಾಗಿದೆ ಮತ್ತು ಇನ್ನೊಂದು ಪ್ರತಿಯನ್ನು ಸಂಬಂಧಿತ ಜಿಲ್ಲಾ ಚುನಾವಣಾಧಿಕಾರಿ ಬಳಿ ಇರಿಸಲಾಗಿದೆ” ಎಂದು ತಿಳಿಸಿದ್ದಾರೆ.

ಹಾಗಾಗಿ ವೈರಲ್ ಆಗುತ್ತಿರುವ ವಿಡಿಯೋ ಇವಿಎಂ ತಿರುಚಿರುವುದಕ್ಕೆ ಸಂಬಂಧಿಸಿಲ್ಲ. ಬದಲಿಗೆ 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾವನಗರ ವಿಧಾನಸಭಾ ಕ್ಷೇತ್ರದಲ್ಲಿ  ಮತ ಎಣಿಕೆ ಮುಗಿದ ನಂತರ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ವಿವಿ ಪ್ಯಾಟ್‌ಗಳಿಂದ ಮತ ಪತ್ರಗಳನ್ನು ತೆಗೆದಿರಿಸುವ ವಿಡಿಯೋ ಇದಾಗಿದೆ.


ಇದನ್ನೂ ಓದಿ; Fact Check: ಜರ್ಮನಿಯ ರೈಲು ಮಾರ್ಗದ ಚಿತ್ರವನ್ನು ಪ್ರಧಾನಿ ಮೋದಿಯವರ ವಾರಣಾಸಿ ಕ್ಷೇತ್ರದ್ದು ಎಂದು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *